fbpx
Editor's Pick

ವೆಂಕಯ್ಯ ಸಾಕಯ್ಯ: ಆನ್‌ಲೈನ್‌ ಅಭಿಯಾನ ಹಿಟ್‌!

ಕಳೆದ 18 ವರ್ಷಗಳಿಂದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರನ್ನು ರಾಜ್ಯದಿಂದ ಮತ್ತೂಂದು ಅವಧಿಗೆ ಆಯ್ಕೆ ಮಾಡುವುದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ರಚಿಸಿಕೊಂಡಿರುವ ಐಟಿ-ಬಿಟಿ ಕನ್ನಡ ಬಳಗವು “#VenkayyaSakayya’ ಎಂಬ ಟ್ಯಾಗ್‌ನೊಂದಿಗೆ ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಟ್ರೆಂಡ್‌ ಅಭಿಯಾನ ಆರಂಭಿಸಿದ್ದು, ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಐಟಿ-ಬಿಟಿ ಕನ್ನಡಿಗರು ಮತ್ತು ಸಾಮಾನ್ಯ ಕನ್ನಡಿಗರು ಬುಧವಾರ “ವೆಂಕಯ್ಯ ಸಾಕಯ್ಯ’ ಹ್ಯಾಷ್‌ಟ್ಯಾಗ್‌ನೊಂದಿಗೆ (# ಚಿಹ್ನೆ ಬಳಸಿ ನಿರ್ದಿಷ್ಟ ವಿಷಯವನ್ನು ಉಲ್ಲೇಖೀಸುವ ತಂತ್ರಜ್ಞಾನ) ಟ್ವೀಟರ್‌ ಅಭಿಯಾನ ಆರಂಭಿಸುತ್ತಿದ್ದಂತೆ ಇದಕ್ಕೆ ಕರ್ನಾಟಕವೂ ಸೇರಿ ದೇಶ-ವಿದೇಶಗಳ ಕನ್ನಡಿಗರಿಂದ ಅಪಾರ ಪ್ರತಿಕ್ರಿಯೆ ವ್ಯಕ್ತವಾಯಿತು. ಟ್ವೀಟ್‌ಗಳ ಮಳೆಯೇ ಸುರಿಯಿತು. ಒಂದು ಹಂತದಲ್ಲಿ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆಯಿತು ಎಂದರೆ, ಟ್ವೀಟರ್‌ನಲ್ಲಿ ಅಖೀಲ ಭಾರತ ಮಟ್ಟದಲ್ಲಿ ನಂ.1 ಟ್ರೆಂಡ್‌ (ವಿದ್ಯಮಾನ) ಅನಿಸಿಕೊಂಡಿತು. ಬೆಂಗಳೂರು ಟ್ರೆಂಡಿಂಗ್‌ ಪಟ್ಟಿಯಲ್ಲೂ ಪ್ರಥಮ ಸ್ಥಾನಕ್ಕೇರಿತು. ನಂತರವೂ ಟ್ವೀಟರ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೆಂಕಯ್ಯ ಅವರ ಮರು ಆಯ್ಕೆ ವಿರೋಧಿಸಿ ತೀವ್ರ ಚರ್ಚೆಗಳು ನಡೆಯುತ್ತಿವೆ.

ವೆಂಕಯ್ಯ ಸಾಕಯ್ಯ: 18 ವರ್ಷಗಳಿಂದ ಕರ್ನಾಟಕದ ರಾಜ್ಯಸಭಾ ಸದಸ್ಯರಾಗಿರುವ ವೆಂಕಯ್ಯ ಅವರು ಈಗ ಕೇಂದ್ರ ಸಚಿವರಾಗಿದ್ದಾರೆ. ರಾಜ್ಯದಿಂದ ಮೂರು ಬಾರಿ ಆಯ್ಕೆಯಾಗಿದ್ದರೂ ಕನಿಷ್ಠ ಎರಡು ಕನ್ನಡ ಪದವನ್ನೂ ಅವರು ಕಲಿತಿಲ್ಲ. ಕರ್ನಾಟಕಕ್ಕೆ ಅವರ ಕೊಡುಗೆ ಶೂನ್ಯವೆಂಬುದು ಕನ್ನಡ ಬಳಗದ ದೂರು.

ಉಂಡು ಹೋದ, ಕೊಂಡೂ ಹೋದ ಎಂಬ ಗಾದೆಯಂತೆ ರಾಜ್ಯಸಭೆ ಚುನಾವಣೆಗೆ ಮಾತ್ರ ಹಾಜರಾಗಿ, ಗೆದ್ದ ನಂತರ ಕರ್ನಾಟಕದ ಉಸಾಬರಿಗೆ ಬರದ ನಾಯ್ಡು ಅವರ ಪ್ರತಿಕ್ರಿಯೆಯಿಂದ ಕನ್ನಡಿಗರು ಬೇಸತ್ತಿದ್ದಾರೆ. ಇದೇ ವೇಳೆ, ತಮಿಳುನಾಡಿನ ಕಾಂಗ್ರೆಸ್‌ ನಾಯಕ ಚಿದಂಬರಂ ಅವರು ಕರ್ನಾಟಕದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಹವಣಿಕೆಯಲ್ಲಿದ್ದಾರೆ. ಇದನ್ನು ಅರಿತು ಟ್ವೀಟರ್‌ ಮೂಲಕ ಬಿಸಿ ಮುಟ್ಟಿಸುತ್ತಿರುವುದಾಗಿ ಬಳಗ ತಿಳಿಸಿದೆ.

ಟ್ವೀಟ್‌ ಅಟ್ಯಾಕ್‌
ನಮ್ಮ ಭಾಷೆ ಬಗ್ಗೆ ಗೊತ್ತಿಲ್ಲದ, ಕರ್ನಾಟಕದ ಬಗ್ಗೆ ಎಂದಿಗೂ ಮಾತನಾಡದ ವ್ಯಕ್ತಿ ನಮ್ಮ ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುವುದನ್ನು ನೋಡುವುದು ಅವಮಾನ.
– ಐಕ್ಯುಬಿ

ಸಂಸದರಾಗಿ ವೆಂಕಯ್ಯ ನಾಯ್ಡು ಸಾಧನೆಗಳು: 1. ಆಂಧ್ರಪ್ರದೇಶದ ಹಳ್ಳಿ ದತ್ತು 2. ಹಿಂದಿ ಹೇರಿಕೆ 3. ಆಂಧ್ರಪ್ರದೇಶದ ವಿಚಾರಗಳ ಪ್ರಸ್ತಾಪ 4. ಕನ್ನಡ ಕಲಿಯಲು ನಿರಾಸಕ್ತಿ
– ಸುಹ್ರುತ ಯಜಮಾನ್‌

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್‌ ಗುಂಪುಗಳ ಮಧ್ಯೆ ಹೊಂದಾಣಿಕೆ ಇಲ್ಲ. ಇದರ ಲಾಭ ಹೊರರಾಜ್ಯದವರಿಗೆ ಆಗುತ್ತಿದೆ.
– ಭವ್ಯಾ ಶ್ರೀನಿವಾಸಗೌಡ

ವೆಂಕಯ್ಯ ನಾಯ್ಡು ಎಂಬುವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದಾರೆ ಎಂಬುದನ್ನು 18 ವರ್ಷಗಳಿಂದ ನಾನು ಮರೆತುಬಿಟ್ಟಿದ್ದೆ. ಇನ್ನು ಸ್ವಲ್ಪ ಅಡ್ಜಸ್ಟ್‌ ಮಾಡಿ ಅನ್ನೋದೆಲ್ಲಾ ಇಲ್ಲ.
– ಸಂಜಯ್‌ ಹೆಗಡೆ

ವೆಂಕಯ್ಯ ನಾಯ್ಡು ಕನ್ನಡಿಗರಲ್ಲ. ಅವರನ್ನು ರಾಜ್ಯಸಭೆಗೆ ಕಳುಹಿಸಬೇಡಿ.
– ಚಿತ್ರಾ ಸುಬ್ರಮಣಿಯಂ

ಕರ್ನಾಟಕದ ಸಂಸದರಾಗಿದ್ದರೂ ಆಂಧ್ರಕ್ಕೆ ನ್ಯಾಯ ಕೊಡಿಸುವುದಾಗಿ ವೆಂಕಯ್ಯ ಹೇಳುತ್ತಾರೆ. ಎರಡೂ ರಾಜ್ಯಗಳಿಗೂ ಅವರು ವಂಚನೆ ಮಾಡಿದ್ದಾರೆ.
– ಜೈ ಚಿರಂಜೀವ

ಸಂಸದರ ಮಾದರಿ ಗ್ರಾಮ ಯೋಜನೆಯಡಿ ವೆಂಕಯ್ಯ ಅವರು ಕರ್ನಾಟಕದ ಹಳ್ಳಿಯನ್ನು ದತ್ತು ತೆಗೆದುಕೊಂಡಿಲ್ಲ. ಅವರಿಗೆ ಕರ್ನಾಟಕದಿಂದ ರಾಜ್ಯಸಭೆ ಸೀಟನ್ನೇಕೆ ನೀಡಬೇಕು? ರಾಜ್ಯಸಭೆ ಸದಸ್ಯರಾಗಿ ಕರ್ನಾಟಕಕ್ಕೆ ವೆಂಕಯ್ಯ ಕೊಡುಗೆ ಶೂನ್ಯ. ಬಿಜೆಪಿ ಅವರಿಗೆ ಟಿಕೆಟ್‌ ಕೊಡಬಾರದು.
– ಶ್ರೀವತ್ಸ

ಹೇಮಾ ಮಾಲಿನಿ, ರಾಮ್‌ ಜೇಠ್ಮಲಾನಿ, ರಾಜೀವ್‌ ಚಂದ್ರಶೇಖರ್‌… ಇದೆಲ್ಲಾ ಮುಗಿಯುವುದು ಯಾವಾಗ? ರಾಜ್ಯಸಭೆಯಲ್ಲಿ ನಮ್ಮವರೇ ನಮ್ಮನ್ನು ಪ್ರತಿನಿಧಿಸುವ ಅಗತ್ಯವಿದೆ.
– ಹರಿಪ್ರಸಾದ್‌ ಹೊಳ್ಳ

ಕೃಷ್ಣಾ ನ್ಯಾಯಾಧಿಕರಣದ ಐತೀರ್ಪಿನಿಂದ 100 ಟಿಎಂಸಿ ನೀರನ್ನು ನಾವು ಕಳೆದುಕೊಂಡೆವು. ಈ ವಿಚಾರದಲ್ಲಿ ವೆಂಕಯ್ಯ ನಾಯ್ಡು ನಿಲುವೇನು? ಅವರು ಕರ್ನಾಟಕವನ್ನು ಬೆಂಬಲಿಸಿದ್ದರೆ?
– ಚೇತನ್‌ ಜೀರಾಳ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

ಸಾಮಾಜಿಕ ಜಾಲತಾಣ ಅತ್ಯಂತ ಪ್ರಭಾವಶಾಲಿ ಮಾಧ್ಯಮ ನಾವು ಸರ್ಕಾರದ ಮೇಲೆ ಅಭಿವೃದ್ದಿ ಪರ ಕೆಲಸಗಳಿಗೆ ಒತ್ತಡ ತರಲು ಸೂಕ್ತವಾದದ್ದು

To Top