fbpx
Kannada Bit News

ಯಡಿಯೂರಪ್ಪ ಒಪ್ಪು, ಶೋಭಾಯಮಾನ ತಪ್ಪು

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕದನ ಮುಂದುವರೆದಿದೆ. ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮಾಡಿಯೇ ತೀರಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏನೇ ಮಾಡಿದರೂ ಪಕ್ಷದ ವೇದಿಕೆ ಒಳಗೆ ಮಾಡಲಿ ಎಂದು ಸೂಚ್ಯವಾಗಿ ತಿಳಿಸಿದ್ದರೂ ಈಶ್ವರಪ್ಪ ಮಾತ್ರ ತಮಗೆ ರಾಷ್ಟ್ರೀಯ ನಾಯಕರು ಅನುಮತಿ ನೀಡಿದ್ದಾರೆಂದು ರಾಯಣ್ಣ ಬ್ರಿಗೇಡ್ ಹುಟ್ಟು ಹಾಕುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ತಾವು ಇದನ್ನೆಲ್ಲ ಮಾಡುವುದು ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿ ಎಂಬ ಉದ್ದೇಶದಿಂದ ಎಂದು ಹೇಳುವ ಮೂಲಕ ಎಂದಿನಂತೆ ತಮ್ಮ ಹಠಮಾರಿತನವನ್ನು ಪ್ರದರ್ಶಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿಗಳು. ಇದರಲ್ಲಿ ಎರಡು ಮಾತಿಲ್ಲ. ಅವರ ಕೈ ಬಲಪಡಿಸಲು ತಾವು ಹಿಂದ ಅಂದರೆ ಹಿಂದುಳಿದ ಮತ್ತು ದಲಿತರ ಸಂಘಟನೆಗಾಗಿ ಪ್ರಯತ್ನಿಸುತ್ತಿರುವದಾಗಿ ಪ್ರಕಟಿಸುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಟಿಸಿದ್ದಾರೆ. ಇದು ಯಡಿಯೂರಪ್ಪ ವಿರುದ್ಧ ಸಾರಿರುವ ಕದನ ಎಂಬುದು ಬಹಿರಂಗ ಸತ್ಯ. ಆದರೆ ಅವರು ಮಾತನಾಡುವಾಗ ಯಡಿಯೂರಪ್ಪ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರವುದು ಮತ್ತು ಪಕ್ಷ ಅಧಿಕಾರಕ್ಕೆ ತರಲು ಹಿಂದ ಸಂಘಟನೆ ಅಗತ್ಯ ಎಂದು ಪ್ರತಿಪಾದಿಸುತ್ತಿರುವುದು ಅವರ ಇನ್ನೊಂದು ಹಿಡನ್ ಅಜೆಂಡಾ ಕುರಿತು ಶಂಕೆ ಮೂಡಿಸುತ್ತಿದೆ.

ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ನಾಯಕರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಯಾರ ತಕರಾರೂ ಇಲ್ಲ. ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿ ಎಂಬ ಹೈಕಮಾಂಡ್ ಆದೇಶಕ್ಕೂ ವಿರೋಧವಿಲ್ಲ. ಅವರ ಹಿಟ್ಲರ್ ವರ್ತನೆಗೂ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಅವರು ಮೂಗು ತೂರಿಸಲು ಅವಕಾಶ ನೀಡುತ್ತಿರುವುದು ಬಹುತೇಕ ರಾಜ್ಯದ ಹಿರಿಯ ಧುರೀಣರನ್ನು ಕೆರಳಿಸಿದೆ. ತಮ್ಮ ಸಲಹೆಗಿಂತ ಶೋಭಾ ಸಲಹೆಗಳನ್ನು ಯಡಿಯೂರಪ್ಪ ಒಪ್ಪುತ್ತಿರುವದು ಸರಿ ಅಲ್ಲ ಎಂಬ ಅಭಿಪ್ರಾಯ ಅವರದಾಗಿದೆ.

ಕಳೆದ ನಾಲ್ಕು ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಬಿಜೆಪಿ ನಾಯಕರಾಗಿ ವಿಜೃಂಭಿಸಿದ್ದಾರೆ. ಅವರ ಜೊತೆಗೆ ಪಕ್ಷ ಸಂಘಟನೆಗೆ ಶ್ರಮಿಸಿದವರಲ್ಲಿ ಹಿರಿಯ ನಾಯಕ ಸದ್ಯ ಕೇಂದ್ರ ಸಚಿವರಾಗಿರುವ ಅನಂತ ಕುಮಾರ ಅವರೂ ಒಬ್ಬರು. ಇವರಿಬ್ಬರ ಜೋಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಯಿತು ಎಂಬುದು ಜಗಜ್ಜಾಹೀರ. ಇವರೊಡನೆ ಕೆ.ಎಸ್.ಈಶ್ವರಪ್ಪ ಅವರೂ ಕೈಜೋಡಿಸಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಪಕ್ಷ ರಾಜ್ಯದಲ್ಲಿ ಬೆಳೆದಂತೆ ಅನೇಕ ಜನ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಇಂದು ರಾಜ್ಯದಲ್ಲಿ ಅನೇಕ ಶಾಸಕರು ಪಕ್ಷಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದು ಬಲವನ್ನು ತಂದು ಕೊಟ್ಟಿದೆ.

ಎಲ್ಲರಿಗೆ ಬೇಕಾಗಿದ್ದು ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕು. 2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಏರಿದಾಗ ಮುಂದಿನ 20 ವರ್ಷ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿದೆ ಎಂಬ ಘೋಷಣೆ ಮಾಡಲಾಯಿತು. ಇದಕ್ಕೆ ಕಾರಣ ಯಡಿಯೂರಪ್ಪ ಜನಪರ ಆಡಳಿತ ನೀಡುತ್ತಾರೆಂಬ ವಿಶ್ವಾಸ ಜನರಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿಯೂ ಇತ್ತು. ಮೊದ ಮೊದಲು ಯಡಿಯೂರಪ್ಪ ಸಚಿವ ಸಂಪುಟ ಚೆನ್ನಾಗಿ ಕಾರ್ಯ ನಿರ್ವಹಿಸದ್ದನ್ನು ಕಂಡು ಜನರೂ ಬೆಂಬಲಿಸ ತೊಡಗಿದರು. ಬರಬರುತ್ತ ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯಗಳು ಜನರಲ್ಲಿ ಬೇಸರ ಮೂಡಿಸ ತೊಡಗಿದವು.

ಸಚಿವ ಸಂಪುಟದ ಹಲವು ಸದಸ್ಯರು ಭ್ರಷ್ಟಾಚಾರದ ಆಪಾದನೆಗೆ ಒಳಗಾಗತೊಡಗಿದರು. ಖುದ್ದು ಯಡಿಯೂರಪ್ಪ ಜೈಲು ಸೇರಿದ ನಂತರವಂತೂ ಪಕ್ಷದ ಒಳ ಜಗಳ ತಾರಕಕ್ಕೇರಿ ಹಿಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಆದರೆ ಒಂದು ವಿಷಯ ಮಾತ್ರ ಸತ್ಯ. ಯಡಿಯೂರಪ್ಪ ಅವರ ಆಡಳಿತ ಬದಲಾವಣೆಯ ಸಂಕೇತ ಎಂಬುದನ್ನು ಅಲ್ಲಗೆಳೆಯಲಾಗದು. ನೂತನ ಯೋಜನೆಗಳು, ಅವರ ರಾಜ್ಯ ಸುತ್ತುವಿಕೆ, ಬಿಜೆಪಿಯಲ್ಲಿ ಯಾರಿಂದಲೂ ಆಗದು. ಹಿರಿಯ ನಾಯಕರಲ್ಲಿ ಪಕ್ಷ ನೇತೃತ್ವ ವಹಿಸುವ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬ ಪ್ರಶ್ನೆ ಬಂದಾಗಲೂ ಹೈಕಮಾಂಡ್ ಸರಿಯಾದ ನಿರ್ಧಾರ ಅಂಗೀಕರಿಸದ ಪರಿಣಾಮ ಪಕ್ಷದ ಬಲ ಕುಸಿಯಿತು.

ಹೈಕಮಾಂಡ್ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದೂ ಕೂಡ ಸೂಚಿಸಿದೆ. ಯಡಿಯೂರಪ್ಪ ಕೂಡ 150+ ಸ್ಥಳ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಚುನಾವಣೆಯಲ್ಲಿ ಗೆಲವು ಸಾಧಿಸುವ ಸಿದ್ಧತೆ ಮಾಡುವ ಬದಲು ಆಂತರಿಕ ಕದನಕ್ಕೆ ದಾರಿ ಮಾಡಿ ಕೊಟ್ಟವರು ಯಾರು? ಇದರಲ್ಲಿ ಯಡಿಯೂರಪ್ಪ ಅವರ ಪಾಲೂ ಇದೆ. ಹಿರಿಯ ಧುರೀಣರೊಡನೆ ಸಮಾಲೋಚಿಸಿ ಸರಿಯಾದ ಹೆಜ್ಜೆ ಇಡಲು ಏಕೆ ಮೀನಾಮೇಷ ಮಾಡುತ್ತಿದ್ದಾರೆಂಬುದು ಅರ್ಥವಾಗುತ್ತಿಲ್ಲ.

ರಾಜ್ಯದಲ್ಲಿ ಪಕ್ಷ ಬೆಳೆಯಲು ಸಂಸದೆ ಶೋಭಾ ಕರಂದ್ಲಾಜೆ ಅವರ ಪಾತ್ರವೂ ಬಹಳ ಮಹತ್ವಾದ್ದಾಗಿದೆ. ಮಹಿಳೆಯರು ಪಕ್ಷ ಸಂಘಟನೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾಗ ಇಡೀ ರಾಜ್ಯ ಸುತ್ತಿ ಮಹಿಳಾ ಸದಸ್ಯರನ್ನು ಆಕರ್ಷಿಸಿದ್ದು, ಸಣ್ಣ ವಿಷಯವಲ್ಲ. ಮೂರು ದಶಕಗಳ ಹಿಂದೆ ಅವರ ಹಿಂದೆ ಒಬ್ಬರೂ ಇರಲಿಲ್ಲ. ಛಲ ಬಿಡದೆ ಅವರು ತಮ್ಮ ಪ್ರವಾಸ ಮುಂದುವರೆಸಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ಶ್ರಮಿಸಿದ್ದನ್ನು ಮರೆಯಲಾಗದು. ಆದರೆ ಅವರೂ ಪಕ್ಷದ ಹಿರಿಯರಿಗೆ ಮನ್ನಣೆ ನೀಡುವ ವಿಷಯದಲ್ಲಿ ಎಡವುತ್ತಿರವುದು ಅಂತರಿಕ ಬೇಗುದಿಗೆ ಕಾರಣವಾಗಿದೆ.

ಯಡಿಯೂರಪ್ಪ ನಂತರ ಯಾರು? ಎಂದು ಪ್ರಶ್ನಿಸಿದರೆ ಶೋಭಾ ಎಂದು ಉತ್ತರಿಸುವಷ್ಟು ಅವರು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅವರಗಿಂತ ಹಿರಿಯ ನಾಯಕರಿಗೆ ಇದು ನುಂಗಲಾರದ ತುತ್ತು. ಇದೇ ವಿಷಯ ಈಗ ಪಕ್ಷದಲ್ಲಿ ತಳಮಳ ಉಂಟುಮಾಡಿದೆ. ಇದಕ್ಕೆ ಯಡಿಯೂರಪ್ಪ ಅವರು ಪರಿಹಾರವನ್ನು ಹುಡುಕಬೇಕು. ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತ್ಯಾಗ ಬೇಕು. ಆದರೆ ಅದನ್ನು ಮಾಡಲು ಯಾರೂ ಸಿದ್ಧರಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top