fbpx
ಸಮಾಚಾರ

ರಾಜಭವನದಲ್ಲೇ ಇಲ್ಲ ಕನ್ನಡ ಭಾಷೆಗೆ ಪ್ರಾಮುಖ್ಯತೆ….

ಸತತ ನಾಲ್ಕು ದಶಕಗಳಿಂದ ರಾಜಭವನದ ಆವರಣದಲ್ಲಿದ್ದ ಕನ್ನಡ ಶಾಲೆಯನ್ನು ಶಿಕ್ಷಕರು, ಮಕ್ಕಳ ಸಮೇತ ಜೂನ್ 1ರಿಂದ ವಸಂತನಗರದಲ್ಲಿರುವ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ ಎಂಬ ಕಾರಣಕ್ಕೆ 2,958 ಶಾಲೆಗಳನ್ನು ವಿಲೀನ ಮಾಡಲು ಮುಂದಾಗಿದ್ದ ಸರ್ಕಾರ, ಆದೇಶವನ್ನು ವಾಪಸು ಪಡೆದಿತ್ತು. ಆದರೆ, ಸಂವಿಧಾನದ ಆಶಯಗಳನ್ನು ಕಾಪಾಡುವ ಪರಮಾಧಿಕಾರ ಹೊಂದಿರುವ ರಾಜ್ಯಪಾಲರು 15ಕ್ಕಿಂತ ಹೆಚ್ಚು ಮಕ್ಕಳಿದ್ದ ಕನ್ನಡ ಶಾಲೆ ತೆರವುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿರುವುದು ಬೆಳಕಿಗೆ ಬಂದಿದೆ.ಆದರೆ ‘ಶಿಕ್ಷಣ ಮೂಲಭೂತ ಹಕ್ಕು ಎಂದು ಘೋಷಿಸಿದ ಸಂವಿಧಾನದ ಕಲಂ 21(ಎ) ಅನುಸಾರ 10ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅಂತಹ ಶಾಲೆಗಳನ್ನು ಮುಚ್ಚಬಾರದು, ಮುಚ್ಚುವುದಾದರೆ ಸಮೀಪದಲ್ಲಿ ಹೊಸ ಶಾಲೆ ತೆರೆಯಬೇಕು’ ಎಂಬ ನಿಯಮವಿದೆ.

ಶಾಲೆಯ ಸ್ಥಳಾಂತರ : ಆದೇಶ ಪಾಲಿಸಲು ಮುಂದಾದ ಇಲಾಖೆ ಕೊನೆಗೂ 40 ವರ್ಷದ ಹಿಂದಿನ ಶಾಲೆಯನ್ನು ಸ್ಥಳಾಂತರ ಮಾಡಿದೆ. ಇಲಾಖೆಯ ಹಿಂದಿನ ಆಯುಕ್ತ ಪಿ.ಸಿ. ಜಾಫರ್ ಅವರು ಖುದ್ದಾಗಿ ವಸಂತನಗರ ಶಾಲೆಗೆ ಭೇಟಿ ನೀಡಿ, ರಾಜಭವನ ಶಾಲೆಯನ್ನು ವಿಲೀನ ಮಾಡುವ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು. ಅಷ್ಟರಮಟ್ಟಿಗೆ ರಾಜಭವನವು ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ವಜುಭಾಯಿ ವಾಲಾ ರಾಜ್ಯಪಾಲರಾಗಿ ಬಂದ ಬಳಿಕ ಭದ್ರತಾ ದೃಷ್ಟಿಯಿಂದ ಈ ಶಾಲೆ ತೆರವುಗೊಳಿಸುವಂತೆ ರಾಜಭವನದ ಕಾರ್ಯದರ್ಶಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2015ರ ಆಗಸ್ಟ್ನಲ್ಲಿ ಪತ್ರ ಬರೆದಿದ್ದರು.

ಮುಖ್ಯಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಡತ ರವಾನಿಸಿದ್ದರು. 2016ರ ಏಪ್ರಿಲ್ನಲ್ಲಿ ಮತ್ತೊಂದು ಪತ್ರ ಬರೆದ ರಾಜಭವನದ ಕಾರ್ಯದರ್ಶಿ, ಹಿಂದೆ ಬರೆದ ಪತ್ರಕ್ಕೆ ಸರ್ಕಾರ ಸ್ಪಂದಿಸದೇ ಇರುವುದಕ್ಕೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಶಾಲೆಯನ್ನು ಕೂಡಲೇ ತೆರವುಗೊಳಿಸುವಂತೆ ರಾಜ್ಯಪಾಲರಿಂದ ನಿರ್ದೇಶಿತನಾಗಿದ್ದೇನೆ ಎಂದು ಮೇಲು ಟಿಪ್ಪಣಿ ಬರೆದಿದ್ದರು.

ಪತ್ರ ಒಕ್ಕಣೆ: ಶಾಲೆ ಸ್ಥಳಾಂತರ ಮಾಡುವಂತೆ ಕಟುವಾಗಿ ರಾಜಭವನ ಬರೆದ ಪತ್ರದ ಒಕ್ಕಣೆ ಹೀಗಿದೆ. ‘ಸದರಿ ಶಾಲೆಯಲ್ಲಿ ರಾಜಭವನದ ಯಾವುದೇ ಸಿಬ್ಬಂದಿಯ ಮಕ್ಕಳು ವ್ಯಾಸಂಗ ಮಾಡುತ್ತಿಲ್ಲ. ಕರ್ನಾಟಕಕ್ಕೆ ಭೇಟಿ ನೀಡುವ ರಾಷ್ಟ್ರಪತಿ, ವಿದೇಶಿ ಅತಿಥಿಗಳು ರಾಜಭವನದಲ್ಲಿ ವಾಸ್ತವ್ಯ ಹೂಡುತ್ತಾರೆ. ಗಣ್ಯರ ಭದ್ರತೆ ದೃಷ್ಟಿಯಿಂದ ಸರ್ಕಾರಿ ಶಾಲೆಯನ್ನು ಈ ಆವರಣದಲ್ಲಿ ಮುಂದುವರಿಸಿರುವುದು ಸಮಂಜಸವಲ್ಲ. ಹೊರಗಿನ ಮಕ್ಕಳು ಶಾಲೆಗೆ ಬಂದು ಹೋಗುವುದರಿಂದ ಭದ್ರತೆಗೆ ಆತಂಕ ತಂದೊಡ್ಡಬಹುದಾದ ಸಂಶಯಾಸ್ಪದ ವ್ಯಕ್ತಿಗಳು ಒಳನುಸುಳಿ, ಭದ್ರತೆಗೆ ಸಂಚಕಾರ ತರುವ ಅಪಾಯ ಇರುತ್ತದೆ. ಈ ಕಾರಣದಿಂದ ಶಾಲೆಯನ್ನು ಕೂಡಲೇ ತೆರವು ಮಾಡಬೇಕು’ ಎಂದು ತಮಗೆ ಸೂಚಿಸಲು ನಿರ್ದೇಶಿತನಾಗಿದ್ದೇನೆ’ ಎಂದು ಪತ್ರ ವಿವರಿಸಿತ್ತು.

ರಾಜಭವನದ ಆದೇಶ ಪಾಲಿಸಲು ಮುಂದಾದ ಇಲಾಖೆ ಕೊನೆಗೂ 40 ವರ್ಷದ ಹಿಂದಿನ ಶಾಲೆಯನ್ನು ಸ್ಥಳಾಂತರ ಮಾಡಿದೆ. ಇಲಾಖೆಯ ಹಿಂದಿನ ಆಯುಕ್ತ ಪಿ.ಸಿ. ಜಾಫರ್ ಅವರು ಖುದ್ದಾಗಿ ವಸಂತನಗರ ಶಾಲೆಗೆ ಭೇಟಿ ನೀಡಿ, ರಾಜಭವನ ಶಾಲೆಯನ್ನು ವಿಲೀನ ಮಾಡುವ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು. ಅಷ್ಟರಮಟ್ಟಿಗೆ ರಾಜಭವನವು ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು.

ವಲಸಿಗರ ಮಕ್ಕಳಿಗೆ ದಿಕ್ಕಿಲ್ಲ: ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ವರ್ಷದ ಉದ್ದಕ್ಕೂ ದುರಸ್ತಿ, ನವೀಕರಣ, ಹೊಸ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಈ ಕಾಮಗಾರಿಗಳ ಕೂಲಿ ಹುಡುಕಿಕೊಂಡು ಬೆಂಗಳೂರಿಗೆ ಬರುವ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಕೂಲಿ ಕಾರ್ಮಿಕರು ರಾಜಭವನದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

‘ಇಂತಹ ಅಲಕ್ಷಿತ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ ಹಾಗೂ ಚಾಲಕರಿಗೆ ವೇತನ ನೀಡುವ ವ್ಯವಸ್ಥೆಯನ್ನು ಸ್ವಯಂಸೇವಾ ಸಂಸ್ಥೆಯೊಂದು ಮಾಡಿತ್ತು. ವಿ.ಎಸ್. ರಮಾದೇವಿ ರಾಜ್ಯಪಾಲರಾಗಿದ್ದಾಗ ಆಗಾಗ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕೊಡುಗೆ ನೀಡಿ, ಹುರಿದುಂಬಿಸುತ್ತಿದ್ದರು. ಶಾಲೆ ಚೆನ್ನಾಗಿ ನಡೆಯಲು ಪ್ರೋತ್ಸಾಹ ನೀಡುತ್ತಿದ್ದರು. ಈಗ ಶಾಲೆಯನ್ನೇ ಸ್ಥಳಾಂತರ ಮಾಡಲಾಗಿದೆ’ ಎಂದು ಹಿಂದೆ ಶಿಕ್ಷಕರಾಗಿದ್ದವರೊಬ್ಬರು ನೋವು ತೋಡಿಕೊಂಡರು.

ರಾಜಭವನದ ಆವರಣದ ಒಳಗೆ ಎರಡು, ಮೂರನೇ ದರ್ಜೆಯ ನೌಕರರಿಗೆ ಪ್ರತ್ಯೇಕ ವಸತಿಗೃಹಗಳಿವೆ. ಅಲ್ಲಿಯೇ ಸರ್ಕಾರಿ ಶಾಲೆ ಇತ್ತು. ರಾಜ್ಯಪಾಲರ ಬಂಗಲೆ, ಗಣ್ಯರ ಅತಿಥಿಗೃಹಗಳಿರುವ ಪ್ರದೇಶ ಮತ್ತು ಶಾಲೆ ಇರುವ ಪ್ರದೇಶದ ಮಧ್ಯೆ ದೊಡ್ಡ ತಡೆಗೋಡೆಯೂ ಇತ್ತು. ನಾಲ್ಕು ದಶಕಗಳಿಂದ ರಾಜ್ಯಪಾಲರಾಗಿದ್ದವರಿಗೆ ಕಾಡದೇ ಇದ್ದ ಭದ್ರತಾ ಆತಂಕ ಈಗ ದಿಢೀರ್ ಉದ್ಭವಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.

source : Dailyhunt

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top