fbpx
Health

ಉಪ್ಪಿಗಿಂತ ರುಚಿ ಇಲ್ಲ ! ಇದಕ್ಕೆ ಸಮನಾದ ಬೇರೆ ವಸ್ತುವೂ ಇಲ್ಲ !

ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿ ಇಲ್ಲ ಎಂಬದೊಂದು ಗಾದೆ ಈ ಗಾದೆ ತಾಯಿಯ ಸ್ಥಾನವನ್ನು ಹೇಳಿದರೆ ಉಪ್ಪಿನ ಮಹತ್ವವನ್ನು ಸಾರುತ್ತದೆ.

ಕಣ್ಮುಂದೆ ದಿನಾ ಕಾಣುವ ನಿಮ್ಮ ಹೆತ್ತ ತಾಯಿಗಿಂತ ಬೇರೆ ದೇವರಿಲ್ಲ! ಆಕೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ! ಅಂತೆಯೇ ಆಕೆಯನ್ನು ದೇವರಿಗೆ ಹೋಲಿಸಲಾಗಿದೆ. ಹಾಗೆಯೇ ಉಪ್ಪಿಗಿಂತ ರುಚಿಯಾದ ವಸ್ತು ಮತ್ತೊಂದಿಲ್ಲ! ನೀವು ಎಂತಹ ಪಂಚಭಕ್ಷ ಪರಮಾನ್ನಗಳನ್ನು ಆದರೆ ಅದಕ್ಕೆ ಉಪ್ಪನ್ನು ಹಾಕದೆ ಹೋದರೆ ಅದನ್ನು ತಿನ್ನಲು ಸಾಧ್ಯವಿಲ್ಲ. ಉಪ್ಪಿಲ್ಲದಿದ್ದರೆ ಎಲ್ಲವೂ ಸಪ್ಪೆ ಸಪ್ಪೆ ಮಾಡಿದ ಅಡುಗೆಗೆ ಉಪ್ಪು ಸೋಕಿದಾಗಲೇ ತಿನ್ನಲು ಸಾಧ್ಯ ಇಲ್ಲದಿದ್ದರೆ ಸಪ್ಪೆ ಅಡುಗೆಯನ್ನು ಪ್ರಾಣಿಗಳು ಸಹ ಮೂಸಿ ನೋಡುವುದಿಲ್ಲ! ಹಾಗಾಗಿ ಉಪ್ಪಿಗೆ ಮಹತ್ತರವಾದ ಪಾತ್ರ! ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಊಟಕ್ಕೆ ಬಡಿಸುವ ಮುನ್ನ ಉಪ್ಪನ್ನು ಬಡಿಸಿಯೇ ನಂತರ ಬೇರೆ ಪದರ್ಥಗಳನ್ನು ಬಡಿಸುತ್ತಾರೆ. ಹಾಗೂ ಸಂಪ್ರದಾಯಸ್ಥರಾದರೆ ಊಟದ ನಂತರ ತಟ್ಟೆಯ ಎಲೆ ತುದಿಯಲ್ಲಿ ಉಪ್ಪು ಉಳಿದಿದ್ದರೆ ಅದಕ್ಕೆ ನೀರನ್ನು ಹಾಕಿಯೇ ಮೇಲೆ ಏಳುತ್ತಾರೆ, ಕಾರಣ ಉಪ್ಪಿಗೆ ಅತಿ ಮಹತ್ವ ಇರುವುದರಿಂದ ಅದನ್ನು ಒಣಗಿಸಬಾರದೆಂಬ ಕಾರಣಕ್ಕೆ ಅದಕ್ಕೆ ನೀರು ಹಾಕಿ ನೆನೆಸಿದ ನಂತರವೇ ಊಟ ಮುಗಿಸುತ್ತಾರೆ. ನಾವು ತಿನ್ನುವ ಆಹಾರ ರುಚಿ ಬರಬೇಕೆಂದರೆ ಉಪ್ಪು ಇರಲೇ ಬೇಕು. ಆದರೆ ಬರಿ ಆಹಾರದ ರುಚಿ ಹೆಚ್ಚು ಮಾಡಲು ಮತ್ರವಲ್ಲದೇ ಉಪ್ಪಿನ ಹಲವು ಹನ್ನೊಂದು ಬಗೆಯ ಉಪಯೋಗಗಳಿವೆ. ಉಪಯೋಗವನ್ನು ಅರಿತು ನೀವು ಸಾಧ್ಯವಾದಾಗ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ.

pinch-of

ನಿಮ್ಮ ಕರ್ಚೀಫ್ ಅಥವಾ ಯಾವುದಾದರೂ ಬಟ್ಟೆಗೆ ಎನಾದರೂ ಬಣ್ಣ ತಗುಲಿದ್ದರೆ ಅದನ್ನು ಸೋಪಿನ ನೀರಿನಲ್ಲಿ ನೆನೆಸುವ ಮುನ್ನ ಉಪ್ಪಿನ ನೀರಿನಲ್ಲಿ ಸ್ವಲ್ಪ ಹೊತ್ತು ನೆನಸಿ ನಂತರ ಒಗೆಯಿರಿ ಬಣ್ನದ ಕಲೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.

ಅಡುಗೆ ಕಪಾಟಿನಲ್ಲಿ ಡಬ್ಬಿಗಳಲ ಮಧ್ಯೆ ಉಪ್ಪನ್ನು ಸಿಂಪಡಿಸುವುದರಿಂದ ಸಕ್ಕರೆ ಬೆಲ್ಲ ಮುಂತಾದ ಸಿಹಿ ಪದಾರ್ಥಗಳಿಗೆ ಇರುವೆ ಮುತ್ತುವುದಿಲ್ಲ.

ಸಾಲಾಡ್‍ಗಳನ್ನು ಮಾಡಿದಾಗ ಅದರ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಇದರಿಂದ ಕತ್ತಿರಿಸಿದ ತರಕಾರಿಗಳು ತೇವವನ್ನು ಕಳೆದುಕೊಳ್ಳದೆ ತಾಜಾವಾಗಿರುತ್ತದೆ.

ಮನೆಗೆ ತಂದ ಮೊಟ್ಟೆಯನ್ನು ಈ ಉಪ್ಪಿನ ನೀರಿನಲ್ಲಿ ಮುಳುಗಿಸಿ, ಮೊಟ್ಟೆ ಹಾಳಾಗಿದ್ದರೆ ತೇಲುತ್ತದೆ ಒಳ್ಳೆಯ ಮೊಟ್ಟೆ ಮುಳುಗುತ್ತದೆ.

ಹೊಸ ಟೂತ್‍ಬ್ರಷನ್ನು ಉಪಯೋಗಿಸುವ ಮುನ್ನ ಅದನ್ನು ಅರ್ಧ ಗಂಟೆ ಉಪ್ಪಿನ ನೀರಿನಲ್ಲಿ ಮುಳುಗಿಸಿರಿ, ಇದರಿಂದ ಬ್ರಷ್ ಹೆಚ್ಚು ದಿನ ಬಾಳಿಕೆ ಬರುತ್ತದೆ.

epsom-salts-for-the-bath

ಕಾಫಿ ಮಾಡುವ ಪಾತ್ರೆ ಕಲೆಗಟ್ಟಿದ್ದರೆ ಸ್ವಲ್ಪ ಉಪ್ಪನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ ತೊಳೆದರೆ ಯಾವ ಕ್ಲೀನಿಂಗ್ ಎಜೆಂಟ್‍ಗಳು ಬೇಡ.

ಕಂಚು, ಹಿತ್ತಾಳೆ, ತಾಮ್ರದ ಪತ್ರೆಗಳನ್ನು ತೊಳೆಯುವಾಗ ಉಪ್ಪನ್ನು ವೆನಿಗರ್‍ನೊಂದಿಗೆ ಬೆರಸಿ ತೊಳಿದರೆ ವಸ್ತುಗಳು ಫಳಫಳನೆ ಹೊಳೆಯುತ್ತದೆ ಅಲ್ಲದೆ ಬಹಳ ದಿನ ಹೊಳಪನ್ನು ಕಾಪಾಡಬಹುದು.

ಹೂದಾನಿಯ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿ ಹೂಗಳನ್ನು ಇಟ್ಟರೆ, ಹೂಗಳು ಬೇಗ ಬಾಡುವುದಿಲ್ಲ. ಮನೆಯ ಕಾರ್ಪೆಟ್ ಮೇಲೂ ಕಲೆಯಾಗಿದೆಯೇ? ಹಾಗಿದ್ದಲ್ಲಿ ಉಪ್ಪಿನ ಪೇಸ್ಟ್ ತರಹ ಮಾಡಿ ಅದರ ಮೇಲೆ ಸವರಿ ಸ್ವಲ್ಪ ಹೊತ್ತು ಬಿಡಿ ಕಲೆ ಮಾಸುತ್ತದೆ.

ಇಸ್ತ್ರಿಪೆಟ್ಟಿಗೆ ಇಸ್ತ್ರಿ ಮಾಡುವ ಭಾಗದಲ್ಲಿ ಕಲೆ ಇದೆಯೇ? ಹಾಗಿದ್ದರೆ ಒಂದು ಹಳೆಯ ಬಟ್ಟೆಯ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಸ್ವಲ್ಪ ಬಿಸಿ ಮಾಡಿದ ಇಸ್ತ್ರಿ ಪೆಟ್ಟಿಗೆಯನ್ನು ಇಸ್ತ್ರಿ ಮಾಡಿದರೆ ಕಲೆಯನ್ನು ತೆಗೆಯಬಹುದು.

ಮನೆಯಲ್ಲಿ ಗೋಡೆಯಲ್ಲಿ ತೂತು ಇದ್ದರೆ ಸಮಪ್ರಮಾಣದ ಉಪ್ಪು ಹಾಗೂ ಸ್ವಾರ್ಚ್‍ನ ಪೇಸ್ಟ್ ಮಾಡಿ ತೂತನ್ನು ಮುಚ್ಚಿ ನಂತರ ಬಣ್ಣ ಬಳಿಯಬಹುದು.

ಕಣ್ಣಿನಲ್ಲಿ ಸೋಂಕು ಇದ್ದರೆ ಒಂದು ಲೋಟದಲ್ಲಿ ಚಿಟಿಕೆ ಉಪ್ಪನು ಹಾಕಿ ಅದರಿಂದ ಕಣ್ಣನ್ನು ತೊಳೆದರೆ ಸೋಂಕನ್ನು ಕಡಿಮೆ ಮಾಡಬಹುದು.

ಲೋಟ ನೀರಿನ ಚಿಟಿಕೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸಿದರೆ ಬಾಯಿ ದುರ್ಗಂಧ ತಡೆಗಟ್ಟಬಹುದು. ಗಂಟಲು ನೋವು ಇದ್ದರೆ ಸ್ವಲ್ಪ ಬಿಸಿನೀರಿಗೆ 1 ಚಮಚ ಉಪ್ಪನ್ನು ಹಾಕಿ ಗಾರ್ಗಲ್ ಮಾಡುವುದರಿಂದ ಗಂಟಲು ನೋವು ಕಡಿಮೆ ಮಾಡುತ್ತದೆ.

download

ಪುಡಿ ಉಪ್ಪನ್ನು ಹಲ್ಲುಜ್ಜುವ ಬ್ರಷ್ ಮೇಲೆ ಹಾಕಿ ದಿನಾ ಹಲ್ಲನ್ನು ಉಜ್ಜಿದರೆ ಹಲ್ಲು ಫಳಫಳನೆ ಹೊಳೆಯುತ್ತವೆ. ಸಿಪ್ಪೆ ತೆಗದ ಹಣ್ಣುಗಳನ್ನು ಚಿಟಿಕೆ ಉಪ್ಪು ಹಾಕಿದ ನೀರಿನಲ್ಲಿ ನೆನಸಿಟ್ಟರೆ ಅದರ ಬಣ್ಣಗೆಡುವುದಿಲ್ಲ. ಹಾಗೂ ತಾಜವಾಗಿರುತ್ತದೆ.

ಜಿಡ್ಡಾದ ಬಾಣಲೆ ಕಾವಲಿಗಳನ್ನು ಮೊದಲು ಸ್ಪಲ್ವ ಉಪ್ಪು ಹಾಕಿ ತಿಕ್ಕಿ ನಂತರ ಸೋಪಲ್ಲಿ ತೊಳೆದರೆ ಬೇಗ ಜಿಡ್ಡು ಹೋಗುತ್ತದೆ.

ಬೆಣ್ಣೆ ಕಡಿಯುವಾಗ ಕೆನೆಗೆ ಸ್ವಲ್ಪ ಉಪ್ಪನ್ನು ಹಾಕಿದರೆ ಬೇಗ ಬೆಣ್ಣೆ ಬರುತ್ತದೆ.

ಶರ್ಟ್‍ಗಳ ಮೇಲೆ ವೈನ್ ಕಲೆ ಇದೆಯೇ? ಉಪ್ಪಿನ ನೀರಿನಲ್ಲಿ ನೆನಸಿ ನಂತರ ತಣ್ಣೀರಿನಳ್ಗ್ಭಿ ಒಗೆದರೆ ವೈನ್ ಕಲೆ ಹೋಗುತ್ತದೆ.

ನಿಮ್ಮ ಅಡುಗೆ ಮನೆ ವಾಶ್ ಬೆಸಿನ್ ಪೈಪ್‍ನಲ್ಲಿ ಗಬ್ಬು ವಾಸನೆ ಬರುತ್ತಿದ್ದರೆ ಬಿಸಿನೀರನ್ನು ಕುದಿಸಿ ಅದಕ್ಕೆ ಎರಡು ಚಮಚ ಉಪ್ಪು ಹಾಕಿ ಆ ನೀರನ್ನು 2-3 ದಿನ ಪೈಪ್‍ನಲ್ಲಿ ಸುರಿಯಿರಿ. ಗಬ್ಬು ವಾಸನೆ ಮಾಯವಾಗುತ್ತದೆ.

ಮೀನನ್ನು ಕತ್ತರಿಸುವುದಕ್ಕೆ ಮುಂಚೆ ಮೀನನ್ನು ಉಪ್ಪಿನ ನೀರಿನಲ್ಲಿ ನೆನಸಿಡಿ ಇದರಿಂದ ಅದರ ಚರ್ಮ ಮೃದುವಾಗಿ ಚರ್ಮದ ಮೇಲೆ ಮುಳ್ಳುಗಳು ಇದರೆ ತೆಗೆಯಲು ಸಹಾಯವಾಗುತ್ತದೆ.

ಕೊನೆಯದಾಗಿ ಮನೆ ಮಿಕ್ಸರ್‍ನ ಬ್ಲೇಡ್ ಗಳು ಮೊಂಡಾಗಿವೆಯೇ? ಹಾಗಿದ್ದರೆ ಹರಳುಪ್ಪನ್ನು ಹುರಿದು ಸ್ವಲ್ಪ ಬಿಸಿ ಇರುವಾಗಲೇ ಜಾರ್‍ನಲ್ಲಿ ಹಾಕಿ ಪುಡಿ ಮಾಡಿ ಹೀಗೆ ಮಾಡುತ್ತಿದ್ದರೆ ಬ್ಲೇಡ್ ಹರಿತವಾಗುತ್ತದೆ ಅಲ್ಲದೆ ಪುಡಿಯಾದ ಉಪ್ಪನ್ನು ಬಳಸಬಹುದು.

ಇಷ್ಟೆಲ್ಲ ಉಪಯೋಗವಿರುವ ಉಪ್ಪಿಗೆ ‘ಉಪ್ಪಿಗಿಂತ ರುಚಿಯಿಲ್ಲ’ ಎಂಬ ಗಾದೆ ಮುಂದೆ ‘ಉಪ್ಪುಗಿಂತ ಬೇರೆ ವಸ್ತುವು ಇಲ್ಲ’ ಎಂಬ ಪದವನ್ನು ಸೇರಿಸಿದರೆ ತಪ್ಪೇನಿಲ್ಲ!

ಪ್ರಕಾಶ್ ಕೆ.ನಾಡಿಗ್, ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top