fbpx
Achivers

ಸಾಮಾಜಿಕ ಜಾಲತಾಣದಿಂದಲೂ ಕನ್ನಡ ಜಾಗೃತಿ ಸಾಧ್ಯ

ನಮ್ಮ ಸಾಮಾನ್ಯ ಕನ್ನಡಿಗ ಮತ್ತು ಅದರ ಅಧ್ಯಕ್ಷ ಸಂದೀಪ್ ಪಾರ್ಶ್ವನಾಥ್ ಬಗ್ಗೆ Ranjith H Ashwath ವಿಶ್ವವಾಣಿಯಲ್ಲಿ ಬರೆದ ಅಂಕಣ

bdc2df6c-8489-4d50-8971-a6c2bab88fc7

ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಿಂದಲೂ ಕನ್ನಡ ಭಾಷಾ ಜಾಗೃತಿ ಸಾಧ್ಯ. ಇದನ್ನು ಮನದಲ್ಲಿಟ್ಟುಕೊಂಡು, ‘ಸಾಮಾನ್ಯ ಕನ್ನಡಿಗ’ ಎನ್ನುವ ಪೇಜ್‌ನ್ನು ಆರಂಭಿಸಿದ್ದೆವು ಎಂದು ಸಾಮಾನ್ಯ ಕನ್ನಡಿಗ ಮುಖ್ಯಸ್ಥ ಸಂದೀಪ್ ಹೇಳಿದ್ದಾರೆ.

ರಾಜ್ಯೋತ್ಸವ ಪ್ರಯುಕ್ತ ‘ವಿಶ್ವವಾಣಿಗೆ’ ನೀಡಿದ ವಿಶೇಷ ಸಂದರ್ಶನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಜಾಗೃತಿ, ಏಳ್ಗೆ ಹಾಗೂ ಕನ್ನಡ ವಿರೋಧಿಗಳಿಗೆ ಯಾವ ರೀತಿ ಪಾಠ ಕಲಿಸಬಹುದು ಎನ್ನುವ ಬಗ್ಗೆ ಮನದಾಳದ ಮಾತುಗಳನ್ನಾಡಿದ್ದಾರೆ.

* ಸಾಮಾಜಿಕ ಜಾಲತಾಣದಿಂದ ಕನ್ನಡಾಭಿವೃದ್ಧಿ ಸಾಧ್ಯವೇ?

ಖಂಡಿತ ಸಾಧ್ಯ. ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣದಿಂದಲೇ ಕನ್ನಡ ಅಭಿವೃದ್ಧಿ ಅಥವಾ ಜಾಗೃತಿ ಸಾಧ್ಯ. ಇದಕ್ಕೆ ಪ್ರಮುಖ ಕಾರಣವೆಂದರೆ, ಬಹುತೇಕ ಜನ ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾರೆ. ಯಾವುದೇ ಸ್ಟೇಟಸ್ ಅಥವಾ ಫೋಟೊ ಲಕ್ಷಾಂತರ ಜನರನ್ನು ತಲುಪುತ್ತದೆ. ಆದ್ದರಿಂದ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಸುಲಭವಾಗುತ್ತದೆ.

* ಕೇವಲ ಸ್ಟೇಟಸ್‌ನಲ್ಲಿ ಭಾಷಾಭಿಮಾನ ತೋರಿದರೆ ಪ್ರಯೋಜನವೇನು?

ಪ್ರತಿಯೊಬ್ಬರು ಸ್ಟೇಟಸ್‌ನ್ನು ಲೈಕ್ ಪಡೆಯಲೆಂದು ಅಪ್‌ಡೇಟ್ ಮಾಡುತ್ತಾಾರೆ ಎನ್ನುವುದು ತಪ್ಪು. ಅನೇಕರು ಕನ್ನಡವನ್ನು ಉಳಿಸಿ, ಬೆಳಸಬೇಕು ಎನ್ನುವ ಉದ್ದೇಶದಿಂದಲೇ ಅಪ್‌ಡೇಟ್ ಮಾಡುತ್ತಿರುತ್ತಾರೆ. ನಮಗೆ ಪ್ರತಿನಿತ್ಯ ಅನೇಕ ಜನ ಕನ್ನಡದ ಸಮಸ್ಯೆ ಹಾಗೂ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಾರೆ. ನೀವು ಹೇಳಿದಂತೆ ಬೆರಳೆಣಿಕೆಯಷ್ಟು ಜನ ಮಾತ್ರ ಪ್ರಚಾರಕ್ಕಾಗಿ ಸ್ಟೇಟಸ್ ಹಾಕುತ್ತಾರೆ. ಅಂತಹವರನ್ನು ‘ಪುಸ್ತಕದ ಬದನೆಕಾಯಿ’ ರೀತಿ ‘ಸಾಮಾಜಿಕ ಜಾಲತಾಣದ ಬದನೆಕಾಯಿ’ ಎಂದರೆ ತಪ್ಪಾಗುವುದಿಲ್ಲ.

* ಸಾಮಾನ್ಯ ಕನ್ನಡಿಗ ಕೇವಲ ಸಾಮಾಜಿಕ ಜಾಲತಾಣಕ್ಕೆ ಸೀಮಿತವೇ?

ನಮ್ಮದು ಕೇವಲ ಫೇಸ್‌ಬುಕ್ ಪೇಜ್ ಆಗಿ ಉಳಿದಿಲ್ಲ. ಅಧಿಕೃತವಾಗಿ ‘ಸಾಮಾನ್ಯ ಕನ್ನಡಿಗ’ ಎನ್ನುವ ಸಂಘಟನೆಯೊಂದಿಗೆ ಪ್ರತ್ಯೇಕ ಕಚೇರಿ ಆರಂಭಿಸಿದ್ದೇವೆ. ಫೇಸ್‌ಬುಕ್‌ನಲ್ಲಿ 1.5 ಲಕ್ಷ ಫಾಲೋಯರ್‌ಸ್‌ ಇದ್ದಾರೆ. ಸಂಘಟನೆಗೆ 1500 ಮಂದಿ ಸೇರಿದ್ದಾಾರೆ. ಸಂಘದ ಮೂಲಕ ಅನೇಕ ಕನ್ನಡ ಪರ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿರುವ ‘ಸಾಮಾನ್ಯ ಕನ್ನಡಿಗ’ ಫೇಜ್ ಸಾರ್ವಜನಿಕರೊಂದಿಗೆ ಸಂವಹನ ನಡೆಸಲಿರುವ ಮಾಧ್ಯಮವಷ್ಟೇ. ಕೇವಲ ಫೇಸ್‌ಬುಕ್ ಅಥವಾ ಟ್ವೀಟರ್‌ಗೆ ನಾವು ಸೀಮಿತವಾಗುವುದಿಲ್ಲ.

* ಸಂಘಟನೆಯ ಮುಖ್ಯ ಉದ್ದೇಶ?

ಎಲ್ಲಿಯಾದರು ಕನ್ನಡ ವಿರೋಧಿ ಚಟುವಟಿಕೆ ನಡೆದಿರುವುದು ಗಮನಕ್ಕೆ ಬಂದರೆ, ಅಲ್ಲಿಗೆ ಹೋಗಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ತಪ್ಪು ತಿದ್ದಿಕೊಳ್ಳದಿದ್ದರೆ, ವಕೀಲರ ಮೂಲಕ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ವಾರದಲ್ಲಿ ಸುಮಾರು ಎಂಟರಿಂದ ಹತ್ತು ನೋಟಿಸ್‌ಗಳನ್ನು ನೀಡುತ್ತಿದ್ದೇವೆ.

* ಯಾರ್ಯಾರಿಗೆ ನೋಟಿಸ್ ನೀಡಿದ್ದೀರಾ?

ಪ್ರಮುಖವಾಗಿ ಕನ್ನಡ ನಿರ್ಲಕ್ಷ್ಯಿಸುವ ಖಾಸಗಿ ಸಂಸ್ಥೆ, ಹೋಟೆಲ್, ಶಾಪಿಂಗ್ ಮಾಲ್‌ಗಳಿಗೆ ನೀಡುತ್ತೇವೆ. ಇದಕ್ಕೆಂದು  ನಮ್ಮಲ್ಲಿ ಮೂರು ವಕೀಲರ ತಂಡ ಪ್ರತ್ಯೇಕವಾಗಿದೆ. ಇಲ್ಲಿಯವರೆಗೆ ಅಮೇಜಾನ್ ಹಾಗೂ ಕೆಲ ಎಂಎನ್‌ಸಿ ಕಂಪನಿಗಳಿಗೆ ನೋಟಿಸ್ ನೀಡಿದ್ದೇವೆ. ಬಹುತೇಕ ಸಂಸ್ಥೆಗಳು ತಪ್ಪು ತಿದ್ದುಕೊಳ್ಳುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ.

ಕನ್ನಡ ಜಾಗೃತಿಯ ಅವಶ್ಯಕತೆ ತಿಳಿದಿದ್ದು ಸಿಂಗಾಪುರ್‌ನಲ್ಲಿ

ಸಿಂಗಾಪುರ್‌ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಅಲ್ಲಿ ಕನ್ನಡಿಗರಂತೆ ಇತರೆ ಭಾರತೀಯ ಭಾಷಿಗರು ನೆಲೆಸಿದ್ದರು. ಇತರೆ ಭಾಷಿಗರು ತಮ್ಮ ಭಾಷೆಯಲ್ಲಿಯೇ ಸಂವಹನ ನಡೆಸುತ್ತಾರೆ. ಆದರೆ, ಕನ್ನಡಿಗರು ಮಾತ್ರ ಈ ರೀತಿ ಮಾಡುತ್ತಿರಲಿಲ್ಲ. ಇದನ್ನು ನೋಡಿದ ಮೇಲೆ, ಸ್ವದೇಶಕ್ಕೆ ಮರಳಿ ಕನ್ನಡಿಗರಲ್ಲಿ ಭಾಷಾ ಜಾಗೃತಿ ಮೂಡಿಸಬೇಕು ಎನ್ನುವ ನಿರ್ಧಾರಕ್ಕೆ ಬಂದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top