fbpx
god

ಉತ್ಥಾನ ದ್ವಾದಶಿ ಮಹತ್ವ!!

ವರ್ಷದ 12 ಮಾಸಗಳಲ್ಲಿ ಕಾರ್ತಿಕ ಮಾಸಕ್ಕೆ ಬಹಳ ಮಹತ್ವವಿದೆ. ಅತ್ಯಂತ ಮಂಗಳವಾದ ಪರಮ ಪುಣ್ಯಕರವಾದ ಮಾಸ ಇದಾಗಿದೆ. ದೀಪಾರಾಧನೆಯ ಈ ಮಾಸ ದೇವರುಗಳಿಗೆ ಪ್ರಿಯವಾದ ಮಾಸವಾಗಿದ್ದು ಭಗವಂತ ಶ್ರೀಮನ್ನಾರಾಯಣನನ್ನು ನಾನಾ ರೀತಿಯಲ್ಲಿ ಈ ಮಾಸದಲ್ಲಿ ಆರಾಧಿಸುತ್ತಾರೆ. ದೀಪಗಳಿಗೆ ಪೂಜೆ ಮಾಡುವುದು ದಾನ ಮಾಡುವುದು ಈ ಮಾಸದ ಇನ್ನೊಂದು ವಿಶೇಷ. ಈ ಕಾರ್ತಿಕ ಮಾಸದಲ್ಲೇ ಬರುವ ಅತಿ ಪವಿತ್ರವಾದ ಹಬ್ಬ “ಉತ್ಥಾನ ದ್ವಾದಶಿ” ಅಥವಾ “ತುಳಸಿ ಹಬ್ಬ” ಶ್ರೀಮನ್ನಾರಾಯಣನು ತನ್ನ ನಿದ್ರಾಮುದ್ರೆಯನ್ನು ಬಿಟ್ಟು ಎಚ್ಚರಿಕೆ ಹೊಂದುವ ಮುದ್ರೆಯನ್ನು ತನ್ನ ಭಕ್ತರಿಗೆ ತೋರಿಸುವ ದಿನವು ದ್ವಾದಶಿಯಾದ್ದರಿಂದ ಇದನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ. ಶ್ರೀಮನ್ನಾರಾಯಣನು ಹಾಲ್ಗಡಿನಲ್ಲಿ ತನ್ನ ಸುಖಶಯನದಿಂದ ಎಳುವ ದಿನವಾದ್ದರಿಂದ “ಕ್ಷೀರಾಬ್ಬಿವೃತ” ಎಂದು ಇದನ್ನು ಕರೆಯುತ್ತಾರೆ. ‘ಉತ್ಥಾನ’ ಎಂದರೆ ಏಳುವುದು ಎಂದರ್ಥ.ಇದು ಮಹಿಳೆಯರಿಗೆ ಪವಿತ್ರ ಹಾಗೂ ವಿಶೇಷ ಹಬ್ಬವು ಹೌದು.

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ಪೂಜೆ ಅಥವಾ ಗೋದೂಳಿ ಸಮಯದಲ್ಲಿ ತುಳಸಿ ಆರಾಧನೆ ಮಾಡುವುದು ಈ ಹಬ್ಬದ ವಿಶೇಷ. ತುಳಸಿಗಿಡ ಇರುವ ಸ್ಥಳದಲ್ಲಿ ಈ ಹಬ್ಬದ ಪೂಜೆಯನ್ನು ನೆರವೇರಿಸಬೇಕು. ವಿಷ್ಣು ಪುರಾಣದ ಪ್ರಕಾರ ಈ ದ್ವಾದಶಿಯನ್ನು ತುಳಸಿ ಕಲ್ಯಾಣದ ಪುಣ್ಯಕಾಲ ಎನ್ನುತ್ತಾರೆ. ಶ್ರೀ ತುಳಸಿ ಶ್ರೀಮನ್ನಾರಾಯಣನನ್ನು ವಿವಾಹವಾದ ಮಹಾ ಮೂಹರ್ತವಂತೆ, ದೀಪಾವಳಿ ಹಬ್ಬದ ನಂತರ ಬರುವ ಕಾರ್ತಿಕ ಶುಕ್ಲ ದ್ವಾದಶಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಶ್ರೀ ವೈಷ್ಣವ ದೇವಾಲಯಗಳಲ್ಲಿ ವಿಶೇಷ ರೀತಿಯ ಸೇವೆ ಪೂಜೆಗಳು ಮತ್ತು ದೀಪದ ಅಲಂಕಾರ ಮತ್ತು ಶ್ರೀಹರಿಯ ಉತ್ಸವಗಳನ್ನು ನಡೆಸುತ್ತಾರೆ. ಮನೆಯ ಮುಂದಿನ ತುಳಸಿ ಕಟ್ಟೆಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಪ್ರತಿಷ್ಟಾಪಿಸಿ ಷೋಡಷೋಪಚಾರ ಪೂಜೆ ಮಾಡುತ್ತಾರೆ. ಈ ಹಬ್ಬವನ್ನು ದೇಶದ ವಿವಿಧೆಡೆಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಆದರೆ ಸಾಮಾನ್ಯವಾಗಿ ವಿಷ್ಣುವನ್ನು ಹಾಗೂ ಧಾತ್ರಿ (ಅಂದರೆ ನೆಲ್ಲಿ ಗಿಡದ ಟೊಂಗೆ) ಜೊತೆ ತುಳಸಿಯನ್ನು ಆರಾಧಿಸುವುದು. ಈ ಹಬ್ಬದ ಪ್ರಮುಖ ವಿಶೇಷವಾಗಿದೆ.

ತುಳಸಿ ಕಟ್ಟೆಯನ್ನು ನಾನಾ ರೀತಿಯ ಪುಷ್ಪಗಳಿಂದ ಅಲಂಕರಿಸಿ ಮಹಾವಿಷ್ಣುವನ್ನು ಪುರುಷ ಸೂಕ್ತದಿಂದಲೂ ಶ್ರೀತುಳಸಿಯನ್ನು ಶ್ರೀಸೂಕ್ತದಿಂದಲೂ ಪೂಜೆ ನೇರವೇರಿಸುತ್ತಾರೆ. ತುಳಸಿದೇವಿಗೆ ಮಂಗಳಸ್ನಾನ ಮತ್ತು ಹರಿದ್ರಾಕುಂಕುಮ ಸುಗಂಧದ್ರವ್ಯಗಳನ್ನು ಸುಮಂಗಲಿಯರು ಪೂಜೆ ಮಾಡುತ್ತಾರೆ. ಶ್ರೀಕೃಷ್ಣನ ಅಷ್ಟೋತ್ತರ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಪಾನಕ, ಕೋಸಂಬರಿ, ಹಣ್ಣಿನ ರಾಸಾಯನ, ಮತ್ತು ವಿವಿಧ ಬಗೆಯ ಭಕ್ಷ್ಯಗಳಿಂದ ನೇವೈದ್ಯಮಾಡಿ ಮುತ್ತೈದೆಯರನ್ನು ಆಹ್ವಾನಿಸಿ ತುಳಸಿಗೆ ಆರತಿ ಬೆಳಗುವರು ಹಾಗೂ ಬಂದ ಮುತ್ತೈದೆಯರಿಗೆಲ್ಲ ಅರಿಶಿನ, ಕುಂಕುಮ, ದಕ್ಷಿಣೆ ತಾಂಬೂಲವನ್ನು ಕೊಡುವುದು ವಾಡಿಕೆ.ಗೋಧೂಳಿ ಲಗ್ನದಲ್ಲಿ ಪೂಜೆ ಪ್ರಾರಂಭವಾಗುವುದರಿಂದ ದೀಪದ ಅಲಂಕಾರ ಮಾಡಿ ಹಣತೆಗಳಲ್ಲಿ ದೀಪವನ್ನು ಬೆಳಗುತ್ತಾರೆ. ಈ ದಿನ ತುಳಸಿ ಕಲ್ಯಾಣದ ದಿನ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಭಗವಂತ ಶ್ರೀಮನ್ನಾರಾಯಣ ರುಕ್ಮಿಣಿಯಾಗಿ ಅವತರಿಸಿದ ತುಳಸಿಯನ್ನು ವಿವಾಹ ಮಾಡಿಕೊಂಡ ಪುಣ್ಯಗಳಿಗೆ ಇದಾಗಿದೆ ಎಂದು ನಂಬಿಕೆ. ಶ್ರೀಹರಿಗೆ ತುಳಸಿ ಪರಮಪ್ರಿಯ ಆದ್ದರಿಂದ ತುಳಸಿಯನ್ನು ಪೂಜಿಸಿದರೆ ಆ ಪೂಜೆ ಶ್ರೀಹರಿಗೆ ಸೇರುತ್ತದೆ. ಭಗವಂತನಿಗೆ ನೈವೇದ್ಯವನ್ನು ಮಾಡುವಾಗ ತುಳಸಿ ಅಗತ್ಯವಾಗಿರಬೇಕು.

ತುಳಸಿ ಹಬ್ಬದಂದು ತುಳಸಿ ಪೂಜೆ ಮಾಡುವಾಗ ತುಳಸಿ ಗಿಡದಲ್ಲಿ ನೆಲ್ಲಿ ಟೊಂಗೆಯನ್ನು ಸಿಕ್ಕಿಸಿ ಪೂಜೆ ಮಾಡುವುದಕ್ಕೆ ಒಂದು ಸ್ವಾರಸ್ಯಕರವಾದ ಕಥೆಯಿದೆ. ಶ್ರೀಮನ್ನಾರಾಯಣ ಕಾರ್ತಿಕ ಶುಕ್ಲ ಪಕ್ಷ ದ್ವಾದಶಿಯ ದಿನ ತುಳಸಿಯನ್ನು ವರಿಸಿದ್ದನೆಂದು ಪ್ರತೀತಿ. ಶ್ರೀತುಳಸಿ ತ್ರೇತಾಯುಗದಲ್ಲಿ ಮಾನವ ರೂಪದಲ್ಲಿ ಅವತರಿಸಿದ್ದಳು. ತ್ರೇತಾಯುಗದಲ್ಲಿ ವೃಂದಾ ಎಂಬ ನಾಮಧೇಯದಿಂದ ಹುಟ್ಟಿದ್ದಳು. ಈಕೆಯ ಪತಿಯ ಹೆಸರು “ಜಲಂದರ” ಮಹಾಶಿವಭಕ್ತನಾಗಿದ್ದ ಈತ ತಪ್ಪಸ್ಸಿನಿಂದ ವರ ಪಡೆದು ಅಜೇಯನಾಗಿದ್ದನು. ಇತನ ತೇಜಸ್ಸು ಮತ್ತು ಶಕ್ತಿಅಧಿಕವಾಗಲು ಈತನ ಪತ್ನಿ ವೃಂದೆಯ ಪಾತಿವೃತ್ಯವೂ ಕಾರಣವಾಗಿತ್ತು. ಈತನು ಅಮರನಾಗಬೇಕೆಂಬ ಮಹಾದಾಸೆಯಿಂದ ಭಗವಂತನನ್ನು ಕುರಿತು ಉಗ್ರವಾದ ತಪಸ್ಸನ್ನು ಮಾಡಿದನು. ತಪಸ್ಸಿನ ಫಲವಾಗಿ ಭಗವಂತ ಪ್ರತ್ಯಕ್ಷನಾದಾಗ ಅಮರತ್ವವನ್ನು ದಯಪಾಲಿಸುವಂತೆ ಕೇಳಿದನು. ಆದರೆ ಪ್ರಕೃತಿಗೆ ವಿರುದ್ಧವಾಗಿ ವರಕೊಡಲು ಸಾಧ್ಯವೇ? ಹುಟ್ಟಿದವರು ಸಾಯಲೇಬೇಕು. ಹಾಗಾಗಿ ಅಮರತ್ವಕ್ಕೆ ಸರಿಸಮವಾದ ವರವನ್ನು ನೀಡಿದನು. ಜಲಂಧರನ ಪತ್ನಿಯ ಪಾತಿ ವೃತ್ಯ ಎಲ್ಲಿಯವರೆಗೂ ಪರಿಶುದ್ಧವಾಗಿರುತ್ತದೋ ಅಲ್ಲಿಯವರೆಗೂ ಸಾವು ನಿನ್ನ ಬಳಿ ಬರುವುದಿಲ್ಲ ಎಂಬ ವರ ನೀಡಿದನು. ವೃಂದ ಮಹಾ ಪತಿವ್ರೃತೆಯಾದ್ದರಿಂದ ಜಲಂಧರ ಕೊಬ್ಬಿದನು. ಅವಳ ಪಾತಿವೃತ್ಯ ಎಷ್ಟು ತೀಕ್ಷ್ಣವಾಗಿತ್ತೆಂದರೆ ಸಾಮಾನ್ಯರು ಅವಳ ಹತ್ತಿರ ಬಂದರೆ ಸುಟ್ಟು ಬೂದಿಯಾಗುತ್ತಿದ್ದರು. ಆ ಕಾರಣದಿಂದ ಜಲಂಧರ ಸಾವು ನನ್ನ ಹತ್ತಿರಬರುವುದಿಲ್ಲವೆಂದು ಬಲವಾಗಿ ನಂಬಿದ್ದನು.

ಹೀಗೆ ಕೊಬ್ಬಿದ ಜಲಂಧರ ದೇವಭಕ್ತರಿಗೆ, ತಪಸ್ವಿಗಳಿಗೆ, ಸಾಮಾನ್ಯರಿಗೆ ತೊಂದರೆ ಕೊಡಲಾರಂಭಿಸಿದನು. ಭೂಲೋಕದಲ್ಲಿ ಯಜ್ಞ ಯಾಗಾದಿಗಳಿಗೆ ತಡೆಯೊಡ್ಡಿದನು. ಇದರಿಂದ ನೊಂದ ಋಷಿಗಳು ದೇವಾನುದೇವತೆಗಳು ಭೂಲೋಕದ ಜನ ನಾರಾಯಣನ ಮೊರೆ ಹೊಕ್ಕರು. ವೃಂದಳ ಪಾತಿವೃತ್ಯ ಭಂಗಗೊಳಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ! ಜನರ ಮೊರೆ ಆಲಿಸಿದ ಶ್ರೀಹರಿ. ಭೂಲೋಕದಲ್ಲಿ ದುಷ್ಟನ ಸಂಹಾರವಾಗಿ ಧರ್ಮಸಂಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ಶ್ರೀಹರಿ ಮಾನವರೂಪದಲ್ಲಿ ಬಂದು ವೃಂದೆಯ ಪಾತಿವೃತ್ಯ ಭಂಗಪಡಿಸಿದನು. ಇದರಿಂದ ಜಲಂದರ ಸಾವನ್ನಪ್ಪಿದನು. ಲೋಕಕ್ಕೆ ನೆಮ್ಮದಿಯಾಯಿತು.

ಆದರೆ ವೃಂದ ಚಿಂತೆ ನಿರ್ಮಿಸಿಕೊಂಡು ಮಂಗಳ ರೂಪಿಣಿ ಪಾರ್ವತಿಯನ್ನು ಸ್ಮರಿಸುತ್ತಾ ತನ್ನನ್ನು ಅಗ್ನಿಗೆ ಸಮರ್ಪಿಸಿಕೊಂಡಾಗ ಪಾರ್ವತಿ ಆ ಅಗ್ನಿ ಕುಂಡವನ್ನು ತನ್ನ ಮಂತ್ರ ಶಕ್ತಿಯಿಂದ ತುಳಸಿ. ನೆಲ್ಲಿ ಮತ್ತು ಜಾಜಿ ಗಿಡಗಳಿಂದ ನಂದವನವನ್ನಾಗಿ ಮಾಡುತ್ತಾಳೆ. ಅಂದಿನಿಂದ ತುಳಸಿ ನಿವಾಸ ಬೃಂದಾವನವಾಯಿತು. ಹಾಗಾಗಿ ತುಳಸಿ ಹಬ್ಬದ ದಿನ ನೆಲ್ಲಿಕಾಯಿ ಟೊಂಗೆ ಮತ್ತು ಜಾಜಿ ಹೂವುಗಳಿಂದ ಪೂಜೆ ಮಾಡುತ್ತಾರೆ. ಶ್ರೀಹರಿಗೆ ತುಳಸಿ ಪರಮಪ್ರಿಯ. ಆದ್ದರಿಂದ ತುಳಸಿಯನ್ನು ಪೂಜಿಸಿದರೆ ಆ ಪೂಜೆಯು ಶ್ರೀಹರಿಗೆ ಸೇರುತ್ತದೆ. ಪವಿತ್ರತೆ ಸಂಕೇತವಾಗಿ ತುಳಸಿ ಪೂಜೆಗೊಳ್ಳುತ್ತದೆ. ತುಳಸಿ ಪೂಜೆಯನ್ನು ಮಾಡುವಾಗ ಕೆಳಗಿನ ಶ್ಲೋಕವನ್ನು ಹೇಳಿಕೊಳ್ಳಬೇಕು.

ನಮಃ ತುಳಸಿ ನಮೋ ವಿಷ್ಣು ಪ್ರಿಯೆ ಶುಭೇ!
ನಮೋ ಮೋಕ್ಷಪ್ರದೇ ದೇವಿ
ನಮಃ ಸಂಪತ್ ಪ್ರದಾಯಿನಿ.
ಇಷ್ಟೇ ಅಲ್ಲ ಕಾರ್ತಿಕಮಾಸದ ಸೋಮವಾರಗಳು ಶಿವನಿಗೆ ಅತ್ಯಂತ ಪ್ರಿಯವಾಗಿದ್ದು, ಕಾರ್ತಿಕ ಮಾಸದ ಸೋಮವಾರಗಳಂದು ಶಿವನದರ್ಶನ ಮಾಡಿದರೆ ಪುಣ್ಯ ಲಭಿಸುತ್ತದೆ. ಪರಮಪುಣ್ಯಕರವಾದ ಕಾರ್ತಿಕಮಾದದಲ್ಲಿ ಎರಡು ಶ್ಲೋಕಗಳನ್ನು ಆಗಾಗ ಪಠಿಸುತ್ತಿದ್ದರೆ ದೈವಕೃಪೆಯಾಗುತ್ತದೆ.
ಶ್ರೀಹರಿಯ ಕೃಪೆಗಾಗಿ
ನಾರಾಯಣಯ ವಿದ್ಮಹೇ
ವಾಸುವೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್ ಎಂದು …………….
ಈಶ್ವರನ ಕೃಪೆಗಾಗಿ
ಮಹೇಶ್ವರಾಯ ವಿದ್ಮಹೇ
ರುದ್ರದೇವಾಯ ಧೀಮಹಿ
ತನ್ನೋ ಮೃತ್ಯುಂಜಯ ಪ್ರಚೋದಯಾತ್ ಎಂದು ಪರಿಸುತ್ತಿರಬೇಕು.

ಪ್ರಕಾಶ್ ಕೆ.ನಾಡಿಗ್, ಶಿವಮೊಗ್ಗ
Mobile-9845529789

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top