fbpx
god

ತುಳಸಿ ಮತ್ತು ಶ್ರೀಕೃಷ್ಣನ ವಿವಾಹದ ಹಿಂದಿನ ಧಾರ್ಮಿಕ ಮಹತ್ವ ತಿಳಿಯೋಣವೇ!!

ತುಳಸಿ ಹಬ್ಬ

ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ತುಳಸಿ ಕಲ್ಯಾಣ ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೇ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು. ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು.

ತುಳಸಿ ಮತ್ತು ಶ್ರೀಕೃಷ್ಣನ ವಿವಾಹದ ಹಿಂದಿನ ಧಾರ್ಮಿಕ ಮಹತ್ವ :

  • ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಿದಂತೆ ನಾರಾಯಣನಿಗೆ ತುಲಸಿ ಮಾಲೆ ಅತ್ಯಂತ ಪ್ರೀತಿಪಾತ್ರವಾದುದು.
  • ತುಲಸಿ ಒಬ್ಬ ಗೋಪಿಕೆಯಾಗಿಯೂ ಶ್ರೀಕೃಷ್ಣನ ಪ್ರೇಮಿಯಾಗಿದ್ದಳಂತೆ. ಆತನ ತುಲಾಭಾರದಲ್ಲಿ ಒಂದೆಸಳು ತುಲಸಿಯನ್ನು ಇಡಲು ಆ ಕಡೆಗೇ ತಕ್ಕಡಿ ವಾಲಿತ್ತೆಂದು ಕಥೆಯಿದೆ.
  • ಭಕ್ತೆ ಮೀರಾಳನ್ನೂ ತುಲಸಿಯೆಂದು ಹೇಳಲಾಗುತ್ತದೆ. * ತುಲಸಿಯಲ್ಲಿ ಎರಡು ವಿಧಗಳಿವೆ. ಒಂದು ಕೃಷ್ಣ (ಕಪ್ಪು ಬಣ್ಣ) ತುಲಸಿಯಾದರೆ ಮತ್ತೊಂದು ಶ್ರೀ ತುಲಸಿ (ಹಸುರು ಬಣ್ಣ).
  • ಹಿಂದೂ ಸಂಪ್ರದಾಯದ ಮನೆಗಳ ಮುಂಭಾಗದಲ್ಲಿ ತುಲಸಿಗಿಡ ಇರುವುದು ಸಾಮಾನ್ಯದ ದೃಶ್ಯ. ಅದಕ್ಕೆಂದೇ ಒಂದು ಪ್ರತ್ಯೇಕ ಮಂಟಪದಂತಹ ಕಟ್ಟೆಯನ್ನು ಕಟ್ಟಿರುತ್ತಾರೆ, ಕಾರಣ ತುಲಸಿಗಿಡ ಇರುವ ಸ್ಥಳದಲ್ಲಿ ದೇವರಿರುವನೆಂದೂ ಪ್ರತೀತಿ.
  • ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ.

ತುಳಸಿ ವಿವಾಹದ ಕಥೆ:

ತುಳಸಿಗೆ ವೃಂದಾ ಎಂದು ಇನ್ನೊಂದು ಹೆಸರು. ವೃಂದಾ ಜಲಂಧರನೆಂಬ ರಾಕ್ಷಸನ ಪತ್ನಿ. ಆಕೆಯ ಪಾತಿವ್ರತ್ಯ ಪ್ರಭಾವದಿಂದ ಉಬ್ಬಿ-ಕೊಬ್ಬಿ ಲೋಕಕಂಟಕನಾಗಿ ಮೆರೆಯುವ ಜಲಂಧರನನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆಗ ದೇವತೆಗಳೆಲ್ಲ ಸೇರಿ ವಿಷ್ಣುವಿನ್ನು ಮೊರೆ ಹೋಗುತ್ತಾರೆ. ಅತ್ತ ಜಲಂಧರ ದೇವತೆಗಳೊಡನೆ ಹೋರಾಡುತ್ತಿರುವಾಗ, ಇತ್ತ ವಿಷ್ಣು ಜಲಂಧರ ರೂಪದಿಂದ ಬಂದಾಗ, ಅವಳು ಪತಿಯೆಂದೇ ಭಾವಿಸಿ ತಬ್ಬಿಕೊಂಡು ಬಿಡುತ್ತಾಳೆ. ಅಲ್ಲಿಗೆ ಅವಳ ಪಾತಿವ್ರತ್ಯ ಭಂಗವಾಗಿ ಇತ್ತ ಜಲಂಧರ ಯುದ್ಧದಲ್ಲಿ ಮಡಿಯುತ್ತಾನೆ. ವೃಂದೆ ವಿಷ್ಣುವಿಗೆ ”ಮುಂದೊಮ್ಮೆ ನಿನಗೂ ಪತ್ನಿಯ ವಿಯೋಗವಾಗಲಿ,” ಎಂದು ಶಪಿಸಿ ಚಿತೆಯೇರುತ್ತಾಳೆ. ಪಾರ್ವತಿ ಚಿತೆಯ ಸುತ್ತ ತುಳಸಿ -ನೆಲ್ಲಿ ನಿರ್ಮಿಸಿ ವೃಂದಾವನ ರಚಿಸಿದಾಗ, ವಿಷ್ಣು ನಳ-ನಳಿಸಿ ಬೆಳೆದ ತುಳಸಿಯನ್ನು ಮನಸಾ ವರಿಸುತ್ತಾನೆ. ಆ ತುಳಸಿಯೇ ಮುಂದೆ ರುಕ್ಷ್ಮಿಣಿಯಾಗಿ ಹುಟ್ಟಿ ಕಾರ್ತಿಕ ಶುದ್ಧ ದ್ವಾದಶಿಯ ದಿನ ಶ್ರೀ ಕೃಷ್ಣನನ್ನು ವರಿಸುತ್ತಾಳೆ. ಆ ವಿವಾಹೋತ್ಸವ ಸ್ಮರಣೆಯೇ ‘ಉತ್ಥಾನ ದ್ವಾದಶಿ-ತುಳಸೀ ವಿವಾಹ’.

ತುಳಸಿಯ ಜೊತೆಗೆ ನೆಲ್ಲಿಕಾಯಿ ಸಿಂಗಾರ ಶ್ರೇಷ್ಠ:

ತುಳಸಿಯನ್ನು ಹೀಗೆಯೇ ಸಿಂಗರಿಸಬೇಕು ಎಂಬ ನಿಯಮವೇನಿಲ್ಲ. ಅವರವರ ಅನೂಕೂಲಕ್ಕೆ ತಕ್ಕದಾಗಿ ತುಳಸಿಯನ್ನು ಅಲಂಕರಿಸುತ್ತಾರೆ. ತುಳಸಿಯಷ್ಟೇ ಔಷಧಿಯ ಗುಣವನ್ನು ಹೊಂದಿರುವ ಬೆಟ್ಟದ ನೆಲ್ಲಿಕಾಯಿಯ ಗಿಡ ಅತ್ಯಂತ ಪಾಮುಖ್ಯವಾದುದರಿಂದ ಹಬ್ಬದ ದಿನದಂದು ಈ ಗಿಡಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚಿನ ಕಡೆಗಳಲ್ಲಿ ನೆಲ್ಲಿಕಾಯಿಯ ಆರತಿಯನ್ನೇ ಬೆಳಗುವುದು ಇನ್ನೊಂದು ವಿಶೇಷ. ಕೆಲವೊಂದು ಕಡೆಗಳಲ್ಲಿ ಪೂಜೆಯ ವೇಳೆಗೆ ಬಾಳೆ ಎಲೆಯನ್ನು ತುಳಸಿಕಟ್ಟೆಯ ಎದುರು ಇಟ್ಟು ಅದಕ್ಕೆ ಅವಲಕ್ಕಿ, ಬೆಲ್ಲ, ತೆಂಗಿನ ಕಾಯಿ, ಹಣ್ಣು-ಹಂಪಲು, ಸಿಹಿತಿಂಡಿಗಳನ್ನು ತುಳಸಿಯ ಎದುರು ಇಟ್ಟು ಬಡಿಸಲಾಗುತ್ತದೆ. ಕೊನೆಯಲ್ಲಿ ಮಂಗಳಾರತಿಯನ್ನು ಮಾಡಿ ಮನೆಮಂದಿಯೆಲ್ಲ ತುಳಸಿಯನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.

ಅಮೃತದಿಂದ ಜನಿಸಿದವಳು ತುಳಸಿಯಾದುದರಿಂದ ತುಳಸಿಯನ್ನು ಯಾವ ವಿಧವಾಗಿ ಪೂಜಿಸಿದರೂ ಸಹ ಅದು ಶ್ರೇಷ್ಠ ಎಂಬ ನಂಬಿಕೆ ಇದೆ. ಆದ್ದರಿಂದ ಸರ್ವಶೇಷ್ಠವಾದ ತುಳಸಿ ಪೂಜೆಯಿಂದ ಸರ್ವರಿಗೂ ಕೂಡ ಒಳಿತಾಗುತ್ತದೆ ಅನ್ನೋ ಬಲವಾದ ನಂಬಿಕೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top