fbpx
Karnataka

“ಡಾ. ರಾಜ್ ಮತ್ತು ಗೋಕಾಕ್ ಚಳುವಳಿ”

ಅದು 1982, ಕನ್ನಡ ಚಿತ್ರರಂಗವನ್ನು ರಾಜ್ ನಿರಾತಂಕವಾಗಿ ಆಳುತಿದ್ದ ಸಮಯ. ಅವರು ಮಾಡುತ್ತಿದ್ದ ಪ್ರತೀ ಚಿತ್ರಗಳು ಮುಲಾಜಿಲ್ಲದೆ ಸೂಪರ್ ಹಿಟ್ ಆಗುತ್ತಿದ್ದವು. ಅವರು ನಟಿಸಿದ ಚಿತ್ರಗಳಿಗೆ ಸೋಲಿನ ಹೆಸರೇ ಗೊತ್ತಿರಲಿಲ್ಲ. ಅಕಸ್ಮಾತ್ ಚಿತ್ರ ಸುಮಾರಾಗಿದ್ರು ಹಾಕಿದ ಬಂಡವಾಳಕ್ಕೆ ಮೋಸವಾಗುತ್ತಿರಲಿಲ್ಲ. ಯಾಕಂದ್ರೆ ಅದಾಗಲೆ ರಾಜಕುಮಾರ್ ಎನ್ನುವ ಹೆಸರನ್ನ ಕನ್ನಡ ಪ್ರೇಕ್ಷಕರು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡುಬಿಟ್ಟಿದ್ದರು. ‘ನಮ್ಮ ಅಣ್ಣಾವ್ರು ಎಂಥದ್ದೇ ಸಿನಿಮಾ ಮಾಡಲಿ ನಾವು ನೋಡಿಯೇ ತೀರುತ್ತೇವೆ’ ಹೇಗೆಂದು ಅಘೋಷಿತ ತೀರ್ಮಾನಕ್ಕೆ ಬಂದಿದ್ದರು ಅಭಿಮಾನಿಗಳು. ಹೌದು, ರಾಜ್ ಕುಮಾರ್ ಸಿನಿಮಾಗಳು ಅಂದ್ರೆ ಹಾಗಿರುತ್ತಿದ್ದವು, ಮನೆ ಮಂದಿಯೆಲ್ಲ ಮುಜುಗರವಿಲ್ಲದೇ ನೋಡುವಂತ್ತಿದ್ದವು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೇಗೆ ಯಾವುದೇ ಕೆಟಗರಿ ಇರಲಿ ರಾಜ್ ನೋಡುಗರನ್ನ ಕಣ್ಣಲ್ಲೇ ಸೋಲಿಸ್ತಾಯಿದ್ರು . ಬಬ್ರುವಾಹನ, ಮಯೂರ, ಹುಲಿಯ ಹಾಲಿನ ಮೇವು, ನಾ ನಿನ್ನ ಮರೆಯಲಾರೆ, ಎರಡು ಕನಸು, ಭಕ್ತ ಕುಂಬಾರ, ನಾನೊಬ್ಬ ಕಳ್ಳ, ವಸಂತ ಗೀತ, ಕೆರಳಿದ ಸಿಂಹ ಹೀಗೆ ಒಂದರ ಹಿಂದೊಂದು ಸೂಪರ್ ಹಿಟ್ ಸಿನಿಮಾಗಳು. ಜನರ ತಲೆಕೆಟ್ಟವರಂತೆ ಇವರ ಸಿನಿಮಾ ನೋಡಲು ಮುಗಿಬೀಳುತ್ತಿದ್ರು.

download

ಅಲ್ಲಿಗೆ ರಾಜ್ ಬರಿಯ ನಟನಾಗಿ ಜನರನ್ನ ಗೆಲ್ಲಲಿಲ್ಲ. ಅವರೊಳಗೊಬ್ಬ ತಂದೆಯನ್ನು, ಮಗನನ್ನು, ಸೋಧರನನ್ನು, ಪ್ರಿಯಕರನನ್ನು ಕನ್ನಡಿಗರು ಕಾಣತೊಡಗಿದರು. ದಿನ ದಿನಕ್ಕೆ ಅವರ ಜನಪ್ರಿಯತೆ ಧಗಧಗಿಸ್ತಾಯಿತ್ತು. ಆಗ ಬಂದದ್ದೇ ಗೋಕಾಕ್ ಚಳುವಳಿ. ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕೆನ್ನುವ ಹೋರಾಟಕ್ಕೆ ಸಾಹಿತಿಗಳು ಸರ್ಕಾರದ ಮುಂದೆ ಬೇಡಿಕೆಯನ್ನಿಟ್ಟಿದ್ದರು. ಅದಕ್ಕಾಗಿ ಧರಣಿ, ಸತ್ಯಾಗ್ರಹವೂ ನಡೆಯುತಿದ್ದವು. ಆದರೆ ರಾಜ್ ಯಾವಾಗ ಚಳುವಳಿಗೆ ಎಂಟ್ರಿ ಕೊಟ್ರು ಅದರ ಕಾವು ಆಕಾಶದೆತ್ತರಕ್ಕೆ ಏರಿಬಿಟ್ಟಿತು.

ಚೆನ್ನೈ ನಲ್ಲಿ ‘ಕವಿರತ್ನ ಕಾಳಿದಾಸ’ ಸಿನಿಮಾ ಚಿತ್ರಿಕರಣದಲ್ಲಿದ್ಧ ರಾಜ್ ಗೆ ಸಾಹಿತಿಗಳ ನಿಯೋಗವೊಂದು ಚಳುವಳಿಗೆ ಬರುವಂತೆ ಒತ್ತಾಯ ಮಾಡಿತ್ತು. ‘ಕನ್ನಡದ ಉಳಿವಿಗಾಗಿ, ಕನ್ನಡದ ಯಾವುದೇ ವಿಷಯಕ್ಕಾಗಿ ನಾನು ದೈಹಿಕವಾಗಿ, ಮಾನಸಿಕವಾಗಿ ಸದಾಸಿದ್ದ’ ಎಂದು ರಾಜ್ ಒಂದು ಪತ್ರಿಕೆಗೆ ಹೇಳಿಕೆ ನೀಡಿದ್ರು. ಅದೇ ಸುದ್ದಿಯನ್ನು ಅವರ ಅಭಿಮಾನಿಗಳು ಪ್ರತಿಗಳನ್ನು ಮಾಡಿಸಿ ಊರ ತುಂಬ ಹಂಚಿದರು. ರಾಜ್ ಬ್ಯಾನರ್ ಗಳನ್ನು ಕಟ್ಟಿ ಧರಣಿ ಮಾಡತೊಡಗಿದರು. ಯಾವಾಗ ಗೋಕಾಕ್ ವರದಿ ಜಾರಿಗೆ ತರುವಿರಿ ಎಂದು ಇಡೀ ಚಿತ್ರರಂಗ ಮತ್ತು ರಾಜ್ ಪಾದಯಾತ್ರೆ ಮಾಡತೊಡಗಿತೋ ರಾಜ್ ಖದರ್ ಬೇರೆ ರೀತಿಯಲ್ಲೇ ತೆರೆದುಕೊಂಡಿತು. ಮೈಸೂರು ಬ್ಯಾಂಕ್ ಸರ್ಕಲ್ ಇಂದ ಕಬ್ಬನ್ ಪಾರ್ಕ್ ನವರೆಗೆ ಈ ಯಾತ್ರೆ ನಡೆಯಿತು. ರಾಜ್ ಗಿರುವ ಜನಬೆಂಬಲ ನೋಡಿ ಸ್ವತಃ ಕನ್ನಡ ಚಿತ್ರರಂಗವೇ ದಂಗಾಗಿಹೋಗಿತ್ತು.

ಆ ಸಮಯದಲ್ಲಿ ಕನ್ನಡ ಚಿತ್ರರಂಗ ಕೂಡ ಒಂದು ಪ್ರಮುಖ ಸಮಸ್ಯೆಯೊಂದನ್ನು ಎದುರಿಸುತ್ತಿತ್ತು. ಅದೇನೆಂದರೆ, ಚಿತ್ರಮಂದಿರದ ಸಮಸ್ಯೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಚಿತ್ರಮಂದಿರಗಳಲ್ಲಿ (ಸಂತೋಷ್, ನರ್ತಕಿ, ತ್ರಿವೇಣಿ, ಅಭಿನಯ) ಕನ್ನಡ ಚಿತ್ರಗಳಿಗೆ ಆಧ್ಯತೆ ನೀಡುತ್ತಿರಲಿಲ್ಲ. ಹಾಗೆ ಹಿಂದಿ ಚಿತ್ರಗಳಿಗೆ ಅಲ್ಲಿನ ಚಿತ್ರಮಂದಿರಗಳು ಮಣೆ ಹಾಕುತ್ತಿದ್ದವು. ಕರ್ನಾಟಕದಲ್ಲಿಯೇ ಕನ್ನಡ ಸಿನಿಮಾಗಳಿಗಾಗುತ್ತಿದ್ದ ಅನ್ಯಾಯವನ್ನು ಕಂಡು ರಾಜ್ ತುಂಬಾ ನೊಂದುಕೊಳ್ಳುತ್ತಿದ್ದರು. ಗೋಕಾಕ್ ಚಳುವಳಿಯಲ್ಲಿ, ಮೊದಲು ಕನ್ನಡ ಕಡ್ಡಾಯ ವಿಷಯವಾಗಿ ಮೊದಲು ಮಾತನಾಡಿ ನಂತರ ಚಿತ್ರರಂಗ ಎದುರಿಸುತ್ತಿದ್ದ ಚಿತ್ರಮಂದಿರ ಸಮಸ್ಯೆಗಳ ಬಗ್ಗೆ ದನಿಯೆತ್ತತೊಡಗಿದರು.

13886511_1727431544178333_954611108997725579_n

“ಕೆಂಪೇಗೌಡ ರಸ್ತೆಯ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗೊಮ್ಮೆ ನಮ್ಮ ಚಿತ್ರಗಳನ್ನು ಪ್ರದರ್ಶಿಸಲು ಒಪ್ಪಿಕೊಂಡರೂ ದುಬಾರಿ ಬಾಡಿಗೆ ಕೇಳುತ್ತಾರೆ. ಅತೀ ಹೆಚ್ಚು ಬಾಡಿಗೆ ಕೊಟ್ಟು ಕನ್ನಡ ಸಿನಿಮಾಗಳು ಉಳಿಯುವುದಾದರೂ ಹೇಗೆ.? ಇದೇ ಪರಿಸ್ಥಿತಿ ಮುಂದುವರೆದರೆ ಆ ರಸ್ತೆಗೆ ಬೇರೆ ಹೆಸರನ್ನೇ ಇಡಬೇಕಾದೀತು. ಈಗಲಾದರೂ ಆ ಮಾಲೀಕರು ಕನ್ನಡ ಸಿನಿಮಾಗಳಿಗೆ ಆಧ್ಯತೆ ನೀಡಲಿ. ಅವರು ಉಳಿಯಲಿ ನಾವೂ ಉಳಿಯೋಣ. ಮಾಲೀಕರು ಇದನ್ನು ಅರಿತು ನಡೆಯದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕನ್ನಡ ನಾಡಿನಲ್ಲಿ ಚಿತ್ರಮಂದಿರಗಳ ಮಾಲೀಕರಾಗಿ ಹಣ ಸಂಪಾದನೆ ಮಾಡುತ್ತಿರುವ ನೀವು ಕೂಡ ಕನ್ನಡಿಗರಲ್ಲವೇ…? ಆದರೂ ನೀವು ಕನ್ನಡ ಸಿನಿಮಾಗಳನ್ನು ದ್ವೇಷಿಸುವುದೇಕೆ..? ಯಾಕೆ ಕನ್ನಡವೆಂದರೆ ತಾತ್ಸರ, ನಿರಾಸಕ್ತಿ ತೋರ್ತಿದ್ದೀರಿ..? ಇದೇ ರೀತಿ ಅಸಡ್ಡೆ ತೋರಿ ಕನ್ನಡ ಚಿತ್ರ ಪ್ರದರ್ಶನ ಮಾಡಲು ಹಿಂದೇಟು ಹಾಕಿದರೆ ಅದರ ಫಲವನ್ನು ನೀವೇ ತಿನ್ನಬೇಕಾಗುತ್ತದೆ” ಎಂದು ಅಣ್ಣಾವ್ರು ಭಾಷಣ ಮಾಡಲು ನಿಂತರು.

ಬೆಳಗಾವಿಯಿಂದ ಹೋರಾಟ ಮೆರವಣಿಗೆ ಬೆಂಗಳೂರು ತಲುಪುವಷ್ಟರಲ್ಲಿ ರಾಜ್ ಈ ಸಮಸ್ಯೆಗಳನ್ನು ಪ್ರತಿ ಊರಿನಲ್ಲೂ ಹೇಳುತ್ತಾ ಬಂದರು. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲೂ ರಾಜ್ ಇದನ್ನೇ ಹೇಳಿದರು. ಆಗ ಅವರ ಕಣ್ಣಲ್ಲಿ ಮೊದಲ ಬಾರಿಗೆ ನೀರು ಬಂತು. ‘ಅಣ್ಣಾವ್ರ ಕಣ್ಣಲ್ಲಿ ನೀರು ಬರುವಂತೆ ಮಾಡಿದ್ರಲ್ಲ ಆ ಚಿತ್ರಮಂದಿರದ ಮಾಲೀಕರು’ ಎಂದು ರಾಜ್ ಅಭಿಮಾನಿಗಳು ಕೆಂಡಾಮಂಡಲವಾದರು. ಅದೇ ಸಮಯದಲ್ಲಿ ರಾಜ್ ಅವರ ಪೂರ್ಣಿಮಾ ಎಂಟರ್ಪ್ರೈಸರ್ಸ್ ಬ್ಯಾನರ್ ನ ‘ಹಾಲು-ಜೇನು’ ಚಿತ್ರ ಬಿಡುಗಡೆಗೆ ಸಿದ್ದವಾಗಿತ್ತು. ಆದರೆ ಚಿತ್ರಮಂದಿರಗಳ ಕೊರತೆ ಇದ್ದುದರಿಂದ ಹಾಗೂ ಸಂತೋಷ್ ಚಿತ್ರಮಂದಿರದಲ್ಲೇ ಚಿತ್ರ ಬಿಡುಗಡೆ ಮಾಡುವ ಆಸೆ ರಾಜ್ ಅವರ ಬ್ಯಾನರ್ ದಾಗಿತ್ತು. ಆದರೆ ಅದೇ ಸಂತೋಷ್ ಚಿತ್ರಮಂದಿರದಲ್ಲಿ ಹಿಂದಿಯ ಅಮಿತಾಭ್ ಬಚ್ಚನ್ ಅವರ ‘ನಮಕ್ ಹಲಾಲ್’ ಚಿತ್ರ ಬಿಡುಗಡೆಗೆ ಬುಕ್ ಆಗಿತ್ತು. ಮೊದಲು ರಾಜ್ ಮತ್ತು ಇತರೆ ಚಿತ್ರರಂಗದ ಕೆಲವರ ಮನವಿಯನ್ನು ತಿರಸ್ಕರಿಸಿದ್ದ ಚಿತ್ರಮಂದಿರದ ಮಾಲೀಕರು, ‘ಕನ್ನಡ ಚಿತ್ರಗಳಿಗೆ ಚಿತ್ರಮಂದಿರವನ್ನು ಕೊಡಲು ಇಷ್ಟು ಸತಾಯಿಸುತ್ತಿದ್ದಾರ, ನಮಗೆ ಒಂದು ಮಾತು ಹೇಳಬೇಕಿತ್ತಣ್ಣ’ ಎಂದು ಅಣ್ಣಾವ್ರ ಕನ್ನಡ ಪ್ರೀತಿಯನ್ನು ಭಾಷಣಗಳಲ್ಲಿ ಕೇಳಿದ್ದ ಅಭಿಮಾನಿಗಳು ತೊಡೆ ತಟ್ಟಿಕೊಂಡು ಪ್ರತಿಭಟನೆಗೆ ನಿಂತರು. ಆ ಕ್ಷಣದಿಂದ ಹತ್ತಿಕೊಂಡು ಉರಿಯತೊಡಗಿದ್ದು ಕರಾಳ ಇತಿಹಾಸ. ಚಿತ್ರಮಂದಿರಗಳ ವಿರುದ್ಧ ನಡೆಯುತ್ತಿದ್ದ ಅಭಿಮಾನಿಗಳ ಪ್ರತಿಭಟನೆಯ ಕಾವು ತೀವ್ರವಾಯಿತು.

13938439_1727431614178326_6716112559116977127_n

ಕೊನೆಗೆ ಅಭಿಮಾನಿಗಳ ಹೋರಾಟಕ್ಕೆ, ಅಣ್ಣಾವ್ರ ಮನವಿಗೆ ಮಣಿದ ಮಾಲೀಕರು ಹಿಂದಿ ಸಿನಿಮಾವನ್ನು ತೆಗೆದು ‘ಹಾಲು-ಜೇನು’ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾದರು. ಮುಂಗಡವಾಗಿ ಟಿಕೆಟ್ ಕೊಡಲು ನಿರಾಕರಿಸಿದ ಚಿತ್ರಮಂದಿರದ ವಿರುದ್ಧ ಅಭಿಮಾನಿಗಳು ತಿರುಗಿಬಿದ್ರು. ನಂತರ ಪೋಲೀಸರ ಮಧ್ಯಸ್ಥಿಕೆಯಲ್ಲಿ ಟಿಕೆಟ್ ಮುಂಗಡವಾಗಿ ಕೊಡಲು ಮಾಲೀಕರು ನಿರ್ಧರಿಸಿ, ಅಂದು ಮಧ್ಯರಾತ್ರಿಯಿಂದಲೇ ಟಿಕೆಟ್ ಕೊಡಲಾಯಿತು. ಥಿಯೇಟರ್ ಮುಂದೆ ಜಾತ್ರೆಯ ಸಂಭ್ರಮ ಮೂಡಿತ್ತು. ಮೊದಲ ಬಾರಿಗೆ ಅಣ್ಣಾವ್ರ 70 ಅಡಿ ಕಟೌಟನ್ನು ನಿಲ್ಲಿಸಲಾಗಿತ್ತು. ಹಾರಗಳ ಸುರಿಮಳೆ, ಹಾಲಿನ ಅಭಿಷೇಕ ಎಲ್ಲವೂ ಆಯಿತು. ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಆದರೆ ಬಾಲಿವುಡ್ನಲ್ಲಿ ರಾಜ್ ಬಗ್ಗೆ ನೆಗೆಟಿವ್ ಹವಾ ಎದ್ದುಬಿಟ್ಟಿತ್ತು. ಅದಕ್ಕೆ ಕಾರಣ, ‘ನಮಕ್ ಹಲಾಲ್’ ಚಿತ್ರದ ವಿತರಕ ಪಾಲ್ ಎಂಟರ್ಪ್ರೈಸರ್ಸ್

ಬಾಂಬೆಯ ಟ್ರೇಡ್ ಗೈ ಎಂಬ ಸಿನಿಮಾ ಪತ್ರಿಕೆಯಲ್ಲಿ ‘ರಾಜ್ ಕುಮಾರ್, ಮಿನಿ ಹಿಟ್ಲರ್’ ಎಂಬ ಹೆಸರಿನಲ್ಲಿ ಅಣ್ಣಾವ್ರ ಕುರಿತ ಒಂದು ಲೇಖನ ಪ್ರಕಟವಾಗಿತ್ತು. ‘ರಾಜ್ ಕುಮಾರ್ ಅವರು ಪರಭಾಷೆ ಚಿತ್ರಗಳಿಗೆ ಕಂಟಕವಾಗಿದ್ದಾರೆ, ಒಬ್ಬ ಮಿನಿ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ’ ಎಂದು ಆ ಪತ್ರಿಕೆ ತನ್ನ ಲೇಖನದಲ್ಲಿ ಬರೆದಿತ್ತು. ಈ ವಿಷಯ ತಿಳಿದ ರಾಜ್ ತುಂಬಾ ನೋವಿನಿಂದ ‘ಏಕೆ ನನಗೆ ಈ ಪಟ್ಟ ಕಟ್ಟಿದ್ದಾರೆ..?, ನಾವೆಲ್ಲ ಹೋಗಿ ರಿಕ್ವೆಸ್ಟ್ ಮಾಡಿದ್ದೀವಿ…ಕನ್ನಡಕ್ಕೆ ಆದ್ಯತೆ ಕೊಡಿ, ಕನ್ನಡ ಚಿತ್ರಗಳಿಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇ ತಪ್ಪಾಯಿತೇ..?’ ಎಂದು ಆ ಪತ್ರಿಕೆಯ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ನೊಂದುಕೊಂಡರು ರಾಜ್. ಯಾವಾಗ ಈ ಸುದ್ದಿ ಬೆಂಗಳೂರು ತಲುಪಿತೋ ರಾಜ್ ಅಭಿಮಾನಿಗಳು ರೊಚ್ಚಿಗೆದ್ದರು. ಬಚ್ಚನ್ ಅವರ ವಿರುದ್ದ ತಿರುಗಿಬಿದ್ದರು, ಅವರ ಸಿನಿಮಾಗಳು ಬ್ಯಾನ್ ಮಾಡುವ ಹಂತಕ್ಕೆ ಪ್ರತಿಭಟನೆ ತೀವ್ರವಾಯಿತು. ಬಾಲಿವುಡ್ ನಲ್ಲಿ ಬಿರುಗಾಳಿ ಎದ್ದಿತ್ತು.

ಇದನ್ನು ಹೇಗೆ ಬಿಟ್ಟರೆ ಮುಂದೊಂದುದಿನ ಉಳಿದ ಬಾಲಿವುಡ್ ನಟರಿಗೂ ಇದೇ ಗತಿ ಬರಬಹುದೆಂದು, ಬಚ್ಚನ್-ರಾಜ್ ಮುನಿಸನ್ನು ನಮ್ಮ ಕನ್ನಡದ ಹಿರಿಯ ನಟ ಶಿವರಾಂ ಅವರ ಸಹೋದರ ರಾಮನಾಥನ್ ಕೊನೆಗಾಣಿಸಲು ಮುಂದಾದರು. ನಂತರ ರಾಮನಾಥನ್ ರಾಜ್ ಅವರ ಮನೆಗೆ ಹೋಗಿ ನಡೆದುದ್ದನ್ನೆಲ್ಲವನ್ನು ವಿವರಿಸಿ, ಬಚ್ಚನ್ ಅವರಿಗೂ ಟ್ರೇಡ್ ಗೈ ಪಾತ್ರಿಕೆಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದರು. ನಂತರ ರಾಜ್ ತಮ್ಮ ಹಿತೈಷಿಗಳ ಜೊತೆ ಕೂತು ಚರ್ಚಿಸಿ ಇದರಲ್ಲಿ ಬಚ್ಚನ್ ಅವರ ಯಾವುದೇ ತಪ್ಪಿಲ್ಲ ಎಂಬುದನ್ನು ಅರಿತರು.. ಬೇರೆಯವರಿಗೂ ಅರ್ಥಮಾಡಿಸಿದರು. ರಾಮನಾಥನ್ ಅವರ ಮಧ್ಯಸ್ಥಿಕೆಯಲ್ಲಿ ಬೆಂಗಳೂರಿನ ಅರಮನೆಯಲ್ಲಿ ಸಿನಿಮಾ ಚಿತ್ರಿಕರಣದಲ್ಲಿದ್ದ ರಾಜ್ ಅವರಿಗೂ ಬಚ್ಚನ್ ಅವರಿಗೂ ಭೇಟಿಯೂ ಆಯಿತು. ಇಬ್ಬರು ಪರಸ್ಪರ ಹಾರವನ್ನು ಬದಲಿಸಿಕೊಂಡರು..ಕೂತು ಒಟ್ಟಿಗೆ ಊಟವನ್ನೂ ಮಾಡಿದರು..ನಂತರ ಬಚ್ಚನ್ ಮತ್ತೊಮ್ಮೆ ಎಲ್ಲವನ್ನು ವಿವರವಾಗಿ ಹೇಳಿದರು. ಕೊನೆಗೆ ಇಬ್ಬರ ಮಧ್ಯೆ ಸ್ನೇಹವೂ ಹುಟ್ಟಿ, ಎಲ್ಲವೂ ಸುಖಾಂತ್ಯವಾಗಿತ್ತು.

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮನ್ಮೋಹನ್ ದೇಸಾಯಿಯವರ ‘ಕೂಲಿ’ ಚಿತ್ರೀಕರಣ ನಡೆಯುತ್ತಿತ್ತು. ಅದರಲ್ಲಿ ಬಚ್ಚನ್ ಕೂಲಿ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಬಚ್ಚನ್ ಆ ಸ್ನೇಹಕ್ಕೊಂದು ಹೊಸ ಅರ್ಥ ಕೊಡಲು ನಿರ್ಧರಿಸಿ ಕೂಲಿ ಚಿತ್ರದ ಒಂದು ದೃಶ್ಯದಲ್ಲಿ ರಾಜ್ ಗಾಗಿ ಒಂದು ಅತಿಥಿ ಪಾತ್ರವನ್ನು ಕ್ರಿಯೇಟ್ ಮಾಡಿ ಬಚ್ಚನ್ ರಾಜ್ ಅವರನ್ನು ನಟಿಸುವಂತೆ ಮನವಿ ಮಾಡಿದರು. ಆದರೆ ರಾಜ್ ಅದನ್ನು ಒಪ್ಪಲಿಲ್ಲ. ಕಾರಣ, ಕನ್ನಡ ಭಾಷೆ ಉಳಿಯಬೇಕಾದರೆ ಅವರು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಬಾರದೆಂದು ನಿರ್ಧರಿಸಿ, ಪರಭಾಷೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ರಾಜ್ ಅವರ ಮನವಿಯನ್ನು ವಿನಯಪೂರ್ವಕವಾಗಿಯೇ ನಿರಾಕರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top