fbpx
Karnataka

ಸಿ.ಎಂ ಕಠಿಣ ನಿರ್ಧಾರಕ್ಕೆ ಮನದುಂಬಿ ಶ್ಲಾಘಿಸಿದ ಎಸ್.ಎಂ. ಕೃಷ್ಣ

ಬೆಂಗಳೂರು, ಸೆ.22: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್ಸೆಂ ಕೃಷ್ಣರನ್ನು ಬುಧವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಕಾವೇರಿ ವಿಷಯವಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಹಾಗೂ ಮುಂದೆ ತೆಗೆದುಕೊಳ್ಳುಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸರ್ಕಾರದ ನಿಲುವುಗಳಿಗೆ ಎಸ್.ಎಂ.ಕೃಷ್ಣ ಅವರು ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಸೂಕ್ತ ಸಮಯದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದೀರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

s-m-k-cm

ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಬೆಂಗಳೂರು ಹಾಗೂ ಇತರೆ ನಗರಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ತೀವ್ರ ಹದಗೆಟ್ಟಿರುವಾಗ ವಾಸ್ತವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡಬೇಕು ಎಂದು ತೀರ್ಪು ನೀಡಿರುವುದು ಸರಿಯಲ್ಲ ಎಂದರು.

s-m-k

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆಯೂ ಸಲಹೆ ನೀಡಿದ್ದಾರೆ. ಜಲಾನಯನ ಪ್ರದೇಶಗಳ ಹೂಳು ತೆಗೆಸಿ, ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಪಡೆದ ಸಾಲದ ಮೇಲಿನ ಬಡ್ಡಿ ಮನ್ನ ಮಾಡಿ, ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಪರಿಹಾರ ನೀಡಿ ಎಂದು ಇದೇ ವೇಳೆ ಎಸ್.ಎಂ.ಕೃಷ್ಣ ಅವರು ಸಿಎಂಗೆ ಸಲಹೆ ನೀಡಿದರು.

cm2

ಸರಿಯಲ್ಲದ ತೀರ್ಪನ್ನು ನಾವು ವಿರೋಧಿಸಲೇಬೇಕಿದೆ. ಕಾನೂನೇ ನ್ಯಾಯ ಬಾಹೀರವಾದಾಗ ಕಾನೂನು ಉಲ್ಲಂಘನೆಯೇ ನಮ್ಮ ಪರಮ ಧರ್ಮ ಎಂದು ಮಹಾತ್ಮಗಾಂಧಿ ಹೇಳಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಈ ನೆಲೆಗಟ್ಟಿನಲ್ಲಿ ನೋಡಬೇಕಿದೆ ಎಂದು ತಿಳಿಸಿದರು. ವಿಧಾನಮಂಡಲದಲ್ಲಿ ಎಲ್ಲಾ ಪಕ್ಷಗಳು ಸರ್ಕಾರದ ನಿಲುವನ್ನು ದೃಢೀಕರಿಸಿ ಕೇಂದ್ರ ಹಾಗೂ ನ್ಯಾಯಾಲಯಕ್ಕೆ ನಮ್ಮ ನಿಲುವನ್ನು ತಲುಪಿಸಬೇಕು. ಕುಡಿಯುವ ನೀರಿನ ಅಗತ್ಯತೆಗಾಗಿ ಮುಖ್ಯಮಂತ್ರಿ ಅವರು ತೆಗೆದುಕೊಂಡಿರುವ ನಿರ್ಧಾರಗಳು ಸರಿಯಾಗಿದೆ ಎಂದು ಹೇಳಿದರು.

2003ರಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ರೈತರ ಬೆಳೆ ಹಾನಿಗೆ ನಮ್ಮ ಸರ್ಕಾರ 38 ಕೋಟಿ ರೂ.ಗಳ ಪರಿಹಾರ ನೀಡಿತ್ತು. ಈಗಿನ ಸರ್ಕಾರವೂ ರೈತರಿಗೆ ಪರಿಹಾರ ನೀಡಬೇಕೆಂದು ಎಸ್.ಎಂ.ಕೃಷ್ಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಬೆಳೆ ಹಾನಿಗೆ ಪರಿಹಾರ ನೀಡುವ ಸಂಬಂಧ ಸಮೀಕ್ಷೆ ಮಾಡಲು ಸೂಚನೆ ನೀಡಿದ್ದೇನೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ ಎಂದರು. ಇಂದು ದೆಹಲಿಗೆ ತೆರಳುತ್ತಿರುವ ತಾವು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರನ್ನು ಭೇಟಿ ಮಾಡಲು ಸಮಯ ಕೇಳಿರುವುದಾಗಿ ವೇಳೆ ತಿಳಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top