fbpx
News

ಗೋಕಾಕ್ ಚಳುವಳಿಯ ಕಾವು ಮರುಕಳಿಸಲಿಲ್ಲ… ಅಭಿಮಾನಿಗಳ ಕಷ್ಟ ನಿಮ್ಮ ಕಷ್ಟ ತಾನೇ…?

ಕಳೆದ ತಿಂಗಳಿನ 30 ನೇ ತಾರಿಖಿನಂದು ಕರ್ನಾಟಕ ಹೊತ್ತಿ ಉರಿಯುತ್ತಿತ್ತು… ಕಾರಣ “ನೀರು”. ಅದು ಎಲ್ಲರಿಗು ತಿಳಿದಿರುವ ವಿಚಾರ… ಅದೆಷ್ಟು ಮಂದಿ ಪೊಲೀಸರ ಹತ್ತಿರ ಏಟು ತಿಂದು ಹೈರಾಣಾಗಿದ್ದರೋ ಏನೋ… ಅದೆಷ್ಟು ತಾಯಂದಿರ ಮೈ ಮೇಲೆ ಬರೆ ಬಿದ್ದವೋ ಏನೋ… ಅದೆಷ್ಟು ಹೆಣ್ಣುಮಕ್ಕಳು ಸರ್ಕಾರಕ್ಕೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕಿದರೋ ಏನೋ… ಕೇವಲ ನೀರಿಗೋಸ್ಕರ ಇಷ್ಟೆಲ್ಲ ನೆಡೆಯುತ್ತದಾ ಎಂದು ಎಷ್ಟೋ ಮಂದಿ ಕೇಳುವುದುಂಟು, ಆದರೆ ನಿಜವಾಗಿಯೂ ಉತ್ತರ ಕರ್ನಾಟಕದ ಜನ ನೀರಿಲ್ಲದೆ ತತ್ತರಿಸಿದ್ದಾರೆ…

ಮಹದಾಯಿ ಹೋರಾಟದ ವೇಳೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನಲ್ಲಿ ಪೊಲೀಸರು ರೈತರ ಮನೆಗಳಿಗೆ ನುಗ್ಗಿ ಮಕ್ಕಳು, ಹೆಂಗಸರು, ಗರ್ಭಿಣಿಯರು, ವೃದ್ಧರು ಎನ್ನದೆ ಕಂಡ,ಕಂಡವರ ಮೇಲೆ ಲಾಠಿ ಪ್ರಹಾರ ನಡೆಸಿದ್ದು, ಮನಸೋ ಇಚ್ಛೆ ಥಳಿಸಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಆದರೆ stars ಅನ್ನಿಸಿಕೊಂಡ ನಮ್ಮ ಕನ್ನಡ ಚಿತ್ರರಂಗದ ಎಷ್ಟೋ ನಾಯಕರು, ನಟಿಮಣಿಯರು ಪ್ರತಿಭಟನೆ ಕಡೆ ತಲೆ ಹಾಕಿ ಕೂಡ ಮಲಗಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ. ಹೌದು, ಮೊನ್ನೆ ನೆಡೆದ ಪ್ರತಿಭಟನೆಯಲ್ಲಿ ಚಿತ್ರರಂಗದ ಕೆಲವೇ ಕೆಲವು ನಾಯಕರನ್ನು ಬಿಟ್ಟರೆ ಉಳಿದವರು ಯಾರು ಅತ್ತ ಕಡೆ ಸುಳಿಯದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಿವಣ್ಣ, ಯಶ್, ಗಣೇಶ್ ಬಿಟ್ಟರೆ ಹೇಳಿಕೊಳ್ಳುವಂತ ಯಾವ ನಟರೂ ಅಂದು ಇರಲಿಲ್ಲ ಎನ್ನುವುದು ಸತ್ಯ ಕೂಡ.

30-1469880630-karnatakabandh2

ಅಣ್ಣಾವ್ರ ಕಿರಿಯ ಕುಡಿ ಪುನೀತ್ ರಾಜಕುಮಾರ್ ಆಗಲಿ, ಕಿಚ್ಚನ್ನು ಹಚ್ಚಿಸಬೇಕಿದ್ದ ಕಿಚ್ಚ ಸುದೀಪ ಆಗಲಿ, ಮೈಸೂರು ಹುಡುಗ ದರ್ಶನ್ ಆಗಲಿ, ಕಾಂಗ್ರೆಸ್ ಮುಖಂಡ ಅಂಬರೀಷ್ ಆಗಲಿ, ಕರಿ ಚಿರತೆ ಖ್ಯಾತಿಯ ವಿಜಿ ಆಗಲಿ, ಕಾಂಗ್ರೆಸ್ , ಕನ್ನಡಿಗರ ಬಗ್ಗೆ ಬಹಳಷ್ಟು ಮಾತಾಡುವ ಜಗ್ಗೇಶ್ ಆಗಲಿ, ತನಗೆ ಮರುಜೀವ ಕೊಟ್ಟ’ ಇಂದು ನೀರಿಗಾಗಿ ತತ್ವಾರ ಪಡುತ್ತಿರುವ ಬಾಗಲಕೋಟೆ ಜಿಲ್ಲೆಯಿಂದ ಆಯ್ಕೆಯಾದ ಉಮಾಶ್ರೀ ಆಗಲಿ ಕಿಂಚಿತ್ತೂ ಕಾಳಜಿ ತೋರದಿರುವುದು ಏಕೆ ಎಂಬುದು ಈಗಿರುವ ಪ್ರೆಶ್ನೆಯಾಗಿದೆ…

ಕಿಚ್ಚ ಸುದೀಪ್ ಏನೋ ತಂದೆಗೆ ಅರೋಗ್ಯ ಸರಿ ಇಲ್ಲ ಎಂದು ಟ್ವೀಟ್ ಮಾಡಿ ಕಾರಣ ಕೊಟ್ಟರು, ಉಳಿದವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಪ್ರತಿಭಟನೆಗೆ ಬಾರದಿದ್ದಕ್ಕೆ ಕಾರಣ ಕೊಡದೆ ನಿಣುಚಿಕೊಳ್ಳುವುದು ಎಷ್ಟು ಸರಿ ಎನ್ನುವುದು ನಮ್ಮೆಲ್ಲರ ಪ್ರೆಶ್ನೆಯಾಗಿದೆ. ಅಂದು ಬಂದ್ ಇದ್ದ ಕಾರಣ ಶೂಟಿಂಗ್ ಕೂಡ ನೆಡೆಯಲಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ…

ಎಲ್ಲರಿಗು ಗೊತ್ತಿರುವಂತೆ ಮಾಜಿ ಸಂಸದೆ ಹಾಗು ಚಿತ್ರನಟಿ ರಮ್ಯಾ ಅವರು ರಾಹುಲ್ ಗಾಂಧಿಯವರಿಗೆ ಆಪ್ತರಾಗಿರುವುದರಿಂದ ವಿವಾದದ ಬಗ್ಗೆ ಅವರೊದಿಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಸಲು ಪ್ರಯತ್ನಿಸಬಹುದಿತ್ತು, ಆದರೆ ಅವರೂ ಮೌನತಾಳಿರುವುದೇಕೆಂಬ ಏಕೆ ಎಂಬ ಯಕ್ಷ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿರುವುದಂತೂ ನಿಜ.

ಗಾನ ಗಂಧರ್ವ, ಪದ್ಮ ವಿಭೂಷಣ, ಕನ್ನಡಿಗರ ಆರಾಧ್ಯ ದೈವ ಡಾ.ರಾಜ್‌ ಕುಮಾರ್ ಅವರು ಗೋಕಾಕ್‌ ಚಳುವಳಿಯಲ್ಲಿ ಭಾಗವಹಿಸಿದ ಸಂದರ್ಭ ಮತ್ತು ಆ ವರದಿಯನ್ನು ಅನುಷ್ಠಾನಕ್ಕೆ ತಂದ ಪರಿಯನ್ನು ನೆನಪಿಸಿಕೊಳ್ಳಲು ಇದು ಸಕಾಲವೆನ್ನಬಹುದು. ಕರ್ನಾಟಕದ ನೆಲ-ಜಲ, ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ಉಂಟಾದಾಗಲೆಲ್ಲಾ ಚಿತ್ರರಂಗ ಕರ್ನಾಟಕದ ಬೆನ್ನಿಗೆ ಇರುತ್ತದೆ ಎಂದು ಅಣ್ಣಾವ್ರು ಸಾರಿ ಸಾರಿ ಹೇಳಿದ್ದು ಯಾರು ತಾನೇ ಮರೆಯಲು ಸಾದ್ಯ…

ರಾಜ್ ಅವರು ಈ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಂತೆ ಇಡೀ ರಾಜ್ಯದಲ್ಲಿ ದೊಡ್ಡ ಸಂಚಲನ ಉಂಟಾಗಿ ಚಳುವಳಿ ಉಜ್ವಲ ರೂಪವನ್ನು ಪಡೆದುಕೊಂಡಿತು. ರಾಜ್‌ಕುಮಾರ್ ಆಗಮನದಿಂದಾಗಿ ಕರ್ನಾಟಕದಾದ್ಯಂತ ವಿವಿಧ ಸಂಘ ಸಂಸ್ಥೆಗಳು ಉತ್ಸಾಹಗೊಂಡು ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದವು. ರಾಜ್‌ಕುಮಾರ್ ಅವರ ಲಕ್ಷಾಂತರ ಅಭಿಮಾನಿಗಳು ಸಹಾ ಪಾಲ್ಗೊಂಡು ಈ ಚಳುವಳಿ ವಿಜೃಂಭಿಸಿತು.

ರಾಜ್‌ ಕುಮಾರ್ ಅವರಲ್ಲದೇ, ಇತರ ಪ್ರಮುಖ ನಟರಾದ ವಿಷ್ಣುವರ್ದನ್‌ ಮತ್ತು ಚಿತ್ರರಂಗದ ಇನ್ನಿತರ ಕಲಾವಿದರು ಹಾಗೂ ಲಕ್ಷಾಂತರ ಅಭಿಮಾನಿಗಳು ಪಾಲ್ಗೊಂಡು ಹೋರಾಟಕ್ಕೆ ತಾರಾ ಮೌಲ್ಯವನ್ನು ಕಲ್ಪಿಸಿಕೊಟ್ಟರು. ರಾಜ್‌ಕುಮಾರ್ ನೇತೃತ್ವದಲ್ಲಿ ಹೋರಾಟ ಮುಂದುವರೆದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟಗಾರರು ಸಭೆಯನ್ನು ಆಯೋಜಿಸಿ, ವರದಿಯಲ್ಲಿರುವ ವಿಚಾರಗಳನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡುವ ಬೃಹತ್ ಪ್ರಯತ್ನ ಮಾಡಿದರು ಮತ್ತು ಆ ಮೂಲಕ ಸರಕಾರದ ವಿರುದ್ದ ದೊಡ್ಡ ದನಿ ಎತ್ತಿದರು. ಈ ಮೂಲಕ ಗುಂಡೂರಾವ್ ಸರ್ಕಾರಕ್ಕೆ ಗೋಕಾಕ್‌ ವರದಿಯನ್ನು ತಕ್ಷಣವೇ ಅನುಷ್ಠಾನಗೊಳಿಸುವಂತೆ ತಾಕೀತು ಮಾಡಲಾಯಿತು. ಹೋರಾಟದ ಕಾವು ದಿನೇ ದಿನೇ ಹೊಸ ರೂಪವನ್ನು ಪಡೆಯುತ್ತಿದ್ದು, ಸರಕಾರಕ್ಕೆ ಗೋಕಾಕ್‌ ವರದಿಯನ್ನು ತಕ್ಷಣದಲ್ಲಿ ಅಂಗಿಕರಿಸಿ ಅನುಷ್ಠಾನಗೊಳಿಸುವ ಅನಿವಾರ್ಯತೆ ಉಂಟಾಯಿತು. ನಾಡಿನ ಕನ್ನಡಾಭಿಮಾನಿಗಳ ತ್ಯಾಗ ಬಲಿದಾನದಿಂದ ವರದಿ ಅನುಷ್ಠಾನಗೊಂಡದ್ದರಿಂದ ಕನ್ನಡ ಭಾಷೆ ಇಂದು ಉತ್ತುಂಗದಲ್ಲಿದೆ.

ಅಂದು ಭಾಷೆಗಾಗಿ ನೆಡೆದ ಹೋರಾಟದಂತೆ ಇಂದು ನೀರಿಗಾಗಿ ನೆಡೆದಿದೆ ಅಷ್ಟೇ, ಆದರೆ ಅಂದಿನ ಚಿತ್ರರಂಗಕ್ಕೂ ಇಂದಿನ ಚಿತ್ರರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಹೋರಾಟ ಮನೋಭಾವ ಇರುವ ನಟನಟಿಯರಿಗೆ ಮತ್ತು ಚಳುವಳಿಕಾರರಿಗೆ ಬರವಿಲ್ಲ, ಆದರೆ ಸ್ವ-ಪ್ರತಿಷ್ಠೆ ಮತ್ತು ರಾಜಕೀಯವನ್ನು ಬಿಟ್ಟು ಹೋರಾಟವನ್ನು ನಡೆಸಿದಾಗ ಮಾತ್ರ ಪ್ರಸ್ತುತ ನೀರಿನ ಮತ್ತು ನಾಡಿನ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಪ್ರಸ್ತುತವಾಗಿ ಕನ್ನಡ ನಾಡಿನ ಎದುರಿರುವ ಗಡಿ ಮತ್ತು ಭಾಷಾ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಚಿತ್ರರಂಗ ಒಂದಾಗಬೇಕಿರುವುದು ಅವಶ್ಯಕವೆಂದೆನಿಸುತ್ತಿದೆ.

ಆದರೆ ರಾಜ್ ಮತ್ತು ವಿಷ್ಣು ಅವರ ಸ್ಥಾನವನ್ನು ಈಗ ಯಾರು ತುಂಬುವರೋ ಎನ್ನುವುದೇ ಪ್ರಶ್ನೆಯಾಗಿದೆ….?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top