ಕುಳಿತಲ್ಲೇ ತಾಯಿ, ಮಗು ಸಾವು. –ಬೆಂಗಳೂರು
ಸ್ನಾನದ ಕೋಣೆಯಲ್ಲಿ ಅಳವಡಿಸಿದ್ದ ಗ್ಯಾಸ್ ಗೀಜರ್ನಿಂದ ಹೊರಗೆ ಬಂದ ಕಾರ್ಬನ್ ಮಾನಾಕ್ಸೈಡ್ನಿಂದ ತಾಯಿ ಮತ್ತು ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೆ.ಜಿ.ನಗರದಲ್ಲಿ ನಡೆದಿದೆ.
ಇಲ್ಲಿನ ಲಕ್ಷ್ಮೀಪುರದಲ್ಲಿ ಭಾನುವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಅರ್ಪಿತಾ (23) ಮೃತ ತಾಯಿ, ಅಮೃತ್ (3) ಮೃತಪಟ್ಟ ಮಗು. ಭಾನುವಾರ ಮನೆಯನ್ನು ಚಿಗೊಳಿಸಿದ ಅರ್ಪಿತಾ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ನಾನಕ್ಕೆ ಹೋಗಿದ್ದರು.
ಹೊರಗೆ ಅಜ್ಜ ಅಜ್ಜಿಯ ಜತೆ ಆಡುತ್ತಿದ್ದ ಅಮೃತ್ ಶೌಚಕ್ಕೆಂದು ತಾಯಿ ಸ್ನಾನ ಮಾಡುತ್ತಿದ್ದ ಬಚ್ಚಲಿಗೇ ಹೋಗಿದ್ದಾನೆ. ಅರ್ಧಗಂಟೆ ಆದರೂ ಅಮೃತ್ ಧ್ವನಿ ಕೇಳದಿದ್ದಾಗ ಅಜ್ಜ ಅಜ್ಜಿ ಇಬ್ಬರೂ ಕೂಗುತ್ತಾ ಮಗುವಿಗಾಗಿ ಹುಡುಕಾಡಿದ್ದಾರೆ. ಮಗು ಎಲ್ಲೂ ಕಾಣದಿದ್ದಾಗ, ಕೂಗಿಗೂ ಪ್ರತಿಕ್ರಿಯೆ ಬಾರದಿದ್ದಾಗ ಸ್ನಾನದ ಮನೆಯ ಬಾಗಿಲು ಬಡಿದರೆ ಬಾಗಿಲನ್ನು ಒಳಗಿನಿಂದ ಬಂದ್ ಮಾಡಿಕೊಳ್ಳಲಾಗಿತ್ತು. ಎಷ್ಟು ಕರೆದರೂ ತಾಯಿ ಮಗು ಇಬ್ಬರೂ ಮಾತನಾಡದಿದ್ದಾಗ ಮನೆಯವರೆಲ್ಲಾ ಸೇರಿ ಗಾಬರಿಯಿಂದ ಸ್ನಾನದ ಮನೆಯ ಬಾಗಿಲನ್ನು ಒಡೆದಾಗ ಒಳಗೆ ಕಂಡಿದ್ದು ಭೀಕರ ದೃಶ್ಯ. ತಾಯಿ ಮತ್ತು ಮಗು ಅದೇ ಸ್ಥಿತಿಯಲ್ಲೇ ನೆಲಕ್ಕೆ ಒರಗಿ ಬಿದ್ದಿದ್ದರು. ತಕ್ಷಣ ಜೋರಾಗಿ ಕಿರುಚಿಕೊಂಡ ಅರ್ಪಿತ ಅತ್ತೆ ಮಾವ ಅಕ್ಕ ಪಕ್ಕದವರ ನೆರವಿನಿಂದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಬ್ಬರೂ ಪ್ರಜ್ಞೆ ತಪ್ಪಿರಬಹುದು ಎನ್ನುವುದು ಮನೆಯವರ ಅಂದಾಜಾಗಿತ್ತು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆ ತಾಯಿ ಮಗು ಇಬ್ಬರೂ ಮೃತಪಟ್ಟಿರುವುದಾಗಿ ಕಿಮ್ಸ್ ವೈದ್ಯರು ತಿಳಿಸಿದ್ದಾರೆ.
ಗ್ಯಾಸ್ ಗೀಜರ್ ತಂದ ಅನಾಹುತ ಮೃತ ತಾಯಿ ಮತ್ತು ಮಗುವನ್ನು ಪರೀಕ್ಷಿಸಿದ ವೈದ್ಯರು ಇಬ್ಬರೂ ಉಸಿರುಗಟ್ಟಿ ಸತ್ತಿರುವುದಾಗಿ ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರ ಸಾವಿಗೆ ಕಾರ್ಬನ್ ಮಾನಾಕ್ಸೈಡ್ ಕಾರಣ ಎನ್ನುವ ಸಂಗತಿ ತಿಳಿದುಬಂದಿದೆ. ಸ್ನಾನದ ಮನೆಯಲ್ಲಿದ್ದ ಗ್ಯಾಸ್ ಗೀಜರ್ನಿಂದ ಉತ್ಪತ್ತಿಯಾದ ಕಾರ್ಬನ್ ಮಾನಾಕ್ಸೈಡ್ನಿಂದ ಉಸಿರುಗಟ್ಟಿ ಇಬ್ಬರೂ ಮೃತಪಟ್ಟಿದ್ದಾರೆ ಎನ್ನುವುದು ನಂತರದ ತನಿಖೆಯಿಂದ ದೃಢಪಟ್ಟಿದೆ.
ಹೇಗೆ ದುರಂತ?
ಗ್ಯಾಸ್ ಗೀಸರ್ ಉರಿಯಲು ಆಮ್ಲಜನಕ ಅಗತ್ಯ. ಅದು ಇಟ್ಟಿರುವ ರೂಮು ಅಥವಾ ಸ್ನಾನಗೃಹಕ್ಕೆ ಕಿಟಕಿಗಳಿದ್ದು ಗಾಳಿ ಆಡುವಂತಿದ್ದರೆ ಮಾತ್ರ ಸುಲಭವಾಗಿ ಉರಿಯುತ್ತದೆ. ಆದರೆ ಗಾಳಿ ಆಡದ ರೂಮಿನಲ್ಲಿ ಗ್ಯಾಸ್ ಗೀಜರ್ ಇಟ್ಟಿದ್ದರೆ, ಆ ರೂಮಿನ ಒಳಗಿರುವ ಆಮ್ಲಜನಕ ಖಾಲಿ ಆಗುತ್ತಿದ್ದಂತೆ ಗ್ಯಾಸ್ ಗೀಜರ್ನಿಂದ ಕಾರ್ಬನ್ ಮಾನಾಕ್ಸೈಡ್ ಅನಿಲ ಹೊರಬರುತ್ತದೆ. ಈ ಅನಿಲ ಮೂಗಿಗೆ ಸೋಕಿದ ತಕ್ಷಣ ಕಿರುಚಾಡುವುದಕ್ಕೂ ಅವಕಾಶ ಇಲ್ಲದಂತೆ ಉಸಿರಾಟವನ್ನು ನಿಲ್ಲಿಸುತ್ತದೆ. ಮೂಗಿಗೆ ಕ್ಲೋರೋಫಾರ್ಮ್ ಹಿಡಿದಂತೆ ತಕ್ಷಣ ಪ್ರಜ್ಞೆ ತಪ್ಪಿ ಮರುಕ್ಷಣವೇ ಜೀವ ನಿಲ್ಲುತ್ತದೆ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.
ಅರ್ಪಿತಾ ಮತ್ತು ಅಮೃತ್ ಇದ್ದ ಸ್ನಾನಗೃಹದಲ್ಲಿ ಕಿಟಕಿಗಳು ಇರಲಿಲ್ಲ. ಬಾಗಿಲು ಕೂಡ ಬಂದ್ ಆಗಿದ್ದರಿಂದ ಆಮ್ಲಜನಕ ಒಳಗೆ ಹೋಗಿಲ್ಲ. ಇದು ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ಯಾಸ್ ಗೀಜರ್ನಿಂದ ಕಾರ್ಬನ್ ಮಾನಾಕ್ಸೈಡ್ ಪ್ರವಹಿಸಿ ಸಾವನ್ನಪ್ಪುತ್ತಿರುವ ದುರ್ಘಟನೆಗಳು ದಿನೇದಿನೆ ಹೆಚ್ಚುತ್ತಿದ್ದು ಸಾರ್ವಜನಿಕರು ಈ ಬಗ್ಗೆ ಅರಿವು ಮೂಡಿಸಿಕೊಂಡು ಎಚ್ಚೆತ್ತುಕೊಳ್ಳಬೇಕು ಎಂದು ಕೆ.ಜಿ.ನಗರ ಠಾಣೆಯ ಇನ್ಸ್ಪೆಕ್ಟರ್ ಗಿರಿರಾಜ್ ಕೆಲವು ಸಲಹೆಗಳನ್ನು ನೀಡುತ್ತಾರೆ. ವಿಶೇಷ ಕಳಕಳಿವಹಿಸಿ.
ಸಲಹೆಗಳು
- ಆಮ್ಲಜನಕ ಚೆನ್ನಾಗಿ ಹರಿದಾಡುವ ರೂಮಿನಲ್ಲಿ ಮಾತ್ರ ಗ್ಯಾಸ್ ಗೀಜರ್ ಅಳವಡಿಸಬೇಕು.
- ಸ್ನಾನದ ಮನೆಯಲ್ಲಿ ಕಿಟಕಿಗಳು ಇರುವಂತೆ, ಹಾಗೂ ಆ ಕಿಟಕಿಯಲ್ಲಿ ಒಳಗಿನ ಗಾಳಿ ಹೊರಗೆ ಮತ್ತು ಹೊರಗಿನ ಗಾಳಿ ಒಳಗೆ ಬರುವಂತೆ ಎರಡೂ ದಿಕ್ಕುಗಳಲ್ಲೂ ಕಿಟಕಿ ಅಥವಾ ವೆಂಟಿಲೇಟರ್ ಇರುವಂತೆ ನೋಡಿಕೊಳ್ಳಿ.
- ಕಿಟಕಿಗಳು ಇಲ್ಲದಿದ್ದರೆ ಗ್ಯಾಸ್ ಗೀಜರ್ನಿಂದ ಬಿಸಿ ನೀರನ್ನು ಮೊದಲೇತುಂಬಿಸಿ ಇಟ್ಟುಕೊಂಡು ಗ್ಯಾಸ್ ಆಫ್ ಮಾಡಿದನಂತರವಷ್ಟೆ ಸ್ನಾನಕ್ಕೆ ಹೋಗುವುದು ಉತ್ತಮ.
- ಗ್ಯಾಸ್ ಗೀಜರ್ನಿಂದ ನೀರು ತುಂಬಿಸುವಾಗಲೂ ಸ್ನಾನ ಗೃಹದ ಬಾಗಿಲು ತೆರೆದಿರಲಿ.
- ಗ್ಯಾಸ್ ಆಫ್ ಮಾಡಿದ ಕೆಲವುನಿಮಿಷಗಳ ನಂತರ ಸ್ನಾನಕ್ಕೆ ಹೋಗುವುದು ಒಳ್ಳೆಯದು.
- ಮಕ್ಕಳನ್ನು ಸ್ನಾನ ಮಾಡಿಸುವಾಗ ಸ್ನಾನ ಗೃಹದ ಬಾಗಿಲು ಅರ್ಧ ತೆರೆದು ಗಾಳಿ ಆಡುವಂತೆ ನೋಡಿಕೊಳ್ಳಿ.
- ಗ್ಯಾಸ್ಗೆ ಆಮ್ಲಜನಕ ಸರಬರಾಜು ಕಡಿಮೆ ಆದಾಗ ಅದು ಅರ್ಧದಷ್ಟು ಮಾತ್ರ ಉರಿಯುತ್ತಿರುತ್ತದೆ.
- ಎಚ್ಚರಿಕೆ ತೆಗೆದುಕೊಳ್ಳುವ ಮೊದಲೇ ಅನಾಹುತ ಸಂಭವಿಸಿಬಿಡುವುದರಿಂದ ಎಷ್ಟು ಬೇಗ ಸ್ನಾನ ಗೃಹದಿಂದ ಹೊರಗೆ ಬರುತ್ತೀರೋ ಅಷ್ಟು ಉತ್ತಮ.
ಸ್ವೀಟ್ ಡೆತ್ಕಾರ್ಬನ್ ಮಾನಾಕ್ಸೈಡ್ನಿಂದ ಸಂಭವಿಸುವ ಸಾವಿಗೆ ವೈದ್ಯ ಭಾಷೆಯಲ್ಲಿ ಸ್ವೀಟ್ ಡೆತ್ ಎನ್ನುವ ಹೆಸರಿದೆ. ಕಿರುಚುವುದಕ್ಕೆ, ಒದ್ದಾಡುವುದಕ್ಕೂ ಅವಕಾಶ ಕೊಡದೆಏನೇನೂ ಗೊತ್ತಾಗದಂತೆ ಸಾವು ಸಂಭವಿಸಿಬಿಡುತ್ತದೆ. ಆದ್ದರಿಂದ ಈ ಸಾವನ್ನು ಸ್ವೀಟ್ ಡೆತ್ ಎಂದು ಕರೆಯಲಾಗುತ್ತದೆ ಎನ್ನುವುದು ವೈದ್ಯರ ಮಾತು. ಗ್ಯಾಸ್ ಗೀಜರ್ನಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಮೊದಲು ನೆಲ ಮಟ್ಟದಿಂದ ಸ್ನಾನದ ಮನೆಯಲ್ಲಿ ಶೇಖರಣೆ ಗೊಳ್ಳುತ್ತಾ ಹೋಗುತ್ತದೆ. ಇದರಿಂದ ಕುಳಿತು ಸ್ನಾನ ಮಾಡುವವರ ಮೂಗಿಗೆ ತಕ್ಷಣ ಸೋಕಿ ಬೇಗ ಸಾವು ಸಂಭವಿಸುತ್ತದೆ. ನಿಂತು ಸ್ನಾನ ಮಾಡುವಾಗ 3 ರಿಂದ 4 ನಿಮಿಷದೊಳಗೆ ಸಾವು ಸಂಭವಿಸುತ್ತದೆ. ಅಷ್ಟರಲ್ಲಿ ಸ್ನಾನ ಮುಗಿದು ಬಾಗಿಲು ತೆರೆದರೆ ಅವರು ಅದೃಷ್ಟವಂತರು ಎನ್ನುತ್ತಾರೆ ಇನ್ಸ್ಪೆಕ್ಟರ್ ಗಿರಿರಾಜ್.
ಏಕಾಏಕಿ ಸಂಭವಿಸಿದ ದುರಂತದಿಂದಾಗಿ ಇಡೀ ಕುಟುಂಬದ ದುಃಖ ಮುಗಿಲು ಮುಟ್ಟಿತ್ತು. ಮನೆ ಮುಂದೆ ಶೋಕತಪ್ತ ಬಂಧುಗಳು ಮತ್ತು ನೆರೆ ಹೊರೆಯವರ ಕಣ್ಣಲ್ಲಿ ನೀರು ತುಂಬಿತ್ತು.
ಈ ಘಟನಾವಳಿ ಗ್ಯಾಸ್ ಗೀಜರ್ ತಂದಿಟ್ಟ ದುರಂತ
ದಯವಿಟ್ಟು ಸಾಧ್ಯ ವಾದಷ್ಟು ಶೇರ್ ಮಾಡಿ.
ಮೂಲ: ಸಂಗ್ರಹ ಮಾಹಿತಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
