fbpx
News

ಕೊಲಿಜಿಯಂ ಕಾವು

images

ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಸುಪ್ರೀಂ ಹಾಗೂ ಹೈಕೋರ್ಟ್ ನ್ಯಾಯಾಧೀಶರ ನೇಮಕ ಸಮಿತಿ ಕೊಲಜಿಯಂ ವ್ಯವಸ್ಥೆ ಕುರಿತು ರಾಷ್ಟ್ರಾದ್ಯಂ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 22 ವರ್ಷಗಳ ಹಳೆಯ ಈ ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‍ಜೆಎಸಿ) ರಚನೆ ಕೇಂದ್ರ ಸರ್ಕಾರ ಆಸಕ್ತಿ ತೋರಿದರೆ, ಈ ಹಿಂದಿನ ಕೊಲಿಜಿಯಂ(ನ್ಯಾಯಾಧೀಶರ ನೇಮಕಾತಿ ಸಮಿತಿ) ಮುಂದುವರಿಯಬೇಕೆಂದು ಈ ಸರ್ವೋಚ್ಛ ಸಮಿತಿ ಪಟ್ಟುಹಿಡಿದಿದೆ. ದೇಶದ ಎರಡು ಪ್ರಮುಖ ಅಂಗಗಳಾಗಿರುವ ನ್ಯಾಯಾಂಗ-ಶಾಸಕಾಂಗ ನಡುವಿನ ಮುಸುಕಿನ ಗುದ್ದಾಟದಿಂದಾಗಿ ನ್ಯಾಯಾಧೀಶರ ನೇಮಕ ಪ್ರಕ್ರಿಯೆ ವಿಳಂಬವಾಗತ್ತಿದೆ. ಒಂದೆಡೆ, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಗಗನಕ್ಕೇರತೊಡಗಿದರೆ, ಮತ್ತೊಂದೆಡೆ ದಾವೆಗಳು ಇತ್ಯರ್ಥವಾಗದೆ, ಜನಸಾಮಾನ್ಯರು ಪರದಾಡುವಂತಾಗಿದೆ. ರಾಷ್ಟ್ರದಲ್ಲಿ ಮೂರು ಕೋಟಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಕಾದಿವೆ. ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳು ನ್ಯಾಯಕ್ಕಾಗಿ ಕಾದಿದ್ದಾರೆ. ನ್ಯಾಯದಾನ ವಿಳಂಬ ಆದಲ್ಲಿ ನ್ಯಾಯ ಸಿಕ್ಕಿದಂತಲ್ಲ. ರಾಷ್ಟ್ರದ ಪ್ರಗತಿಗೂ ಇದರಿಂದ ಮಾರಕ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪ್ರಮುಖವಾದ ಸಾಂವಿಧಾನಿಕ ಹೊಣೆಗಾರಿಕೆಗಳಿರುವ ನ್ಯಾಯಾಂಗ ವ್ಯವಸ್ಥೆ ಅಪಾರವಾದ ಸಾರ್ವಜನಿಕ ಅಧಿಕಾರವನ್ನು ಚಲಾಯಿಸುತ್ತದೆ. ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿ ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡುವುದು ಅವಶ್ಯ.

ಕೊಲಿಜಿಯಂ(ನ್ಯಾಯಾಧೀಶರ ನೇಮಕಾತಿ ಸಮಿತಿ)?

judge-symboic-600

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯ್ಕೆಯಲ್ಲಿ ಸಿಜೆಐ ಹಾಗೂ ಸುಪ್ರೀಂ ಕೋರ್ಟ್‍ನ ನಾಲ್ಕು ಹಿರಿಯ ನ್ಯಾಯಾಧೀಶರನ್ನೊಳಗೊಂಡ ಆಯ್ಕೆ ಸಮಿತಿ ಇರುತ್ತದೆ. ಅದಕ್ಕೆ ಸರ್ವೋಚ್ಚ ನ್ಯಾಯಾಲಯದ ಕೊಲೇಜಿಯಂ ಎಂದು ಹೇಳುತ್ತಾರೆ.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆಗೆ ಸಂಬಂಧಿಸಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಮತ್ತು ಇಬ್ಬರು ಹಿರಿಯ ನ್ಯಾಯಾಧೀಶರನ್ನೊಳಗೊಂಡ ಕೊಲೇಜಿಯಂ ಇರುತ್ತದೆ. ಸುಪ್ರೀಂ ಕೋರ್ಟ್‍ನ ಪ್ರಧಾನ ನ್ಯಾಯಾಧೀಶರನ್ನು ಹಿರಿತನದ ಆಧಾರದಲ್ಲೇ ನೇಮಕ ಮಾಡಲಾಗುತ್ತದೆ. ನಮ್ಮ ಸಂವಿಧಾನದಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಗೆ ಸಂಬಂಧಿಸಿ ಯಾವುದೇ ರೂಪುರೇಷೆಯನ್ನು ಹೊಂದಿರುವುದಿಲ್ಲ. ಆದುದರಿಂದ ಸೇವಾ ಜೇಷ್ಠತೆಯೇ ಆಧಾರವಾಗಿರುತ್ತದೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‍ಜೆಎಸಿ)?

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು, ಇಬ್ಬರು ನ್ಯಾಯಾಧೀಶರು, ಇಬ್ಬರು ಗಣ್ಯರು ಹಾಗೂ ಕೇಂದ್ರ ಕಾನೂನು ಸಚಿವರನ್ನು ಒಳಗೊಂಡ ನ್ಯಾಯಾಂಗ ನೇಮಕ ಆಯೋಗವು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳ ನ್ಯಾಯಾಧೀಶರನ್ನು ಆರಿಸಬೇಕಿತ್ತು ಮತ್ತು ವರ್ಗಾವಣೆ ಮಾಡಬೇಕಿತ್ತು. ಇದನ್ನೂ ರಾಷ್ಟ್ರಪತಿಗಳೇ ಅಂಗೀಕರಿಸಬೇಕಿತ್ತು. ನ್ಯಾಯಾಧೀಶರ ನೇಮಕಾತಿ ಸಮಿತಿಯಲ್ಲಿ ಕೇವಲ ನ್ಯಾಯಾಧೀಶರೇ ಇರುತ್ತಿದ್ದು, ಇವರೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸುತ್ತಿದ್ದರು. ಈ ವ್ಯವಸ್ಥೆ ಪಾರದರ್ಶಕವಾಗಿಲ್ಲ ಎಂಬ ಕಾರಣ ನೀಡಿ ಸಂಸತ್ತು ಕಳೆದ ವರ್ಷ ಆಗಸ್ಟ್ 14ರಂದು ಎನ್‍ಜೆಎಸಿ ರಚನೆಯ ಮಸೂದೆಯನ್ನು ಪಾಸು ಮಾಡಿತ್ತು. ಎನ್‍ಜೆಎಸಿಯಲ್ಲಿ ರಾಜಕಾರಣಿಗಳು, ಹೊರಗಿನ ಗಣ್ಯರು ಸದಸ್ಯರಾಗಲು ಅವಕಾಶವಿತ್ತು. ಆದರೆ ಎನ್‍ಜೆಎಸಿ ರಚನೆಯಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ. ರಾಜಕೀಯ ಹಸ್ತಕ್ಷೇಪಕ್ಕೆ ನಾಂದಿಯಾಗುತ್ತದೆ ಎಂದು ಅದರ ರಚನೆ ವಿರುದ್ಧ ಅರ್ಜಿಗಳ ಗುಚ್ಛಗಳೇ ಸುಪ್ರೀಂಕೋರ್ಟ್‍ಗೆ ಸಲ್ಲಿಕೆಯಾಗಿದ್ದವು. ಇವುಗಳ ವಿಚಾರಣೆ ನಡೆಸಿದ ಪಂಚಸದಸ್ಯ ನ್ಯಾಯಪೀಠ 1030 ಪುಟಗಳ ಈ ಮಹತ್ವದ ತೀರ್ಪು ಪ್ರಕಟಿಸಿತ್ತು.

ನ್ಯಾ.ಚಲಮೇಶ್ವರ ಅಸಮಾಧಾನ

ಕೊಲಿಜಿಯಂನಲ್ಲಿನ ವ್ಯವಸ್ಥೆ ಪಾರದರ್ಶಕವಾಗಿಲ್ಲ. ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಅದರ ಮುಖ್ಯಸ್ಥರಾದ ನ್ಯಾ| ಠಾಕೂರ್ ಅವರಿಗೆ 3 ಪುಟಗಳ ಪತ್ರದಲ್ಲಿ ಕೊಲಿಜಿಯಂ ಸದಸ್ಯರಾದ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶ ನ್ಯಾ| ಜೆ. ಚಲಮೇಶ್ವರ ಆರೋಪಿಸಿ, ಕೊಲಿಜಿಯಂ ಸಭೆಯನ್ನು ಬಹಿಷ್ಕರಿಸಿದ್ದರು. ಈ ಹಿಂದೆ ಕೊಲಿಜಿಯಂ ಬದಲು ಸರಕಾರ ಸ್ಥಾಪಿಸಲು ಉದ್ದೇಶಿಸಿದ್ದ ‘ನ್ಯಾಯಾಂಗ ನೇಮಕ ಆಯೋಗ’ವನ್ನು ಸುಪ್ರೀಂಕೋರ್ಟ್‍ನ ಪಂಚ ಸದಸ್ಯ ಪೀಠ 4-1 ಬಹುಮತದ ತೀರ್ಪಿನಲ್ಲಿ ರದ್ದುಗೊಳಿಸಿತ್ತು. ಇದರ ವಿಚಾರಣೆ ನಡೆಸಿದ ಐವರ ಪೀಠದಲ್ಲಿ ನ್ಯಾ| ಚಲಮೇಶ್ವರ ಅವರೂ ಇದ್ದರು. ಆದರೆ ನ್ಯಾಯಾಂಗ ನೇಮಕ ಆಯೋಗದ ರದ್ದತಿ ವಿರುದ್ಧ ತೀರ್ಪು ನೀಡಿದ ಏಕೈಕ ನ್ಯಾಯಾಧೀಶ ಅವರಾಗಿದ್ದರು. ಉಳಿದ ನಾಲ್ವರು ಆಯೋಗದ ರದ್ದತಿ ಪರ ತೀರ್ಪು ಪ್ರಕಟಿಸಿದ್ದರು.

ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿರಲಿ

ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ನ್ಯಾಯಾಂಗ ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ವ್ಯವಸ್ಥೆ. ಪ್ರಜೆಗಳ ಹಕ್ಕನ್ನು ರಕ್ಷಣೆ ಮಾಡುವ ಪಾಲಕ. ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ರಾಜಕೀಯ ಹಸ್ತಕ್ಷೇಪವನ್ನು ನ್ಯಾಯಾಂಗದಿಂದ ಪ್ರತ್ಯೇಕಿಸುವುದು ಅಗತ್ಯ. ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್‍ಗಳಿಗೆ ನ್ಯಾಯಾಧೀಶರ ನೇಮಕಾತಿಯಲ್ಲಿ ರಾಜಕೀಯ ಮಧ್ಯ ಪ್ರವೇಶದಿಂದನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಪದೇ ಪದೇ ಧಕ್ಕೆಯಾಗುತ್ತಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ನ್ಯಾಯಾಂಗದ ಸ್ವಾಯತ್ತತೆಯನ್ನು ಬುಡಮೇಲು ಮಾಡಲು ಕೆಲ ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. 1975-77ರಲ್ಲಿನ ತುರ್ತು ಪರಿಸ್ಥಿತಿ ವೇಳೆ ಇಂಥ ಪ್ರಯತ್ನ ಆಗ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿತ್ತು. ಅಂದಿನಿಂದ ಇಂದಿನವರೆಗೂ ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸಲು ರಾಜಕೀಯ ಹುನ್ನಾರಗಳು ಪ್ರತ್ಯಕ್ಷ ಮತ್ತುಪರೋಕ್ಷವಾಗಿಯೂ ನಡೆಯುತ್ತಲೇ ಬಂದಿದೆ.

ಜಡ್ಜ್‍ಗಳ ನೇಮಕ ಪ್ರಕ್ರಿಯೆ:

ಭಾರತದ ಸಂವಿಧಾನದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯಗಳಿಗೆ ಜಡ್ಜ್‍ಗಳನ್ನು ನೇಮಿಸುವ ಕುರಿತುನಿರ್ದಿಷ್ಟ ರೂಪುರೇಷೆಗಳೇನಿಲ್ಲ. ದೇಶದ ನ್ಯಾಯಾಂಗ ಪರಂಪರೆಯಂತೆ ರಾಷ್ಟ್ರಪತಿಗಳು ಸುಪ್ರೀಂ ಹಾಗೂ ಹೈಕೋರ್ಟ್‍ಗಳಿಗೆನ್ಯಾಯಾಧೀಶರನ್ನು ನೇಮಕ ಮಾಡುವಾಗ ನ್ಯಾಯಾಂಗದ ಹಿರಿಯ ನ್ಯಾಯಾಧೀಶರ ಸಲಹೆಯನ್ನು ಪುರಸ್ಕರಿಸುವುದು ವಾಡಿಕೆ.

ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಧಾನ ನ್ಯಾಯಾಧೀಶರನ್ನು(ಸಿಜೆಐ) ನೇಮಕ ಮಾಡುವಾಗ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‍ಗಳ ಹಿರಿಯ ನ್ಯಾಯಾಧೀಶರೊಂದಿಗೆ ಚರ್ಚಿಸಿ ರಾಷ್ಟ್ರಪತಿ ಅವರು ನೇಮಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯಕ್ಕೆ ಇತರ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಸಿಜೆಐ ಅವರ ಸಲಹೆ ಹಾಗೂ ಶಿಫಾರಸಿನ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ರಾಜ್ಯದ ಉಚ್ಚ ನ್ಯಾಯಾಲಯಗಳಿಗೆ ಪ್ರಧಾನ ನ್ಯಾಯಾಧೀಶರನ್ನು ಆಯ್ಕೆ ಮಾಡುವಾಗ ಸಿಜೆಐ ಹಾಗೂ ಅಯಾ ರಾಜ್ಯಗಳ ರಾಜ್ಯಪಾಲರ ಸಲಹೆಯಂತೆ ರಾಷ್ಟ್ರಪತಿ ಅವರು ನೇಮಕ ಮಾಡುತ್ತಾರೆ. ರಾಜ್ಯ ಹೈಕೋರ್ಟ್‍ಗೆ ಉಳಿದ ನ್ಯಾಯಾಧೀಶರ ನೇಮಕ ಮಾಡುವಾಗ ರಾಜ್ಯ ಹೈಕೋರ್ಟ್‍ನ ಪ್ರಧಾನ ನ್ಯಾಯಮೂರ್ತಿಗಳ ಸಲಹೆ ಮೇರೆಗೆ ರಾಷ್ಟ್ರಪತಿ ಅವರು ನೇಮಿಸುತ್ತಾರೆ. ಅಂದರೆ, ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂವಿಧಾನದ ಪ್ರಕಾರ ಕಾರ್ಯಾಂಗ ಅಥವಾ ಶಾಸಕಾಂಗದ ವಿವೇಚನೆಗೆ ಅವಕಾಶವಿಲ್ಲ. ಮಾತ್ರವಲ್ಲ ಸುಪ್ರೀಂ ಕೋರ್ಟ್‍ಗೆ ಮತ್ತು ಹೈಕೋರ್ಟ್ ನ್ಯಾಯಾಧೀಶರ ನೇಮಕ ವರ್ಗಾವಣೆಯಲ್ಲಿ ಸುಪ್ರೀಂಕೋರ್ಟ್‍ನ ಪ್ರಧಾನ ನ್ಯಾಯಾಧೀಶರಿಗೆ ಇರುವ ಪ್ರಾಮುಖ್ಯತೆಯನ್ನು ಪ್ರಚುರಪಡಿಸುತ್ತವೆ.

ನ್ಯಾಯಾಧೀಶರ ನೇಮಕಕ್ಕೆ ಆದ್ಯತೆ ಸಿಗಲಿ

ನ್ಯಾಯಾಧೀಶರ ನೇಮಕಕ್ಕೆ ಕ್ರಮ ಕೈಗೊಳ್ಳದ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ನ್ಯಾಯಾಂಗದ ಮೇಲೆ ಅತಿಯಾದ ಒತ್ತಡ ಉಂಟಾಗಿದೆ. ನ್ಯಾಯಾಧೀಶರ ಕೊರತೆ ತುಂಬಿ, ನ್ಯಾಯಾಂಗದ ಮೇಲಿನ ಒತ್ತಡ ನಿವಾರಿಸಲು ಸರ್ಕಾರ ತಕ್ಷಣ ಕ್ರಮ ಜರುಗಿಸಬೇಕಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಬಗ್ಗೆ ಹೇಳುವಾಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಟಿ.ಎಸ್. ಠಾಕೂರ್ ಅವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ನ್ಯಾಯಾಂಗದ ಮೇಲಿರುವ ಅತಿಯಾದ ಒತ್ತಡ ಹಾಗೂ ನ್ಯಾಯಾಧೀಶರು, ನ್ಯಾಯಮೂರ್ತಿಗಳ ಕೊರತೆ ವಿಷಯದ ಬಗ್ಗೆ ಹೇಳುವಾಗ ಅವರು ಭಾವುಕರಾದದ್ದು ಸಮಸ್ಯೆಯ ಅಗಾಧತೆಗೆ ಪ್ರತೀಕ. ಆದರೆ ಇದು ಹೊಸ ವಿಚಾರವೇನಲ್ಲಎಂಬುದನ್ನೂ ಗಮನಿಸಬೇಕಿದೆ. ಈ ಹಿಂದಿನಿಂದಲೂ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಹುದ್ದೆಗಳ ಕೊರತೆ ಕುರಿತು ಹೇಳುತ್ತಲೇ ಬರಲಾಗಿದೆ. ಆದರೆ ಹೆಚ್ಚಿನ ಪ್ರಗತಿಯಾಗದಿರುವುದು ದುರದೃಷ್ಟಕರ.

ಉದಾಸೀನ ಸಲ್ಲದು

ಪ್ರಸ್ತುತ ಇರುವ ನ್ಯಾಯಾಧೀಶರ ಸಂಖ್ಯೆಯನ್ನು 21 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಿಸುವ ವಿಷಯದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂಬುದನ್ನು ಸಿಜೆಐ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಉದಾಸೀನ ಸಲ್ಲದು. 10 ಲಕ್ಷ ಜನರಿಗೆ ಈಗಿರುವ ಅನುಪಾತದಂತೆ 10 ನ್ಯಾಯಾಧೀಶರ ಬದಲಾಗಿ 50 ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಕಾನೂನು ಆಯೋಗ 1987ರಲ್ಲೇ ಶಿಫಾರಸು ಮಾಡಿತ್ತು. ಈ ಶಿಫಾರಸು ಮಾಡಿಯೇ 29 ವರ್ಷಗಳಾಗಿ ಹೋಗಿವೆ. ಹೀಗಿದ್ದೂ ಈ ಶಿಫಾರಸು ಕಾರ್ಯಗತವಾಗಿಲ್ಲ ಎಂಬುದು ನಮ್ಮ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ವಿಳಂಬ ನೀತಿಯನ್ನು ಎತ್ತಿ ತೋರಿಸುತ್ತದೆ.

ಪ್ರಸ್ತುತ ಭಾರತದಲ್ಲಿ 21,598 ಜಡ್ಜ್‍ಗಳಿದ್ದಾರೆ(2015ರ ಡಿಸೆಂಬರ್ 31ರವರೆಗೆ) ಕೆಳನ್ಯಾಯಾಲಯದ 20,502, 1.065 ಹೈಕೋರ್ಟ್ ಜಡ್ಜ್‍ಗಳು ಮತ್ತು ಸುಪ್ರೀಂ ಕೋರ್ಟ್‍ನ 31 ನ್ಯಾಯಾಧೀಶರಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ಆರು ಹುದ್ದೆಗಳು, ವಿವಿಧ ಹೈಕೋರ್ಟ್‍ಗಳಲ್ಲಿ 432 ಮತ್ತು ಅಧೀನ ನ್ಯಾಯಾಂಗದಲ್ಲಿ 4,432 ಹುದ್ದೆಗಳು(2015ರ ಡಿಸೆಂಬರ್ 31ರವರೆಗೆ) ಖಾಲಿ ಇವೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಒಂದು ವೇಳೆ, ಎಲ್ಲಾ 20,502 ಜಡ್ಜ್‍ಗಳು ನೇಮಕವಾದರೆ, ಎಲ್ಲರಿಗೂ ಅಗತ್ಯ ಕೋರ್ಟ್‍ರೂಮ್‍ಗಳು ಇಲ್ಲ. ದೇಶದಲ್ಲಿ ಪ್ರಸ್ತುತ 16,513 ಕೋರ್ಟ್‍ರೂಮ್‍ಗಳಿದ್ದು, ಇನ್ನೂ 3,989 ಕೊರತೆ ಇವೆ. ರಾಷ್ಟ್ರದಲ್ಲಿ ದಾವೆಗಳ ಹೆಚ್ಚಳ ಓಟದಲ್ಲಿ ನ್ಯಾಯಾಂಗ ವ್ಯವಸ್ಥೆ ಮೂಲಸೌಕರ್ಯ ಹಿಂದೆ ಉಳಿದಿದೆ.

ಜಾರಿಯಾಗದ ಕಾನೂನು ಆಯೋಗದ ಶಿಫಾರಸು

ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕಾನೂನು ಆಯೋಗ ಮಾಡಿದ್ದ ಶಿಫಾರಸಿಗೆ ಸುಪ್ರೀಂ ಕೋರ್ಟ್ 2002ರಲ್ಲಿ ಬೆಂಬಲ ಸೂಚಿಸಿತ್ತು. ನಂತರ ಕಾನೂನಿಗೆ ಸಂಬಂಧಿಸಿದ ಪ್ರಣವ್ ಮುಖರ್ಜಿ ನೇತೃತ್ವದ ಸಂಸತ್ತಿನ ಸ್ಥಾಯಿ ಸಮಿತಿ ಕೂಡ 10 ಲಕ್ಷ ಜನರಿಗೆ 50 ನ್ಯಾಯಾಧೀಶರು ಇರಬೇಕು ಎಂದು ಶಿಫಾರಸು ಮಾಡಿತ್ತು. ಇಷ್ಟೆಲ್ಲಾ ಆದರೂ ಈ ನಿಟ್ಟಿನಲ್ಲಿ ಒಂದಿಷ್ಟೂ ಪ್ರಗತಿಯಾಗಿಲ್ಲ ಎಂಬುದನ್ನು ಲಘುವಾಗಿ ತೆಗೆದುಕೊಳ್ಳಲಾಗದು. ಕೋರ್ಟ್ ಕಚೇರಿಗೆ ಅಲೆಯುವುದು ಎಂದರೆ ವರ್ಷಗಳಿಗೆ ಲೆಕ್ಕವಿಲ್ಲ ಎಂಬ ಭಾವನೆ ಜನಸಮುದಾಯದಲ್ಲಿದೆ.

ಜೊತೆಗೆ ಕಬ್ಬಿಣದ ಕಡಲೆ ಎನಿಸುವ ತಾಂತ್ರಿಕ ನುಡಿಗಟ್ಟುಗಳ ಕಾನೂನು ಪರಿಭಾಷೆ ಹಾಗೂ ಸಂಕೀರ್ಣವಾದ ಕಾನೂನು ಪ್ರಕ್ರಿಯೆಗಳು, ನ್ಯಾಯಾಲಯಕ್ಕೆ ನ್ಯಾಯವನ್ನರಸಿ ಮೊರೆ ಹೋಗುವಂತಹ ಜನರಿಗೆ ಎದುರಾಗುವ ಮತ್ತೊಂದು ಸಮಸ್ಯೆ. ರಸ್ತೆ ಅಪಘಾತ ಮತ್ತಿತರ ಘಟನೆಗಳ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ನಾಗರಿಕರು ಧಾವಿಸದಿರುವುದಕ್ಕೆ ಇಂತಹ ಸ್ಥಿತಿಯೂ ಒಂದು ಕಾರಣ ಎಂದು ವ್ಯಾಖ್ಯಾನಿಸಲಾಗುತ್ತದೆ. ಮುಂದೆ ವರ್ಷಾನುಗಟ್ಟಲೆ ಕೋರ್ಟ್‍ಗೆ ಅಲೆಯಬೇಕಾಗುತ್ತದೆ ಎಂಬಂಥ ಭೀತಿ ಇದಕ್ಕೆ ಕಾರಣವಾಗಿರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು.
ಸರಕಾರದ ನಿಲುವು ಸರ್ವೋಚ್ಚ ನ್ಯಾಯಾಲಯದ ಘನತೆಗೆ ಕುಂದು ತರುವುದು ಮಾತ್ರವಲ್ಲ, ನ್ಯಾಯಾಂಗದ ಸ್ವಾತಂತ್ರವನ್ನು ಪ್ರಶ್ನಿಸಿದಂತಾಗಿದ್ದು ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಯವರು ನ್ಯಾಯಾಂಗದ ಸ್ವಾತಂತ್ರದ ಮೇಲೆ ಸಾರಿದ ಸಮರವನ್ನು ನೆನಪಿಸುತ್ತದೆ. ಇನ್ನಾದರೂ ಜನರ ಬಹಳ ನಿರೀಕ್ಷೆಯನ್ನು ಹೊತ್ತು ಆಯ್ಕೆಯಾಗಿರುವ ಮೋದಿ ಸರಕಾರ ನ್ಯಾಯಾಂಗದ ಸ್ವಾತಂತ್ರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ವರ್ತಿಸಿ ನ್ಯಾಯಾಂಗದ ಘನತೆಯನ್ನು ಮತ್ತು ಆ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯುವ ಬಗ್ಗೆ ಕಾರ್ಯಪ್ರವೃತ್ತರಾಗುವುದು ಸಮಯೋಚಿತವಾಗಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top