fbpx
god

ರಾಜಸ್ಥಾನದಲ್ಲಿ ತ್ರಿನೇತ್ರ ಗಣಪ ವಿರಾಜಮಾನ!

ಧರ್ಮದಲ್ಲಿ ಪ್ರಚಲಿತದಲ್ಲಿರುವಂತೆ ಯಾವುದೆ ದೇವ ಪೂಜೆ ಹಾಗೂ ಶುಭ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಮುಂಚೆ ಶ್ರೀ ಗಣೇಶನನ್ನು ನೆನೆಯಲಾಗುತ್ತದೆ ಅಥವಾ ಮೊದಲು ಪೂಜಿಸಲಾಗುತ್ತದೆ. ನಡೆಯುವ ಕಾರ್ಯದಲ್ಲಿ ಯಾವುದೆ ರೀತಿಯ ವಿಘ್ನಗಳು ಉಂಟಾಗದಿರಲು ಅಥವಾ ಅಡೆ ತಡೆಗಳನ್ನು ನಿವಾರಿಸಲು ವಿಘ್ನಗಳ ಹರ್ತಾ ವಿಘ್ನೇಶ್ವರನನ್ನು ಪೂಜಿಸಲಾಗುತ್ತದೆ.

ganesh_temple_ranthambore_fort1

ಇನ್ನೂ ಗಣೇಶನಿಗೆ ಸಂಬಂಧಿಸಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಾರತದಾದ್ಯಂತ ದೇವಾಲಯಗಳಿರುವುದನ್ನು ಕಾಣಬಹುದು. ಪ್ರತಿ ರಾಜ್ಯಗಳಲ್ಲೂ ಗಣೇಶನಿಗೆ ಮುಡಿಪಾದ ಹಲವಾರು ವಿಶಿಷ್ಟ ದೇವಾಲಯಗಳಿವೆ. ಪುರಾತನ ಕೋಟೆಗಳ, ಅರಮನೆಗಳ ರಾಜ್ಯವೆಂದೆ ಪ್ರಖ್ಯಾತಿಗಳಿಸಿದ ರಾಜಸ್ಥಾನದಲ್ಲೂ ಸಹ ಹೆಸರುವಾಸಿಯಾದ ಒಂದು ವಿಶೇಷವಾದ ಗಣೇಶನ ದೇವಾಲಯವಿದೆ.

ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಗಣೇಶನಿಗೆ ಕೇವಲ ಎರಡು ಕಣ್ಣುಗಳಿದ್ದರೆ, ಈ ಗಣೇಶನಿಗೆ ಅಪ್ಪನ ಹಾಗೆ ಮೂರು ಕಣ್ಣುಗಳಿವೆ. ಹಾಗಾಗಿ ಇತನನ್ನು ತ್ರಿನೇತ್ರ ಗಣೇಶನೆಂದೆ ಕರೆಯುತ್ತಾರೆ. ಇದೊಂದು ವಿಶೇಷವಾದರೆ ಈ ಗಣೇಶನ ಮತ್ತೊಂದು ವಿಶೇಷತೆಯಿದೆ. ಆ ಕಾರಣದಿಂದಾಗಿಯೂ ರಾಜ್ಯದಲ್ಲೆ ಹೆಚ್ಚು ಪ್ರಸಿದ್ಧಿ ಪಡೆದ ಗಣೇಶ ಇವನಾಗಿದ್ದಾನೆ.

ಮತ್ತೊಂದು ವಿಶೇಷವೆಂದರೆ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವಂತೆ ಇಲ್ಲಿ ಗಣೇಶ ಒಬ್ಬನೆ ವಿರಾಜಿಸಿಲ್ಲ. ಹೌದು, ಈ ದೇವಾಲಯದಲ್ಲಿ ಗಣೇಶ ತನ್ನ ಕುಟುಂಬದೊಡನೆ ನೆಲೆಸಿದ್ದಾನೆ ಹಾಗೂ ತನ್ನನ್ನು ಹರಸಿಕೊಂಡು ಬರುವ ಎಲ್ಲ ಭಕ್ತಾದಿಗಳ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡುತ್ತಾನೆ.

ಈ ಗಣೇಶನಿಗೆ ಸಂಬಂಧಿಸಿದ ಹಾಗೆ ಇನ್ನೊಂದು ವಿಶೇಷ ಆಚರಣೆ ಪ್ರಚಲಿತದಲ್ಲಿದೆ ಆ ಪ್ರಕಾರವಾಗಿ ಇವನಿಗಿರುವ ಅಪಾರ ಪ್ರಮಾಣದ ಭಕ್ತರಲ್ಲಿ ಯಾರ ಮನೆಯಲ್ಲಾದರೂ ಶುಭ ಕಾರ್ಯವಿದ್ದರೆ ಅದರ ಆಮಂತ್ರಣ ಪತ್ರಿಕೆಯನ್ನು ಈ ಗಣೇಶನಿಗೆ ಕಳುಹಿಸುತ್ತಾರೆ. ಈ ರೀತಿ ಮಾಡುವುದರಿಂದ ಗಣೇಶನು ಶುಭ ಕಾರ್ಯಗಳು ಯಾವುದೆ ಅಡೆ ತಡೆಗಳಿಲ್ಲದೆ ಸರಾಗವಾಗಿ ಸಾಗುತ್ತವೆ ಎಂದು ನಂಬಲಾಗುತ್ತದೆ.

13 ನೇಯ ಶತಮಾನದಲ್ಲಿ ಒಂದೊಮ್ಮೆ ಈ ಪ್ರದೇಶದ ರಾಜನಾಗಿದ್ದ ಹಮ್ಮೀರನು ಅಲ್ಲಾ ಉದ್ದೀನ್ ಖಿಲ್ಜಿಯೊಂದಿಗೆ ಯುದ್ಧ ಮಾಡಬೇಕಾದ ಸಂದರ್ಭ ಒದಗಿ ಬಂತು. ಸಾಕಷ್ಟು ಸಮಯ ಈ ಯುದ್ಧ ನಡೆಯಿತು. ರಾಜ ತಾನು ಜನರಿಗಾಗಿ ಉಗ್ರಾಣದಲ್ಲಿ ಸಂಗ್ರಹಿಸಿದ್ದ ಧಾನ್ಯಗಳು ಬರಿದಾಗತೊಡಗಿದವು ಆದರೆ ಯುದ್ಧ ಮಾತ್ರ ನಿಲ್ಲಲಿಲ್ಲ.

ಗಣೇಶನ ಅಪ್ರತಿಮ ಭಕ್ತನಾಗಿದ್ದ ರಾಜ ಗಣೇಶನನ್ನು ಮನಸಾರೆ ಪ್ರಾರ್ಥಿಸಿದ. ಆ ರಾತ್ರಿ ಗಣೇಶ ತ್ರಿನೇತ್ರನಾಗಿ ಕನಸಿನಲ್ಲಿ ಬಂದು ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆಂದು ಅಶೀರ್ವದಿಸಿ ಹೋದ. ಅದರಂತೆ ಮರು ದಿನವೆ ಪವಾಡವೆಂಬಂತೆ ಮತ್ತೆ ಧಾನ್ಯಗಳು ತುಂಬಿದ್ದವು ಹಾಗೂ ಯುದ್ಧ ನಿಂತು ರಾಜನಿಗೆ ಜಯ ಲಭಿಸಿತು.

ಇದರಿಂದ ಪ್ರಸನ್ನನಾದ ತ್ರಿನೇತ್ರಧಾರಿಯಾಗಿ ಕಾಣಿಸಿದ್ದ ಗಣೇಶನಿಗೆ ದೇವಾಲಯವೊಂದನ್ನು ನಿರ್ಮಿಸಿದ. ಅದೇ ತ್ರಿನೇತ್ರ ಗಣೇಶನ ದೇವಾಲಯ.

ranthambhore-ganesh-temple

ಪ್ರಖ್ಯಾತ ರಣಥಂಬೋರ್ ಕೋಟೆಯ ಆವರಣದಲ್ಲಿ ಗಣೇಶನ ಈ ದೇವಾಲಯವಿದೆ. ದೆಹಲಿ-ಮುಂಬೈ ರೈಲು ಮಾರ್ಗದಲ್ಲಿ ಬರುವ ಸವಾಯಿ ಮಾಧೋಪುರ್ ನಗರ ರೈಲು ನಿಲ್ದಾಣದಿಂದ ಸುಮಾರು ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲಿ ರಣಥಂಬೋರ್ ಕೋಟೆಯಿದ್ದು ಇಲ್ಲಿ ತ್ರಿನೇತ್ರ ಗಣೇಶನ ದೇವಾಲಯವಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಕೋಟೆ ಹಾಗೂ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top