fbpx
News

15 ಭಾಷೆಗಳಿಗೆ ಕನಕದಾಸರ ಕೀರ್ತನೆಗಳು…

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವಚನ ಸಾಹಿತ್ಯದಂತೆ ಕನಕದಾಸರ ಸಾಹಿತ್ಯ ಕೂಡ ಇತರ ಭಾಷೆಯಲ್ಲಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳ ಹಿಂದೆಯೇ ಯೋಜನೆ ಕೈಗೊಂಡಿತಾದರೂ ಕಾರ್ಯರೂಪಕ್ಕೆ ಬರುವುದು ವಿಳಂಬವಾಗಿತ್ತು.ದಾಸ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಗ್ರಂಥಗಳು ಮತ್ತು ಕೀರ್ತನೆಗಳನ್ನೊಳಗೊಂಡ ಸಾಹಿತ್ಯ ಇಂಗ್ಲಿಷ್‌ ಸೇರಿದಂತೆ ಸುಮಾರು 15 ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದ್ದು, ಈಗಾಗಲೇ ಶೇ.65ರಷ್ಟು ಕಾರ್ಯವನ್ನು ಪೂರ್ಣಗೊಳಿಸಿದೆ.

ಈ ಯೋಜನೆಗೆ ಈಗಾಗಲೇ ಸುಮಾರು 1.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಆದ್ಯತೆಯ ಮೇರೆಗೆ ದಾಸರ ಸಾಹಿತ್ಯದ ತರ್ಜುಮೆ ಕಾರ್ಯ ನಡೆಯುತ್ತಿದೆ.ಸುಮಾರು 2.37 ಕೋಟಿ ರೂ. ವೆಚ್ಚದಲ್ಲಿ ಈ ಅನುವಾದ ಯೋಜನೆ ನಡೆಯುತ್ತಿದ್ದು, ಪ್ರತಿ ಭಾಷೆಯಲ್ಲಿಯೂ ಕೂಡ ಕನಕದಾಸರ ಸಾಹಿತ್ಯವು ಮೂರು ಸಂಪುಟಗಳಲ್ಲಿ ಹೊರಬರಲಿದೆ.

ಇಂಗ್ಲಿಷ್‌, ಹಿಂದಿ, ಉರ್ದು, ಕೊಡವ, ಬ್ಯಾರಿ, ತುಳು, ಸಂಸ್ಕೃತ, ಮರಾಠಿ, ಪಂಜಾಬಿ, ಬಂಗಾಳಿ, ಅಸ್ಸಾಮಿ, ತೆಲುಗು, ತಮಿಳು, ಮಲಯಾಳಂ, ಕೊಂಕಣಿ ಭಾಷೆಗಳಿಗೆ ಅನುವಾದ ಮಾಡಲಾಗುತ್ತಿದೆ.ಈಗಾಗಲೇ ಕೊಡವ, ಕೊಂಕಣಿ, ತುಳು ಭಾಷೆಯ ಅನುವಾದ ಕಾರ್ಯ ಪೂರ್ಣಗೊಂಡಿದ್ದು, ಮುದ್ರಣ ಕಾರ್ಯ ನಡೆಯುತ್ತಿದೆ. ಬ್ಯಾರಿ, ಮರಾಠಿ, ಹಿಂದಿ, ತೆಲುಗು, ಬಂಗಾಳಿ, ಉರ್ದು ಭಾಷೆಯ ತರ್ಜುಮೆ ಪೂರ್ಣಗೊಂಡಿದ್ದು, ಪರಿಶೀಲನೆಯಷ್ಟೇ ಬಾಕಿಯಿದೆ. ಉಳಿದ 6 ಭಾಷೆಗಳ ಅನುವಾದ ನಡೆಯುತ್ತಿದ್ದು, ಶೀಘ್ರವೇ ಮುಕ್ತಾಯವಾಗಲಿದೆ ಎಂದು ಕನಕದಾಸರ ಅಧ್ಯಯನ ಕೇಂದ್ರದ ಮೂಲಗಳು ತಿಳಿಸಿವೆ.

ಪ್ರತಿ ಭಾಷೆಗೆ 6 ಅನುವಾದಕರನ್ನು ನೇಮಕ ಮಾಡಲಾಗಿದೆ.ಆಯಾ ಭಾಷೆಗಳಲ್ಲಿ ವಿದ್ವಾಂಸರಾದ ಒಬ್ಬರು ಪ್ರಧಾನ ಸಂಪಾದಕರಾಗಿರುತ್ತಾರೆ. ಉಳಿದಂತೆ ತಲಾ 8ರಿಂದ 10 ಮಂದಿ ಅನುವಾದಕರು ತರ್ಜುಮೆ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ಆಯಾ ಭಾಷೆಯಲ್ಲಿ ಅನುವಾದಗೊಳ್ಳುವುದಕ್ಕೂ ಮುನ್ನವೇ ಕನ್ನಡದ ವಿದ್ವಾಂಸರಿಂದ ಶಿಬಿರಗಳನ್ನು ನಡೆಸಿರುವ ಕನಕದಾಸರ ಅಧ್ಯಯನ ಕೇಂದ್ರ, ತುಂಬಾ ಸುಲಭವಾಗಿ ಕನಕದಾಸರ ಸಾಹಿತ್ಯ ಅರ್ಥ ಮಾಡಿಕೊಳ್ಳಲು ನೆರವಾಗಿದೆ.

ಮೈಸೂರಿನ ವಿದ್ವಾಂಸ ಡಿ.ಎ.ಶಂಕರ್‌ ಪ್ರಧಾನ ಸಂಪಾದಕರಾಗಿರುವ ಸಂಪಾದನಾ ಮಂಡಳಿಯಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ಸಿರಾಜ್‌ ಅಹಮದ್‌, ಮೈಸೂರಿನ ಡಾ.ಟಿ.ಎನ್‌.ನಾಗರತ್ನ, ಡಾ.ಸಿ.ನಾಗಣ್ಣ, ಸಿಂದಗಿಯ ಪ್ರೊ.ಚೆನ್ನಪ್ಪ ಕಟ್ಟಿ, ಚಿತ್ರರ್ದುಗದ ಡಾ.ತಾರಿಣಿ ಶುಭದಾಯಿನಿ ಮತ್ತು ಬೆಂಗಳೂರಿನ ಡಾ.ಒ.ಎಲ್‌.ನಾಗಭೂಷಣಸ್ವಾಮಿ ಅನುವಾದಕ್ಕೆ ನೆರವಾಗಲಿದ್ದಾರೆ. ಇವರ ಮಾರ್ಗದರ್ಶನಲ್ಲಿ ಬೇರೆ ಬೇರೆ ಭಾಷೆಯ ಅನುವಾದಕರು ಕನಕದಾಸರ ಕೃತಿಗಳನ್ನು ಅನುವಾದಿಸುತ್ತಿದ್ದಾರೆ. ಜತೆಗೆ ಈ ತಂಡ ಕನಕ ಸಾಹಿತ್ಯ ಅನುವಾದಿಸುವಾಗ ಅರ್ಥದ ತೊಡಕು ಬರದಂತೆ ಕನ್ನಡ -ಇಂಗ್ಲಿಷ್‌ ಕನಕ ವಿಶಿಷ್ಟಾರ್ಥ ಕೋಶವೊಂದನ್ನು ಕೂಡ ಸಿದ್ಧಪಡಿಸಿದೆ.

ಪ್ರತಿ ಭಾಷೆಯಲ್ಲಿಯೂ ಕೂಡ ತಲಾ ಮೂರು ಸಂಪುಟಗಳು ಹೊರಬರಲಿವೆ. ಕೀರ್ತನೆಗಳ ಸಂಪುಟ, ಮೋಹನ ತರಂಗಿಣಿ ಸಂಪುಟ ಮತ್ತು ರಾಮಧ್ಯಾನಚರಿತೆ, ನಳ ಚರಿತೆ ಮತ್ತು ಹರಿಭಕ್ತ ಸಾರ ಈ ಮೂರು ಗ್ರಂಥಗಳನ್ನೊಳಗೊಂಡ ಸಂಪುಟ ಹೀಗೆ ಮೂರು ಸಂಪುಟಗಳು ರಚನೆಗೊಳ್ಳಲಿವೆ.ದಾಸರು ರಚಿಸಿರುವ 110 ಭಕ್ತಿ ಪದ್ಯಗಳಿರುವ ಹರಿಭಕ್ತ ಸಾರ ಗ್ರಂಥ, 42 ಸಂಧಿಗಳಿಂದ ಕೂಡಿರುವ ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿರುವ ಮೋಹನ ತರಂಗಿಣಿ (ಕೃಷ್ಣಚರಿತೆ), 9 ಸಂಧಿಗಳಿಂದ ಕೂಡಿರುವ ಭಾಮಿನಿ ರಚನೆಯಾಗಿರುವ 481 ಪದ್ಯಗಳಿರುವ ನಳ ಚರಿತ್ರೆ, ಭಾಮಿನಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿರುವ ರಾಮಧ್ಯಾನಚರಿತೆ ಹಾಗೂ ಕನಕರ 316 ಕೀರ್ತನೆಗಳು ಅನುವಾದಗೊಳ್ಳಲಿವೆ.

ಕನಕದಾಸರ ಕಿರು ಪರಿಚಯ :

ಕಾಲ:1508-1606
ಜನ್ಮನಾಮ :ತಿಮ್ಮಪ್ಪ ನಾಯಕ
ಜಾತಿ :ಕುರುಬ ಜನಾಂಗ
ಜನ್ಮ ಸ್ಠಳ :ಬಾಡ
ಸ್ಥಳ :ಕಾಗಿನೆಲೆ (ಹಾವೇರಿ ಜಿಲ್ಲೆ)

ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು. ಕುರುಬರು ಮೂಲತಃ ಶ್ರೀವೈಷ್ಣವ ಪಂಥವನ್ನು ಅವಲಂಬಿಸಿದ್ದರೂ, ಕನಕದಾಸರು ವ್ಯಾಸರಾಜರ ಶಿಷ್ಯವೃತ್ತಿಯನ್ನು ಪಡೆದು, ವೈಷ್ಣವ ಪಂಥವನ್ನು ಅವಲಂಬಿಸಿದ್ದರು. ಇವರ ಆರಾಧ್ಯದೇವ ಆದಿಕೇಶವ (ಬಾಡದಾದಿ)ಅಂಕಿತ – ಆದಿಕೇಶವ (ಬಾಡದಾದಿ).

ಮುಖ್ಯ ಗ್ರಂಥಗಳು :

1. ನಳಚರಿತ್ರೆ 481ಪದ್ಯಗಳುಳ್ಳ ನಳದಮಯಂತಿಯರ ಪ್ರೇಮ ಕಥೆ
2. ಹರಿಭಕ್ತಿಸಾರ 110 ಪದ್ಯಗಳ ಭಾಮಿನಿ ಷಟ್ಪದಿಯ ಪದ್ಯ ರೂಪ
3. ನೃಸಿಂಹಾವತಾರ – ನರಸಿಂಹಾವತಾರದ ಬಗ್ಯೆ ಒಂದು ಗ್ರಂಥ
4. ರಾಮಧ್ಯಾನಚರಿತ್ರೆ ರಾಗಿ -ಮತ್ತು ಅಕ್ಕಿಯ ಕುರಿತು ಗ್ರಂಥದಲ್ಲಿ ಪರಮಾತ್ಮನ ಶ್ಲಾಘನೆ
5. ಮೋಹನತರಂಗಿಣಿ ಒಂದು ಕಾವ್ಯ
6. ಹಲವಾರು ದೇವರನಾಮಗಳು
7. ತತ್ತ್ವಪದಗಳು

ಕನಕನಿಗಾಗಿ ತಿರುಗಿದ ಕೃಷ್ಣ ಒಮ್ಮೆ ಕನಕದಾಸರು ಉಡುಪಿಗೆ ಬಂದು ಶ್ರೀಕೃಷ್ಣನ ದರ್ಶನಕ್ಕೆ ಹೋಗಿದ್ದರು. ಉಡುಪಿಯಲ್ಲಿ ಶ್ರೀಕೃಷ್ಣ ಪಶ್ಚಿಮದಿಕ್ಕಿಗೆ ಮುಖ ಮಾಡಿದ್ದಾನೆ.ಸಾಮಾನ್ಯವಾಗಿ ದೇವರು ಪೂರ್ವ ದಿಕ್ಕಿಗೆ ಇರುವುದು ವಾಡಿಕೆ. ಒಮ್ಮೆ ಕನಕದಾಸರು ಉಡುಪಿಯ ಕೃಷ್ಣನನ್ನು ಒಂದು ಸಣ್ಣ ಕಿಡಕಿಯಲ್ಲಿ ವೀಕ್ಷಿಸಿದರು. ಕನಕದಾಸರು ಆ ಸಣ್ಣ ಕಿಡಕಿಯಲ್ಲೇ ಪರಮಾತ್ಮನನ್ನು ಕಂಡು ಹಿಗ್ಗಿ, ಕುಣಿದಾಡಿ, ದೇವರನಾಮಗಳನ್ನು ರಚಿಸಿ ಕೊಂಡಾಡಿದರು. ಆ ನೆನಪಿನಲ್ಲೇ ಕನಕದಾಸರ ಗೌರವಾರ್ಥ ನಾವು ಈಗಲೂ ಆ ಒಂದು ಸಣ್ಣ ಕಿಡಕಿಯಲ್ಲೇ ಶ್ರೀಕೃಷ್ಣನನ್ನು ನೋಡುವ ಒಂದು ವಾಡಿಕೆ.

ಕನಕ ಸಾಹಿತ್ಯಶೈಲಿ :
ಕನಕದಾಸರ ಹಲವಾರು ಸಾಹಿತ್ಯಗಳು ಬಲು ವಿಶೇಷವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಗುರುಗಳ ಕರುಣೆಯಿಲ್ಲದೆ ಅಸಾಧ್ಯ. ಅವರ ರಚನಾ ಶೈಲಿಯೇ ಹಾಗೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top