fbpx
Karnataka

ನೀವು ಸಂಸ್ಕೃತವನ್ನು ಕಲಿಯಬೇಕೆಂದಿದ್ದೀರಾ? ಹಾಗಾದರೆ ಇದನ್ನು ನೀವು ಓದಲೇಬೇಕು!

ನುಡಿಗಳ ನಡುವೆ ಕೊಡು-ಕೊಳ್ಳುವಿಕೆ ನಡೆಯುತ್ತಿರುತ್ತದೆ. ಕನ್ನಡಕ್ಕೆ ಸಂಸ್ಕೃತ, ಇಂಗ್ಲಿಶ್, ಪರ್ಶಿಯನ್ ನುಡಿಗಳಿಂದ ಪದಗಳು ಬಂದಿವೆ. ಅಂತೆಯೇ ಕನ್ನಡದ ಪದಗಳೂ ಬೇರೆ ನುಡಿಗಳಲ್ಲಿವೆ. ಸಂಸ್ಕೃತದಿಂದ ಕನ್ನಡಕ್ಕೆ ಹಲವು ಪದಗಳು ಬಂದಿವೆ, ದಿಟ. ಆದರೆ ಅವು ಬರಹ ಕನ್ನಡದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿವೆ, ಕನ್ನಡಿಗರ ಮಾತಿನಲ್ಲಿ ಸಂಸ್ಕೃತ ಪದಗಳ ಬಳಕೆ ಕಡಿಮೆಯೇ. ಉದಾಹರಣೆಗೆ, ಬರಹದಲ್ಲಿ ಕಾಣಸಿಗುವ ಶ್ವಾನ, ಜಲ, ಲವಣ, ವಿವಾಹ ತರಹದ ಹಲವಾರು ಪದಗಳು ಬರಹ ಕನ್ನಡದಲ್ಲಿ ಮಾತ್ರ ಕಾಣಸಿಗುತ್ತವೆ. ಮಾತಿನಲ್ಲಿ ಕನ್ನಡಿಗರು ಬಳಸುವುದು ನಾಯಿ, ನೀರು, ಉಪ್ಪು, ಮದುವೆ ಎಂಬಂತಹ ಕನ್ನಡ ಪದಗಳನ್ನೇ. ಹಾಗಾಗಿ ಕನ್ನಡದಲ್ಲಿ ೫೦% ಗಿಂತಲೂ ಹೆಚ್ಚು ಸಂಸ್ಕೃತ ಪದಗಳು ಕಾಣಸಿಗುವುದು ಬರಹ ಕನ್ನಡದಲ್ಲಿ ಮಾತ್ರವೇ ಹೊರತು ಕನ್ನಡಿಗರ ಆಡುಮಾತಿನಲ್ಲಲ್ಲ. ಇನ್ನು ಬರಹ ಕನ್ನಡದಲ್ಲಿ ಮಾತ್ರ ಸಂಸ್ಕೃತ ಪದಗಳ ಎರವಲು ಹೆಚ್ಚು ಇರುವುದಕ್ಕೆ ಕಾರಣವಿದೆ. ಹಿಂದಿನಿಂದ ಕನ್ನಡದಲ್ಲಿ ಬರಹ ಮಾಡುವವರು ಹೆಚ್ಚಾಗಿ ಸಂಸ್ಕೃತ ಬಲ್ಲವರಾಗಿದ್ದು, ಅವರ ಕನ್ನಡ ಬರಹಗಳಲ್ಲಿ ಹೆಚ್ಚು ಸಂಸ್ಕೃತ ಪದಗಳನ್ನು ಬಳಸುತ್ತಿದ್ದರು.ಒಟ್ಟಾರೆಯಾಗಿ ಹೇಳುವುದಾದರೆ, ಕನ್ನಡಿಗರ ಮಾತಿನಲ್ಲಿ ಸಂಸ್ಕೃತದ ಪದಗಳು ಅತೀ ಕಡಿಮೆ. ಬರಹ ಕನ್ನಡದಲ್ಲಿ ಮಾತ್ರ ಸಂಸ್ಕೃತ ಪದಗಳನ್ನು ಹೆಚ್ಚಾಗಿ ಕಾಣಬಹುದು.

ಇನ್ನು ಆಧ್ಯಾತ್ಮ, ವಿಜ್ಞಾನ, ತತ್ವಶಾಸ್ತ್ರಗಳಂತಹ ವಿಷಯಗಳು ಸಂಸ್ಕೃತದಲ್ಲಿರುವ ಕಾರಣ ಸಂಸ್ಕೃತವನ್ನು ಕಲಿಯುವುದು ವಿದ್ಯಾರ್ಥಿಗಳಿಗೆ ಮುಖ್ಯ ಎನ್ನುವುದು ಕನ್ನಡ ಸೇರಿದಂತೆ ಯಾವುದೇ ನುಡಿಜನಾಂಗವು ಒಪ್ಪಲಾಗದ ಮಾತು. ಇಂದು ಜಗತ್ತಿನಲ್ಲಿ ವಿಜ್ಞಾನದ ವಿಷಯಗಳು ಹೆಚ್ಚಾಗಿ ಇಂಗ್ಲಿಶಿನಲ್ಲಿ ಬರುತ್ತಿದೆ. ಫ಼್ರೆಂಚ್ ನುಡಿಯಲ್ಲಿ ಅರ್ಥಶಾಸ್ತ್ರದ ಕುರಿತು ಹೆಚ್ಚು ಮೆಚ್ಚುಗೆಗಳಿಸಿರುವ ಪುಸ್ತಕವಿದೆ. ಹೀಗೆ ಹಲವು ವಿಷಯಗಳು ಹಲವು ನುಡಿಯಲ್ಲಿರುತ್ತವೆ. ಹಾಗೆಂದು ಆ ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳು ಸಂಸ್ಕೃತ, ಇಂಗ್ಲಿಶ್, ಫ಼್ರೆಂಚ್ ಸೇರಿದಂತೆ ಹಲವು ನುಡಿಗಳನ್ನು ಕಲಿಯಬೇಕು ಎನ್ನುವಂತಾಗುತ್ತದೆ.

ಆಧ್ಯಾತ್ಮ, ವಿಜ್ಞಾನ, ತತ್ವಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಇನ್ನಿತರ ಯಾವುದೇ ವಿಷಯಗಳು ಯಾವುದೇ ನುಡಿಯಲ್ಲಿರಲಿ ಅವುಗಳನ್ನು ನಮ್ಮ ನುಡಿಗೆ ತಂದುಕೊಳ್ಳುವುದು ಸರಿಯಾದ ನಡೆ. ಕನ್ನಡದ ವಿದ್ಯಾರ್ಥಿಗಳಿಗೆ ಇವೆಲ್ಲವನ್ನೂ ಕನ್ನಡದಲ್ಲಿ ಕಟ್ಟಿಕೊಡುವ ಬದಲು, ಕನ್ನಡಿಗ ವಿದ್ಯಾರ್ಥಿಗಳೆಲ್ಲರೂ ಸಂಸ್ಕೃತ, ಇಂಗ್ಲಿಶ್, ಫ಼್ರೆಂಚ್ ಸೇರಿದಂತೆ ಹಲವು ನುಡಿಗಳನ್ನು ಕಲಿಯಬೇಕೆನ್ನುವುದು ಆಗದ ಮಾತು.

ಮುಂದೆ ಸಂದರ್ಶನದಲ್ಲಿ, “ಸಂಸ್ಕೃತವನ್ನು ಜರ್ಮನ್ ನಂತಹ ಹೊರನಾಡಿನಲ್ಲಿ ಕಲಿಸಲಾಗುತ್ತಿದೆ” ಎಂದು ಹೇಳಲಾಗಿದೆ. ಮತ್ತು, “ತನ್ನದೇ ದೇಶದಲ್ಲಿ ಸಂಸ್ಕೃತ ಬಡವಾಗಿದೆ” ಎಂದು ಹೇಳಲಾಗಿದೆ. ಜರ್ಮನಿಯಲ್ಲಿ ಸಂಸ್ಕೃತವನ್ನು ಸಂಶೋಧನೆಯ ವಿಷಯವಾಗಿ ತೆಗೆದುಕೊಳ್ಳಬಹುದು. ಯಾವುದೇ ನಾಡು ಜಗತ್ತಿನಲ್ಲಿರುವ ಯಾವುದೇ ಒಳಿತಿನ ವಿಷಯಗಳನ್ನು ತನ್ನ ನಾಡಿನ-ನಾಡಿಗರ ಒಳಿತಿಗೆ ಬಳಸಿಕೊಳ್ಳುವುದು ಸಹಜ. ಇದು ಜರ್ಮನಿ ಇಲ್ಲವೇ ಇನ್ನಿತರ ನುಡಿಸಮುದಾಯಕ್ಕೂ ಒಪ್ಪುವ ಮಾತು. ಅಂತೆಯೇ ಜರ್ಮನಿಯಲ್ಲಿ ಸಂಸ್ಕೃತವನ್ನು ಸಂಶೋಧನೆಯ ವಿಷಯವನ್ನಾಗಿ ಆಯ್ದುಕೊಂಡು ಸಂಸ್ಕೃತದಲ್ಲಿರುವ ವಿಷಯಗಳನ್ನು ತನ್ನ ನಾಡಿನ-ನಾಡಿಗರ ಏಳ್ಗೆಗೆ ಬಳಸಿಕೊಳ್ಳುತ್ತಿರುವುದು ಒಳ್ಳೆಯ ನಡೆ. ಈ ಕೆಲಸ ನಮ್ಮ ನಾಡುಗಳಲ್ಲೂ ಪರಿಣಾಮಕಾರಿಯಾಗಿ ಆಗಬೇಕಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಜರ್ಮನಿಯಂತಹ ನಾಡುಗಳಲ್ಲಿ ಸಂಸ್ಕೃತದಲ್ಲಿ ಇರುವ ಒಳ್ಳೆಯ ವಿಷಯಗಳನ್ನು ತಿಳಿಯಲು ಜರ್ಮನ್ ನಾಡಿಗರೆಲ್ಲರೂ ಸಂಸ್ಕೃತ ಕಲಿಯಬೇಕು ಎಂದು ಹೇಳುವುದಿಲ್ಲ ಬದಲಾಗಿ ಸಂಶೋಧನೆಯ ಮೂಲಕ ಸಂಸ್ಕೃತದಿಂದ ದೊರಕುವ ವಿಷಯಗಳನ್ನು ತಮ್ಮ ನುಡಿಯಲ್ಲಿ ಕಟ್ಟಿಕೊಂಡು ತಮ್ಮ ನಾಡಿನ-ನಾಡಿಗರ ಏಳ್ಗೆಗೆ ಬಳಸಿಕೊಳ್ಳಲಾಗುತ್ತದೆ. ಅಂತೆಯೇ ಕರ್ನಾಟಕದಂತಹ ನಾಡುಗಳಲ್ಲೂ ಕೂಡ ಸಂಸ್ಕೃತದಲ್ಲಿ ದೊರಕುವ ಆಧ್ಯಾತ್ಮ, ವಿಜ್ಞಾನ, ತತ್ವಶಾಸ್ತ್ರಗಳಂತಹ ವಿಷಯಗಳನ್ನು ನಾಡಿನ ಮಂದಿಯ ಏಳ್ಗೆಗೆ ಪೂರಕವಾಗುವಂತೆ ಕನ್ನಡ ನುಡಿಯಲ್ಲಿ ಕಟ್ಟಿಕೊಳ್ಳಬೇಕು. ಅದರ ಬದಲು ಸಂಸ್ಕೃತದಲ್ಲಿ ಇರುವ ಒಳ್ಳೆಯ ವಿಷಯಗಳನ್ನು ತಿಳಿಯಲು ಎಲ್ಲರೂ ಸಂಸ್ಕೃತ ಕಲಿಯಬೇಕು ಎಂದು ಹೇಳುವುದು ಏಕೆ? ಇಂತಹ ನಿಲುವುಗಳು, ಸಂಸ್ಕೃತದಲ್ಲಿರುವ ಹಲವಾರು ವಿಷಯಗಳನ್ನು ಸಂಸ್ಕೃತದಲ್ಲಿಯೇ ಕಟ್ಟಿಹಾಕಿ ಬೇರೆ ನುಡಿಗಳಿಗೆ ಹರಿಯದಂತೆ ಮಾಡುವ ಅಪಾಯವಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top