fbpx
Achivers

ಚಂದ್ರನಿಗೆ ಟ್ಯಾಟೂ’ ಹಾಕಿ ಸಂಭ್ರಮಿಸೋಣ

ಅಕ್ಟೋಬರ್ ೧ ರಂದು ಧಾರವಾಡದ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿರುವ ಕೃತಿ

ಬಾಲ್ಯದಲ್ಲಿ ಚಂದ್ರ ಎಲ್ಲರಿಗೂ ಕಲ್ಪನಾ ಆಟಿಕೆಯ ವಸ್ತು. ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಬಾವಿಯಲ್ಲಿ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಮೇಲಕ್ಕೆತ್ತಿದ ಮೂರನೇ ತರಗತಿಯಲ್ಲಿನ ಕನ್ನಡ ಪಠ್ಯದಲ್ಲಿನ ಪದ್ಯ ಬಹುತೇಕ ಎಲ್ಲರಿಗೂ ಜನಜನಿತ. ಗೋಪಿ ಮತ್ತು ಪುಟ್ಟು ಬಾವಿಯಲ್ಲಿ ಬಿದ್ದ ಚಂದ್ರನನ್ನು ಮೇಲೆಕ್ಕೆತ್ತಿದ ನಂತರ ’ಛಾಯಾ ಭಗವತಿ’ಯವರು ಆ ಚಂದ್ರನಿಗೆ ಸುಂದರವಾದ ಟ್ಯಾಟೂ ಹಾಕಲು ಹೊರಟಿದ್ದಾರೆ.

unnamed-6
ಜಮಾನ ಬದಲಾದಂತೆ ನಮ್ಮ ಜೀವನ ಶೈಲಿಯೂ ಬದಲಾಗುತ್ತಾ ಬಂದಿದೆ. ಆದಾಗ್ಯೂ ಚಂದ್ರನೊಂದಿಗಿನ ನಮ್ಮ ನಂಟು ಮಾತ್ರ ಬದಲಾಗಿಲ್ಲ ಎಂಬುದಕ್ಕೆ ಕಾಲಾಂತರದಲ್ಲಿ ಮೂಡಿಬಂದ ಅನೇಕ ಕವಿತೆಗಳು ಸಾಕ್ಷಿಯಾಗಿವೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಫ್ಯಾಷನ್ನಿನ ಒಂದು ಭಾಗವಾಗಿರುವ ಟ್ಯಾಟೂ ಚಂದ್ರನಿಗೂ ಇಷ್ಟವಾಗುತ್ತದೆ. ಇದೇ ಆಶಯವನ್ನು ’ಚಂದ್ರನಿಗೆ ಟ್ಯಾಟೂ’ ಎಂಬ ಮಕ್ಕಳ ಕವನ ಸಂಕಲನದ ಮೂಲಕ ಛಾಯಾ ಭಗವತಿಯವರು ವ್ಯಕ್ತ ಪಡಿಸುತ್ತಾರೆ.
ಇಲ್ಲಿನ ಕವಿತೆಗಳನ್ನು ಓದುತ್ತಾ ಕುಳಿತರೆ ಬಾಲ್ಯದ ಆಟ,,, ಆ,,, ಹುಡುಗಾಟ ಇನ್ನೂ ಮಾಸಿಲ್ಲ ಎಂಬ ಚಿತ್ರಗೀತೆ ಮನದಲ್ಲಿ ರಿಂಗಣಿಸುತ್ತದೆ. ಬಾಲ್ಯದಲ್ಲಿ ನೋಡಿದ ನೋಟ, ಆಡಿದ ಆಟ, ನೀಡಿದ ಕಾಟ ಎಲ್ಲವೂ ರಸಗವಳದಂತೆ ಕವಿತೆಗಳಾಗಿ ರೂಪು ತಳೆದಿವೆ.
ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕಳೆದ ಮೂರ‍್ನಾಲ್ಕು ದಶಕಗಳ ಹಿಂದಿನ ಬಾಲ್ಯದ ಗತವೈಭವದ ಜೊತೆಗೆ ನವೀನ ಜೀವನಶೈಲಿಯನ್ನು ತಳಕು ಹಾಕುವ ಪ್ರಯತ್ನ ಮನಸ್ಸಿಗೆ ಮುದ ನೀಡುತ್ತದೆ. ಅಜ್ಜ ಮತ್ತು ಪಿಜ್ಜಾ ಎಂಬ ಕವನದ ಈ ಸಾಲುಗಳು ಅದನ್ನು ವಿಶದೀಕರಿಸುತ್ತವೆ.
’ಅಯ್ಯೋ ಪುಟ್ಟಾ ತಿನ್ನಬೇಕೇ ಕಾಸು ಕೊಟ್ಟು ರಬ್ಬರು,
ಎಂದ ಅಜ್ಜ ಬೊಚ್ಚು ಬಾಯನಗಲಿಸುತ್ತ ನಕ್ಕರು
ಅವ್ವ ಮಾಡೋ ಅಕ್ಕಿ ರೊಟ್ಟಿ ಕಾಯಿಚೆಟ್ನಿ ಅದ್ಭುತ
ತಾಯ ತುತ್ತಿನಲ್ಲಿ ಇರುವ ಪ್ರೀತಿ ಮಮತೆ ಬಲು ಹಿತ!
ಆಧುನಿಕ ಆಹಾರಗಳ ಪರಿಣಾಮವನ್ನು ಮನೆ ಆಹಾರದ ಪದಾರ್ಥಗಳೊಂದಿಗೆ ತಳುಕುಹಾಕಿ ಮಕ್ಕಳಿಗೆ ಆಧುನಿಕ ಆಹಾರಗಳಿಂದಾಗುವ ಅನಾಹುತಗಳ ಬಗ್ಗೆ ಒಬ್ಬ ತಾಯಿಯಾಗಿ ತಿಳಿಹೇಳುತ್ತಾರೆ.
ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹೊಂದಿಸಿ ಬರೆಯಿರಿ ಎಂಬ ವಿಧದ ಪ್ರಶ್ನೆ ಇರುತ್ತದೆ. ಇದು ಕೇವಲ ಪರೀಕ್ಷೆಗೆ ಮಾತ್ರ ಸೀಮತವಲ್ಲ. ನಮ್ಮ ಜೀವನವನ್ನು ನಾವೇ ಹೇಗೆ ಹೊಂದಿಸಿಕೊಳ್ಳಬೇಕು ಎಂಬುದನ್ನು ’ಹೊಂದಿಸಿ ಬರೆಯಿರಿ’ ಕವಿತೆ ಹೇಳುತ್ತದೆ.
’ಏರು ಪೇರು ಇಲ್ಲಿಯೂ ಉಂಟು
ಹೊಂದಿಕೆ ಬದುಕಿಗೆ ಬೇಕಿಹ ಅಂಟು
ನಗುವಳುವೆರಡರ ಗಂಟನು ಹೊತ್ತು
ನಡೆವುದೇ ಅನುಬಂಧ!’ ಎಂದು ಹೊಂದಿಕೆಯ ಮಹತ್ವವನ್ನು ಈ ಸಾಲುಗಳು ಮನದಟ್ಟು ಮಾಡುತ್ತವೆ. ಅಮ್ಮನ ಹಣೆಬೊಟ್ಟು ಹಾಲುಕುಡಿವ ಮಗುವಿಗೆ ಆಟಿಕೆಯ ವಸ್ತು. ಹಿಂದಿನ ಕಾಲದ ಅಮ್ಮಂದಿರು ಇಡುತ್ತಿದ್ದ ಕಾಸಗಲದ ಹಣೆಬೊಟ್ಟು ಇಂದು ರೇಖಾಗಣಿತದ ವಿವಿಧ ಆಕೃತಿಗಳಾಗಿ ಮಾರ್ಪಟ್ಟಿರುವುದನ್ನು ’ಅಮ್ಮನ ಟಿಕಳಿ’ ಪ್ರಸ್ತುತ ಪಡಿಸುತ್ತದೆ.
ನಾವು ತಿನ್ನುವ ಪ್ರತಿ ಅಗುಳಿನ ಹಿಂದೆ ರೈತರ, ಕೂಲಿಯವರ ಅಗಾಧ ಶ್ರಮ ಅಡಗಿರುತ್ತದೆ. ಹಾಗಾಗಿ ಅದನ್ನು ಅನಗತ್ಯವಾಗಿ ಚೆಲ್ಲಬಾರದು ಎಂಬ ಪಾಠವನ್ನು ’ಅನ್ನ,,,’ ಎಂಬ ಕವಿತೆ ಕಲಿಸುತ್ತದೆ.
’ತಟ್ಟೆ ಯಾವುದಾದರೇನು
ಉಣುವ ಅನ್ನ ಕೆಡದೇ ಇರಲಿ
ತುತ್ತ ಹಿಂದೆ ಇದ್ದೇ ಇದೆ
ದುಡಿಮೆಯ ಬೆವರು’ ಎಂದು ತಿನ್ನುವ ಆಹಾರವನ್ನು ಶುಚಿಯಾಗಿಟ್ಟುಕೊಂಡು ಬಳಸಬೇಕೆಂಬ ಪಾಠ ಮೂಡಿಬಂದಿದೆ. ಇಲ್ಲಿನ ಕೆಲವು ಪದ್ಯಗಳಲ್ಲಿ ಅಚ್ಚರಿಯ ಸಂಗತಿಗಳು ಪ್ರಶ್ನೆಯಾಗಿ ಕಾಡಿವೆ. ’ಬಂಬೈ ಮಿಠಾಯಿ’ ಎಂಬ ಪದ್ಯದಲ್ಲಿನ ಬಿಳಿಯ ಬಣ್ಣದ ಸಕ್ಕರೆ ಹೇಗೆ ಗುಲಾಬಿ ಮೋಡವಾಗುವುದು? ಎಂದು ಪ್ರಶ್ನಿಸುತ್ತಾ ಬಾಂಬೆ ಮಿಠಾಯಿಯ ಸ್ವಾದ ಓದುಗರಿಗೆ ಬಾಯಲ್ಲಿ ನೀರೂರಿಸುತ್ತದೆ.
ಹುಟ್ಟಿದ ಹಬ್ಬದಂದು ತಂದೆ ತಾಯಿ ಬಂಧು ಬಳಗ ’ಹ್ಯಾಪಿ ಬರ್ತಡೇ ಪುಟ್ಟಾ’ ಎಂದು ಹೇಳಿ ಆಕರ್ಷಕ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಉಡುಗೊರೆಯಾಗಿ ಬಂದು ಜ್ಞಾನ ಲೋಕವನ್ನು ಅನಾವರಣಗೊಳಿಸಿದ ಆ ಪುಸ್ತಕವನ್ನು ’ಉಡುಗೊರೆ’ ಕವನದಲ್ಲಿ ನೆನೆಯುತ್ತಾರೆ.
’ಚಂದ್ರನಿಗೆ ಟ್ಯಾಟೂ’ ಎನ್ನುವ ಕವಿತೆಯಲ್ಲಿ ’ಪೆಪ್ಸಿ ಕೋಲಾ ಪೇಯದ ಬದಲು ಕೋಕೊ ಜ್ಯೂಸು ಕುಡಿಸೋಣ, ಅದು ಬೇಡವೆಂದರೆ ಪಾನಕ ಲಸ್ಸಿ ಬಾದಾಮಿ ಹಾಲು ನೀಡೋಣ’ ಎನ್ನುವ ಮೂಲಕ ಆಧುನಿಕ ಜೀವನಶೈಲಿಗೆ ಮಾರಕವಾದ ಪೇಯಗಳಿಂದ ದೂರವಿರಲು ತಿಳಿಸುತ್ತಾರೆ.
ಮಕ್ಕಳ ಮೊದಲ ಬರವಣಿಗೆಯೆಂದರೆ ಅರೆ-ಬರೆ ಗೆರೆ. ಮಗು ಇಂತಹ ಅರೆ-ಬರೆ ಗೆರೆಯ ಮೂಲಕ ತನ್ನ ಭಾವನೆಗಳನ್ನು ಹೊರಹಾಕುತ್ತದೆ. ಇದನ್ನು ’ಗೋಡೆ ಚಿತ್ರ’ ಎನ್ನುವ ಕವಿತೆ ಸಾಕ್ಷೀಕರಿಸುತ್ತದೆ. ಹೀಗೆ ವಿವಿಧ ಕವನಗಳ ಮೂಲಕ ಛಾಯಾ ಭಗವತಿಯವರು ಬಾಲ್ಯದ ನೆನಪುಗಳನ್ನು ಅಚ್ಚಳಿಯದಂತೆ ಗಟ್ಟಿಗೊಳಿಸಿದ್ದಾರೆ. ಇಲ್ಲಿ ಬಳಸಿದ ಭಾಷೆ ಮಗುವಿನ ಭಾಷೆಗೆ ತೀರಾ ಸನಿಹವಾದ್ದರಿಂದ ಮಕ್ಕಳು ಈ ಪದ್ಯಗಳನ್ನು ಪದೇ ಪದೇ ಗುನುಗುನಿಸಲು ಅಪ್ಯಾಯ ಎನಿಸುವಂತಿವೆ.
’ಚಂದ್ರನಿಗೆ ಟ್ಯಾಟೂ’ದಲ್ಲಿ ಒಟ್ಟು ಮೂವತ್ತು ಕವನಗಳಿದ್ದು ಪ್ರತೀ ಕವನವೂ ಒಂದೊಂದು ಮುತ್ತಿನ ಮಣಿಯಂತೆ ಫಳಫಳನೆ ಹೊಳೆಯುತ್ತವೆ. ಪ್ರತೀ ಕವನವೂ ಒಂದೊಂದು ನಿರ್ದಿಷ್ಟ ಘಟನೆ, ವಸ್ತು, ಪ್ರಾಣಿ, ಪಕ್ಷಿ ಆಧರಿಸಿ ಹೆಣೆದಿದ್ದರೂ ಅಲ್ಲಿ ಬಾಲ್ಯದ ಅಗಾಧತೆ, ಮುಗ್ದತೆ, ಸ್ನಿಗ್ದತೆ ಎದ್ದು ಕಾಣುತ್ತದೆ. ಮಗುವಿನ ಮನಸ್ಸಿನಲ್ಲಿ ಮೂಡುವ ಪ್ರಕೃತಿದತ್ತ ಪ್ರಶ್ನೆಗಳಿಗೆ ಉತ್ತರವಾಗಿ ಹೊರಹೊಮ್ಮಿದೆ. ಟಿ.ವಿ, ಮೊಬೈಲು, ವೀಡಿಯೋ ಗೇಮ್‌ಗಳಲ್ಲೇ ಕಳೆದು ಹೋಗುತ್ತಿರುವ ಮಗುವಿನ ಬಾಲ್ಯವನ್ನು ಗ್ರಾಮೀಣ ಬದುಕಿನೊಂದಿಗೆ ತಳಕುಹಾಕಿ ಸುಂದರಗೊಳಿಸಲು ವಹಿಸಿರುವ ಶ್ರಮ ಸಾರ್ಥಕ ಎನಿಸದಿರದು.
ಪ್ರಸ್ತುತ ಬಳ್ಳಾರಿ ಜಿಲ್ಲಾ ಹಗರಿಬೊಮ್ಮನಹಳ್ಳಿಯಲ್ಲಿ ವಾಸವಾಗಿರುವ ಛಾಯಾ ಭಗವತಿಯವರು ಪದವೀಧರೆಯಾಗಿ ತುಂಬು ಸಂಸಾರದಿಂದ ಬೆಳೆದುಬಂದಿದ್ದು, ಸಂತೋಷಮಯ ಜೀವನ ನಡೆಸುವ ಜೊತೆಗೆ ಮಕ್ಕಳ ಮನಸನ್ನು ಅರ್ಥೈಸಿಕೊಂಡ ಮಮತೆಯ ಕಡಲಾಗಿದ್ದಾರೆ ಎಂಬುದಕ್ಕೆ ಅವರ ’ಚಂದ್ರನಿಗೆ ಟ್ಯಾಟೂ’ ಎಂಬ ಮಕ್ಕಳ ಕವನ ಸಂಕಲನವೇ ಸಾಕ್ಷಿ.
’ಚಂದ್ರನಿಗೆ ಟ್ಯಾಟೂ’ ಎನ್ನುವ ಶೀರ್ಷಿಕೆ ಎಷ್ಟೊಂದು ಆಪ್ಯಾಯಮಾನವೋ ಇಲ್ಲಿನ ಮುಖಪುಟವೂ ಅಷ್ಟೇ ಮನಸ್ಸಿಗೆ ಮುದ ನೀಡುತ್ತದೆ. ಒಳಪುಟಗಳ ಚಿತ್ರಗಳಂತೂ ಮಕ್ಕಳಿಗೆ ಕೌತುಕವನ್ನು ಹುಟ್ಟಿಸಿ ತಾವೂ ಚಿತ್ರ ಬಿಡಿಸಬೇಕೆಂಬ ಪ್ರೇರಣೆ ನೀಡುತ್ತವೆ. ಕೆ.ಟಿ.ಗಟ್ಟಿಯವರ ಅರ್ಥಗರ್ಭಿತ ಮುನ್ನುಡಿ, ಜಿ.ಪಿ.ಬಸವರಾಜು ಅವರ ಬೆನ್ನುಡಿಗಳು ಕವನ ಸಂಕಲಕ್ಕೊಂದು ಹೊಸ ಮೆರಗನ್ನು ನೀಡಿವೆ. ಮಕ್ಕಳ ಪ್ರಗತಿಯೇ ದೇಶದ ಪ್ರಗತಿ ಎಂಬುದನ್ನು ದೃಢಪಡಿಸಲು ಪ್ರಕಟಣೆಯ ಹೊಣೆ ಹೊತ್ತ ಆಹ್ವಾನ ಪ್ರಕಾಶನದ ಮೇಟಿ ಕೊಟ್ರಪ್ಪನವರ ಆಶಯವು ಈಡೇರಲಿ ಎಂಬುದೇ ನಮ್ಮೆಲ್ಲರ ಬಯಕೆ.
ಆರ್.ಬಿ.ಗುರುಬಸವರಾಜ ಹೊಳಗುಂದಿ
ಹೊಳಗುಂದಿ (ಪೊ)
ಹೂವಿನ ಹಡಗಲಿ(ತಾ) ಬಳ್ಳಾರಿ(ಜಿ)
೫೮೩೨೧೮೯
೯೯೦೨೯೯೨೯೦೫
ಪುಸ್ತಕ ಪರಿಚಯ: ಶೀರ್ಷಿಕೆ : ಚಂದ್ರನಿಗೆ ಟ್ಯಾಟೂ(ಮಕ್ಕಳ ಕವಿತೆಗಳು) ಲೇಖಕರು : ಛಾಯಾ ಭಗವತಿ ಪ್ರಕಾಶಕರು : ಆಹ್ವಾನ ಪ್ರಕಾಶನ ಬಸರಕೋಡು. ಹಗರಿಬೊಮ್ಮನಹಳ್ಳಿ(ತಾ) ಬಳ್ಳಾರಿ(ಜಿ) ಪುಟಗಳು : ೬೪ ಬೆಲೆ : ೭೦ ರೂಪಾಯಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top