fbpx
ಸಂಪಾದಕೀಯ

ಪತ್ರಿಕಾ ದಿನಾಚರಣೆ

ಇಂದು ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಆಚರಿಸುತ್ತಾರೆ. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ ಪ್ರಾರಂಭವಾದದ್ದು 1843ರ ಜುಲೈ 1ರಂದು ಹಾಗಾಗಿ ಇಂದಿನ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸುತ್ತಾರೆ.

‘ಮಂಗಳೂರು ಸಮಾಚಾರ’ ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಬಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.

ಪತ್ರಿಕಾ ಮಾಧ್ಯಮ ಅಥವಾ ವಿಶಾಲವಾಗಿ ಹೇಳಬೇಕೆಂದರೆ ಸಮೂಹ ಮಾಧ್ಯಮಗಳು ಪ್ರಜಾಸತ್ತೆಯ ನಾಲ್ಕನೇ ಆಧಾರ  ಸ್ತಂಭ ಎನ್ನುವ ಮಾತಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮೊದಲ 3 ಪ್ರಮುಖ ಆಧಾರ ಸ್ತಂಭಗಳಾದರೆ ಪತ್ರಿಕಾ ಮಾಧ್ಯಮ ನಾಲ್ಕನೇ ಆಧಾರ ಸ್ತಂಭವೆನಿಸಿದೆ.

ಪ್ರಜಾಸತ್ತೆ ಉಳಿಯಬೇಕಾದರೆ ಈ ನಾಲ್ಕೂ ಆಧಾರ ಸ್ತಂಭಗಳು ಶಕ್ತಿಯುತವಾಗಿರಬೇಕು. ಹಾಗಿದ್ದರೆ ಮಾತ್ರವೇ ಅವುಗಳ ಪ್ರಜಾಸತ್ತೆ ಕುಸಿಯದಂತೆ, ಯಾವೊಬ್ಬ ವ್ಯಕ್ತಿಯೂ ಸರ್ವಾಧಿಕಾರಿಯಾಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಜಾಸತ್ತೆಯ ಅತ್ಯಂತ ಮುಖ್ಯ ಅಂಶವೆಂದರೆ ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕಾ ಮಾಧ್ಯಮ. ಅದರ ಮೇಲೆ ಸರಕಾರ ನಿಯಂತ್ರಣಗಳನ್ನು ಹೇರಿದಾಗ ಪ್ರಜೆಗಳ ಧ್ವನಿಯನ್ನು ಹತ್ತಿಕ್ಕಿದ ಹಾಗಾಗುತ್ತದೆ. ಪತ್ರಿಕೆಯ ಧ್ವನಿ ಎಂದರೆ ಜನರ ಧ್ವನಿಯೇ ಆಗಿರುತ್ತದೆ. ಪತ್ರಿಕೆಯ ಧ್ವನಿಯನ್ನು ಅದುಮಿದರೆ ಪ್ರಜೆಗಳ ಧ್ವನಿಯನ್ನು, ಉಸಿರನ್ನು ಬಿಗಿ ಹಿಡಿದಂತಾಗುತ್ತದೆ.

ಹಾಗೆಂದ ಮಾತ್ರಕ್ಕೆ ಪತ್ರಿಕೆಗಳು ತಮಗೆ ಬೇಕಾದ ಹಾಗೆ ಬರೆದುಕೊಳ್ಳಬಹುದು, ಅಪರಿಮಿತ ಸ್ವಾತಂತ್ರ್ಯವನ್ನು ಅನುಭವಿಸಬಹುದು ಎಂದು ಅರ್ಥವಲ್ಲ, ಸ್ವಾತಂತ್ರ್ಯ ಎಂದೂ ಸ್ವೇಚ್ಛಾಚಾರವಾಗಲಾರದು. ಅದಕ್ಕೆ ಸಾಮಾಜಿಕ, ನೈತಿಕ ಮೌಲ್ಯಗಳ ಅಂಕುಶ ಇರುವುದು ಅಗತ್ಯ.

ಅಂತೆಯೇ ಪ್ರಜಾಸತ್ತೆಯ ಉಳಿವಿಗೆ ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯ ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಅಂತೆಯೇ ಮಾಧ್ಯಮ ಯಾವತ್ತೂ ತಾನೇ ರೂಪಿಸಿಕೊಂಡ ನೀತಿ ಸಂಹಿತೆಯನ್ನು ತನ್ನ ಮೇಲೆ ವಿಧಿಸಿಕೊಳ್ಳುವುದು ಅಗತ್ಯ.

ಯಾವುದೇ ಒಂದು ಪ್ರಜಾಸತ್ತಾತ್ಮಕ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪತ್ರಿಕೆಗಳು ವಹಿಸುವ ಪಾತ್ರ ಅತ್ಯಮೂಲ್ಯ. ಪತ್ರಿಕೆಗಳು ಸಾಮಾನ್ಯವಾಗಿ ದೇಶ, ವಿದೇಶಗಳ, ಹಳ್ಳಿ, ಪಟ್ಟಣ, ನಗರಗಳ ಘಟನೆಗಳನ್ನು ಸುದ್ದಿ ರೂಪದಲ್ಲಿ ವರದಿ ಮಾಡುತ್ತಲೇ ಇರುತ್ತವೆ. ಅಂತೆಯೇ ಜನರ ದುಃಖ, ದೂರು, ದುಮ್ಮಾನ, ಸಂಕಷ್ಟ, ಬೇಕು ಬೇಡಗಳು ಇತ್ಯಾದಿಗಳನ್ನು ಸರಕಾರಕ್ಕೆ ತಿಳಿಸುವ ಮತ್ತು ಸರಕಾರದ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡತ್ತಲೇ ಇರುತ್ತವೆ.

ಈ ಅಮೂಲ್ಯ ಕರ್ತವ್ಯ ನಿರ್ವಹಣೆಯಲ್ಲಿ ಪತ್ರಿಕೆಗಳು ಜನರ ಹಕ್ಕು ಮತ್ತು ಬಾಧ್ಯತೆಗಳನ್ನು ರಕ್ಷಿಸುತ್ತವೆ. ಈ ನಿಟ್ಟಿನಲ್ಲಿ ಅವು ಪ್ರಜಾಸತ್ತೆ ಕಾವಲು ನಾಯಿಗಳೆಂದು ಪರಿಗಣಿಸಲ್ಪಟ್ಟಿವೆ. ಪ್ರಜಾಸತ್ತೆ ಹಾಗೂ ಜನರ ಸಂರಕ್ಷಣೆಯ ಉನ್ನತ ಧ್ಯೇಯೋದ್ದೇಶಗಳಿಗಾಗಿ ಅನಿರ್ಬಂಧಿತ ಸ್ವಾತಂತ್ರ್ಯವನ್ನು ಬಯಸುವ ಪತ್ರಿಕೆಗಳು ಮತ್ತು ಸಮೂಹ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಅಗತ್ಯ. ಅವು ಒಂದೊಮ್ಮೆ ಪಕ್ಷಪಾತಿಯಾದಲ್ಲಿ ಸರಕಾರದ ಹಾಗೂ ಜನರ ಮಾನಹರಣಕ್ಕೆ ಕಾರಣವಾಗುತ್ತವೆ. ಪರಿಣಾಮವಾಗಿ ದೇಶದಲ್ಲಿ ಅರಾಜಕತೆ, ಹಿಂಸೆ, ಕ್ರೌರ್ಯ, ಭ್ರಷ್ಟಾಚಾರ ಇತ್ಯಾದಿಗಳು ತಾಂಡವವಾಡುತ್ತವೆ.

ಪತ್ರಿಕೆಗಳಿಗೆ ಸ್ವಾತಂತ್ರ್ಯ ಎಷ್ಟು ಬೇಕು ? ಅವುಗಳ ಮೇಲಿನ ನಿರ್ಬಂಧ ಎಷ್ಟರ ಮಟ್ಟಿಗೆ ಇರಬೇಕು? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಕಾಲಿಕ ಚರ್ಚೆಗೆ ಗ್ರಾಸವಾಗಿವೆ. ಸ್ವಾತಂತ್ರ್ಯ ಅತಿಯಾದರೆ ಅದು ಸ್ವತ್ಛಂದತೆಯಾಗುತ್ತದೆ ಮತ್ತು ಅದು ಅತ್ಯಂತ ಅಪಾಯಕಾರಿಯೂ ಸರ್ವಾಧಿಕಾರಿ ಪ್ರವೃತ್ತಿಯ ದ್ಯೋತಕವೂ ಆಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top