fbpx
Kannada Bit News

ಕಾವೇರಿ ಉಳಿಸಿಕೊಳ್ಳಲು, ಕೊನೆಗೂ ಎಚ್ಚೆತ್ತುಕೊಂಡ ಸಿದ್ದು ಸರ್ಕಾರ!!!

ಮೇಲುಸ್ತುವಾರಿ ಸಮಿತಿಗೆ  ಕಾವೇರಿ ಅಂಕಿ-ಅಂಶ ಒದಗಿಸಲು ಸಿದ್ಧತೆ

ಕಾವೇರಿ ನದಿ ನೀರಿನ ವಿಷಯದಲ್ಲಿದಾಖಲೆಗಳನ್ನು ನೀಡಿದರೂ ರಾಜ್ಯದ ವಿರುದ್ಧವಾಗಿಯೇ ತೀರ್ಪು ಬರುತ್ತಿರುವ ಹಿನ್ನೆಲೆಯಲ್ಲಿ ಸೆ. 19ರಂದು ನಡೆಯಲಿರುವ ಮೇಲುಸ್ತುವಾರಿ ಸಮಿತಿ ಸಭೆಗೆ ಅಗತ್ಯ ಅಂಕಿ ಅಂಶಗಳನ್ನು ಕ್ರೋಡೀಕರಿಸುವತ್ತ ಸರ್ಕಾರ ಸಿದ್ದವಾಗುತ್ತಿದೆ.
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸೆ. 5ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಆಘಾತಕ್ಕೊಳಗಾಗಿರುವ ರಾಜ್ಯ ಸರ್ಕಾರ ತೀರ್ಪನ್ನು ಪುನರ್‍ಪರಿಶೀಲಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗೂ ಸುಪ್ರೀಂ ಮನ್ನಣೆ ನೀಡದೆ ಮತ್ತಷ್ಟು ನೀರು ಹರಿಸುವಂತೆ ಸೂಚಿಸಿದ್ದರಿಂದ ಸರ್ಕಾರಕ್ಕೆ ತಲೆ ಬಿಸಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಸದ್ಯದ ಪರಿಸ್ಥಿತಿ, ಆ ಭಾಗದಲ್ಲಿ ಅಂತರ್ಜಲ ಸ್ಥಿತಿ, ಕಾವೇರಿ ಕಣಿವೆಯಲ್ಲಿನ ಜಲಾಶಯಗಳಲ್ಲಿ ನೀರಿನ ಸ್ಥಿತಿ ಮತ್ತು ಮಳೆ ಪ್ರಮಾಣದ ಅಂಕಿ ಅಂಶಗಳೊಂದಿಗೆ ಸಮಿತಿ ಮುಂದೆ ಸಮರ್ಥವಾದ ವಾದ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿನ ಪರಿಸ್ಥಿತಿ ಮನವರಿಕೆ ಮಾಡಿಕೊಡುವುದಲ್ಲದೆ, ತಮಿಳುನಾಡಿನಲ್ಲಿ ಈಗಿನ ಪರಿಸ್ಥಿತಿ ಹೇಗಿದೆ. ಅಲ್ಲಿ ಮಳೆಗಾಲ ಆರಂಭವಾಗುತ್ತಿರುವುದರಿಂದ ನೀರಿನ ಸಮಸ್ಯೆ ಬಗೆಹರಿಯಲಿದೆ. ಆದರೆ, ತಮಿಳುನಾಡಿಗೆ ಮತ್ತೆ ನೀರು ಹರಿಸಿದಲ್ಲಿ ಕರ್ನಾಟಕಕ್ಕೆ ಎದುರಾಗುವ ಸಂಕಷ್ಟವನ್ನು ಸಮಿತಿ ಮುಂದೆ ತಿಳಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಸಭೆ ತೀರ್ಮಾನ ರಾಜ್ಯಕ್ಕೆ ಮಹತ್ವ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್‍ಪರಿಶೀಲನಾ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಸರ್ಕಾರದ ವಾದಕ್ಕೆ ಮನ್ನಣೆ ನೀಡದೆ ಸೆಪ್ಟೆಂಬರ್ 20ರವರೆಗೆ ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿತ್ತು. ಈಗ ಮಂಗಳವಾರ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಅದಕ್ಕಿಂತ ಒಂದು ದಿನ ಮುಂಚಿತವಾಗಿ ನಡೆಯಲಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಿರುವ ತೀರ್ಮಾನ ಮಹತ್ವದ್ದಾಗಿರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾವೇರಿ ವಿಷಯವಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇರುವುದರಿಂದ ಸಭೆಯ ತೀರ್ಮಾನ ರಾಜ್ಯಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಲು ಅಗತ್ಯ ಅಂಕಿ ಅಂಶಗಳನ್ನು ಕಲೆಹಾಕಲಾಗಿದೆ.
ಕಾವೇರಿ ಕಣಿವೆಯಲ್ಲಿ ಬರದ ಸ್ಥಿತಿ ಕಾವೇರಿ ಕಣಿವೆಯ ವ್ಯಾಪ್ತಿಗೆ ಕರ್ನಾಟಕದಲ್ಲಿ 34,273 ಚದರ ಕಿ.ಮೀ. ಪ್ರದೇಶ ಬರುತ್ತದೆ. ಈ ಪೈಕಿ ಮೂರನೇ ಎರಡರಷ್ಟು ಪ್ರದೇಶ ಬರಪೀಡಿತವಾಗಿದೆ. ಸಮರ್ಪಕ ಮಳೆ ಇಲ್ಲದೆ ಕೃಷಿ ಚಟುವಟಿಕೆಯೂ ನಡೆದಿಲ್ಲ. ಆದರೆ, ತಮಿಳುನಾಡಿನಲ್ಲಿ ಇದಕ್ಕೆ ವ್ಯತಿರಿಕ್ತವಾಗಿದೆ. ಅಲ್ಲಿ ಮೂರನೇ ಒಂದರಷ್ಟು ಪ್ರದೇಶ ಮಾತ್ರ ಬರಪೀಡಿತ ವ್ಯಾಪ್ತಿಗೆ ಬರುತ್ತದೆ. ಬರಪೀಡಿತ ಪ್ರದೇಶಗಳಲ್ಲಿ ಕಾವೇರಿ ನದಿ ನೀರು ಆಶ್ರಯಿಸಿಯೇ ಕೃಷಿ ಚಟುವಟಿಕೆ ನಡೆಸಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ಕಾವೇರಿ ಕಣಿವೆ ವ್ಯಾಪ್ತಿಯ ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ ಎಂಬ ಅಂಶವನ್ನು ಮೇಲುಸ್ತುವಾರಿ ಸಮಿತಿ ಗಮನಕ್ಕೆ ತರಲು ತೀರ್ಮಾನಿಸಲಾಗಿದೆ. ಮಳೆ ಪ್ರಮಾಣ ಮುಖ್ಯ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹಕ್ಕೆ ಅಗತ್ಯವಾದ ಮಳೆ ಆಗಿಲ್ಲ. ಕಾವೇರಿ ಕಣಿವೆಗೆ ನೀರು ಹರಿಯಲು ಕೇರಳ ಭಾಗದಲ್ಲಿ ಉತ್ತಮ ಮಳೆಯಾಗಬೇಕು. ಆದರೆ, ಈ ಬಾರಿ ಕೇರಳದ ಕಾವೇರಿ ಕಣಿವೆಯ ಭಾಗದಲ್ಲಿ ಉತ್ತಮ ಮಳೆಯಾಗದೆ ನೀರಿನ ಹರಿವು ಇಲ್ಲವಾಗಿದೆ. ಇನ್ನು ಕಾವೇರಿಗೆ ನೀರು ಬರುವ ಇತರೆ ಜಲಾಶಯಗಳಲ್ಲೂ ನೀರಿನ ಸಂಗ್ರಹ ತೀರಾ ಕಡಿಮೆ ಇದೆ. ಇದರಿಂದ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಇದಕ್ಕಾಗಿ ಮುಂದಿನ ಮಳೆಗಾಲದವರೆಗೆ ಎಷ್ಟು ಪ್ರಮಾಣದ ನೀರಿನ ಅವಶ್ಯಕತೆ ಇದೆ ಎಂಬುದನ್ನು ಸಮಿತಿ ಮುಂದೆ ಅಂಕಿ ಅಂಶಗಳ ಸಹಿತ ವಾದ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ರಾಜ್ಯದ ಹಿತಕ್ಕೆ ಬದ್ಧ ಕರ್ನಾಟಕದಲ್ಲಿ ಮುಂಗಾರು ಕೊನೆಗೊಂಡಿದೆ. ಆದರೆ, ತಮಿಳುನಾಡಿನಲ್ಲಿ ಈ ತಿಂಗಳಾಂತ್ಯದಲ್ಲಿ ಮಳೆಗಾಲ ಆರಂಭವಾಗಲಿದೆ. ಲ್ಲಿನ ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ನೀರನ್ನು ಕೃಷಿ ಚಟುವಟಿಕೆಗಳಿಗೆ ಒದಗಿಸಲಾಗಿದೆ. ಹೀಗಾಗಿ ಸದ್ಯಕ್ಕೆ ತಮಿಳುನಾಡಿಗೆ ಕಾವೇರಿ ನದಿಯಿಂದ ಹೆಚ್ಚಿನ ನೀರು ಬೇಕಾಗಿಲ್ಲ. ಮುಂದೆ ಬರಲಿರುವ ಮಳೆಯನ್ನು ಗಮನದಲ್ಲಿಟ್ಟುಕೊಂಡು ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಬೇಕು ಎಂದು ಮೇಲುಸ್ತುವಾರಿ ಸಮಿತಿಯನ್ನು ಕೋರಲು ಸರ್ಕಾರ ನಿರ್ಧರಿಸಿದ್ದು, ರಾಜ್ಯದ ಹಿತ ಕಾಪಾಡುವಂತಹ ತೀರ್ಮಾನ ಮೇಲುಸ್ತುವಾರಿ ಸಮಿತಿಯಿಂದ ಹೊರಬರುವಂತೆ ಸರ್ಕಾರ ಶತಪ್ರಯತ್ನ ಮಾಡತೊಡಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top