fbpx
Kannada Bit News

ಸುಪ್ರೀಂಕೋರ್ಟ್ ನಿಂದ ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆಯ ಉಲ್ಲಂಘನೆ

ಬೆಂಗಳೂರು: ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ-1956ರ ಸೆಕ್ಷನ್ 11ರ ಪ್ರಕಾರ ಸುಪ್ರೀಂಕೋರ್ಟ್ ಸೇರಿದಂತೆ ಯಾವುದೇ ನ್ಯಾಯಾಲಯಗಳು ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದದಲ್ಲಿ ಮಧ್ಯೆ ಪ್ರವೇಶಿಸುವಂತಿಲ್ಲ. ನ್ಯಾಯಾಧಿಕರಣ ಅಥವಾ ಮೇಲುಸ್ತುವಾರಿ ಸಮಿತಿಗಳು ವಿವಾದ ಬಗೆಹರಿಸಬೇಕು. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದೇ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

bvacharya

“ಉದಯವಾಣಿ’ ಜತೆ ಮಾತನಾಡಿದ ಅವರು ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆಯ ಉಲ್ಲಂಘನೆಯಾಗಿರುವುದರಿಂದ ಆ ಆದೇಶವನ್ನು ಪಾಲಿಸುವ ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

“ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಕುರಿತು ಸರ್ಕಾರ ತಮ್ಮ ಸಲಹೆ ಕೇಳಿದರೆ ಕೋರ್ಟ್ ಆದೇಶ ಪಾಲಿಸಬೇಡಿ ಎಂದು ಹೇಳುತ್ತೇನೆ. ಏಕೆಂದರೆ, ಕಾಯ್ದೆಗೆ ವಿರುದ್ಧವಾಗಿ ನೀಡಿರುವ ಆದೇಶ ಪಾಲಿಸುವ ಅಗತ್ಯವಿಲ್ಲ” ಎಂದು ತಿಳಿಸಿದರು.

ಈ ಹಿಂದೆ ಸುಪ್ರೀಂಕೋರ್ಟ್ ಆದೇಶ ಪಾಲಿಸದೆ ಸಮಸ್ಯೆ ಎದುರಿಸಬೇಕಾಗಿತ್ತಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೌದು, ನ್ಯಾಯಾಂಗ ನಿಂದನೆ ಎದುರಿಸಲು ಸರ್ಕಾರ ಸಿದ್ಧವಾಗಿರಬೇಕು. ಈ ವಿಚಾರದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ತೀರ್ಮಾನ ಕೈಗೊಳ್ಳಬೇಕು. ಏನೇ ಆದರೂ ಎದುರಿಸುವ ಧೈರ್ಯ ಪ್ರದರ್ಶಿಸಬೇಕು ಎಂದರು.

ಸೋಮವಾರದ ಆದೇಶವೂ ಸರಿಯಲ್ಲ: ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವ ಕುರಿತು ಸೆ.5ರ ಆದೇಶ ಮರುಪರಿಶೀಲನೆಗೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಒಂದೋ ತಿರಸ್ಕರಿಸಬೇಕಿತ್ತು ಇಲ್ಲವೇ ಪರಿಗಣಿಸಬೇಕಿತ್ತು. ಆದರೆ, ಅದನ್ನು ಬಿಟ್ಟು ಹೆಚ್ಚುವರಿಯಾಗಿ ನಾಲ್ಕು ದಿನ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ. ಇದರಿಂದಲೇ ಕೋರ್ಟ್ ತೀರ್ಪು ನ್ಯಾಯಸಮ್ಮತವಾಗಿಲ್ಲ ಎಂಬುದು ಗೊತ್ತಾಗುತ್ತದೆ.
ಹೀಗಾಗಿ ಈ ಅಂಶವನ್ನು ಪರಿಗಣಿಸಿಯೂ ರಾಜ್ಯ ಸರ್ಕಾರ ಕೋರ್ಟ್ ಆದೇಶ ಪಾಲಿಸಬಾರದು ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top