fbpx
Karnataka

ಸಾಂಪ್ರದಾಯಿಕವಾಗಿ, ಅಚ್ಚುಕಟ್ಟಾಗಿ ಹಾಗೂ ಜನಾಕರ್ಷಕವಾಗಿ ದಸರಾ ಮಹೋತ್ಸವ ಆಚರಣೆ : ಸಿಎಂ

ಬೆಂಗಳೂರು : ವಿಶ್ವಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಈ ಬಾರಿ ಸಾಂಪ್ರದಾಯಿಕ, ಜನಾಕರ್ಷಕ ಮತ್ತು ಜನರ ಉತ್ಸವವನ್ನಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ದಸರಾ ಉತ್ಸವದ ಅಂಗವಾಗಿ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅಕ್ಟೋಬರ್ 1ರಂದು ಬೆಳಗ್ಗೆ 11.40ಕ್ಕೆ ದಸರಾ ಮಹೋತ್ಸವದ ಉದ್ಘಾಟನೆ ನೆರವೇರಲಿದೆ. ವಿಜಯದಶಮಿ ದಿನವಾದ ಆಕ್ಟೋಬರ್ 11ರಂದು ಜಂಬೂ ಸವಾರಿ ನಡೆಯಲಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.  ಪಂಚಾಂಗದ ಪ್ರಕಾರ ಈ ಬಾರಿ ವಿಜಯದಶಮಿ ಹನ್ನೊಂದನೇ ದಿನಕ್ಕೆ ಬರುತ್ತಿದೆ. ಕಳೆದ ವರ್ಷ ಆಯುಧ ಪೂಜೆ ಮತ್ತು ವಿಜಯದಶಮಿ ಒಂದೇ ದಿನ ಬಂದಿತ್ತು ಎಂದು ವಿವರಿಸಿದರು.

ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬ ಬಗ್ಗೆ ಇದೇ ತಿಂಗಳು 9ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು. ಹಿರಿಯ ಸಾಹಿತಿಗಳಾದ ಚನ್ನವೀರ ಕಣವಿ, ಪ್ರೊ. ಕೆ.ಎಸ್. ನಿಸಾರ್ ಅಹಮದ್, ಬೈರಪ್ಪ, ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರು ಪ್ರಸ್ತಾಪವಾಗಿದೆ. ಅಂತಿಮ ತೀರ್ಮಾನವನ್ನು ಕಾರ್ಯಕಾರಿ ಸಮಿತಿ ಕೈಗೊಳ್ಳಲಿದೆ ಎಂದು ಹೇಳಿದರು.

ಕಳೆದ ಬಾರಿ ಭೀಕರ ಬರಗಾಲ ಇದ್ದ ಕಾರಣ ದಸರಾ ಉತ್ಸವವನ್ನು ತೀರಾ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕರಾವಳಿ ಮತ್ತು ಮಲೆನಾಡು ಹೊರತುಪಡಿಸಿದರೆ ಹಲವೆಡೆ ಉತ್ತಮ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಕೊರತೆಯಾದ ಕಾರಣ ಜಲಾಶಯಗಳು ಭರ್ತಿ ಆಗಿಲ್ಲ. ಆದರೂ ಅದ್ದೂರಿ ಅಲ್ಲದಿದ್ದರೂ ಕಳೆದ ಬಾರಿಗಿಂತ ಉತ್ತಮವಾಗಿ ದಸರಾ ಉತ್ಸವ ನಡೆಯಲಿದೆ. ಅದು  ಸಾಂಪ್ರದಾಯಿಕವಾಗಿ, ಅಚ್ಚುಕಟ್ಟಾಗಿ ಹಾಗೂ ಜನಾಕರ್ಷಕವಾಗಿ ಜರುಗಲಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ವಸ್ತು ಪ್ರದರ್ಶನ ಮತ್ತು ದಸರಾ ಉದ್ಘಾಟನೆ ಒಂದೇ ದಿನ ನೆರವೇರಿದರೂ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಬಹುತೇಕ ಮಳಿಗೆಗಳು ಖಾಲಿ ಇರುತ್ತಿದ್ದವು. ದಸರಾ ಮುಗಿದರೂ ಅವು ಭರ್ತಿ ಆಗುತ್ತಿರಲಿಲ್ಲ. ಈ ಬಾರಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಉದ್ಘಾಟನೆ ದಿನವೇ ಎಲ್ಲ ಇಲಾಖೆಗಳ ಮಳಿಗೆಗಳೂ ಭರ್ತಿ ಆಗಿರಬೇಕು ಎಂದು ಸೂಚಿಸಲಾಗಿದೆ ಎಂದರು.

ಈ ಬಗ್ಗೆ ಜಿಲ್ಲಾ ಪಂಚಾಯಿತಿಗಳಿಗೆ ಸೂಚನೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಆದೇಶಿಸಿದೆ. ಆಯಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಮುಖ್ಯ ಕಾರ್ಯದರ್ಶಿಗಳೂ ಸಭೆ ನಡೆಸಿ ಆದೇಶ ನೀಡಲಿದ್ದಾರೆ ಎಂದರು. ಕಳೆದ ಬಾರಿ ಬರಗಾಲ ಕಾರಣ ಅನೇಕ ಜಿಲ್ಲೆಗಳು ಮಳಿಗೆಗಳನ್ನು ಹಾಕಿರಲಿಲ್ಲ. ಈ ಭಾರಿ ಎಲ್ಲ ಜಿಲ್ಲೆಗಳೂ ಭಾಗವಹಿಸಲು ಸೂಚಿಸಿದೆ ಎಂದು ತಿಳಿಸಿದರು.

ಈ ಬಾರಿ ಯುವ ದಸರಾ ಆಚರಿಸಲಾಗುವುದು. ಜೊತೆಗೆ ದಸರಾ ಉತ್ಸವದಲ್ಲಿ ದೇಶ-ವಿದೇಶಗಳ ಗಣ್ಯರೂ ಭಾಗವಹಿಸುವುದರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಸೂಚಿಸಲಾಗಿದೆ. ಉಳಿದ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ಕಾರ್ಯಕಾರಿ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ವಿವರಿಸಿದರು.

ದಸರಾ ಉತ್ಸವಕ್ಕೆ ಕಳೆದ ವರ್ಷ ಸುಮಾರು ನಾಲ್ಕು ಕೋಟಿ ರೂ. ವೆಚ್ಚವಾಗಿತ್ತು. ಈ ಬಾರಿ ಕಾರ್ಯಕಾರಿ ಸಮಿತಿ ಎಷ್ಟು ಅನುದಾನ ಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದೆ. ಬಳಿಕ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

WhatsApp Image 2016-08-04 at 12.24.43 PM

ಉಸ್ತುವಾರಿ ಸಮಿತಿ ಸಭೆಯಲ್ಲಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಮಹದೇವಪ್ರಸಾದ್, ಉಮಾಶ್ರೀ, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಮೈಸೂರು ಜಿಲ್ಲಾಧಿಕಾರಿ ಶಿಖಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು, ಆ ಭಾಗದ ಶಾಸಕರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top