ಕನ್ನಡ

ಬಡತನದ ಬೇಗೆಯ ನಡುವೆಯೂ ಆದರ್ಶಯುತ ಜೀವನ: ವೃಕ್ಷ ಮಾತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾಲುಮರದ ತಿಮ್ಮಕ್ಕ – ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ಹೆದ್ದಾರಿಯ ೪ ಕಿ.ಮೀ. ಉದ್ದಳತೆಯಲ್ಲಿ ೨೮೪ ಆಲದ ಮರಗಳನ್ನು ನೆಟ್ಟು, ಆ ಮರಗಳನ್ನು ಪೋಷಿಸಿದ ಇವರ ಕೆಲಸವನ್ನು ಇಂದು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.

S.timmakka_1

ಈಕೆ ನಿಜಕ್ಕೂ ಮಹಾಮಾತೆ. ಬಡತನದ ಬೇಗೆಯ ನಡುವೆಯೂ ಆದರ್ಶಯುತ ಜೀವನವನ್ನು ತನ್ನದಾಗಿಸಿಕೊಂಡ ಅಪರೂಪದ ಜೀವ. ತನಗೆ ಮಕ್ಕಳಾಗದಿದ್ದರೇನಂತೆ ನೆರಳು ನೀಡುವ ಮರಗಳೇ ತನಗೆ ಮಕ್ಕಳು. ಅವುಗಳನ್ನು ಪೋಷಿಸುವುದೇ ಜೀವಿತದ ಕರ್ತವ್ಯ ಎಂದು ಭಾವಿಸಿ ಮೌನಕ್ರಾಂತಿಗೆ ಮುಂದಾದ ‘ವೃಕ್ಷ ಮಾತೆ. ಅವರೇ ಸಾಲು ಮರದ ತಿಮ್ಮಕ್ಕ.

‘ಸಾಲು ಮರದ ತಿಮ್ಮಕ್ಕರೆಂದೇ ರಾಜ್ಯದ ಜನಮಾನಸದಲ್ಲಿ ಜನಜನಿತರಾದ ಇವರು, ತಾವು ಮಾಡುವ ಕಾಯಕಕ್ಕೆ ಎಂದೂ ಪ್ರಚಾರ ಬಯಸಿದವರಲ್ಲ. ಪ್ರಶಸ್ತಿ-ಪುರಸ್ಕಾರಗಳನ್ನು ನಿರೀಕ್ಷಿಸಿದವರೂ ಅಲ್ಲ.

ತಮ್ಮ ಕಾಯಕವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಕರ್ತವ್ಯವೆಂಬಂತೆ ತಪಸ್ಸಿನ ರೀತಿಯಲ್ಲಿ ಮಾಡುತ್ತಾ ಬಂದ ನಿಸ್ವಾರ್ಥ ಜೀವಿ. ಅಕ್ಷರ ಕಲಿಯದಿದ್ದರು, ತಮ್ಮ ಉದಾತ್ತ ಕಾಯಕದ ಮೂಲಕ, ತತ್ವಾದರ್ಶಗಳನ್ನು ರೂಢಿಸಿಕೊಂಡು ಬದುಕಿನ ಮೂಲಕ ಅಕ್ಷರಸ್ಥರ ಕಣ್ಣಿಗೆ ಮಹಾಚೇತನವಾಗಿ ಬೆಳೆದು ನಿಂತರು.

Salumarada

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹುಳಿಕಲ್ ಗ್ರಾಮದವರಾದ ತಿಮ್ಮಕ್ಕ, ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದವರಲ್ಲ. ಹುಳಿಕಲ್ ಗ್ರಾಮದ ಸಮೀಪವೇ ಇದ್ದ ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ತಿಮ್ಮಕ್ಕ, ದನ ಕಾಯುತ್ತಿದ್ದ ಚಿಕ್ಕಯ್ಯ ಎಂಬುವರನ್ನು ಮದುವೆಯಾದರು.

ದುರಾದೃಷ್ಟವಶಾತ್ ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಆಗ ತಿಮ್ಮಕ್ಕ ತಮ್ಮ ಮಕ್ಕಳಿಲ್ಲದ ಕೊರಗನ್ನು ಮರೆಯಲು ಸಾಲು ಸಾಲು ಆಲದ ಮರಗಳನ್ನು ನೆಡಲಾರಂಭಿಸಿದರು.

ತಿಮ್ಮಕ್ಕ ಅವರ ಹಳ್ಳಿಯಲ್ಲಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಇವರ ಪತಿ ಚಿಕ್ಕಯ್ಯ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲು ಶುರುವಿಟ್ಟುಕೊಂಡರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ಕುದೂರು ಹಳ್ಳಿಯ ಬಳಿ ೪ ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ ೨೦ ಸಸಿಗಳನ್ನು ನೆಟ್ಟರು.

07-salamarada-thimmakka600

ಹೀಗೆ ಈ ದಂಪತಿಗಳು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಅಷ್ಟೇ ಅಲ್ಲ. ಸಸಿಗಳನ್ನು ಮೇವಿನ ಜಾನುವಾರುಗಳಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು.

ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವುಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು. ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು.

ಹೀಗೆ ತಿಮ್ಮಕ್ಕ ದಂಪತಿಗಳು ಮಕ್ಕಳ ಕೊರಗನ್ನು ನೀಗಲು ಅನುಸರಿಸಿದ ಹಾದಿಯಿಂದಾಗಿ ಇಂದು ನೂರಾರು ಮರಗಳು ಬೆಳೆದು ನಿಂತು ನೆಮ್ಮದಿಯ ನೆರಳು ನೀಡುತ್ತಿವೆ. ಇದೀಗ ಈ ಮರಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಂಡಿದೆ.

ತಿಮ್ಮಕ್ಕ ಅಕ್ಕರೆಯಿಂದ, ಪ್ರೀತಿಯಿಂದ, ತಾಯಿಯಂತೆ ಸಸಿಗಳನ್ನು ಜೋಪಾನ ಮಾಡಿ ಮರಗಳೇ ತನ್ನ ಮಕ್ಕಳು ಎಂಬ ಮಾತನ್ನು ಸಾಬೀತು ಪಡಿಸಿದ್ದಾರೆ.

ಆತ್ಮ ಸಂತೋಷಕ್ಕಾಗಿ ಈ ಕಾಯಕವನ್ನು ತನ್ನದಾಗಿಸಿಕೊಂಡ ತಿಮ್ಮಕ್ಕ ಎಂದೂ ಪ್ರಚಾರ ಬಯಸಿದವರಲ್ಲ; ಪ್ರಶಸ್ತಿ-ಪುರಸ್ಕಾರವನ್ನೂ ನಿರೀಕ್ಷಿಸಿದವರಲ್ಲ.

ಬದಲಿಗೆ ತಿಮ್ಮಕ್ಕ ನಿಸ್ಪೃಹ ಸೇವೆ ತನ್ನಿಂತಾನೇ ಪಸರಿಸಿ ಜನಜನಿತರಾದರು. ನೂರಾರು ಪ್ರಶಸ್ತಿಗಳು, ಬಿರುದು-ಬಾವಲಿಗಳು ಅರಸಿ ಬಂದವು. ಆದರೆ ತಿಮ್ಮಕ್ಕ ಬೀಗಲಿಲ್ಲ. ತನ್ನ ಕಾಯಕವನ್ನು ಬಿಡಲಿಲ್ಲ. ನಿರಂತರವಾಗಿ ಮರಗಳೆಂಬ ಮಕ್ಕಳನ್ನು ಬೆಳೆಸುತ್ತಲೇ ಹೋದರು. ಈ ಕಾರ್ಯದಿಂದಲೇ ಆತ್ಮ ಸಂತೃಪ್ತಿಯನ್ನು ಪಟ್ಟುಕೊಂಡರು. ನೂರಾರು, ಸಾವಿರಾರು ಜನರಿಗೆ ಸ್ಪೂರ್ತಿಯ ಚಿಲುಮೆಯಾದರು. ಪರಿಸರ ಪ್ರೇಮಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಸಾಲು ಮರದ ತಿಮ್ಮಕ್ಕ ಇಂದು ಹೆದ್ದಾರಿಯ ೪ ಕಿ.ಮೀ ಉದ್ದಳತೆಯಲ್ಲಿ ನೆಟ್ಟಿರುವ ೨೮೪ ಮರಗಳ ಪೋಷಣೆಯನ್ನು ಗಮನಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಗೌರವಿಸಿವೆ.

Saalumarada_Thimmakkaj.2

೧೯೯೫ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, ೧೯೯೭ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ವೀರ ಚಕ್ರ ಪ್ರಶಸ್ತಿ, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ ಹೀಗೆ ಹತ್ತಾರು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಅಷ್ಟೇ ಏಕೆ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಶಸ್ತಿ-ಪುರಸ್ಕಾರಗಳು ತಿಮ್ಮಕ್ಕನವರ ಮುಡಿಗೇರಿವೆ.

ಭಾರತದಲ್ಲಿ ಹಲವಾರು ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯದಾದ್ಯಂತ ಸಸಿ ನೆಡುವ ಕಾರ್ಯಕ್ರಮಕ್ಕೆ ತಿಮ್ಮಕ್ಕನವರ ಅಮೃತಹಸ್ತವೇ ಬೇಕು.

ತಿಮ್ಮಕ್ಕ

ಹೀಗೆ ಸಾಲುಮರದ ತಿಮ್ಮಕ್ಕ ತನ್ನ ನಿಸ್ವಾರ್ಥ ಕರ್ಮದ ಮೂಲಕ ಜನಜನಿತರಾಗಿದ್ದಾರೆ. ಅಷ್ಟೇ ಅಲ್ಲ. ಪರಿಸರ ರಕ್ಷಣೆಯ ಕಾಯಕದ ಜತೆ ಜತೆಗೆ ಸಮಾಜ ಸೇವಾ ಕೈಂಕರ್ಯವನ್ನು ತಿಮ್ಮಕ್ಕ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣ, ಆಸ್ಪತ್ರೆ ನಿರ್ಮಾಣ ಹೀಗೆ ಸಮಾಜಮುಖಿಯಾಗಿಯೂ ತಿಮ್ಮಕ್ಕ ಕಾರ್ಯ ಪ್ರವೃತ್ತರಾಗಿದ್ದಾರೆ. ೧೯೯೧ರಲ್ಲಿ ತಮ್ಮ ಪತಿ ತೀರಿ ಹೋದ ಬಳಿಕ ತಿಮ್ಮಕ್ಕ ಬದುಕು ಸಮಾಜ ಕಾಯಕಕ್ಕೆ ಮೀಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top