fbpx
god

ಐತಿಹಾಸಿಕ ವೈಭವ ನೆನಪಿಸುವ ಕೋಲಾರದ ಸೋಮೇಶ್ವರ ದೇವಾಲಯ!

ಶಿಲ್ಪ ಕಲೆಯ ನಾಡು ಎಂದೇ ಖ್ಯಾತಿ ಪಡೆದಿರುವ ಬೇಲೂರು, ಹಳೇಬೀಡಿನ ಶಿಲ್ಪ ಕಲೆಯನ್ನು ನೆನಪಿಸುವ ಚೋಳರ ಕಾಲದಲ್ಲಿ ನಿರ್ಮಾಣವಾದ ಕೋಲಾರದ ಸೋಮೇಶ್ವರ ಸ್ವಾಮಿ ದೇವಾಲಯ ಇಂದಿಗೂ ಐತಿಹಾಸಿಕ ವೈಭವವನ್ನು ನೆನಪಿಸುತ್ತದೆ.

download-2

ಕೋಲಾರ ನಗರದ ಹೃದಯ ಭಾಗದಲ್ಲಿರುವ ಕಾಮಾಕ್ಷಿ ಸಮೇತ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಣ. 10ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಇದಾಗಿದ್ದು, ಕಾಮಾಕ್ಷಿ ಸಮೇತ ಸೋಮಶ್ವರ ವಿಗ್ರಹವನ್ನ ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

ಚೋಳರ ದೊರೆ ರಾಜರಾಜ ಚೋಳನಿಂದ ನಿರ್ಮಾಣವಾದ ಈ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. ಬೇಲೂರು ಹಳೇಬೀಡನ್ನು ನೆನಪಿಸುವಂತಹ ಶಿಲ್ಪಕಲೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಚೋಳರು ಶಿವನ ಆರಾಧಕರು. ಹಾಗಾಗಿ ಚೋಳರ ಕಾಲದಲ್ಲಿ ಬಹುತೇಕ ಶಿವನ ದೇವಾಲಯಗಳ ನಿರ್ಮಾಣವನ್ನು ಕಾಣಬಹುದು. ಚೋಳರ ಕಾಲದ ಪ್ರಮುಖ ಶಿವದೇವಾಲಯಗಳ ಪೈಕಿ ರಾಜರಾಜ ಚೋಳನ ಕಾಲದಲ್ಲಿ ನಿರ್ಮಾಣವಾಗಿರುವ ಸಿಲೋನ್‍ನ ಅನುರಾಧಪುರದಲ್ಲಿನ ಶಿವದೇವಾಲಯ, ತಂಜಾವೂರಿನ ಬೃಹದೇಶ್ವರ ಹಾಗೂ ಕೋಲಾರದ ಸೋಮೇಶ್ವರಸ್ವಾಮಿ ದೇವಾಲಯ ಹಲವಾರು ವಿಶೇಷತೆಗಳನ್ನೊಳಗೊಂಡಿರುವ ದೇವಾಲಯಗಳಾಗಿವೆ.

ರಾಜರಾಜ ಚೋಳನ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ನಂತರ ವಿಜಯನಗರ ಅರಸರ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ದೇವಾಲಯದ ಮುಖ್ಯ ದ್ವಾರದಲ್ಲಿರುವ ಬೃಹತ್ ಗೋಪುರವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾಲಯ ಪ್ರವೇಶ ಪಡೆಯುತ್ತಿದ್ದಂತೆ ಮಹಾದ್ವಾರ ಸುಂದರವಾಗಿ ಮೂಡಿ ಬಂದಿದೆ. ಒಳನಡೆಯುತ್ತಿದ್ದಂತೆ ವಿಶಾಲವಾದ ಕಲ್ಲಿನಿಂದ ಅದ್ಭುತವಾಗಿ ವಿವಿಧ ಕಲಾ ಕುಸುರಿಯನ್ನು ಕಾಣಬಹುದು.

ಕಲ್ಲನ್ನು ಬಿಟ್ಟು ಬೇರೆ ಯಾವುದೇ ವಸ್ತುವನ್ನು ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಬಳಸಲಾಗಿಲ್ಲ. ವೈಭವದ ಶಿಲ್ಪಕಲೆ ಇರುವ ಈ ದೇವಾಲಯದ ಸಹಸ್ರಾರು ವರ್ಷಗಳಿಂದ ಭಕ್ತರನ್ನು ಹಾಗೂ ಪ್ರವಾಸಿಗರನ್ನ ಆಕರ್ಷಿಸುತ್ತವೆ. ದೇವಾಲಯದ ಹೊರ ಹಾಗೂ ಒಳ ಗೋಡೆಗಳ ಮೇಲೆ ತಮಿಳು ಮತ್ತು ಕನ್ನಡ ಶಾಸನಗಳು ಇಲ್ಲಿ ಕಾಣಬಹುದಾಗಿದೆ.

download-1

ಇಲ್ಲಿನ ಒಂದೊಂದು ಕಮಾನುಗಳು ತನ್ನದೇ ಆದ ದ್ರಾವಿಡ ಶೈಲಿಯನ್ನ ವರ್ಣಿಸುವುದರ ಜೊತೆಗೆ ಬೃಹದಾಕಾರವಾದ ಕಮಾನುಗಳ ಜೋಡಣೆಯಿಂದ ದೇವಾಲಯವನ್ನ ನಿರ್ಮಾಣ ಮಾಡಲಾಗಿದ್ದು, ಇಡೀ ದೇವಾಲಯ ಒಂದೇ ದಿನದಲ್ಲಿ ನಿರ್ಮಿತವಾದದ್ದು ಎಂಬ ಪ್ರತೀತಿ ಇದೆ.

ಬೃಹತ್ ಕಂಬಗಳು, ಕಲ್ಯಾಣ ಮಂಟಪ, ಮುಖಮಂಟಪ, ವಸಂತ ಮಂಟಪ ಮುಖ್ಯ ದೇವಾಲಯದ ಪಕ್ಕದಲ್ಲೆ ಇದೆ. ಸೋಮೇಶ್ವರ ದೇವಾಲಯದಲ್ಲಿ ಪಾರ್ವತಿ ದೇವಿ, ಯೋಗ ನಂದಿ, ಭೋಗ ನಂದಿ ದೇವರ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಭೋಗ ನಂದಿ, ಷಣ್ಮುಖ, ಗಣಪತಿ, ವೀರಭದ್ರ ಸ್ವಾಮಿ, ನಾಗ-ಭಾನು, ನಾಗರಕಲ್ಲು ಸೇರಿದಂತೆ ವಿವಿಧ ದೇವರುಗಳ ವಿಗ್ರಹಗಳ ಪೂಜೆ ಇಲ್ಲಿ ಪ್ರತಿನಿತ್ಯ ನಡೆಯುತ್ತದೆ.

ಗರ್ಭಗುಡಿ ಪಕ್ಕದಲ್ಲೆ ಕಾಮಾಕ್ಷಿ ಅಮ್ಮನವರ ಪ್ರತಿಷ್ಠಾಪನೆ ಮಾಡಲಾಗಿದೆ. ಶಿವನ ಆರಾಧ್ಯ ದೇವರು ದಕ್ಷಿಣಾ ಮೂರ್ತಿ ಚಂಡಿಕೇಶ್ವರನು ಇಲ್ಲಿ ನೆಲೆಸಿದ್ದಾನೆ. ಈ ಚಂಡಿಕೇಶ್ವರನಿಗೆ ಕಿವಿ ಕೇಳಿಸುವುದಿಲ್ಲ. ಅದೊಂದು ಶಾಪ ಆಗಿರುವುದರಿಂದ ಶಿವರಾತ್ರಿ ದಿನ ಸಂಕಲ್ಪ ಮಾಡಿ ಅವರನ್ನ ಏಳಿಸುವ ಪದ್ಧತಿ ಕೂಡ ಇಲ್ಲಿದೆ. ಎಲ್ಲಾ ದೇವಾನು ದೇವತೆಗಳ ದರ್ಶನ ಪಡೆದ ನಂತ್ರ ಚಂಡಿಕೇಶ್ವರನ ದರ್ಶನ ಪಡೆಯುವುದು ಇಲ್ಲಿಯ ಪ್ರತೀತಿ. ಶಿವ ವಾಹನವಾದ ನಂದಿ ವಿಗ್ರಹ ಶಿವನ ಮುಂದೆ ಇದ್ದು, ತಮ್ಮ ಮನಸ್ಸಿನಲ್ಲಿರುವುದನ್ನ, ತಮ್ಮ ಬೇಡಿಕೆಗಳನ್ನ ಈ ನಂದಿ ಕಿವಿಯಲ್ಲಿ ಪ್ರಾರ್ಥನೆಯನ್ನ ಮಾಡಿದ್ರೆ ಅದು ನೆರವೇರುತ್ತೆ ಅನ್ನೋ ಪ್ರತೀತಿ ಕೂಡ ಇದೆ.

ಇನ್ನು, ಕೋಲಾರ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಜನ ಭಕ್ತರು ಇಲ್ಲಿ ಬರುತ್ತಾರೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಬ್ರಹ್ಮ ರಥೋತ್ಸವ ಹಮ್ಮಿಕೊಳ್ಳಲಾಗುತ್ತದೆ. ಕೋಲಾರದ ಪ್ರಮುಖ ಬೀದಿಗಳಲ್ಲಿ ರಥ ಸಂಚರಿಸುತ್ತದೆ. ಮುಜರಾಯಿ ಹಾಗೂ ಪುರಾತತ್ವ ಇಲಾಖೆಗೆ ಒಳಪಡುವ ಸೋಮೆಶ್ವರ ದೇವಸ್ಥಾನ ಸಾವಿರಾರು ಭಕ್ತರನ್ನು ಹೊಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top