fbpx
Karnataka

ಸಿದ್ದು ಸರ್ಕಾರಕ್ಕೆ ಮತ್ತೆ ಹಿನ್ನಡೆ; ಹೊರ ರಾಜ್ಯದವರಿಗೆ ಗುಡ್ ನ್ಯೂಸ್

ಬೆಂಗಳೂರು: ಹೊರ ರಾಜ್ಯದ ವಾಹನಗಳಿಗೆ ಜೀವಮಾನ ತೆರಿಗೆ(ಲೈಫ್ ಟೈಮ್ ಟ್ಯಾಕ್ಸ್) ಪಾವತಿಸುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ.

30 ದಿನಗಳ ಮೇಲ್ಪಟ್ಟು ರಾಜ್ಯದಲ್ಲಿ ಸಂಚರಿಸುತ್ತಿದ್ದ ಹೊರ ರಾಜ್ಯದ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಪಾವತಿಸುವಂತೆ ಸಾರಿಗೆ ಇಲಾಖೆ ನಿಯಮ ರೂಪಿಸಿತ್ತು. ಇದನ್ನು ಪ್ರಶ್ನಿಸಿ ವಸೀಮ್ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಸಾರಿಗೆ ಇಲಾಖೆಯ ನಿಯಮವೇ ಕಾನೂನು ಬಾಹಿರವೆಂದು ಅಭಿಪ್ರಾಯ ವ್ಯಕ್ತಪಡಿಸಿ ಆದೇಶ ರದ್ದುಪಡಿಸಿತ್ತು.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿ, ಏಕಸದಸ್ಯ ಪೀಠದ ಆದೇಶ ಎತ್ತಿ ಹಿಡಿದಿದೆ.
ಏನಿದು ಪ್ರಕರಣ?

2014-2015ನೇ ಸಾಲಿನ ರಾಜ್ಯ ಬಜೆಟ್ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರ ರಾಜ್ಯದಲ್ಲಿ ನೋಂದಣಿಯಾದ ವಾಹನಗಳು ರಾಜ್ಯದ ರಸ್ತೆಗಳನ್ನು ಬಳಕೆ ಮಾಡುವುದನ್ನು ನಿಯಂತ್ರಿಸಲು ಜೀವಮಾನ ತೆರಿಗೆ ವಿಧಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಘೋಷಣೆಯ ಬಳಿಕ ಸರ್ಕಾರ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ-1957ರ ಸೆಕ್ಷನ್ 3ಕ್ಕೆ ತಿದ್ದುಪಡಿ ತಂದು, ಕರ್ನಾಟಕ ಮೋಟಾರು ವಾಹನ ಕಾಯ್ದೆ-2014 (ತಿದ್ದುಪಡಿ) ರೂಪಿಸಿತ್ತು.

ಅಂದಿನಿಂದ ಹೊರ ರಾಜ್ಯದ ವಾಹನಗಳು ರಾಜ್ಯಕ್ಕೆ ಬಂದ 7 ದಿನಗಳ ಒಳಗೆ ಸಾರಿಗೆ ಇಲಾಖೆಗೆ ರಾಜ್ಯ ಪ್ರವೇಶಿಸಿರುವ ಕುರಿತು ಮಾಹಿತಿ ನೀಡಬೇಕಿತ್ತು. ಒಂದು ವೇಳೆ ರಾಜ್ಯದಲ್ಲಿ 30 ದಿನಗಳಿಗೂ ಮೀರಿ ಸಂಚರಿಸಿದರೆ ಜೀವಮಾನ ತೆರಿಗೆ ಪಾವತಿಸಬೇಕಿತ್ತು. 30 ದಿನ ಕಳೆದರೂ ರಸ್ತೆಯಲ್ಲಿ ಸಂಚರಿಸುತ್ತಿದ್ದರೆ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಇದರ ಜೊತೆಗೆ ವಾಹನಗಳ ಹಾಗೂ ನೋಂದಣಿ ಪತ್ರ ಜಪ್ತಿ ಮಾಡಿ ಜೀವಮಾನ ತೆರಿಗೆ ಪಾವತಿಸುವಂತೆ ಮಾಲೀಕರಿಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ವಸೀಮ್ ರಿಟ್ ಅರ್ಜಿ ಸಲ್ಲಿಸಿದ್ರು.

Source: publictv

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top