fbpx
News

ಭಾರತ-ಪಾಕ್‌ ಮಧ್ಯೆ ಯುದ್ಧ ನಡೆದ್ರೆ ಏನಾಗುತ್ತೆ?

ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನ ಪ್ರಾಯೋಜಿತ ಉಗ್ರ ದಾಳಿ ಬಳಿಕ ಭಾರತ ಉರಿಯತೊಡಗಿದೆ. ಪಾಕ್‌ ಅನ್ನು ಎಲ್ಲ ರೀತಿಯಲ್ಲಿ ಬಗ್ಗು ಬಡಿಯಲು ಅದು ತೀರ್ಮಾನಿಸಿದೆ ಎಂಬ ಮಾತುಗಳಿವೆ. ಇನ್ನೊಂದು ರೀತಿ ಭಾರತ ಯುದ್ಧಕ್ಕೇ ಸಿದ್ಧವಾಗಿದೆ‌ಯೇ? ಎಂಬ ಸಂಶಯಗಳೂ ಇವೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಭಾರತ-ಪಾಕ್‌ ಮಧ್ಯೆ ಯುದ್ಧವಾದರೆ ಅದರಿಂದಾಗುವ ಪರಿಣಾಮಗಳೇನಿರಬಹುದು?

ಎಂಬುದರ ಕುರಿತ ಒಂದು ಊಹಾತ್ಮಕ ವಿವರಗಳು ಇಲ್ಲಿವೆ.

ಭಾರತ ಮಣಿಸಲು ಪಾಕ್‌ ಪರದಾಟ!

ಒಂದು ವೇಳೆ ಭಾರತ-ಪಾಕ್‌ ಮಧ್ಯೆ ಯುದ್ಧ ಘೋಷಣೆಯಾದರೆ, ಭಾರತ ಮಣಿಸಲು ಪಾಕ್‌ ಪರದಾಡಬೇಕಾಬಹುದು. ಜಗತ್ತಿನಲ್ಲೇ 4ನೇ ಅತಿ ದೊಡ್ಡ ಶಕ್ತಿಶಾಲಿ ಸಶಸ್ತ್ರ ಪಡೆಗಳನ್ನು ಹೊಂದಿರುವ ದೇಶ ಭಾರತ. ಪಾಕ್‌ಗೆ ಇದನ್ನು ಸರಿಗಟ್ಟಲು ಸಾಧ್ಯವೇ ಇಲ್ಲ. ಯುದ್ಧ ಆರಂಭವಾದ ಬೆರಳೆಣಿಕೆ ದಿನಗಳಲ್ಲಿ ಅದು ಸೋತು ಕೈಚೆಲ್ಲಬಹುದು. ಭೂ, ವಾಯು, ನೌಕಾ ಸೇನೆಯ ಯಾವುದೇ ವಿಭಾಗದಲ್ಲೂ ಪಾಕ್‌ಗೆ ಭಾರತದೆದುರು ನಿಲ್ಲಲು ಸಾಧ್ಯವಾಗದು. ಇದಕ್ಕಾಗಿ ಅದು ಅಣ್ವಸ್ತ್ರದ ಮೊರೆ ಹೋಗಬಹುದು. ಪಾಕ್‌ ನಾಯಕರೂ ಪದೇ ಪದೇ ಅಣ್ವಸ್ತ್ರ ದಾಳಿ ನಡೆಸುವ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಭಾರತದ ಪಾಲಿಗೆ ಇದೇ ದೊಡ್ಡ ತಲೆನೋವಾಗಬಹುದು.

ಅಣ್ವಸ್ತ್ರವೇ ದೊಡ್ಡ ತಲೆನೋವು!

ಭಾರತ-ಪಾಕ್‌ ಮಧ್ಯೆ ಯುದ್ಧವಾದರೆ ದೊಡ್ಡ ತಲೆನೋವಾಗುವುದು ಅಣ್ವಸ್ತ್ರದ್ದು. ಎರಡೂ ಅಣ್ವಸ್ತ್ರ ಸಜ್ಜಿತ ದೇಶಗಳಾಗಿದ್ದು, ಒಂದು ಇನ್ನೊಂದರ ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ, ಅದರ ಪರಿಣಾಮ ಊಹಿಸಲೂ ಅಸಾಧ್ಯ. ಭಾರತವೇನೋ, ಅಣ್ವಸ್ತ್ರವನ್ನು ಮೊದಲು ಬಳಕೆ ಮಾಡುವುದಿಲ್ಲ ಎಂಬ ಸ್ವಯಂ ಕಟ್ಟಳೆಯನ್ನು ಹಾಕಿಕೊಂಡಿದೆ. ಆದರೆ ಪಾಕ್‌ ಇಂತಹ ನಿರ್ಬಂಧ ವಿಧಿಸಿಕೊಂಡಿಲ್ಲ. ಒಂದು ವೇಳೆ ಪಾಕ್‌ ಮುಂದಾಗಿ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಿ, ಪ್ರತಿಯಾಗಿ ಭಾರತವೂ ಪಾಕ್‌ ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ, ಇಡೀ ಪಾಕ್‌ ಸರ್ವನಾಶವಂತೂ ಖಂಡಿತ. ಇದರೊಂದಿಗೆ ದಕ್ಷಿಣ ಏಷ್ಯಾ, ಆಫ್ರಿಕಾ, ಯುರೋಪ್‌ ಮಧ್ಯಭಾಗ ಬಹುತೇಕ ಅರ್ಧ ಭೂಭಾಗಕ್ಕೆ ಅಣ್ವಸ್ತ್ರ ವಿಕಿರಣದ ಸಮಸ್ಯೆ ವ್ಯಾಪಕವಾಗಿದ್ದೀತು ಎಂಬುದು ತಜ್ಞರ ಆತಂಕ.

ಅಣ್ವಸ್ತ್ರ ದಾಳಿಯಾದರೆ..?

ಒಂದು ವೇಳೆ ಅಣ್ವಸ್ತ್ರ ದಾಳಿ ನಡೆಯಿತು ಎಂದಾದಲ್ಲಿ ಬೆಂಕಿಉಂಡೆ ರೀತಿ ಪತನ ರೀತಿ ಭಾಸವಾಗಬಹುದು. ಸ್ಫೋಟದ ತೀವ್ರತೆಗೆ ಎಷ್ಟೋ ಕಿಮೀಗಳಾಚೆಗೂ ಶಾಖದ ಅನುಭವವಾಗಬಹುದು. ಬಾಂಬ್‌ ಸ್ಫೋಟದ ಸ್ಥಳದಲ್ಲಿ ಸರ್ವನಾಶವಾಗುತ್ತದೆ. ಸ್ಫೋಟದ ವೇಳೆ ಅಣಬೆ ರೀತಿ ಚಿತ್ರಣ ನಿರ್ಮಾಣವಾಗಬಹುದು. ಅಣ್ವಸ್ತ್ರ ದಾಳಿ ಪರಿಣಾಮ ಶತಮಾನಗಳಷ್ಟು ಕಾಲ ಸ್ಥಳದಲ್ಲಿ ವಿಕಿರಣ ಪರಿಣಾಮ ಗೋಚರವಾಗುತ್ತದೆ. ಕ್ಯಾನ್ಸರ್‌, ಅಂಗವಿಕಲ ಮಕ್ಕಳ ಜನನ, ಜೀವಿಗಳಲ್ಲಿ ನಾನಾ ವಿಧದ ಕಾಯಿಲೆಗಳು, ಸಾವುನೋವುಗಳು ಅಪಾರವಾಗಿರುತ್ತದೆ. ಪರಿಸರ ಸರ್ವನಾಶವಾಗಲಿದೆ.

ಸಾಂಪ್ರದಾಯಿಕ ಯುದ್ಧದಲ್ಲಿ ಭಾರತದ್ದೇ ಮೇಲುಗೈ

ಭಾರತ-ಪಾಕ್‌ ಮಧ್ಯೆ ಸಾಂಪ್ರದಾಯಿಕ ಯುದ್ಧ ನಡೆಯಿತು ಎಂದಾದಲ್ಲಿ, ಸ್ಪಷ್ಟ ಮೇಲುಗೈ ಭಾರತದ್ದೇ ಎಂಬುದು ಪರಿಣತರ ಅಭಿಪ್ರಾಯ. ಪಾಕ್‌ಗೆ ಎಷ್ಟು ಮಾತ್ರಕ್ಕೂ ಭಾರತವನ್ನು ಮಣಿಸಲು ಸಾಧ್ಯವಿಲ್ಲ ಎಂಬುದು ಅಮೆರಿಕದ ತಜ್ಞರ ಅಭಿಪ್ರಾಯವಾಗಿದೆ. ಸಶಸ್ತ್ರ ಪಡೆಗಳ ಮೂರೂ ವಿಭಾಗಗಳಲ್ಲಿ ಪಾಕಿಸ್ತಾನಕ್ಕೆ ಭಾರತವನ್ನು ತಡೆಯುವುದು ಕಷ್ಟ. ಅಲ್ಲದೇ, ಯುದ್ಧ ತಂತ್ರಗಳನ್ನು ಅಳವಡಿಸಿ ಅವುಗಳನ್ನು ಪರಿಣಾಮಕಾರಿಯನ್ನಾಗಿ ಮಾಡುವುದರಲ್ಲಿ ಭಾರತವೇ ಮೇಲುಗೈ ಸಾಧಿಸಲಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ, ಭಾರತದ ಸೇನಾಬಲ ದುಪ್ಪಟ್ಟಿಗಿಂತಲೂ ಹೆಚ್ಚಿನದ್ದಾಗಿದೆ. ಈ ಕಾರಣದಿಂದಾಗಿ ಪಾಕ್‌ ಅಣ್ವಸ್ತ್ರ ದಾಳಿಯ ಮೊರೆಹೋಗಬಹುದು ಎಂದು ಹೇಳಲಾಗಿದೆ.

ಆರ್ಥಿಕ ನಷ್ಟವೇ ದೊಡ್ಡದು

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಯುದ್ಧದಿಂದಾಗಿ ಭಾರತದ ಕೈ ಮೇಲಾದರೂ, ಆರ್ಥಿಕವಾಗಿ ಅದಕ್ಕೇ ಹೆಚ್ಚು ಹಾನಿಯಾಗಬಹುದು ಎಂದು ಹೇಳಲಾಗುತ್ತದೆ. ಅಪಾರ ಹೂಡಿಕೆಯನ್ನು ಭಾರತ ಆಕರ್ಷಿಸಿದ್ದು, ಯುದ್ಧದಿಂದಾಗಿ ಇವುಗಳೆಲ್ಲವೂ ಕೈತಪ್ಪುತ್ತದೆ. ಜೊತೆಗೆ ಯುದ್ಧಕ್ಕಾಗಿ ಸಂಪನ್ಮೂಲ ವಿನಿಯೋಗವಾಗುವುದರಿಂದ ಆರ್ಥಿಕ ಹಾನಿಯಾಗುತ್ತದೆ. ಒಂದು ವೇಳೆ ಪಾಕ್‌ನೊಂದಿಗೆ ಪೂರ್ಣ ಪ್ರಮಾಣದ ಯುದ್ಧವಾದಲ್ಲಿ ಭಾರತದ ಆರ್ಥಿಕತೆ ಸುಮಾರು 10 ವರ್ಷ ಹಿನ್ನಡೆಯಲಿದೆ. ಹಾಗೆಯೇ ಪಾಕ್‌ ನಾಮಾವಶೇಷವಾಗಬಹುದು ಎನ್ನಲಾಗುತ್ತಿದೆ.⁠⁠⁠⁠

ಕೃಪೆ: ಮೃತ್ಯುಂಜಯ 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top