Karnataka

ಈ ಊರಲ್ಲಿ ಕಲ್ಲು ಕೂಡ ಘಂಟೆ ಬಾರಿಸುತ್ತೆ!

ಭಾರತ ದೇಗುಲಗಳ ಬೀಡು, ಇಲ್ಲಿ ಎಲ್ಲವೂ ವಿಸ್ಮಯ, ಅಗೋಚರ, ತರ್ಕಕ್ಕೆ ನಿಲುಕದ್ದು. ಹತ್ತಾರ ವಿಸ್ಮಯಗಳು ನೆಡೆಯುತ್ತಲೇ ಇರುತ್ತವೆ. ನಾವೆಲ್ಲರೂ ಅವುಗಳ ಮುಂದೆ ಕುಬ್ಜರಾಗಿಬಿಡುತ್ತೇವೆ. ಇಲ್ಲೊಂದು ಹಳ್ಳಿ ಇದೆ, ಭಾರತದಲ್ಲಿ ಸಾವಿರ ಸಾವಿರ ಹಳ್ಳಿಗಳು ಇದ್ದಾವೆ, ಅದ್ರಲ್ಲಿ ಏನ್ ಸ್ವಾಮಿ ವಿಶೇಷ ಅಂತೀರಾ…? ನೀವೇ ಓದಿ.

ಕಂಚಗಾರಹಳ್ಳಿ ಎಂಬ ಪುಟ್ಟ ಹಳ್ಳಿ, ಹಳ್ಳಿಯಲೊಂದು ದೇವಸ್ಥಾನವಿದೆ, ಆ ದೇವಸ್ಥಾನದ ಘಂಟೆಯಂತೆ ನಾದ ಹೊಮ್ಮಿಸುವ ವಿಸ್ಮಯಕಾರಿ ಬಂಡೆ ಯಾದಗಿರಿ ಬಳಿಯ ಯಲ್ಲಿ ಇದೆ. ಬಂಡೆಗೆ ಬಾರಿಸಿದರೆ ಘಂಟಾನಾದ ಹೊಮ್ಮುತ್ತೆ! ಏನ್ ಸ್ವಾಮಿ ಏನ್ ಏನೋ ಹೇಳುತ್ತಾ ಇದ್ದೀರಿ, ಕಿವಿ ಮೇಲೆ ಹೂವು ಇಡುತ್ತಿಲ್ಲ ತಾನೇ..? ಎಂದು ನೀವು ಕೇಳಬಹುದು. ಆದ್ರೆ ಇದು ನಿಜ ಸಂಗತಿ ಎನ್ನುವುದು ನಿಮ್ಮ ಗಮನದಲ್ಲಿರಲಿ.

ಜಿಲ್ಲಾ ಕೇಂದ್ರ ಯಾದಗಿರಿಯಿಂದ ಎಂಟೇ ಕಿ.ಮೀ ದೂರದಲ್ಲಿರುವ ಕಂಚಗಾರಹಳ್ಳಿ ಗ್ರಾಮದಲ್ಲಿ ಇಂಥ ವಿಶಿಷ್ಟ ಬಂಡೆ ಇದೆ. ಮತ್ತೊಂದು ಕಲ್ಲಿನಿಂದ ಇದಕ್ಕೆ ಬಡಿದರೆ ದೇವಸ್ಥಾನದಲ್ಲಿನ ಘಂಟೆಯಂತೆ ‘ಢಣ್‌ಢಣ್‌’ ಎಂಬ ನಾದ ಹೊಮ್ಮುತ್ತದೆ. ಸುಮಾರು ಎರಡು ಕಿ.ಮೀ.ವರೆಗೂ ಇದು ಅಲೆಅಲೆಯಾಗಿ ಕೇಳಿಸುತ್ತದೆ. ಬೃಹತ್ ಬಂಡೆಗಳಿಂದ ಆವೃತವಾಗಿರುವ ರಮಣೀಯ ಬೆಟ್ಟ ಯಾವ ಶತಮಾನದಲ್ಲಿ ನಿರ್ಮಾಣವಾಗಿದೆಯೋ ಗೊತ್ತಿಲ್ಲ. ಆದರೆ ಈ ಬೆಟ್ಟದಲ್ಲಿನ ಎಲ್ಲಾ ಕಲ್ಲೂಗಳೂ ನಾದ ಹೊಮ್ಮಿಸುವುದಿಲ್ಲ. ಒಂದು ಬಂಡೆಯಿಂದ ಮಾತ್ರ ಈ ರೀತಿಯ ಶಬ್ದ ಬರುತ್ತಿದೆ.

ಈ ವಿಸ್ಮಯಕಾರಿ ಬಂಡೆಗೆ ನೇರವಾಗಿ ಮೌನೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಈ ಗ್ರಾಮ ಹಿಂದೆ ಆಯುಧಗಳನ್ನು ತಯಾರಿಸಲಾಗುತ್ತಿತ್ತಂತೆ. ಅದರಿಂದಾಗಿಯೇ ಕಂಚಗಾರಹಳ್ಳಿ ಎಂದು ಹೆಸರು ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಐತಿಹಾಸಿಕ ಹಾಗೂ ಪುರಾತನ ಸ್ಮಾರಕಗಳು ಜಿಲ್ಲೆಯಲ್ಲಿ ಹೇರಳವಾಗಿವೆ. ನೋಡಲು ಸಾಮಾನ್ಯ ಕಲ್ಲಿನಂತೆಯೇ ಇರುವ ಈ ಬಂಡೆ ಸುತ್ತಮುತ್ತಲ ಗ್ರಾಮದವರಿಗೆ ಕೌತುಕದ ವಿಷಯ. ಇದರಿಂದ ಹೊಮ್ಮುವ ನಾದಕ್ಕೆ ಕಾರಣ ಗೊತ್ತಾಗಿಲ್ಲ. ಆ ಬಗ್ಗೆ ಸಂಶೋಧನೆಯೂ ನಡೆದಿಲ್ಲ.

ಕಲ್ಲಿನಲ್ಲಿ ಇರುವ ಖನಿಜಾಂಶವೋ ಅಥವಾ ಮತ್ತಾವ ಕಾರಣವಿದೆಯೇ ಎನ್ನುವುದು ಗೊತ್ತಾಗಬೇಕಿದೆ. ಈ ಅಪರೂಪದ ಬಂಡೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಾರೆ. ಹಂಪಿಯ ಸಂಗೀತ ಗೋಪುರದಲ್ಲಿನ ವಿಶಿಷ್ಟ ಕಲ್ಲುಗಳು ಇಲ್ಲಿನವೇ ಆಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಅವುಗಳನ್ನು ಸಂರಕ್ಷಿಸುವ ಕಾರ್ಯ ಮಾತ್ರ ಆಗುತ್ತಿಲ್ಲ. ನಿಧಿಗಳ್ಳರ ಹಾವಳಿಗೆ ಇಂಥ ಸ್ಮಾರಕಗಳು ಬಲಿಯಾಗುತ್ತಿವೆ. ಆದ್ದರಿಂದ ಈ ವಿಸ್ಮಯಕಾರಿ ಬಂಡೆಯ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ.

“ಬಂಡೆಯಲ್ಲಿ ಕಬ್ಬಿಣ ಅಥವಾ ಮತ್ತಾವುದೋ ಖನಿಜಾಂಶ ಇರುವ ಸಾಧ್ಯತೆಯಿದೆ. ಅಲ್ಲಿಗೆ ಭೇಟಿ ನೀಡಿ ಕಲ್ಲಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುವುದು. ನಂತರವಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲು ಸಾಧ್ಯ” ಎಂದು ಹೇಳುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮುಕುಂದಪ್ಪ.

ಕಂಚಗಾರಹಳ್ಳಿ ನಿವಾಸಿಯಾದ ಸೈದಪ್ಪ ಗುತ್ತೇದಾರ ಮಾತನಾಡಿ “ಅಪರೂಪದ ಬಂಡೆಯನ್ನು ಸಂರಕ್ಷಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ನಿಧಿಗಳ್ಳರ ಕಣ್ಣಿಗೆ ಬೀಳುವ ಮುನ್ನವೇ ಆ ಕಾರ್ಯ ಆಗಬೇಕು. ಜತೆಗೆ ಈ ಬಂಡೆ ಬಗ್ಗೆ ಸಂಶೋಧನೆ ನಡೆಸಿ ನಾದದ ಕಾರಣ ಪತ್ತೆ ಮಾಡಬೇಕ”. ಎಂದು ಒತ್ತಾಯ ಮಾಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top