fbpx
ಸಮಾಚಾರ

ಅತೀ ಹೆಚ್ಚಿನ ಯುವಜನರನ್ನು ಹೊಂದಿರುವ ರಾಷ್ಟ್ರ ಭಾರತ

ಅತೀ ಹೆಚ್ಚಿನ ಯುವಜನರನ್ನು ಹೊಂದಿರುವ ರಾಷ್ಟ್ರ ಭಾರತ: ಸಿಇಒ ಡಾ.ರಾಕೇಶ್ಕುಮಾರ್

ಶಿವಮೊಗ್ಗ: ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ 10ರಿಂದ 25ವರ್ಷ ವಯೋಮಿತಿಯೊಳಗಿನ 180ಕೋಟಿ ಯುವಜನರಿದ್ದು, ಆ ಪೈಕಿ 65 ಕೋಟಿ ಜನಸಂಖ್ಯೆ ಭಾರತದಲ್ಲಿಯೇ ಇರುವುದು ಭಾರತ ಅಭಿವೃದ್ಧಿ ಪಥದತ್ತ ದಾಪುಗಾಲಿಡಲು ಪರ್ವಕಾಲವಾಗಿದೆ ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಕೇಶ್ಕುಮಾರ್ ಅವರು ಹೇಳಿದ್ದಾರೆ.

ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಫ್.ಪಿ.ಎ. ಇಂಡಿಯಾ, ರೋಟರಿ ಪೂರ್ವ ಹಾಗೂ ಸ್ಥಳೀಯ ಕಾಲೇಜು ಮತ್ತು ನರ್ಸಿಂಗ್ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಹೆಚ್ಚಾಗಿರುವ ಯುವಸಂಪತ್ತಿನ ಹೆಚ್ಚಿನ ಬಂಡವಾಳ ಹೂಡಿ ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸರ್ವಾಂಗೀಣ ವಿಕಾಸಕ್ಕಾಗಿ ಯತ್ನಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.

ಇಂತಹ ಅನೇಕ ಕಾರಣಗಳಿಂದಾಗಿ ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ. ಈ ಯಶಸ್ಸಿನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಅಲ್ಲಗಳೆಯುವಂತಿಲ್ಲ ಎಂದ ಅವರು, ಮಹಿಳೆಯರು ಶಿಕ್ಷಣ, ವೃತ್ತಿಜೀವನ, ಗೃಹಿಣಿಯಾಗಿ, ಮಾನಸಿಕ ಮತ್ತು ದೈಹಿಕವಾಗಿ ಸವಾಲುಗಳನ್ನು ಎದುರಿಸಿ ಬದುಕುವಂತಾಗಿದ್ದಾರೆೆ. ಈ ವಿಷಯಗಳಲ್ಲಿ ದೇಶದ ಅಭ್ಯುದಯಕ್ಕೆ ಎಲ್ಲಾ ಮಹಿಳೆಯರು ಸಂಕಲ್ಪ ಮಾಡಬೇಕಾದ ಅಗತ್ಯವಿದೆ ಎಂದವರು ನುಡಿದರು.

ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿರುವುದು ಸಂತಸದ ಸಂಗತಿಯಾದರೂ, ದೇಶದಲ್ಲಿ ಏರುತ್ತಿರುವ ಜನಸಂಖ್ಯೆಗನುಗುಣವಾಗಿ ಆಹಾರ ಉತ್ಪಾದನೆ ಸಾಧ್ಯವಾಗಿದೆಯೇ? ಇರುವ ಭೂಮಿಯನ್ನು ವಿಸ್ತರಿಸಿಕೊಳ್ಳುವುದು ಸಾಧ್ಯವೇ? ಆಹಾರ ಉತ್ಪನ್ನಗಳ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ತುರ್ತು ಕ್ರಮಗಳೇನು? ಎನ್ನುವಂತಹ ಗಂಭೀರ ಸ್ವರೂಪದ ವಿಷಯಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ ಎಂದು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅವರು ಮಾತನಾಡಿ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸಿ, ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಹಲವು ದಶಕಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದರು.

ಜನಸಂಖ್ಯೆಯನ್ನು ನಿಯಂತ್ರಿಸಲು ಸರಕಾರಗಳು ಆಧುನಿಕ ವೈದ್ಯಕೀಯ ವಿಧಾನಗಳನ್ನು ಎಲ್ಲರೂ ಅನುಸರಿಸುವಂತೆ ಕರೆ ನೀಡಿದ ಅವರು, ಜನಸಂಖ್ಯಾ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಪ್ರೊ.ಬಿ.ಎಂ.ಕುಮಾರಸ್ವಾಮಿ, ರಮೇಶ್ಬಾಬು, ಗುಡುದಪ್ಪ ಕಸವಿ, ಡಾ.ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಡಿ.ವಿ.ಎಸ್.ಕಾಲೇಜಿನಿಂದ ಹೊರಟ ಜಾಗೃತಿ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂತಿಮವಾಗಿ ಅಂಬೇಡ್ಕರ್ಭವನದಲ್ಲಿ ಸಂಪನ್ನಗೊಂಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top