fbpx
Achivers

ಬಡವರ ಪಾಲಿನ ಮೆಡಿಸಿನ್‌ ಬಾಬಾ

ಅವರಿಗೀಗ 79 ವರ್ಷ. ಮನೆಯಲ್ಲಿ ಕುಳಿತು ತಿನ್ನುವ ವಯಸ್ಸಿನಲ್ಲಿ ಆತ ಬಡವರಿಗೆ ನೆರವಾಗುವ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರತಿದಿನ ಸುಮಾರು ಐದರಿಂದ ಆರು ಕಿ.ಮೀ. ದೂರ ನಡೆಯುವ ಇವರು, ಪ್ರತಿಷ್ಠಿತ ಬಡಾವಣೆ ಮನೆಗಳಿಗೆ ಹೋಗಿ ಅವರಲ್ಲಿ ಉಪಯೋಗವಾಗದ ಔಷಧಗಳನ್ನು ಸಂಗ್ರಹಿಸುತ್ತಿದ್ದಾರೆ. ಆ ಮೂಲಕ ಔಷಧ ಬ್ಯಾಂಕೊಂದನ್ನು ತೆರೆಯುವ ಕನಸನ್ನು ಹೊಂದಿದ್ದಾರೆ ಅವರು.

ಅವರೇ ಒಂಕಾರ್‌ ಶರ್ಮಾ. ಮೆಡಿಸಿನ್ ಬಾಬಾ ಎಂದೇ ಕರೆಸಿಕೊಳ್ಳುವ ಇವರು ಬ್ಲಡ್‌್ ಬ್ಯಾಂಕ್‌ ಒಂದರಲ್ಲಿ ಟೆಕ್ನಿಶಿಯನ್ ಆಗಿ ನಿವೃತ್ತಿ ಹೊಂದಿದವರು. ಬಡವರು ಹಾಗೂ ಕೈಲಾದವರಿಗೆ ಉಚಿತ ಔಷಧ ಸಿಗಬೇಕು ಎಂಬ ಕಾರಣದಿಂದ ಔಷಧ ಬ್ಯಾಂಕ್ ತೆರೆಯುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಆ ಕಾರಣಕ್ಕೆ ಇವರು ದೆಹಲಿಯ ಮನೆಮನೆಗೂ ಭೇಟಿ ನೀಡಿ ಅವರ ಮನೆಯಲ್ಲಿ ಉಪಯೋಗಿಸದೇ ಉಳಿದ ಔಷಧವನ್ನು ಸಂಗ್ರಹಿಸುತ್ತಾರೆ.
ಸಿರಿವಂತರು ಅಗತ್ಯಕ್ಕಿಂತ ಹೆಚ್ಚಿಗೆ ಔಷಧಗಳನ್ನು ಕೊಂಡು ತರುತ್ತಾರೆ.

ಅವರ ಆರೋಗ್ಯ ಪಡೆದ ಮೇಲೆ ಅವರು ಅದನ್ನು ಮನೆಯ ಎಲ್ಲೋ ಒಂದು ಮೂಲೆಯಲ್ಲಿ ಎಸೆದಿರುತ್ತಾರೆ. ಅದನ್ನು ನಾನು ಸಂಗ್ರಹಿಸಿ ಬಡವರಿಗೆ ಉಚಿತವಾಗಿ ಅವಶ್ಯವಿರುವ ಔಷಧಗಳನ್ನು ನೀಡುತ್ತೇನೆ ಎನ್ನುತ್ತಾರೆ ಓಂಕಾರ್ ಶರ್ಮಾ.

ಇಳಿ ವಯಸ್ಸಿನಲ್ಲಿ ಅನೇಕರು ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಆರಾಮವಾಗಿ ಕಾಲ ಕಳೆಯಲು ಬಯಸುತ್ತಾರೆ. ಆದರೆ ಮೆಡಿಸಿನ್ ಬಾಬಾ 2008ರಿಂದ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. 2008ರಲ್ಲಿ ದೆಹಲಿಯ ಲಕ್ಷ್ಮಿನಗರದಲ್ಲಿ ಕಾಮಗಾರಿ ನಡೆಯುತ್ತಿದ್ದ ಸೇತುವೆ ಕುಸಿದು ಬಿದ್ದ ಪರಿಣಾಮ ಅನೇಕ ಮಂದಿ ಗಾಯಗೊಂಡಿದ್ದರು.

ಆಗ ಅನೇಕರು ಸೂಕ್ತ ಔಷಧ ಸಿಗದೆ ಪರದಾಡಿದ ಸ್ಥಿತಿಯನ್ನು ಶರ್ಮಾ ಕಣ್ಣಾರೆ ಕಂಡಿದ್ದರು. ಅದನ್ನು ನೋಡಿದ ಓಂಕಾರ್ ಅವರ ಮನ ಕಲುಕಿತ್ತು, ನರಕದಂಥ ಆ ದೃಶ್ಯವನ್ನು ನೋಡಿದ ಶರ್ಮಾಗೆ ಇದಕ್ಕಾಗಿ ಏನಾದರು ಮಾಡಬೇಕು; ಬಡವರು ಎಂಬ ಕಾರಣಕ್ಕೆ ಅವರು ಸಾಯುವಂತಾಗಬಾರದು ಎಂದು ಪಣ ತೊಟ್ಟರು.

ಹೀಗೆ ಪ್ರತಿದಿನ ಬಸ್ಸಿನಲ್ಲಿ ದೆಹಲಿಯ ಒಂದೊಂದು ಬಡಾವಣೆಗೂ ತೆರಳಿ, ಅಲ್ಲಿಂದ ಕಾಲುನಡಿಗೆಯಲ್ಲಿ ಇಡೀ ಬಡಾವಣೆ ಸುತ್ತಿ ಔಷಧಗಳನ್ನು ಸಂಗ್ರಹಿಸುತ್ತಿದ್ದರು. ಹೀಗೆ ವರ್ಷದಲ್ಲಿ ಅವರು ಔಷಧ ಸಂಗ್ರಹಿಸುವ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದ ಅವರಿಗೆ ಔಷಧಗಳನ್ನು ನೀಡುವ ಖಾಯಂ ದೇಣಿಗೆದಾದರೂ ಸಿಕ್ಕಿದ್ದಾರೆ. ಕೆಲವೊಮ್ಮೆ ಅವರೇ ಕರೆ ಮಾಡಿ, ಔಷಧಗಳನ್ನು ತೆಗೆದುಕೊಂಡು ಹೋಗಿ ಎನ್ನುತ್ತಾರೆ.

ಈ ಇಳಿವಯಸ್ಸಿನಲ್ಲಿ ನಡೆದಾಡುವುದು ನಿಮಗೆ ಕಷ್ಟವಾಗುವುದಿಲ್ಲವ – ಎಂದರೆ ಕಷ್ಟ ಹಾಗೂ ಸವಾಲನ್ನು ಎದುರಿಸದಿದ್ದರೆ ನಾನು ನನ್ನ ಗುರಿ ಸಾಧಿಸಲು ಹೇಗೆ ಸಾಧ್ಯ. ಹೀಗಾಗಿ ನನಗೆ ಇದಾವುದು ಕಷ್ಟ ಎನ್ನಿಸುವುದಿಲ್ಲ ಎಂಬುದು ಓಂಕಾರ್ ಶರ್ಮಾ ಅವರ ಮಾತು.

ತಾವು ಸಂಗ್ರಹಿಸಿದ ಔಷಧಗಳನ್ನು ವಿಂಗಡಿಸಿ ಅದನ್ನು ದಾಖಲೆ ರೂಪದಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಅವರ ಮನೆಯ ಪಕ್ಕದಲ್ಲೇ ಒಂದು ಕೋಣೆಯನ್ನು ಬಾಡಿಗೆ ಪಡೆದು ಅಲ್ಲಿ ಔಷಧಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಯಾರಿಗೆ ಔಷಧದ ಆವಶ್ಯಕತೆ ಇರುತ್ತದೋ ಅವರು ಸಂಜೆ 4ರಿಂದ 6 ಗಂಟೆಯ ಒಳಗೆ ಆ ಮಳಿಗೆಗೆ ತೆರಳಿ ಔಷಧ ಪಡೆಯಬಹುದು.

ಅವರು ಸಂಗ್ರಹಿಸಿರುವ ಔಷಧಗಳನ್ನು ಕೆಲವು ಆಸ್ಪತ್ರೆಗಳಿಗೂ ಕೊಡುತ್ತಾರೆ. ಎಐಐಎಂಎಸ್‌, ಡಾ. ರಾಮ್ ಮನೋಹರ್‌ ಲೋಹಿಯಾ ಆಸ್ಪತ್ರೆ, ದೀನ ದಾಯಾಳ್ ಉಪಾಧ್ಯಾಯ ಆಸ್ಪತ್ರೆ, ಲೇಡಿ ಐರ್ವಿನ್ ಮೆಡಿಕಲ್ ಕಾಲೇಜು ಮುಂತಾದ ಆಸ್ಪತ್ರೆಗಳಿಗೆ ಔಷಧಗಳನ್ನು ನೀಡುತ್ತಾರೆ. ಪ್ರತಿ ತಿಂಗಳು ಸುಮಾರು ₹ 4 ರಿಂದ ₹ 6 ಲಕ್ಷದ ಔಷಧಗಳನ್ನು ದಾನದ ರೂಪದಲ್ಲಿ ನೀಡುತ್ತಿದ್ದಾರೆ.

ತಮ್ಮ ಉದ್ದೇಶ ಕೇವಲ ಔಷಧಗಳನ್ನು ಸಂಗ್ರಹಿಸಿ ಬಡವರಿಗೆ ನೀಡುವುದಷ್ಟೆ ಅಲ್ಲ, ಬದಲಾಗಿ ಅನಗತ್ಯವಾಗಿ ಔಷಧಗಳನ್ನು ಕೊಂಡು ಅದನ್ನು ಹಾಳು ಮಾಡದಿರಿ ಎಂದು ಜನರಿಗೆ ಮನದಟ್ಟು ಮಾಡುವುದು ಎನ್ನುತ್ತಾರೆ ಶರ್ಮಾ.

ಪ್ರಸ್ತುತ ಅವರು ಕ್ಯಾನ್ಸರ್ ಪೀಡಿತರು ಮತ್ತು ಕಿಡ್ನಿ ವಿಫಲಗೊಂಡ ಜನರಿಗೆ ಸಹಾಯ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಿತ್ತಳೆ ಬಣ್ಣದ ಅಂಗಿಯಲ್ಲಿ ತಮ್ಮ ನಂಬರ್ ಹಾಗೂ ತಮ್ಮ ಕೆಲಸದ ಉದ್ದೇಶವನ್ನು ಬರೆಸಿಕೊಂಡಿದ್ದಾರೆ.

ಆ ಅಂಗಿಯನ್ನು ತೊಟ್ಟು ಓಡಾಡುವ ಮೂಲಕ ಇನ್ನಷ್ಟು ದಾನಿಗಳನ್ನು ಸೆಳೆಯಬಹುದು ಎಂಬುದು ಅವರ ಯೋಜನೆ. ಅವರ ಈ ಪ್ರಯತ್ನ ಯಶಸ್ವಿಯಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top