ಇದು ಬೆಂಗಳೂರಿನ ನೀರು ಸರಬರಾಜು ಟ್ಯಾಂಕರ್ ಚಾಲಕನೊಬ್ಬನ ಸಾಧನೆ ಕಥೆ. ಈತ ದೇಹದಾರ್ಢ್ಯ ಪಟು. ಈತನಿಗಿತ್ತು ಸಾಧಿಸುವ ಹಠ ಛಲ. ಇದಕ್ಕಾಗಿ ಬೆಳಗ್ಗೆ, ಸಂಜೆ ಜಿಮ್‌ನಲ್ಲಿ ಕಠಿಣ ಕಸರತ್ತು ನಡೆಸಿದ. ಮಧ್ಯಾಹ್ನದ ಅವಧಿಯಲ್ಲಿ ಜೀವನ ನಿರ್ವಹಣೆಗಾಗಿ ಮನೆಮನೆಗೆ ಟ್ಯಾಂಕರ್ ಚಾಲನೆ ಮಾಡಿ ನೀರು ಹಾಕಿದ. ಕೊನೆಗೂ ದೇವರು ಆತನ ಕೈಬಿಡಲಿಲ್ಲ. ಸೆ.30ರಂದು ಫಿಲಿಪ್ಪೀನ್ಸ್‌ನಲ್ಲಿ ಈತನ ಕಷ್ಟಗಳಿಗೆಲ್ಲ ಉತ್ತರ ಸಿಕ್ಕಿತು. ಅಲ್ಲಿ ನಡೆದ ಮಿಸ್ಟರ್ ಏಷ್ಯಾ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಏಷ್ಯಾ ಆಗಿ ಮೆರೆದ.
ಇವರ ಹೆಸರು ಜಿ.ಬಾಲಕೃಷ್ಣ. ವಯಸ್ಸು 25, ಮೂಲತಃ ಬೆಂಗಳೂರಿನ ವೈಟ್‌ಫೀಲ್ಡ್‌ನವರು. ತಂದೆ ದಿವಂಗತ ಗೋಪಾಲ್, ಬಿಎಂಟಿಸಿ ಚಾಲಕರಾಗಿದ್ದರು. ತಾಯಿ ಪಾರ್ವತಮ್ಮ ತರಕಾರಿ ಕೃಷಿ ಮಾಡಿ ಸಂಸಾರ ತೂಗಿಸುತ್ತಿದ್ದಾರೆ. ಸದ್ಯ ಬಾಲಕೃಷ್ಣ ಜೀವನ ನಿರ್ವಹಣೆಗಾಗಿ ನೀರಿನ ಟ್ಯಾಂಕರ್ ಇಟ್ಟುಕೊಂಡಿದ್ದಾರೆ. ಜತೆಗೆ ಜಿಮ್‌ನಲ್ಲಿ ತರಬೇತಿ ಕೂಡ ನೀಡುತ್ತಿದ್ದಾರೆ. ಬಾಲಕೃಷ್ಣ ತನ್ನ ಸಾಧನೆಯನ್ನು ಖುಷಿಯಿಂದ ಉದಯವಾಣಿ ಜತೆ ಹಂಚಿಕೊಂಡಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ.
14 ವರ್ಷಕ್ಕೆ ಜಿಮ್ ತರಬೇತಿ ಆರಂಭಿಸಿದೆ
ಹಾಲಿವುಡ್ ನಟ ಅರ್ನಾಲ್ಡ್ ಶ್ವಾಜನಗರ್‌ರಿಂದ ನಾನು ಪ್ರೇರಿತನಾಗಿದ್ದೆ. ಅವರ ಬಲಿಷ್ಠ ಮೈಕಟ್ಟು ನೋಡಿ ದಂಗಾಗಿದ್ದೆ. ಇದೇ ಪ್ರೇರಣೆಯಿಂದ ಜಿಮ್‌ನಲ್ಲಿ ತರಬೇತಿ ಪಡೆಯಲು ನಿರ್ಧರಿಸಿದೆ. ಆಗ ನನಗೆ 14 ವರ್ಷ ವಯಸ್ಸಾಗಿತ್ತು. ಅಲ್ಲಿಂದ ನಂತರ ಶುರುವಾದ ನನ್ನ ಪಯಣ ಇಲ್ಲಿ ತನಕ ಬಂದು ನಿಂತಿದೆ, ವರ್ತೂರಿನ ಜಿಮ್‌ನಲ್ಲಿ ಆರಂಭಿಕ ಅಭ್ಯಾಸ ನಡೆಸಿದೆ. ಇದೀಗ ವೈಟ್ ಫೀಲ್ಡ್‌ನಲ್ಲಿರುವ ಟೋಟಲ್ ಫಿಟೆಸ್ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಜಿಮ್ ಮಾಲೀಕ ರಾಜೇಶ್ ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.
90ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗಿ
ಇದುವರೆಗೆ 90 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆ ಸೇರಿದಂತೆ ಒಟ್ಟು 90 ಪ್ರಶಸ್ತಿ ಗೆದ್ದಿದ್ದೇನೆ. 48 ಮುಕ್ತ ರಾಜ್ಯ ಮಟ್ಟದ ದೇಹದಾರ್ಢ್ಯ ಕೂಟದಲ್ಲಿ ಚಾಂಪಿಯನ್ ಆಗಿದ್ದೇನೆ. 4 ಬಾರಿ ಮಿಸ್ಟರ್ ಕರ್ನಾಟಕ, 8 ಬಾರಿ ಮಿಸ್ಟರ್ ಇಂಡಿಯಾ ಕಿರಿಯರ ವಿಭಾಗ, 6 ಬಾರಿ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಸಾಧನೆಗೆ ರಾಜ್ಯ ದೇಹದಾರ್ಢ್ಯ ಸಂಸ್ಥೆ ನೀಡಿದ ಪ್ರೋತ್ಸಾಹವೇ ಕಾರಣ ಎಂದು ಬಾಲಕೃಷ್ಣ ಹೇಳಿದರು.
ಆರ್ಥಿಕ ಕೊರತೆಬಾಡಿಬಿಲ್ಡಿಂಗ್ ಮಾಡುವುದಕ್ಕೆ ಸಾಕಷ್ಟು ಖರ್ಚು ಇದೆ. ಮುಂದೆ ಜರ್ಮನಿಯಲ್ಲಿ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ ಇದೆ. ಅಲ್ಲಿಗೆ ತೆರಳಲು ಆರ್ಥಿಕ ಸಮಸ್ಯೆ ಎದುರಾಗಿದೆ. ದಿನನಿತ್ಯ ಸಾಕಷ್ಟು ಖರ್ಚು ವೆಚ್ಚಗಳಿವೆ. ಇದೆಲ್ಲವನ್ನು ಸರಿದೂಗಿಸುವುದು ನನಗೆ ಸವಾಲೇ ಸರಿ. ಪ್ರಾಯೋಜಕರ ನಿರೀಕ್ಷೆಯಲ್ಲಿದ್ದೇನೆ. ಜತೆಗೆ ಸರ್ಕಾರದ ಸಹಾಯದ ನಿರೀಕ್ಷೆಯಲ್ಲೂ ಇದ್ದೇನೆ ಎಂದು ಬಾಲಕೃಷ್ಣ ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
