fbpx
god

ಹುಂಚ : ಶ್ರೀ ಪದ್ಮಾವತಿ ಕ್ಷೇತ್ರ

ಜೈನ ಧರ್ಮದ ಉಛ್ರಾಯ ಕಾಲದಲ್ಲಿ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಆದರೆ ಆ ಧರ್ಮ ರಾಜರ ಅವನತಿಯೊಂದಿಗೆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಬಹು ಪ್ರಾಚೀನ ಕಾಲದಿಂದ ಆಧುನಿಕ ಯುಗವಾದ ಇಂದಿನ ದಿನದಲ್ಲೂ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಶ್ರೀಪದ್ಮಾವತಿಯ ಆವಾಸದಿಂದ ಅತಿಶಯ ಕ್ಷೇತ್ರವಾಗಿ ಜೈನ ಧರ್ಮೀಯರ ಕಾಶಿಯಾಗಿ ನಿತ್ಯ ಹಿಂದೂ ಹಾಗೂ ಜೈನ ಧರ್ಮೀಯ ಭಕ್ತರನ್ನು ಆಕರ್ಷಿಸುತ್ತಿದೆ.

14620019_10154206531228025_107615151_n

ಇಲ್ಲಿನ ಅಧಿದೇವತೆ ಶ್ರೀಪದ್ಮಾವತಿ ಜೈನರ ೨೩ ನೇ ತೀರ್ಥಂಕರ ಶ್ರೀಪಾರ್ಶ್ವನಾಥ ಸ್ವಾಮಿಯ ಯಕ್ಷಿಯಾಗಿದ್ದು ಜಿನದತ್ತ ರಾಜನಿಗೆ ಆಶ್ರಯನೀಡಿ ಸಾಮ್ರಾಜ್ಯ ಕರುಣಿಸಿದ ಕರುಣಾಮಯಿ. ಸಂತಾನಪ್ರಾಪ್ತಿ, ಉದ್ಯೋಗ ಲಭ್ಯತೆ, ವ್ಯಾಪಾರದಲ್ಲಿ ವೃದ್ಧಿ, ಭೂಮಿ ,ಧನ, ಕನಕ ಐಶ್ವರ್ಯಗಳ ಪ್ರಾಪ್ತಿ, ದುಷ್ಟ ಶಕ್ತಿ ನಿವಾರಣೆ, ಜಾನುವಾರುಗಳ ಸಂತಾನ ವೃದ್ಧಿ, ಸಮೃದ್ಧ ಹೈನು ಬಯಕೆ, ಶತ್ರು ಪೀಡೆ ಪರಿಹಾರ ,ಮಾನಸಿಕ ಶಾಂತಿ ಮತ್ತು ವಂಶೋದ್ಧಾರಕ್ಕಾಗಿ ಹಲವು ಜನರು ಹರಕೆ ಹೊತ್ತು ಈ ದೇವಿಗೆ ಪೂಜೆ ಸಲ್ಲಿಸುತ್ತಾರೆ. ತುಲಾಬಾರ, ನಂದಾದೀಪ, ಜಲ ಅಭಿಷೇಕ, ಪಂಚಾಮೃತ ಅಭಿಷೇಕ,ವರಹ ಪೂಜೆ, ಪಂಚಕಜ್ಜಾಯ ಸಮರ್ಪಣೆ ಇತ್ಯಾದಿ ಹರಕೆ ಕಾರ್ಯಗಳು ಪ್ರತಿನಿತ್ಯ ನಿರಂತರವಾಗಿ ಇಲ್ಲಿ ನಡೆಯುತ್ತಿದ್ದು ಸದಾ ಭಕ್ತರು ಮತ್ತು ಪ್ರವಾಸಿಗರಿಂದ ಕೂಡಿರುತ್ತದೆ.

download

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ : ತಾಯಿ ಪದ್ಮಾವತಿ ದೇವಿ ಈ ಕ್ಷೇತ್ರದಲ್ಲಿ ಬಹುಕಾಲ ನೆಲೆಸಿ ಜಿನದತ್ತರಾಜನಿಗೆ ಈ ನಗರವನ್ನು ರಾಜಧಾನಿಯನ್ನಾಗಿ ದಯಪಾಲಿಸಿದಳು. ಆತನಿಗೆ ಸಮರ್ಥ ಆಡಳಿತಕ್ಕೆ ಪ್ರೇರೇಪಿಸಿ ಸಿಂಹಲಾಂಛನವನ್ನು ಕರುಣಿಸಿದಳು. ಸಾಮ್ರಾಜ್ಯದ ಉಚ್ಚ್ರಾಯದಿಂದ ಪದ್ಮಾವತಿ ದೇವಿಯ ಕಾರಣಿಕವೂ ಪ್ರಸಿದ್ಧಗೊಂಡಿತು. ಇಲ್ಲಿನ ಬಸದಿಯ ಹಿಂಭಾಗದಲ್ಲಿ ಬೃಹತ್ ನೆಕ್ಕಿ(ಲಕ್ಕಿ) ಮರವಿದ್ದು ಇದು ಪದ್ಮಾವತಿ ದೇವಿಯ ಮೂಲ ನೆಲೆ ಎನ್ನಲಾಗಿದೆ. ಈಗಲೂ ಸಹ ಈ ಮರದ ಕಟ್ಟೆಯ ಕೆಳ ಗೋಡೆಯ ಶಿಲಾ ಫಲಕದಲ್ಲಿ ಶ್ರೀಪದ್ಮಾವತಿ ದೇವಿ, ಕೆಳಗಡೆ ಅಶ್ವಾರೋಹಿಯಾಗಿ ದಂಡ ಹಿಡಿದಿರುವ ವಿಕ್ರಮ ಸಾಂತರ ಶಿಲ್ಪವಿದೆ.

mata-padmavati

ಹುಂಚ ಕ್ಷೇತ್ರಕ್ಕೆ ಸುಮಾರು ೧೫೦೦ ವರ್ಷಗಳ ಐತಿಹಾಸಿಕ ದಾಖಲೆಯಿದೆ.ಇದನ್ನು ಹುಂಚ, ಹೊಂಬುಜ, ಪೊಂಬುರ್ಚ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು ಎಂದು ಶಾಸನಗಳಿಂದ ವೇದ್ಯವಾಗುತ್ತದೆ. ಸಾಂತರಸರು ಈ ಸ್ಥಳವನ್ನು ರಾಜಧಾನಿಯನ್ನಾಗಿಸಿಕೊಂಡು ಸಾಂತಳಿಗೆ ಸಾಸಿರ ಎಂಬ ನಾಡು ಕಟ್ಟಿ ೧೦೦೦ ವರ್ಷಕ್ಕೂ ಅಧಿಕ ಕಾಲ ಆಳಿದರು ಎಂದು ದಾಖಲೆಗಳಿಂದ ತಿಳಿದು ಬರುತ್ತದೆ. ಹಿಂದೆ ಶೈವ, ವೈಷ್ಣವ ಧರ್ಮಿಯರ ನಾಡಾಗಿದ್ದು ಕ್ರಮೇಣ ಜೈನರ ಆಡಳಿತಕ್ಕೊಳಪಟ್ಟು ಈ ಕ್ಷೇತ್ರ ಜಿನಾಲಯ, ಬಸದಿಗಳ ಸಾಲು, ವಾಸ್ತು ವೈಭವ ಮತ್ತು ಧಾರ್ಮಿಕ ಪರಂಪರೆ ಸಂಸ್ಕೃತಿಗಳಿಂದ ಜೈನರ ಕ್ಷೇತ್ರವಾಗಿ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ ಜೈನ ಮತ್ತು ಹಿಂದೂ ಧರ್ಮೀಯರ ಶ್ರದ್ಧಾ ಕೇಂದ್ರವಾಗಿದೆ.

ಈ ಕ್ಷೇತ್ರದಿಂದ ಸುಮಾರು ಒಂದು ಕಿ.ಮೀ.ಅಂತರದಲ್ಲಿ ಬಿಲ್ಲೇಶ್ವರವೆಂಬ ಸ್ಥಳವಿದ್ದು ಇಲ್ಲಿ ಕುಮದ್ವತಿ ನದಿಯ ಉಗಮಸ್ಥಾನವಿದೆ. ಉತ್ಸವಗಳಂದು ಈ ಕುಮದ್ವತಿ ತೀರ್ಥವನ್ನು ತಂದು ದೇವರಿಗೆ ಅಭಿಷೇಕ ಮಾಡುವ ಸಂಪ್ರದಾಯವಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top