ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಲು ತನ್ನ ಮಗಳಿಗೆ ಸೀಟ್ ಸಿಗದೆ ಪಕ್ಕದ ಮನೆಯ ಹುಡುಗನಿಗೆ ಇದು ಲಭ್ಯವಾಗಿದೆ ಎಂದು ಹೊಟ್ಟೆ ಉರಿದುಕೊಂಡ ಮಹಿಳೆಯೊಬ್ಬಳು ಮಾಡಬಾರದ ಕೆಲಸ ಮಾಡಲು ಹೋಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಜೈಪುರದ ವಿದ್ಯಾರ್ಥಿಗೆ ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾದ ಪ್ರತಿಷ್ಟಿತ ವಿಶ್ವವಿದ್ಯಾನಿಲಯ ಒಂದರಲ್ಲಿ ಸೀಟ್ ಸಿಕ್ಕಿತ್ತು. ಇದೇ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಬೇಕೆಂಬ ಬಯಕೆ ಹೊಂದಿದ್ದ ಮಹಿಳೆಯ ಪುತ್ರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇದರಿಂದ ಒಳಗೊಳಗೆ ಕುದಿಯುತ್ತಿದ್ದ ಮಹಿಳೆ ಅವಕಾಶಕ್ಕಾಗಿ ಕಾಯುತ್ತಿದ್ದಳು.
ವಿದ್ಯಾರ್ಥಿ ಬಲ್ ರಾಜ್ ಸಿಂಗ್ ಆಸ್ಟ್ರೇಲಿಯಾದ ಮೆಲ್ಬೋರ್ನ್ ಗೆ ತೆರಳಲು ಸಿದ್ದವಾಗಿದ್ದು, ಆತನ ಪೋಷಕರು ಮಗನನ್ನು ಕಳುಹಿಸಿಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಕರೆ ಮಾಡಿದ ನೆರೆ ಮನೆಯ ಮಹಿಳೆ ಆತ ಸ್ಪೋಟಕ ಸಾಮಾಗ್ರಿಗಳನ್ನು ಸಾಗಿಸುತ್ತಿರುವುದಾಗಿ ಹೇಳಿದ್ದಳು.
ಇದರಿಂದ ಆತಂಕಗೊಂಡ ವಿಮಾನ ನಿಲ್ದಾಣದ ಸಿಬ್ಬಂದಿ, ಬಲ್ ರಾಜ್ ಸಿಂಗ್ ನನ್ನು ತಡೆದು ಆತನ ಲಗೇಜ್ ಗಳನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಲಿಲ್ಲ. ಅಲ್ಲದೇ ಆತ ವಿದ್ಯಾರ್ಥಿ ವೀಸಾದ ಮೇಲೆ ಉನ್ನತ ವ್ಯಾಸಂಗಕ್ಕೆ ತೆರಳುತ್ತಿರುವ ಮಾಹಿತಿ ತಿಳಿದುಬಂತು. ಆಗ ಕರೆ ಬಗ್ಗೆ ಅನುಮಾನಗೊಂಡ ಭದ್ರತಾ ಸಿಬ್ಬಂದಿ, ಆ ನಂಬರ್ ಹೇಳಿದ ವೇಳೆ ಅದು ನೆರೆಮನೆಯ ಮಹಿಳೆಯ ಮೊಬೈಲ್ ನಂಬರ್ ಎಂಬ ವಿಚಾರ ತಿಳಿದುಬಂದಿದೆ. ಇದೀಗ ಆಕೆಯ ವಿರುದ್ದ ಕ್ರಮಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗೆ ತೊಂದರೆ ಕೊಡಲು ಹೋದ ಮಹಿಳೆ ಈಗ ಸ್ವತಃ ತಾನೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ.
Source: dailyhunt
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
