fbpx
News

ಪ್ರತಿಭಟನೆ, ಬಂದ್ ಮತ್ತು ಕಾವೇರಿ ವಿವಾದ ಇತ್ಯಾದಿ

ಒಂದು ಕಾಲಕ್ಕೆ ಕಮ್ಯುನಿಸ್ಟ್ ಆಡಳಿತದ ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸೀಮಿತವಾಗಿದ್ದ ‘ಬಂದ್’ ಇಂದು ಕರ್ನಾಟಕದಲ್ಲಿಯೂ ನಿತ್ಯಜೀವನದ ಭಾಗವಾಗುತ್ತಿರುವುದು ವಿಷಾದಕರ ಬೆಳವಣಿಗೆ ಎನ್ನಬಹುದು. ಎರಡು ತಿಂಗಳಲ್ಲಿ ೪-೫ ಬಾರಿ ‘ಬಂದ್’ ಆಚರಿಸುವುದು, ರಾಜ್ಯದ ಆಭಿವೃದ್ಧಿ, ಆರ್ಥಿಕ ಸ್ಥಿತಿಗತಿಯ ನಿಟ್ಟಿನಲ್ಲಿ ಒಳ್ಳೆಯ ಲಕ್ಷಣವಲ್ಲ. ಕಾವೇರಿ ಮತ್ತು ಮಹಾದಾಯಿ ನೀರಿನ ವಿಷಯದಲ್ಲಿ ‘ಬಂದ್’ ಆಚರಣೆ ಅರ್ಥಪೂರ್ಣವಾಗಿದ್ದರೂ, ಇಂದು ಕ್ಷುಲ್ಲಕ ವಿಷಯಗಳ ಬಗ್ಗೆೆ ‘ಬಂದ್’ಗೆ ಕರೆ ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ವಿಷಾದವೆಂದರೆ ಹಲವು ವಿಷಯಗಳಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಲು, ತಮ್ಮ ಬಲ ಕುಂದದಿರುವುದನ್ನು ಎದುರಾಳಿಗೆ ತೋರಿಸಲು, ಒಂದು ಘಟನೆಗೆ ವ್ಯಾಪಕ ಪ್ರಚಾರ ಪಡೆಯಲು, ಒಬ್ಬರನ್ನು ದಿನಬೆಳಗಾಗುವುದರೊಳಗಾಗಿ ‘ಹೀರೋ’ ಮಾಡಲು ‘ಬಂದ್’ ಕರೆಯುವ ಪ್ರವೃತ್ತಿ ಜನಸಾಮಾನ್ಯರ ನಿತ್ಯ ಬದುಕಿನ ದೃಷ್ಟಿಯಲ್ಲಿ ಖಂಡನಾರ್ಹ. ಉಳ್ಳವರ ಬದುಕು ಹೇಗೋ ನಡೆದು ಹೋಗುತ್ತದೆ. ಆದರೆ, ಸಂಜೆಯವರೆಗೆ ದುಡಿದು ತಮ್ಮ ಬದುಕಿನ ಚೀಲವನ್ನು ತುಂಬಿಸಿಕೊಳ್ಳಲು ಹೆಣಗಾಡುವವರ ಪಾಡನ್ನು ಕೇಳುವವರು ಯಾರು? ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಅನ್ನ ನೀರಿಲ್ಲದೇ ತ್ರಿಶಂಕುಸ್ಥಿತಿಯಲ್ಲಿ ದಿನ ಕಳೆಯಬೇಕಾದ ಮಹಿಳೆ ಮತ್ತು ಮಕ್ಕಳನ್ನು ಯಾರು ವಿಚಾರಿಸುತ್ತಾರೆ? ತುರ್ತಾಗಿ ವೈದ್ಯರಲ್ಲಿ ಹೋಗಬೇಕಾದವರ ಪಾಡೇನು?

ಅನ್ಯಾಯವಾದಾಗ ಪ್ರತಿಭಟಿಸುವುದರಲ್ಲಿ ಅರ್ಥವಿದೆ. ಆದರೆ, ಈ ಪ್ರತಿಭಟನೆ ಜನಸಾಮಾನ್ಯರ ದೈನಂದಿನ ಬದುಕಿಗೆ ತೊಂದರೆಯಾಗದಂತೆ ಎಚ್ಚರವಹಿಸಿದರೆ ಯಾರೂ ವಿರೋಧಿಸುವುದಿಲ್ಲ. ಆದರೆ, ಈ ರೀತಿಯ ಪ್ರತಿಭಟನೆಯ ಮಾರ್ಗವನ್ನು ತೋರಿಸಿ ಬೆಳೆಸಿದವರು ಯಾರು? ಸಮಸ್ಯೆ ಯಾವುದೇ ಇರಲಿ ಅದನ್ನು ಮೊಳಕೆಯಲ್ಲಿಯೇ ಚಿವುಟುವ ಇಚ್ಛಾಶಕ್ತಿ ನಮ್ಮ ಅಡಳಿತ ವ್ಯವಸ್ಥೆಗಾಗಲಿ, ಅಥವಾ ರಾಜಕೀಯ ಪಕ್ಷಗಳಿಗಾಗಲಿ ಇದೆಯೇ? ಆಡಳಿತ ವ್ಯವಸ್ಥೆ ಕಡತವನ್ನು ದೂಡುವುದರಲ್ಲಿ ನಿಸ್ಸೀಮತೆ ತೋರಿಸಿದರೆ, ರಾಜಕೀಯ ಪಕ್ಷಗಳು, ಸಮಸ್ಯೆಗಳಿಂದ ರಾಜಕೀಯ ಲಾಭವನ್ನು ಪಡೆಯುವ ಮತ್ತು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನದಲ್ಲಿ ಇರುತ್ತವೆ.

ಸಮಸ್ಯೆ ಬಿಗಡಾಯಿಸಿ ಸಂಬಂಧಪಟ್ಟವರು ಕೈಗೆ ಕಲ್ಲು ತೆಗೆದುಕೊಂಡು ರಸ್ತೆಯಲ್ಲಿ ವಾಹನಗಳು, ಟೈರುಗಳನ್ನು ಸುಟ್ಟು, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಮಾಡಿ, ಜನಸಾಮಾನ್ಯರ ದೈನಂದಿನ ಬದುಕಿಗೆ ಅಡತಡೆ ಮಾಡಿ ಆಕ್ರೋಶ ವ್ಯಕ್ತ ಮಾಡಿದಾಗಲೇ, ಸಮಸ್ಯೆ ಸಂಬಂಧಪಟ್ಟವರ ಗಮನಕ್ಕೆ ಬರುವುದು. ಅದರಲ್ಲೂ ಕರ್ನಾಟಕದ ಸಮಸ್ಯೆ ದಿಲ್ಲಿ ದೊರೆಗೆ ಕೇಳಿಸುವುದಿಲ್ಲ. ಮಹಾದಾಯಿ ಹೋರಾಟ ಆರಂಭವಾಗಿ ವರ್ಷವಾದರೂ ಇನ್ನೂ ಅದು ದಿಲ್ಲಿ ದೊರೆಗೆ ಕೇಳಿಸಲಿಲ್ಲ. ಈ ಮಧ್ಯೆ ದಿಲ್ಲಿ ದೊರೆಗಳು ಈ ಪ್ರದೇಶಕ್ಕೆ ಎರಡುಬಾರಿ ಭೇಟಿ ನೀಡಿದರೂ, ಔಪಚಾರಿಕವಾಗಿಯೂ ಇದರ ಬಗ್ಗೆ ಪ್ರಶ್ನಿಸಲಿಲ್ಲ. ಇದರ ಬಗ್ಗೆ ಪ್ರಸ್ತಾಪಿಸಿ ಎಂದು ಕೇಳುವ ಧೈರ್ಯವನ್ನು ಹೈಕಮಾಂಡ್ ಮತ್ತು ವರಿಷ್ಠರ ಕಪಿಮುಷ್ಟಿಯಲ್ಲಿರುವ ಜನಪ್ರತಿನಿಧಿಗಳು ಮಾಡಲಿಲ್ಲ. ದಿಲ್ಲಿ ದೊರೆಗಳು ಇದರ ಬಗ್ಗೆ ಒಂದೆರಡು ಸಾಂತ್ವನದ ಮಾತುಗಳನ್ನು ಆಡುವ ದೊಡ್ಡತನವನ್ನು ತೋರಿಸಿದ್ದರೆ, ಮಹಾದಾಯಿ ಹೋರಾಟ ಕೊಂಚ ತಗ್ಗುತ್ತಿತ್ತೇನೋ? ನ್ಯಾಯಾಲಯ ಅಥವಾ ನ್ಯಾಯಾಧಿಕರಣದ ಹೊರಗೆ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಂಡರೆ, ಅವು ಸಂತುಷ್ಟಿಗೊಳ್ಳುತ್ತವೆ ವಿನಾ ಸಬ್ ಜ್ಯುಡಿಸ್ ಹೆಸರಿನಲ್ಲಿ ಪ್ರಶ್ನಿಸುವ ಸಾಧ್ಯತೆ ಕಡಿಮೆ.

ಕಾವೇರಿ ವಿವಾದಕ್ಕೆ ದಶಕಗಳ ಇತಿಹಾಸ ಇದೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರತಿಯೊಂದು ರಾಜಕೀಯ ಪಕ್ಷವೂ ಈ ಅವಧಿಯಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸಿದೆ. ಸಮಸ್ಯೆ ತಾರಕಕ್ಕೇರಿದಾಗ ಪ್ರತಿಯೊಂದು ರಾಜಕೀಯ ಪಕ್ಷವೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆಯೇ ವಿನಾ, ಸಮಸ್ಯೆಗೆ ಖಾಯಂ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಹಾಗೆಯೇ ತಮಿಳುನಾಡಿನಂತೆ ದಿಲ್ಲಿಯಲ್ಲಿ ಕರ್ನಾಟಕದ ಪರ ‘ಲಾಬಿ’ ಮಾಡುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಲಿಲ್ಲ. ಕರ್ನಾಟಕದ ಸಮಸ್ಯೆಯನ್ನು ಮತ್ತು ಬೇಡಿಕೆಯನ್ನು ಬಲವಾಗಿ ಸಮರ್ಥಿಸುವ ವಕೀಲರ ಪಡೆಯನ್ನೂ ರಚಿಸಲಿಲ್ಲ. ಈ ನಿಟ್ಟಿನಲ್ಲಿ ಸರಕಾರ ತಮಿಳುನಾಡಿನ ಮಾದರಿಯನ್ನು ಅನುಸರಿಸಬೇಕು. ನಾಡು, ನುಡಿ ಮತ್ತು ತಮ್ಮ ಸಂಸ್ಕೃತಿಯ ನಿಟ್ಟಿನಲ್ಲಿ ಅವರು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಅಂತೆಯೇ ತಮಿಳುನಾಡು ಸಂಪೂರ್ಣ ತಮಿಳುಮಯವಾಗಿದೆ. ಒಂದು ನಾಲ್ಕೈದು ದಿವಸ ತಮಿಳುನಾಡಿನಲ್ಲಿ ಉಳಿದು ಬಂದವನು ತಮಿಳ ಕಲಿತೇ ಹೊರಗೆ ಬರುತ್ತಾನೆ. ಆದರೆ, ಕರ್ನಾಟಕದಲ್ಲಿ? ಕರ್ನಾಟಕದ ತ್ರಿಭಾಷಾಸೂತ್ರವನ್ನು ಸದಾ ಪಠಿಸುವಾಗ, ತಮಿಳುನಾಡು ದ್ವಿಭಾಷಾ ಸೂತ್ರಕ್ಕೆ ಅಂಟಿಕೊಂಡು ತನ್ನ ಭಾಷೆಯನ್ನು ಉಳಿಸಿಕೊಂಡಿದೆ.
ಈ ದಿನಗಳಲ್ಲಿ ಯಾರೇ ಬಂದಿಗೆ ಕರೆ ಕೊಡಲಿ ಮತ್ತು ಕಾರಣ ಯಾವುದೇ ಇರಲಿ, ಬಂದ್ ಯಶಸ್ವಿಯಾಗುತ್ತದೆ. ಇದರ ಅರ್ಥ ಬಂದಿಗೆ ಸಂಪೂರ್ಣ ಬೆಂಬಲ ದೊರಕಿದೆ ಎಂದಲ್ಲ. ಸಾರ್ವಜನಿಕ ಸಾರಿಗೆ ಸೇವೆ ಸ್ತಬ್ಧವಾದಾಗ, ರಿಕ್ಷಾ ಟ್ಯಾಕ್ಷಿಗಳು ಹೊರಬರದಿದ್ದಾಗ ಬಂದ್ ಯಶಸ್ವಿ ಆಗೇ ಆಗುತ್ತದೆ. ಬಂದ್ ಸಮಯದಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಜನಸಾಮಾನ್ಯರ ಬವಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ, ಅರ್ಥಿಕ ಪ್ರಗತಿಗೆ ತಡೆಯಾಗುವುದನ್ನು ತಪ್ಪಿಸಲು, ಅಹಂ ಮತ್ತು ಜಂಬ ಬಿಟ್ಟು ಮುಂದೆ ಬರಬೇಕು. ಇದರಲ್ಲಿ ಅವಮಾನ ಮತ್ತು ಸೋಲಿನ ಪ್ರಶ್ನೆ ಎದುರಾಗಬಾರದು. ದೇಶದ ಒಳಿತು ಆದ್ಯತೆಯಾಗಿರಬೇಕು.

ರಮಾನಂದ ಶರ್ಮಾ
ಸೌಜನ್ಯ : ವಾಭಾ ೧೪.೯.೨೦೧೬

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top