fbpx
ದೇವರು

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

 

ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ.

 

ಪೂರ್ವಾಶ್ರಮ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬೆ. ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕೃಷ್ಣ ಭಟ್ಟರು ವೀಣೆಯಲ್ಲಿ ಪಂಡಿತರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥನನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬೆ ಅವರ ಹೆಸರುಗಳು. ವೆಂಕಟನಾಥನು ೧೫೯೫ ರಲ್ಲಿ ಈಗಿನ ತಮಿಳುನಾಡಿನ ಭುವನಗಿರಿ ಎಂಬಲ್ಲಿ ಜನಿಸಿದನು.

 

ವೆಂಕಟನಾಥನು ಬಾಲ್ಯದಲ್ಲಿಯೇ ತುಂಬ ಬುದ್ಧಿವಂತ ಬಾಲಕನಾಗಿದ್ದನು. ಇವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ವಿಧಿವಶರಾಗಿದ್ದುದರಿಂದ ಸಂಸಾರದ ಜವಾಬ್ದಾರಿ ಅಣ್ಣ ಗುರುರಾಜನ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಭಾವನವರಾದ, ವೇಂಕಟಾಂಬೆಯೆ ಪತಿ ಮಧುರೈ ಲಕ್ಷ್ಮಿ ನರಸಿಂಹಾಚಾರ್ಯರಲ್ಲಿ ಆಯಿತು. ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆಯೊಡನೆ ಆಯಿತು. ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀಸುಧೀಂದ್ರ ತೀರ್ಥರಲ್ಲಿ ದ್ವೈತ ಸಿದ್ಧಾಂತದಲ್ಲಿ ಉನ್ನತವ್ಯಾಸಂಗ ಮಾಡತೊಡಗಿದರು.ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲೂ ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತ್ತಿದ್ದರು.ಅವರ ಆರ್ಥಿಕ ಸ್ಥಿತಿ ಆಗ ಚೆನ್ನಾಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯೂ ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗೂ ದೇವರ ನಾಮಸ್ಮರಣೆ ಬಿಡಲಿಲ್ಲ. ಒಮ್ಮೆ ವೆಂಕಟನಾಥರಿಗೆ ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವಿತ್ತು. ಆದರೆ ಆಹ್ವಾನವಿತ್ತವರು ಇವರಿಗೆ ಸರಿಯಾದ ಗೌರವ ನೀಡದೆ ಗಂಧ ತೇಯುವ ಕೆಲಸ ನೀಡಿದರು. ವೆಂಕಟನಾಥರು ಆದರೂ ಬೇಸರಿಸದೆ ಕೊಟ್ಟ ಗಂಧದ ಕೊರಡನ್ನು ತೇಯುವಾಗ ಭಗವಂತನ ಸಂಕಲ್ಪದಿಂದಾಗಿ ಅಗ್ನಿ ಸೂಕ್ತ ಪಠಿಸುತ್ತ ತೇಯ್ದರು. ತೇಯ್ದ ಗಂಧವನ್ನು ಲೇಪಿಸಿಗೊಂಡ ವಿಪ್ರರಿಗೆ ಮೈಯೆಲ್ಲಾ ವಿಪರೀತ ಉರಿ ಶುರುವಾಯಿತು. ಹೀಗಾಗಲು ಕಾರಣ ಹುಡುಕಿ ಹೊರಟ ಮುಖ್ಯಸ್ಥರು ವೆಂಕಟನಾಥನನ್ನು ಕಾರಣ ಕೇಳಿದರು. ವೆಂಕಟನಾಥರು ತಾವು ಅಗ್ನಿ ಸೂಕ್ತ ಉಚ್ಛರಿಸುತ್ತ ಗಂಧ ತೇಯ್ದಿರುವುದರಿಂದ ಹೀಗಾಗಿರಬಹುದೆಂದು ಹೇಳಿದರು. ನಂತರ ಆ ಗೃಹಸ್ಥರು ತಮ್ಮಿಂದಾದ ಅಪರಾಧವನ್ನು ಕ್ಷಮಿಸಿರೆಂದು ಬೇಡಿಕೊಂಡಾಗ ಸ್ವಲ್ಪವೂ ಕೋಪ/ಬೇಸರ ಮಾಡಿಕೊಳ್ಳದೇ ಪುನಃ ಶ್ರೀಹರಿಯನ್ನು ಪ್ರಾರ್ಥಿಸಿಕೊಂಡು ವರುಣ ಸೂಕ್ತವನ್ನು ಪಠಿಸಿದಾಗ ಸರ್ವರ ಉರಿಯು ಶಮನವಾಯಿತು. ಇದು ವೆಂಕಟನಾಥರ ಮಂತ್ರಸಿದ್ಧಿ ಹಾಗೂ ಸಹಾನುಭೂತಿಯ ಬಗ್ಗೆ ಒಂದು ಉದಾಹರಣೆ.

 

ಸನ್ಯಾಸಾಶ್ರಮ

ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ತಕ್ಕಂತಹ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದು ವೆಂಕಟನಾಥನನ್ನು ಶಿಷ್ಯರಾಗಿ ಸ್ವೀಕರಿಸುವಂತೆ ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥನಿಗೆ ತಿಳಿಸಿದಾಗ, ವೆಂಕಟನಾಥನು, ಪತ್ನಿ ಮತ್ತು ಮಗನನ್ನು ನೆನಸಿ ನಕಾರಾತ್ಮಕ ಉತ್ತರ ಕೊಟ್ಟರು. ಅದರೆ ಮನೆಯಲ್ಲಿ, ಸಾಕ್ಷಾತ್ ಸರಸ್ವತೀ ದೇವಿಯೇ ಸಾಕ್ಷಾತ್ತಾಗಿ ಬಂದು ಸನ್ಯಾಸಾಶ್ರಮವನ್ನು ಸ್ವೀಕರಿಸುವಂತೆ ಆಜ್ಞೆಯಿತ್ತಳು. ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥನು ಶ್ರೀಸುಧೀಂದ್ರರಿಗೆ ಬಿನ್ನವಿಸಿದಾಗ, ಅದರಂತೆಯೇ ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ರಘುನಾಥಭೂಪಾಲನ ಹಾಗೂ ಆಗಿನ ಶ್ರೇಷ್ಠರಾದ ಅನೇಕ ಜನ ವಿದ್ವಾಂಸರು, ಆಚಾರ್ಯರ ಸಮ್ಮುಖದಲ್ಲಿ ಶ್ರೀ ಸುಧೀಂದ್ರ ತೀರ್ಥರು ಸನ್ಯಾಸಾಶ್ರಮವನ್ನು ನೀಡಿ, ಶ್ರೀ ರಾಘವೇಂದ್ರ ತೀರ್ಥರೆಂಬ ಅದ್ಭುತವಾದ ಹೆಸರಿನಿಂದ ನಾಮಕರಣವನ್ನು ಮಾಡಿ, ಪ್ರಣವಮಂತ್ರೋಪದೇಶಪೂರ್ವಕವಾಗಿ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಿದರು.

 

ಇತ್ತ ತಮ್ಮ ಪತಿಯ ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಭಾವಿಯಲ್ಲಿ ಬಿದ್ದು ಆತ್ಮಹತ್ತೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದಳು. ಆಕೆಯ ದುರವಸ್ಥೆಯನ್ನು ನೋಡಿ ಶ್ರೀರಾಘವೇಂದ್ರತೀರ್ಥರು ಕರುಣೆಯಿಂದ ಆಕೆಯ ಮೇಲೆ ತೀರ್ಥವನ್ನು ಸಂಪ್ರೋಕ್ಷಿಸಿ ಆಕೆಗೆ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.

 

ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳು

ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು. ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು.

 

ಶ್ರೀ ಗಳ ಬೃಂದಾವನದ ಸ್ಥಳ ಹಾಗೂ ಶಿಲೆಯ ಆಯ್ಕೆಯ ಹಿನ್ನಲೆ

ಮಂಚಾಲೆ ಎಮದರೆ ಹಿಂದೆ ಶ್ರೀ ಪ್ರಹ್ಲಾದರಾಯರು ಯಜ್ಞ ಮಾಡಿ ಪಾವನಗೊಳಿಸಿದ ಪವಿತ್ರಸ್ಥಳ. ಆದುದರಿಂದಲೆ ಶ್ರೀ ರಾಘವೇಂದ್ರ ತೀರ್ಥರು ಮಂಚಾಲೆ ಗ್ರಾಮವನ್ನು ಆಯ್ಕೆ ಮಾಡಿಕೊಂಡರು.

ಕೊನೆಗೆ ಶ್ರೀ ರಾಘವೇಂದ್ರ ಗುರುಗಳು ವೃಂದಾವನವನ್ನು ಪ್ರವೇಶಿಸುವ ಸಮಯವು ಸಮೀಪಿಸಿತು. ವೆಂಕಣ್ಣ ವೃಂದಾವನವನ್ನು ಸಿದ್ಧಪಡಿಸಿದ ಮೇಲೆ ಆ ವಿಷಯವನ್ನು ಶ್ರೀಗಳವರಿಗೆ ತಿಳಿಸಿದನು. ಕೂಡಲೇ ಅವರು, ‘ವೆಂಕಣ್ಣಾ ಈ ವೃಂದಾವನವು ಭವಿಷ್ಯದಲ್ಲಿ ಮತ್ತೊಬ್ಬ ಯತಿಪುಂಗವನಿಗೆ ಉಪಯೋಗವಾಗುವುದು. ಆದುದರಿಂದ ನೀನು ಈಗ ಮಾಧವರ ಎಂಬ ಹಳ್ಳಿಯ ಸಮೀಪದಲ್ಲಿ ಒಂದು ದೊಡ್ಡ ಬಂಡೆಯಿದೆ, ಅದನ್ನು ತರಿಸಿ ವೃಂದಾವನ ಕಟ್ಟಿಸು’ ಎಂದರು. ವೆಂಕಣ್ಣನಿಗೆ ತಿಳಿಸಿದರು ವೆಂಕಣ್ಣನವರು ಗುರುಗಳಿಗೆ, ‘ಸ್ವಾಮಿ, ತಾವು ಮಾಧವರದ ಸಮೀಪದಲ್ಲಿ ಇರುವ ಕಲ್ಲಿನಿಂದ ವೃಂದಾವನ ನಿರ್ಮಿಸ ಬೇಕೆಂದು ಹೇಳಿದಿರಿ. ಅದಕ್ಕೆ ಕಾರಣ ಏನಾದರೂ ಇದ್ದರೆ ದಯವಿಟ್ಟು ಹೇಳಿ’ ಎಂದರು. ಆಗ ಶ್ರೀಗಳವರು, ‘ವೆಂಕಣ್ಣಾ ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಅರಣ್ಯ ಸಂಚಾರ ಮಾಡುತ್ತಾ ಏಳು ಘಳಿಗೆಗಳ ಕಾಲ ನಾನೀಗ ಹೇಳಿದ ಶಿಲೆಯ ಮೇಲೆ ಕುಳಿತಿದ್ದರು. ಶ್ರೀರಾಮನ ಪಾದಸ್ಪರ್ಷದಿಂದ ಆ ಶಿಲೆ ಬಹಳ ಪ್ರಭಾವವುಳ್ಳದ್ದಾಗಿದೆ. ಆ ಕಲ್ಲನ್ನು ೭೦೦ ವರ್ಷ ಪೂಜೆ ಮಾಡಿಸಿಕೊಳ್ಳ ಬೇಕಾಗಿದೆ. ಆದುದರಿಂದಲೇ ನಾನು ಆ ಶಿಲೆಯಿಂದ ವೃಂದಾವನವನ್ನು ನಿರ್ಮಿಸಲು ಹೇಳಿದೆನು’ ಎಂದು ವೆಂಕಣ್ಣನವರ ಸಂದೇಹವನ್ನು ನಿವಾರಿಸಿದರು.

 

ರಾಘವೇಂದ್ರ ಸ್ವಾಮಿ ಪವಾಡಪುರುಷರೆಂದೇ ಪ್ರಸಿದ್ಧರಾಗಿದ್ದರೂ ಅವರು ಪ್ರಕಾಂಡ ವಿದ್ವಾಂಸರಾಗಿದ್ದರು, ಅಮೂಲ್ಯ ಗ್ರಂಥಗಳನ್ನೂ ಬರೆದರು ಎಂಬ ಸಂಗತಿ ಬಹಳ ಜನರಿಗೆ ಗೊತ್ತಿಲ್ಲ. ಕನ್ನಡದಲ್ಲಿ ಶ್ರೀಗಳ ಜೀವನವನ್ನು ಆಧರಿಸಿ ಎರಡು ಚಲನಚಿತ್ರಗಳು ತೆರೆ ಕಂಡವು (ನಟ ಸಾರ್ವಭೌಮ ರಾಜಕುಮಾರ ಮತ್ತು ನಟವರ ಶ್ರೀನಾಥರು ಅಭಿನಯಿಸಿದ ಚಿತ್ರಗಳು). ತಮಿಳಿನಲ್ಲಿ ಕೂಡ ಒಂದು ಚಿತ್ರ (ಸೂಪರ್‌ಸ್ಟಾರ ರಜನೀಕಾಂತ ಅಭಿನಯ)ಬಹಳ ಪ್ರಸಿದ್ಧಿ ಪಡೆಯಿತು. ‘ಗುರುವಾರ ಬಂತಮ್ಮ | ಗುರು ರಾಯರ ನೆನೆಯಮ್ಮ|” ಹಾಡು ಅಸಂಖ್ಯ ಕನ್ನಡಿಗರ ಕರ್ಣಗಳಲ್ಲಿ ಸದಾ ನಿನಾದಿಸುತ್ತಿದೆ.

 

ದೇವಾಲಯವು ಭಕ್ತವೃಂದದಲ್ಲಿ ಅತ್ಯಂತ ಜನಪ್ರೀಯವಾಗಿದ್ದು ಪ್ರತಿ ವರ್ಷ ಗುರು ಜಯಂತಿ ಸಮಯದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುವರು. ಎರಡು ದಿನಗಳ ಕಾಲ ಮುಂದುವರಿಯುವ ಈ ಸಂಭ್ರಮಾಚರಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಿದ್ದು, ದೇವಸ್ಥಾನವು ಸಂಭ್ರಮ, ಸಡಗರಗಳಿಂದ ಕೂಡಿರುತ್ತದೆ. ಈ ಸಂಭ್ರಮಕ್ಕೆ ಕಾರಣ ಗುರುಗಳು ಇನ್ನೂ ವೃಂದಾವನದಲ್ಲಿದ್ದರೆಂಬ ಗಾಢವಾದ ನಂಬಿಕೆ. ವೃಂದಾವನ ಪ್ರವೇಶದ ವೇಳೆ ಗುರುಗಳು ಸ್ವತಃ ತಾವು ಮುಂದಿನ 361 ವರ್ಷಗಳ ಕಾಲ ಈ ಸ್ಥಳದಲ್ಲಿ ವಾಸಿಸುವದಾಗಿ ಹೇಳಿದ್ದರೆಂಬುದು ಈ ನಂಬಿಕೆಗೆ ಪುಷ್ಠಿಕೊಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top