Karnataka

ಕನ್ನಡಪರ ಹೋರಾಟಗಾರರ ಮೇಲೆ ಸರಕಾರದ ದೌರ್ಜನ್ಯ

ನಮ್ಮ ಕರ್ನಾಟಕ ವಲಸಿಗರ ಸ್ವರ್ಗವಾಗಿದೆ, ಅದರಲ್ಲೂ ಬೆಂಗಳೂರು ಎಂದರೆ ವಲಸಿಗರಿಗೆ ಅಚ್ಚುಮೆಚ್ಚು, ಕನ್ನಡನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಮಾತು ಈ ಕಾಲಕ್ಕೆ ಅನ್ವಯವಾಗುವುದಿಲ್ಲಾ ಎಂದರೆ ತಪ್ಪಾಗಲಾರದು, ರಾಜಧಾನಿಯಲ್ಲಿ ಬರಿ ಕನ್ನಡವನ್ನಲ್ಲಾ ಕನ್ನಡಿಗರನ್ನು ಉಳಿಸಿ ಎಂಬ ಕಾಲವೂ ಬರುವ ದಿನ ದೂರವಿಲ್ಲಾ!.ರಾಜಧಾನಿಯಲ್ಲಿ ಕೇವಲ ಶೇಕಡಾ ೪೦ ಕನ್ನಡಿಗರು ಉಳಿದವರೆಲ್ಲಾ ಅನ್ಯಭಾಷಿಕರು, ವಲಸಿಗರು, ಕೆಲ ದಶಕದ ಹಿಂದೆ ಇಲ್ಲಿ ಬಂದು ಮನೆ ಬಾಡಿಗೆ ಕೆಳುತ್ತಿದ್ದ ವಲಸಿಗರ ಬಳಿ ಕನ್ನಡಿಗರು ಈಗ ಮನೆಬಾಡಿಗೆ ಕೇಳುವ ಪರಿಸ್ಥಿತಿ ಬಂದಿದೆ. ಹಾಗಾಗಿ ಕನ್ನಡನೆಲದಲ್ಲೇ ಅಸ್ತಿತ್ವ ಕಳೆದುಕೊಳ್ಳುತ್ತಿರುವನೇ ಕನ್ನಡದ ಸಾರ್ವಭೌಮ?! ಎಂದು ಹೇಳಿದರೆ ತಪ್ಪಾಗೊದಿಲ್ಲ. ಇಷ್ಟೆಲ್ಲಾ ತೊಂದರೆಗಳ ನಡುವೆ ಕನ್ನಡ ಹೋರಾಟಗಾರರ ಮೇಲೆ ನಡೆದಿರುವ, ನಡೆಯುತ್ತಿರುವ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಕನ್ನಡ ನೆಲ- ಜಲ- ಭಾಷೆಗಾಗಿ ಸರ್ವಸ್ವ ವನ್ನೂ ಅರ್ಪಿಸಲು ಸಿದ್ಧರಾದ ವೀರ ಕನ್ನಡಿಗರಿಗೆ ಉಳಿಗಾಲವಿಲ್ಲ. ಯಾವುದೇ ಸೂಕ್ಷ್ಮ ಸಂದರ್ಭಗಳಲ್ಲಿ ಪೊಲೀಸರು ಮಾಡುವ ಮೊದಲ ಕೆಲಸ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿಡುವುದು, ಇಲ್ಲವೇ ಊರು ಬಿಡುವಂತೆ ಮಾಡುವುದು. ಅದಕ್ಕೆ ಜಗ್ಗದಿದ್ದರೆ ಕನ್ನಡ ಪರ ಹೋರಾಟಗಾರರಿಗೆ ಪ್ರಕರಣದ ಮೇಲೆ ಪ್ರಕರಣ ಜಡಿದು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಲಾಗುತ್ತಿದೆ.

ಬನ್ನಿ ಕನ್ನಡ ಹೋರಾಟಗಾರರ ಮೇಲೆ ನಡೆದಿರುವ, ನಡೆಯುತ್ತಿರುವ ದೌರ್ಜನ್ಯವನ್ನು ಗಮನಿಸೋಣ

ಗೋಕಾಕ್‌ ಚಳವಳಿಯಿಂದ ಇಂದಿನವರೆಗೂ ಕನ್ನಡ ಹೋರಾಟಗಾರರ ಮೇಲೆ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 90 ಸಾವಿರ. ಈ ಪೈಕಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳು 10 ಸಾವಿರ. ಕನಿಷ್ಠ 2 ಸಾವಿರ ಕನ್ನಡ ಹೋರಾಟಗಾರರು ಇಂದಿಗೂ ವಾರಕ್ಕೆ ಒಮ್ಮೆ ಪೊಲೀಸ್‌ ಠಾಣೆಗೆ ಹೋಗಿ ಸಹಿ ಹಾಕಿ ಬರುತ್ತಿದ್ದಾರೆ!

ಧರ್ಮಸಿಂಗ್‌ ಅವರನ್ನು ಹೊರತುಪಡಿಸಿ, ಯಾವೊಬ್ಬ ಮುಖ್ಯಮಂತ್ರಿಯೂ ಕನ್ನಡ ಹೋರಾಟಗಾರರ ಮೇಲಿನ ಯಾವ ಪ್ರಕರಣ ವನ್ನೂ ಹಿಂತೆಗೆದುಕೊಂಡಿಲ್ಲ. ಇದು ವಾಸ್ತವ. ನಾಡಿನ ನೆಲ- ಜಲ, ಭಾಷೆ- ಸಂಸ್ಕೃತಿ ಅಭಿವೃದ್ಧಿ ವಿಚಾರಕ್ಕೆ ಬೀದಿಗಳಿದು ಹೋರಾಡಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಗೆ ಸಿಕ್ಕಿರುವ ಉಡುಗೊರೆ ಏನೆಂದರೆ ಕ್ರಿಮಿನಲ್‌ ಮೊಕದ್ದಮೆಗಳ “ಆತಿಥ್ಯ’ ಹಾಗೂ “ಜೈಲುವಾಸ’ದ ಶಿಕ್ಷೆ. ಕಾನೂನು- ಸುವ್ಯವಸ್ಥೆ ಹೆಸರಿನಲ್ಲಿ ಪರೋಕ್ಷವಾಗಿ ಚಳವಳಿ ಹತ್ತಿಕ್ಕಲು ಸರ್ಕಾರ ಕಂಡುಕೊಂಡ ಮಾರ್ಗ ಅಂದರೆ ತಪ್ಪಾಗೋಲ್ಲ.

ಯಾವ ಮುಲಾಜು ಇಲ್ಲದೆ ಗೋಕಾಕ್‌ ಚಳವಳಿಯಿಂದ ಹಿಡಿದು ಇದುವರೆಗೂ ನಡೆದಿರುವ ಚಳವಳಿಗಳಲ್ಲಿ ಹೋರಾಟಗಾರರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಕಾವೇರಿ, ಮಹದಾಯಿ, ಬೆಳಗಾವಿ ಗಡಿ ವಿಚಾರದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಿ ಬಂಧಿತರಾದವರನ್ನು ಕೊಲೆ-ದರೋಡೆಯಂತಹ ಘೋರ ಅಪರಾಧ ಮಾಡಿದವರಂತೆ ನಡೆಸಿಕೊಳ್ಳುತ್ತಿರುವುದು ಘೋರ ಅನ್ಯಾಯ. ಇದರಿಂದ ಹೋರಾಟಗಾರರು ವರ್ಷಾನುಗಟ್ಟಲೆ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ನಾಡು-ನುಡಿ, ನೆಲ-ಜಲ ವಿಚಾರದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ, ಧರಣಿ ನಡೆದು ಬಂಧನವಾದಾಗಲೆಲ್ಲಾ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್‌ ಪಡೆಯುವ ಒತ್ತಾಯ ಕೇಳಿಬರುತ್ತದೆ. ಆದರೆ ಅದಕ್ಕೆ ಸರ್ಕಾರದ ಮುಖ್ಯಸ್ಥರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ. ಆದರೆ, ಅದು ಬಾಯಿ ಮಾತಲ್ಲೇ ಉಳಿಯುತ್ತಿದೆ.

ಇತ್ತೀಚೆಗೆ ನಡೆದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹೋರಾಟದಲ್ಲಿ 1 ಸಾವಿರ ಮೊಕದ್ದಮೆ ದಾಖಲಾಗಿ ಮೂರು ಸಾವಿರ ಮಂದಿ ಬಂಧನಕ್ಕೊಳಗಾಗಿದ್ದಾರೆ. ಕನ್ನಡ ಭಾಷೆ ಜಾರಿ ಕುರಿತು ಆದೇಶ ಹೊರಡಿಸದಿದ್ದರೆ ವಿಧಾನಸೌಧಕ್ಕೆ ಮಂತ್ರಿಗಳನ್ನು ಬಿಡುವುದಿಲ್ಲ ಎಂದು ತಡೆಗಟ್ಟಿದ್ದ ಹಾಗೂ ಗಡಿ ವಿಚಾರದಲ್ಲಿ ಬಂದ್‌ಗೆ ಕರೆ ಕೊಟ್ಟಿದ್ದ ವಾಟಾಳ್‌ ರವರಿಗೆ ಸಿಕ್ಕ ಉಡುಗರೆ ಜೈಲು ವಾಸ. ಕನ್ನಡಪರ ಸಂಘಟನೆಗಳ ಒಕ್ಕೂಟದ ವಾಟಾಳ್‌ ನಾಗರಾಜ್‌ ಅವರು 1962ರಿಂದ 72 ರವರೆಗೆ ಎರಡು ಬಾರಿ ತಲಾ ಹತ್ತು ದಿನ ಜೈಲು ವಾಸ ಅನುಭವಿಸಿದ್ದರು. ಅದೇ ರೀತಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 7 ದಿನ ಹಾಗೂ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ 42 ದಿನ ಜೈಲುವಾಸ ಅನುಭವಿಸಿದ್ದರು. ಇನ್ನು ಮೈಸೂರ್ ನಲ್ಲಿ ಕನ್ನಡಪರ ಹೋರಾಟಗಾರರೊಬ್ಬರಿಗೆ ಗಡಿಪಾರಿಗೆ ಆದೇಶ ಕೊಟ್ಟಿದ್ದರು ಮತ್ತು ಬೇರೆ ಬೇರೆ ಪೊಲೀಸ್ ಸ್ಟೇಷನ್ ಗಳಲ್ಲಿ 300 ಕ್ಕೂ ಹೆಚ್ಚು ಕೇಸ್ ಗಳನ್ನು ಹಾಕಲಾಗಿತ್ತು. ಇದು ನಮ್ಮ ಕರ್ನಾಟಕದ ಸ್ಥಿತಿ.

ಕನ್ನಡ ಭಾಷೆಯ ಬೆಳವಣಿಗೆಗೆ ದುಡಿಯಬೇಕಾದ ಸರಕಾರ ಅದ್ಯಾವ ರೀತಿಯಲ್ಲಿ ಕನ್ನಡ ನಾಡನ್ನು ಉದ್ದಾರ ಮಾಡುತ್ತವೆ ಎಂಬುವುದೇ ಯಕ್ಷ ಪ್ರಶ್ನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top