fbpx
Karnataka

ರಾಜ್ಯಕ್ಕೆ ಮತ್ತೊಂದು ಅನ್ಯಾಯ, ಜುಲೈ 30ಕ್ಕೆ ಕರ್ನಾಟಕ ಬಂದ್ …

KBand

ಇಷ್ಟು ದಿನ ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯಕ್ಕೆ ಒಳಗಾಗಿದ್ದ ಕರ್ನಾಟಕಕ್ಕೆ ಮಹದಾಯಿ ವಿಚಾರದಲ್ಲಿ ಆರಂಭದಲ್ಲೇ ಅಂತಹ ಅನುಭವವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹಲವು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಚಲನಚಿತ್ರೋದ್ಯಮ ಜುಲೈ 30ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ “ಈ ವಿಚಾರದಲ್ಲಿ ಕನ್ನಡಿಗರು ಒಂದಾಗಿದ್ದಾರೆ. ಎಲ್ಲ ಕನ್ನಡಪರ, ರೈತಪರ, ದಲಿತಪರ ಹಾಗೂ ಕಾರ್ಮಿಕ ಸಂಘಟನೆಗಳ ಬೆಂಬಲ ಕೋರಲಾಗಿದೆ. ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆ ಎಂಬ ದೃಢ ವಿಶ್ವಾಸವಿದೆ. ಬೀದರ್‌ನಿಂದ ಚಾಮರಾಜನಗರ ಮತ್ತು ಮಂಗಳೂರಿನಿಂದ ಕೋಲಾರದವರೆಗೆ ಅಖಂಡ ಕರ್ನಾಟಕ ಬಂದ್‌ ಮಾಡಲಾಗುವುದು ಎಂದು ವಾಟಾಳ್‌ ತಿಳಿಸಿದರು.”

ಜುಲೈ 30ರಂದು ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ಧಗಿತವಾಗಲಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಹೇಳಿದ್ದಾರೆ.


ಉತ್ತರ ಕರ್ನಾಟಕ

ಉತ್ತರ ಕರ್ನಾಟಕದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ. ಸರ್ಕಾರಿ ಕಚೇರಿ, ಕೋರ್ಟ್‌ ಕಟ್ಟಡಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಗದಗ ಜಿಲ್ಲಾದ್ಯಂತ ಗುರುವಾರ ಶಾಲೆ ಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿದೆ. ನವಲಗುಂದ, ನರಗುಂದಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಕೆಲವೆಡೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಿಂದ ರಾಜ್ಯಕ್ಕೆ ಆದ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ವಿರುದ್ಧ ಕನ್ನಡ ಒಕ್ಕೂಟ ಎಲ್ಲ ಹಂತಗಳಲ್ಲಿ ಹೋರಾಟ ನಡೆಸಲಿದೆ. ಉತ್ತರ ಕರ್ನಾಟಕ ಅಥವಾ ಮೈಸೂರು ಕರ್ನಾಟಕ ಎಂಬ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಈ ವಿಚಾರದಲ್ಲಿ ಕನ್ನಡಿಗರು ಒಂದಾಗಿದ್ದಾರೆ. ಎಲ್ಲ ಕನ್ನಡಪರ, ರೈತಪರ, ದಲಿತಪರ ಹಾಗೂ ಕಾರ್ಮಿಕ ಸಂಘಟನೆಗಳ ಬೆಂಬಲ ಕೋರಲಾಗಿದೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top