fbpx
News

ನಮ್ಮ ಸಂಸದರು ಏನು ಮಾಡುತ್ತಾರೆ?

ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧಪಟ್ಟಂತೆ ಮಂಗಳವಾರ ಸುಪ್ರೀಂಕೋರ್ಟ್‍ನಿಂದ ಹೊರಬಿದ್ದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು, ಅದರಲ್ಲಿಯೂ ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರು ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲದ ಪ್ರಶ್ನೆ ಜನಸಮಾನ್ಯರಲ್ಲಿ ಮೂಡಿದೆ.

ಕಾವೇರಿ ಪ್ರಾಂತ್ಯದ ಜಲಾಶಯಗಳಲ್ಲಿ ಬೆಳೆಗೆ ಮತ್ತು ಕುಡಿಯುವ ಉದ್ದೇಶಕ್ಕೆ ನೀರಿಲ್ಲದ ಹೊತ್ತಿನಲ್ಲಿ ತಮಿಳುನಾಡಿಗೆ ಸೆ.27ರವರೆಗೆ 6 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಸುಪ್ರೀಂ ನೀಡಿರುವ ಆದೇಶ ರಾಜ್ಯದ ಪಾಲಿಗೆ ಮರ್ಮಾಘಾತಕವಾಗಿದ್ದು ನಮ್ಮ ಸಂಸದರು ಇನ್ನದರೂ ಎಚ್ಚೆತ್ತುಕೊಂಡು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತದ ಹೇರುತ್ತಾರಾ? ಹಾಗೆ ಒತ್ತಡ ಹೇರುವ ಮಾರ್ಗೋಪಾಯವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರಾ? ಎಂಬ ಪ್ರಶ್ನೆ ಸಹಜವಾಗಿದೆ.

ಕಾವೇರಿ ಪ್ರಾಂತ್ಯದ ಸಂಕಷ್ಟ ಹಾಗೂ ಸುಪ್ರೀಂ ತೀರ್ಪಿನ ಬಗ್ಗೆ ನಮ್ಮ ಬಹುತೇಕ ಸಂಸದರು ಮೌನ ಮುರಿದಿದ್ದು ಕಡಿಮೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಸಂದರ್ಭ ಒದಗಿದಾಗ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಧೈರ್ಯವಾಗಿ ಹೇಳಿದವರು ಕಡಿಮೆ. ದೇಶದವನ್ನು ಆಳುವ ಬಿಜೆಪಿಗೆ ಸೇರಿದ 17 ಸಂಸದರಂತೂ ಬಾಯಿ ಬಿಟ್ಟಿಲ್ಲ. ಸಂದರ್ಭ ಸಿಕ್ಕಿದಾಗಲೆಲ್ಲಾ ಪ್ರಧಾನಿ ಮಧ್ಯಪ್ರವೇಶ ಅನಗತ್ಯ ಎಂದು ಹೇಳುತ್ತಲೇ ಬಂದಿದ್ದಾರೆ, ಮಹದಾಯಿ ವಿಷಯದಲ್ಲಿಯೂ ಅದೇ ಗಿಳಿಪಾಠ ಒಪ್ಪಿಸಿದ್ದಾರೆ.

ಮಂಡ್ಯದ ಜೆಡಿಎಸ್ ಸಂಸದ ಪುಟ್ಟರಾಜು ಮಂಗಳವಾರ ತಮ್ಮ ರಾಜೀನಾಮೆ ಪ್ರಕಟಿಸಿದ್ದು ಇಂತಹ ಕ್ರಮವನ್ನು ಎಷ್ಟು ಜನ ಕೈಗೊಳ್ಳುತ್ತಾರೆ. ಇಂತಹ ತಂತ್ರದ ಮೂಲಕ ಕೇಂದ್ರದ ಮೇಲೆ ಒತ್ತಡ ತರಬಹುದು ಎಂದು ಭಾವಿಸುತ್ತಾರೆ. ರಾಜ್ಯದ ಎಲ್ಲಾ 28 ಸಂಸದರೂ ಪಕ್ಷಬೇಧ ಮರೆತು ರಾಜ್ಯದ ಹಿತ ಕಾಪಾಡಲು ರಾಜೀನಾಮೆ ತಂತ್ರ ಅನುಸರಿಸುತ್ತಾರೋ? ಅಥವಾ ದಿವ್ಯ ಮೌನಕ್ಕೆ ಶರಣಾಗುತ್ತಾರೋ? ಎಂಬ ಪ್ರಶ್ನೆಯನ್ನು ಜನ ಕೇಳತೊಡಗಿದ್ದಾರೆ.

ಮಂಡಳಿ ರಚನೆ

ಮಂಗಳವಾರ ತೀರ್ಪಿನಲ್ಲಿ ಹೊರಬಿದ್ದ ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದೇಶ ರಾಜ್ಯದ ಪಾಲಿಗೆ ಮಾರಕ ಎಂದು ವಿಶ್ಲೇಷಿಸಲಾಗುತ್ತಿದೆ. ಮಂಡಳಿ ರಚನೆಯನ್ನು ರಾಜ್ಯ ವಿರೋಧಿಸುತ್ತಲೇ ಬಂದಿತ್ತು. ಮಂಡಳಿ ರಚನೆ ಆದರೆ ತಮಿಳುನಾಡು ಬಲ ಹೆಚ್ಚುತ್ತದೆ. ಮಂಡಳಿಗೆ ಕೃಷಿ, ನೀರಾವರಿ ಮತ್ತಿತರ ತಜ್ಞರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ. ಕಾವೇರಿಕೊಳ್ಳದ ಎಲ್ಲಾ ಜಲಾಶಗಳು ಮಂಡಳಿ ವ್ಯಾಪ್ತಿಗೆ ಬರುತ್ತವೆ.

ಇಂತಹ ಸನ್ನಿವೇಶದಲ್ಲಾದರೂ ನಮ್ಮ ಸಂಸದರು ಪ್ರಧಾನಿ ಮಧ್ಯಪ್ರವೇಶದ ಅಗತ್ಯವನ್ನು ಕಂಡುಕೊಳ್ಳಬಹುದಾ? ಎನ್ನುವುದು ಪ್ರಶ್ನೆ. ಕಾವೇರಿ ಇರಲಿ, ಮಹದಾಯಿ ಇರಲಿ, ಸರ್ವಪಕ್ಷ ಸಭೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸುವ ರಾಜಕೀಯ ಪಕ್ಷಗಳು ಮುಖಂಡರು ಮುಂದೆ ಇಡುವ ಹೆಜ್ಜೆ ಬಗ್ಗೆ ರಾಜ್ಯದ ಜನರಲ್ಲಿ ಸಹಜ ಕುತೂಹಲ ಮೂಡಿದೆ.

ಬಾಯಿ ಬಿಡುತ್ತಾರಾ?

ಕಾವೇರಿ ವಿವಾದದ ಹಿನ್ನೆಲೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಬಾಯಿ ಬಿಡುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿ ಇದೆ. ಅನಂತ್ ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ ಹಾಗೂ ರಾಜ್ಯಸಭೆಯಿಂದ ಆಯ್ಕೆಯಾಗಿ ಹೋದ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಮೋದಿ ಸರ್ಕಾರದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಆದರೆ ಇವರು ಮೌನಕ್ಕೆ ಶರಣಾಗಿದ್ದಾರೆ. ಪ್ರಧಾನಿ ಮಧ್ಯಪ್ರವೇಶ ಅಗತ್ಯ ಇಲ್ಲ ಎನ್ನುವ ಹೇಳಿಕೆ ಬಿಟ್ಟರೆ ನಮ್ಮ ಸಂಕಷ್ಟದ ಬಗ್ಗೆ ಮಾತನಾಡುತ್ತಿಲ್ಲ ಎಂಬ ಅಳಲು ಶ್ರೀಸಾಮಾನ್ಯದು.

ಈ ಹಂತದಲ್ಲಿ ಈ ಸಚಿವರು ಏನು ಮಾಡುತ್ತಾರೆ. ಈಗಲಾದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶದ ಅನಿವಾರ್ಯತೆ ಅರಿಯುತ್ತಾರಾ?. ಪ್ರಧಾನಿ ಅವರನ್ನು ಭೇಟಿಯಾಗಿ ಈ ಬಗ್ಗ ಅವರಿಗೆ ಮನವರಿಕೆ ಮಾಡುತ್ತಾರಾ? ಮಂಡಳಿ ರಚನೆಯಿಂದ ರಾಜ್ಯದ ಭವಿಷ್ಯದ ಮೇಲಾಗುವ ಪರಿಣಾಮದ ಬಗ್ಗೆ ಚಿಂತಿಸುತ್ತಾರಾ? ಅಥವಾ ಅದೇ ದಿವ್ಯ ಮೌನ ಮುಂದುವರಿಸುತ್ತಾರಾ? ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top