fbpx
Editor's Pick

ಮನುಷ್ಯ ನಿಸ್ವಾರ್ಥಿಯಾದಾಗ

ಒಮ್ಮೆ ಮರುಭೂಮಿಯಲ್ಲಿ ಒಂದಷ್ಟು ಸಜ್ಜನರ ಗುಂಪು ಸಾಗಿತ್ತು. ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿ ಗುಂಪಿನ ಸದಸ್ಯರೆಲ್ಲ ದಿಕ್ಕಾಪಾಲಾಗಿ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಚದುರಿದರು. ಅವರಲ್ಲಿ ಒಬ್ಬಾತ ಮಾತ್ರ ನಡೆಯಲು ಕೂಡ ತ್ರಾಣವಿಲ್ಲದೆ ಹೆಜ್ಜೆ ಇಡಲಾರಂಭಿಸಿದ. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅವನಿಗೆ ಜೀವವೇ ಹೋದ ಅನುಭವವಾಯಿತು. ಸರಿ ಇನ್ನೇನು ಮಾಡುವುದೆಂದು ಅಲ್ಲಿಯೇ ಭಗವಂತನ ಧ್ಯಾನ ಮಾಡಲಾರಂಭಿಸಿದ ಸ್ವಲ್ಪ ಸಮಯದ ನಂತರ ಸುತ್ತಮುತ್ತಲಿನ ದೂಳಿನ ವಾತಾವರಣ ಶುಭ್ರವಾಗಿ ಕನ್ನಡಿಯಂತೆ ಹೊಳೆಯತೊಡಗಿತು. ಆತನ ಕಣ್ಣಿಗೆ ಅರ್ಧ ಕಿ.ಮೀ ದೂರದಲ್ಲಿ ಒಂದು ಹಾಳಾದಂತೆ ಇರುವ ಮರದ ದಿಂಬುಗಳಿಂದ ರಚಿತವಾದ ಒಂದು ಹಳೆಯ ಬಿಡಾರ ಕಂಡಿತು.

ಅಲ್ಲೇನಾದರೂ ಸಿಗಬಹುದೆಂಬ ಆಶ್ವಾಸನೆಯಿಂದ ತೆವಳುತ್ತ, ತೆವಳುತ್ತ ಅದರ ಹೊಳಹೊಕ್ಕವನಿಗೆ ನೇರವಾಗಿ ಕಂಡಿದ್ದು ಕೊಳವೆಯಿಂದ ನೀರೆತ್ತುವ ಯಂತ್ರ. ನೇರವಾಗಿ ಅಲ್ಲಿಗೆ ಧಾವಿಸಿ ಅದನ್ನು ತಿರುಗಿಸಲು ಶರುಮಾಡಿದ. ಉಸಿರು ಬಿಗಿಹಿಡಿದು ಅಯ್ಯೋ! ಇನ್ನಾಗದು ಸತ್ತೇ… ಎಂದು ಏದುಸಿರು ಬಿಡುತ್ತ ಹಾಗೆಯೇ ಪಕ್ಕಕ್ಕೆ ಕುಸಿದು ಬಿದ್ದ. ತಕ್ಷಣ ಅಲ್ಲಿಯೇ ಇದ್ದ ಒಂದು ಬಾಟಲಿ ಅವನ ಕಣ್ಣಿಗೆ ಬಿತ್ತು, ಒಂದೇ ಉಸಿರಿನಲ್ಲಿ ಅದನ್ನು ಎತ್ತಿ ಗಟಗಟ ನೀರು ಕುಡಿಯಬೇನ್ನುವಷ್ಟರಲ್ಲಿ ಅದರ ಜೊತೆಗಿದ್ದ ಮರದ ತಿಳಿಯಾದ ಹಲಗೆಯ ಮೇಲೆ ಬರೆದುದನ್ನು ಓದಿದ ಅದು ಹೀಗಿತ್ತು. “ ಈ ನೀರನ್ನು ನೀರೆತ್ತುವ ಯಂತ್ರದ ರಂಧ್ರಕ್ಕೆ ಹಾಕಿ ಮತ್ತೆ ಜೋರಾಗಿ ತಿರುಗಿಸಿ ಬೇಕಾಗುವಷ್ಟು ನೀರು ಬರುತ್ತದೆ, ನಂತರ ಈ ಬಾಟಲಿಗೆ ಮರೆಯದೆ ನೀರು ತುಂಬಿಸಿ ಅಲ್ಲಿಯೇ ಇಡಿ, ನಿಮ್ಮಂತೆ ಬಳಲಿ ಬಂದವರಿಗೆ ನೆರವಾಗುತ್ತದೆ” ಎಂದು.

ಈಗಾಗಲೇ ರೋಸಿ ಹೋಗಿದ್ದ ಅವನು ಈಗ ಗೊಂದಲಕ್ಕೊಳಗಾದ, ನಂತರ ಆಲೋಚನೆ ಮಾಡಿದ ‘ ಒಂದು ವೇಳೆ ನಾನು ಈ ನೀರನ್ನು ಕುಡಿದು ನಡೆಯಲಾರಂಭಿಸದರೆ ಎಷ್ಟು ದೂರ ಸಾಗಬಹುದು, ಬಹುಷಃ ಮಾರ್ಗಮಧ್ಯದಲ್ಲಿಯೇ ಜೀವಹೋಗಬಹುದು, ಈಗ ಈ ನೀರನ್ನು ಕುಡಿಯದಿದ್ದರೆ ಸ್ವಲ್ಪ ಹೊತ್ತಿನಲ್ಲೇ ಜೀವ ಹೋಗಬಹುದು, ಏನಾದರೂ ನನ್ನ ಜೀವ ಹೋಗುವುದೇ ಆಗಿದೆ, ಇರಲಿ ಈ ನೀರನ್ನು ಆ ಯಂತ್ರದ ರಂಧ್ರಕ್ಕೆ ಹಾಕಿ ತಿರುಗಿಸೋಣ’ ಎಂದು ಆ ಬಾಟಲಿಯಲ್ಲಿದ್ದ ನೀರನ್ನು ಭಗವಂತನ ನಾಮ ಸ್ಮರಣೆ ಮಾಡುತ್ತ ಆ ರಂಧ್ರಕ್ಕೆ ಹಾಕಿ ತನ್ನೆಲ್ಲ ಭಲ ಪ್ರಯೋಗಿಸಿ ಯಂತ್ರವನ್ನು ತಿರುಗಿಸಿದ, ನಾಲ್ಕೈದು ಬಾರಿ ತಿರುಗುತ್ತಲೇ ಗುಕ್ ಎಂದು ಶಬ್ಧ ಮಾಡಿ ನೀರು ಬುಗ್ ಎಂದು ಮೇಲೆದ್ದು ಇವನನ್ನು ಸಂಪೂರ್ಣ ತೋಯಿಸಿತು. ತಕ್ಷಣ ಹುಮ್ಮಸ್ಸಿನಲ್ಲಿ ಅಲ್ಲಿಯೇ ಇದ್ದ ಗುಡಾರದಲ್ಲಿ ನೀರನ್ನು ತುಂಬಿ ಬೇಕಾಗುವಷ್ಟು ನೀರನ್ನು ಕುಡಿದು ಶಕ್ತಿ ತುಂಬಿಕೊಂಡ, ಖುಷಿಯಿಂದ ಸ್ನಾನವನ್ನೂ ಮಾಡಿ ಮತ್ತಷ್ಟು ಚೈತನ್ಯ ತಂದುಕೊಂಡ.

ನಂತರ ಅಲ್ಲಿಂದ ಹೊರಡಲನುವಾದಾಗ ಅವನಿಗೆ ಆ ಬಾಟಲಿಗೆ ಮರೆಯದೆ ನೀರು ತುಂಬಿ ಇಲ್ಲಿಯೇ ಇಡಿ ಎಂದಿದ್ದ ಹೇಳಿಕೆ ನೆನಪಾಗಿ, ಆ ಬಾಟಲಿ ತುಂಬ ನೀರು ತುಂಬಿಸಿ ಮತ್ತೆ ಆ ಹೇಳಿಕೆಯ ಕೆಳಗೆ ಹೀಗೆ ಬರೆದ “ ಈ ಮೇಲಿನ ಹೇಳಿಕೆ ಪಾಲಿಸಿದರೆ ಖಂಡಿತ ಫಲಿತಾಂಶ ಸಿಗುತ್ತದೆ, ನಿರ್ಲಕ್ಷಿಸದಿರಿ, ಇದನ್ನು ನಾನೂ ಪರೀಕ್ಷಿಸಿದ್ದೇನೆ” ಎಂದು, ನಂತರ ಅದರ ಜಾಗದಲ್ಲಿಟ್ಟು ಬಾಗಿಲ ಬಳಿ ಬಂದ. ತಕ್ಷಣ ಅವನಿಗೆ ಇನ್ನೊಂದು ಕುತೂಹಲ ಕಾದಿತ್ತು, ಅದೇನೆಂದರೆ; ಆ ಬಾಗಿಲ ಹಿಂದೆ ಹೀಗಿತ್ತು “ ಈ ಕೆಳಗಿನ ನಕ್ಷೆಯನ್ನು ಅನುಸರಿಸಿ ನಡೆದರೆ, ನೀವು ಜನವಸತಿಯಿರುವ ಪ್ರದೇಶವನ್ನು ತಲುಪುತ್ತೀರಿ” ಎಂದು. ಇದರಿಂದ ಆತನಿಗೆ ಆದ ಆನಂದ ಅಷ್ಟಿಷ್ಟಲ್ಲ. ಆತ ಭಗವಂತನ ನಾಮಸ್ಮರಣೆ ಮಾಡುತ್ತ ಜನವಸತಿ ಇರುವ ಪ್ರದೇಶ ಸೇರಿಕೊಂಡ. ಅನಂತರ ಆತನ ಮನಸ್ಸಿಗೆ ಬಂದ ಆಲೋಚನೆ ಇದು “ ನಾವು ಹತಾಶರಾಗಿ ಸ್ವಾರ್ಥಿಗಳಾದರೆ ನಮ್ಮ ಜೀವನ ಕ್ಷಣಿಕ ಸುಖದಲ್ಲಿ ಕೊನೆಯಾಗುತ್ತದೆಯೇ ವಿನಃ ಈ ರೀತಿ ನೊಂದು ಬೆಂದವರಿಗೆ ಆಶವಾದವನ್ನು ತುಂಬುವಂತಾಗಲು ಸಾಧ್ಯವಿಲ್ಲ” ಎಂದು.

ನಾವು ಸ್ವಾರ್ಥಿಗಳಾದರೆ ನಮ್ಮ ಬದುಕು ಸಾರ್ಥಕತೆ ಪಡೆಯುವಲ್ಲಿ ವಿಫಲವಾಗಬಹುದು, ನಿಸ್ವಾರ್ಥಿಗಳಾದರೆ ಇತರರಿಗೆ ನೆರವಾಗಿ ಸಾರ್ಥಕತೆ ಪಡೆಯಬಹುದು.


ಪೃಥ್ವಿರಾಜ ಎಲ್
ಸಹಾಯಕ ಪ್ರದ್ಯಾಪಕರು
ಇ & ಇ ವಿಭಾಗ, ಜೆ.ಐ.ಟಿ ದಾವಣಗೆರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top