fbpx
Karnataka

ಕಾವೇರಿ ಉಳಿಸಿ

ಕಾವೇರಿ ಕಾವೇರಿ ಕಾವೇರಿ… ಎಲ್ಲಿ ನೋಡಿದರು ಅಲ್ಲಿ ಕಾವೇರಿಯ ಕಾವೇರಿದ ಚರ್ಚೆ… ಯಾವ ಉದ್ದೇಶಕ್ಕಾಗಿ ಈ ಚರ್ಚೆ..?

ಮೊದಲು ನಾನು ಹೇಳುವುದು ನದಿಯ ಬಗ್ಗೆ… ತಲಕಾವೇರಿಯಲ್ಲಿ ಹುಟ್ಟಿ ಬಂಗಾಳ ಕೊಲ್ಲಿಯನ್ನು ಸೇರುವವರೆಗೂ ಬಹು ಉಪಯೋಗಿ ಮತ್ತು ಬಹು ಚರ್ಚೆಯ ವಸ್ತುವಾಗಿದೆ. ಕಾವೇರಿ ಎಂದ ತಕ್ಷಣ ನಮಗೆ ನೆನಪಾಗುವುದು ಕೃಷ್ಣರಾಜಸಾಗರ ಹಾಗೂ ಮಂಡ್ಯ ಜಿಲ್ಲೆ. ಕನ್ನಂಬಾಡಿ ಕಟ್ಟೆಯನ್ನು ಆ ಕಾಲದಲ್ಲೇ ಯಾವ ಉದ್ದೇಶಕ್ಕಾಗಿ ಕಟ್ಟಿಸಿದ್ದು..? ಈಗ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ..?

ಕಾವೇರಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ರೀತಿಯಲ್ಲಿ ಉಪಯೋಗವಾಗುತ್ತಿದೆ. ಬೆಂಗಳೂರು ಮತ್ತು ರಾಮನಗರ ಜಿಲ್ಲೆ ಗಳಿಗೆ ಕುಡಿಯುವ ನೀರಿನ ರೀತಿಯಲ್ಲಿ ಉಪಯೋಗಿಸುತ್ತಿದೇವೆ.

ದಿನಾಂಕ ೨೧ ಸೆಪ್ಟೆಂಬರ್ ೨೦೧೫ ರಂದು ಕನ್ನಂಬಾಡಿ ಕಟ್ಟೆಯಲ್ಲಿ ನೀರಿನ ಸಂಗ್ರಹ ೧೦೨-೧೦೪ ಅಡಿಗಳಷ್ಟು ಇದೆ. ನೀರು ಇಷ್ಟು ಕಡಿಮೆ ಇದ್ದರೂ ಸಹ ಪಕ್ಕದ ರಾಜ್ಯ ತಮಿಳುನಾಡಿಗೆ ಪ್ರತಿದಿನ ೫೦೦೦ ಕ್ಯೂಸೆಕ್ಸ್( ರಾತ್ರಿ ಹೊತ್ತಿನಲ್ಲಿ ಎಷ್ಟು ಕ್ಯೂಸೆಕ್ಸ್ ಯಾರಿಗೆ ಗೊತ್ತು…?) ಹಾಗೆ ನೀರನ್ನು ಬಿಡುತ್ತಿರುವುದು ಏಕೆ…? ಪಕ್ಕದ ರಾಜ್ಯಕ್ಕೆ ಬೇಕಾದರೆ ನೀರನ್ನು ಬಿಡಬಹುದು ಆದರೆ ನಮ್ಮ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಕಟ್ಟು ಪದ್ದತಿಯಲ್ಲಿ ನೀರನ್ನು ಬಿಡುತ್ತಿರುವುದು ಸರಿಯೆ..? ರೈತರಿಗೆ ಅರೆ ನೀರಾವರಿ ಬೆಳೆ ಬೆಳೆಯುವಂತೆ ಸರ್ಕಾರ ಸೂಚಿಸಿರುವುದು ಎಷ್ಟರ ಮಟ್ಟಿಗೆ ಸರಿ..?

ಮಾನ್ಯ ಮುಖ್ಯಮಂತ್ರಿಗಳು ಪರ ರಾಜ್ಯಕ್ಕೆ ನೀರನ್ನು ಬಿಡುವುದಿಲ್ಲ ಎಂಬ ಹೇಳಿಕೆಯನ್ನು ಅಮ್ಮನವರಿಗೆ ರವಾನಿಸಿದ್ದರೂ ಸಹ ನಮ್ಮ ಕಾವೇರಿಯ ನೀರು ಏತಕ್ಕಾಗಿ ಸೈಲೆಂಟಾಗಿ ಪರ ರಾಜ್ಯಕ್ಕೆ ಹರಿಯುತ್ತಿದೆ..?

ಓ ನಮ್ಮ ಕನ್ನಡ ನಾಡಿನ ಜನರೇ

ಈಗಲಾದರೂ ಎಚ್ಚೆತ್ತುಕೊಳ್ಳಿ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ನೂರಾರು ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಅವರೆಲ್ಲರೂ ನಮಗೆ ಯಾವುದೋ ಒಂದು ರೀತಿಯಲ್ಲಿ ಅನ್ನವನ್ನು ನೀಡಿದವರು. ಒಂದು ವೇಳೆ ಕನ್ನಂಬಾಡಿ ಕಟ್ಟೆ ಬರಿದಾದರೆ ನಮ್ಮ ನಿಮ್ಮೆಲ್ಲರ ಗತಿಯೇನು..? ಮೊನ್ನೆ ಒಂದು ದಿನ ಪತ್ರಿಕೆಯಲ್ಲಿ ಕಾವೇರಿ ನೀರಿಗಾಗಿ ಅರೆಬೆತ್ತಲೆ ಹೋರಾಟವನ್ನು ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಂತರ ಆದ ಪರಿಣಾಮವೇನು… ಈಗಲೂ ಕೊಡ ಪ್ರತಿ ದಿನ ಹೆಚ್ಚು ಹೆಚ್ಚು ನೀರು ಪರ ರಾಜ್ಯಕ್ಕೆ ಹರಿದು ಹೋಗುತ್ತಿದೆ. ಏಕೆಂದರೆ ನ್ಯಾಯಾಲಯದ ಆದೇಶದ ಪ್ರಕಾರ ಅದು ಹರಿಯುತ್ತಿದೆ. ಇದರಿಂದ ಸರ್ಕಾರವೂ ಕೂಡ ಸುಮ್ಮನಿದೆ ಅನಿಸುತ್ತಿದೆ.

ಈಗಿನ ಪರಿಸ್ಥಿತಿ ನೋಡಿದರೆ ಒಂದು ಮಾತು ನೆನಪಿಗೆ ಬರುತ್ತದೆ. ನಮ್ಮ ಚಡ್ಡಿಯಲ್ಲೇ ತೂತನ್ನು ಇಟ್ಟುಕೊಂಡು ಬೇರೆಯವರ ಚಡ್ಡಿಯ ತೂತನ್ನು ಹೊಲೆಯುತ್ತಿದ್ದೆವೆ. ಈಗ ಯಾರಿಗೂ ಪರಿಸ್ಥಿತಿಯು ಅರ್ಥವಾಗುತ್ತಿಲ್ಲ. ಮುಂದೆಯೂ ಮಳೆ ಬಾರದೆ ಇದ್ದಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಗಳ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವ ಹಾಗೆ ಆಗುತ್ತದೆ. ನಂತರ ಜನರು ಎರಡು ಹೊತ್ತು ಗಂಜಿಯ ಮೊರೆ ಹೋಗಬೇಕಾಗುತ್ತದೆ… ಆಗ ಬೆಂಗಳೂರಿನ ಪರಿಸ್ಥಿತಿ ನೆನೆಸಿಕೊಳ್ಳಿ, ೧೫ ದಿನಗಳಿಗೊಮ್ಮೆ ಬಿಡುವ ಕುಡಿಯುವ ನೀರಿಗಾಗಿ ಜಗಳ ನಡೆಯುತ್ತದೆ. ಜನ ಆಗ ಶತ್ರುಗಳಂತೆ ವರ್ತಿಸುತ್ತಾರೆ. ಸರಿಯಾಗಿ ಬೆಳೆ ಬಾರದೆ ಕರ್ನಾಟಕದ ಅರ್ಥ ವ್ಯವಸ್ಥೆಯು ಕುಸಿಯುತ್ತದೆ. ಅಂತಹ ಸಮಯದಲ್ಲಿ ಇರುವ ರಾಜ್ಯ ಸರ್ಕಾರ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಕೇಂದ್ರಸರ್ಕಾರದ ಕಾಲನ್ನು ಹಿಡಿಯುತ್ತದೆ. ಒಟ್ಟಿನಲ್ಲಿ ಅನೇಕ ಜನರು ನಿರುದ್ಯೋಗಿಗಳಾಗುತ್ತಾರೆ. ಈಗ ಯಾರನ್ನು ಅಪರಾಧಿ ಎನ್ನಬೇಕು..? ಸರ್ಕಾರವನ್ನೋ, ಕಾವೇರಿ ನದಿಯನ್ನು ಉಪಯೋಗಿಸುತ್ತಿರುವ ಜನರನ್ನೋ, ಇಲ್ಲ ಬರಗಾಲ ಬರಿಸುತ್ತಿರುವ ದೇವರನ್ನೋ…?

ಈಗ ಮಾಡಬೇಕಾದ ಮೊದಲ ಕೆಲಸ ಏನೆಂದರೆ. ಮೊದಲು ವಿದ್ಯಾರ್ಥಿಗಳು ಕಾವೇರಿ ಉಳಿಸಿ ಅಭಿಯಾನವನ್ನು ಪ್ರಾರಂಭಿಸಬೇಕು. ರೈತ ಸಂಘ, ಕರವೇ, ವಿವಿಧ ರಾಜಕೀಯ ಪಕ್ಷಗಳು, ಹಾಗೂ ಕನ್ನಡ ನಾಡಿನ ವಿವಿಧ ಸಂಘಗಳು ಕೂಡ ಇದಕ್ಕೆ ಸಾಥ್ ಕೊಡುತ್ತವೆ ಎಂದು ೧೦೦% ನಂಬಿಕೆ ನನಗೆ ಇದೆ. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ನಮ್ಮ ನದಿಯ ನೀರನ್ನು ಮೊದಲು ನಾವು ಬಳಸಿ ಉಳಿದ ನೀರನ್ನು ಮಾತ್ರ ಪರರಾಜ್ಯಕ್ಕೆ ಬಿಡಬೇಕು. ಇಲ್ಲದಿದಲ್ಲಿ ನಮ್ಮ ಮುಂದಿನ ಪೀಳಿಗೆಯ ಗತಿ ಅಧೋಗತಿಯಾಗುತ್ತದೆ. ಇದಕ್ಕಾಗಿ ವಿವಿಧ ರೀತಿಯ ವಿನೂತನ ಪ್ರತಿಭಟನೆಗಳನ್ನು ಪ್ರತಿದಿನ ಹಮ್ಮಿಕೊಳ್ಳಬೇಕು. ಈ ಮೇಲಿನ ವಿಷಯಗಳನ್ನು ಓದಿದ ಮೇಲೂ ಕಾವೇರಿ ಎಷ್ಟು ಪ್ರಮಾಣದಲ್ಲಿ ಉಳಿಯುತ್ತದೋ ಕಾದು ನೋಡಬೇಕು…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top