fbpx
News

‘ಸಂಸಾರ ನೌಕ’ ಕನ್ನಡ ಚಿತ್ರರಂಗಕ್ಕೆ ಮಹತ್ವದ ತಿರುವು ಕೊಟ್ಟ ಚಿತ್ರ.

‘ದಕ್ಷಿಣ ಭಾರತದ ಮೊದಲ ಸಾಮಾಜಿಕ ಚಿತ್ರ’ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ‘ಸಂಸಾರ ನೌಕ’ ಬಿಡುಗಡೆಯಾಗಿ ನಾಳೆ ಆಗಸ್ಟ್ 27ಕ್ಕೆ 80 ವರ್ಷ! ‘ಸಂಸಾರ ನೌಕ’ ಕನ್ನಡ ಚಿತ್ರರಂಗಕ್ಕೆ ಹೊಸ ಜಾಡು ಒದಗಿಸಿ ಕೊಟ್ಟ ಚಿತ್ರ ಎಂಬ ಹೆಗ್ಗಳಿಕೆ ಇದೆ.

ಹಿಂದಿನ ಎಲ್ಲಾ ಕನ್ನಡ ಚಿತ್ರಗಳಂತೆ ಇದೂ ಕೂಡ ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದಿದ್ದ ಚಿತ್ರ. 1936ರಲ್ಲಿ ತೆರೆಕಂಡ ‘ಸಂಸಾರ ನೌಕ’ ಕೇವಲ ಎರಡು ವರ್ಷಗಳ ಚರಿತ್ರೆ ಇದ್ದ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿದ್ದ ನಾಲ್ಕನೇ ಚಿತ್ರ.

'ಸಂಸಾರ ನೌಕ'3

ಸುಮಾರು 22 ಸಾವಿರ ರೂಪಾಯಿ ಬಂಡವಾಳದಲ್ಲಿ ನಿರ್ಮಾಣಗೊಂಡ ‘ಸಂಸಾರ ನೌಕ’ ಆ ಕಾಲಕ್ಕೆ ಎರಡೂವರೆ ಲಕ್ಷ ರೂಪಾಯಿ ಗಳಿಸಿತೆಂಬ ಅಂದಾಜಿದೆ. ಸತ್ಯ ಹೇಳಿದಾಗ ತೊಂದರೆಗಳು ಸಾಮಾನ್ಯ ಎಂಬ ಅಂಶವನ್ನು ಪ್ರತಿಪಾದಿಸುವ ‘ಸಂಸಾರ ನೌಕ’ ಕನ್ನಡ ಚಿತ್ರರಂಗಕ್ಕೆ ಮಹತ್ವದ ತಿರುವು ಕೊಟ್ಟ ಚಿತ್ರ.

‘ಸಂಸಾರ ನೌಕ’ ಚಿತ್ರದ ಪ್ರಿವ್ಯೂ ನಡೆದದ್ದು ಮದ್ರಾಸ್ನಲ್ಲಿ. ಆನಂತರ ಬೆಂಗಳೂರಿನ ‘ಸಾಗರ್’ ಹಾಗೂ ಮೈಸೂರಿನ ‘ಒಲಿಂಪಿಯ’ ಚಿತ್ರಮಂದಿರಗಳಲ್ಲಿ (1936ರ ಆಗಸ್ಟ್ 27ರಂದು) ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತು. ಹಾಗೆಯೇ ದಕ್ಷಿಣ ಭಾರತ ಚಿತ್ರರಂಗದಲ್ಲೂ ಒಂದು ಮೈಲುಗಲ್ಲು.

ಕನ್ನಡಿಗನೇ ನಿರ್ದೇಶಿಸಿದ ಪ್ರಥಮ ಕನ್ನಡ ಚಿತ್ರವೆಂದೂ ದಾಖಲಾದ ‘ಸಂಸಾರ ನೌಕ’ ಕನ್ನಡಕ್ಕೆ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರೋದ್ಯಮಕ್ಕೆ ಸಾಮಾಜಿಕ ಚಿತ್ರ ಪರಂಪರೆಗೆ ಬುನಾದಿ ಹಾಕಿಕೊಟ್ಟಿತು. ಒಟ್ಟು 189 ನಿಮಿಷಗಳ ಅವಧಿಯ ‘ಸಂಸಾರ ನೌಕ’ ಚಿತ್ರದ ವಿಮರ್ಶೆಯನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಪತ್ರಿಕೆಗಳೂ ಪ್ರಕಟಿಸಿದ್ದವು. ಈ ಚಿತ್ರದ ಕುರಿತ ಸವಿವರವಾದ ಮಾಹಿತಿಯನ್ನು ಆಗಿನ ಪ್ರಸಿದ್ಧ ಆಂಗ್ಲ ವಾರಪತ್ರಿಕೆ ‘ಸಂಡೇ ಟೈಮ್ಸ್’ ಪ್ರಕಟಿಸಿತ್ತು.

'ಸಂಸಾರ ನೌಕ' 2

ಆಗ ಅದರ ಸಂಪಾದಕರಾಗಿದ್ದವರು ಕನ್ನಡಿಗ ಎಂ.ವಿ. ಕಾಮತ್ ರಂಗಭೂಮಿಯಂತೆ ಚಲನಚಿತ್ರರಂಗದಲ್ಲೂ ಇತಿಹಾಸ ಸೃಷ್ಟಿಸಿದ ‘ಸಂಸಾರ ನೌಕ’ ಎಂಟು ದಶಕಗಳ ಹಿಂದೆ 1936ರಲ್ಲಿ ತೆರೆಗೆ ಬಂದ ಏಕೈಕ ಕನ್ನಡ ಚಿತ್ರವೂ ಹೌದು. ತಮಿಳು-ತೆಲುಗು ಭಾಷೆಗಳಲ್ಲೂ ನಿರ್ಮಾಣಗೊಂಡಿದ್ದು ಮತ್ತೊಂದು ವಿಶೇಷ.

ಸಿನಿಮಾದ ವಿವರ :

ಸಂಸಾರ ನೌಕ (ಚಲನಚಿತ್ರ)

ನಿರ್ದೇಶನ            :ಹೆಚ್.ಎಲ್.ಎನ್.ಸಿಂಹ

ನಿರ್ಮಾಪಕ          :ಕೆ.ನಂಜಪ್ಪ

ಪಾತ್ರವರ್ಗ          :ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಎಸ್.ಕೆ.ಪದ್ಮಾದೇವಿ, ಎಂ.ಎಸ್.ಮಾಧವರವ್, ಡಿಕ್ಕಿ ಮಾಧವರಾವ್

ಸಂಗೀತ             : ಹುಣಸೂರು ಕೃಷ್ಣಮೂರ್ತಿ

ಛಾಯಾಗ್ರಹಣ    :ಟಿ.ತೆಲಾಂಗ್

ಬಿಡುಗಡೆಯಾಗಿದ್ದು :೧೯೩೬

ಚಿತ್ರ ನಿರ್ಮಾಣ ಸಂಸ್ಥೆ       :ದೇವಿ ಫಿಲಂಸ್

ಇತರೆ ಮಾಹಿತಿ               :ಬಿ.ಆರ್. ಪಂತುಲು, ಎಂ.ವಿ. ರಾಜಮ್ಮ ಅವರು ನಟಿಸಿದ ಮೊದಲ ಚಿತ್ರ.ದಕ್ಷಿಣ ಭಾರತದ ಮೊದಲ ಸಾಮಾಜಿಕ ಚಿತ್ರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top