ರೈತ ಸಮುದಾಯದ ಹಿತದೃಷ್ಟಿಯಿಂದ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ)ಗಳಲ್ಲೂ ಕೂಡ ಹಳೆ ನೋಟುಗಳ ಚಲಾವಣೆ ಮತ್ತು ಠೇವಣಿ ಸ್ವೀಕರಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಈ ಸಂಬಂಧ ಭಾರತೀಯ ರಿಜರ್ವ್ ಬ್ಯಾಂಕ್(ಆರ್ಬಿಐ) ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಗೌಡರು ದಿನಾಂಕ ನವೆಂಬರ್ 14ರಂದು ಭಾರತೀಯ ರಿಜರ್ವ್ ಬ್ಯಾಂಕ್ ಕೃಷಿ ಸಾಲ ಮರುಪಾವತಿ ಸ್ವೀಕರಿಸದಂತೆ ಹೊರಡಿಸಿರುವ ಆದೇಶದಿಂದಾಗಿ ರೈತರಿಗೆ ತುಂಬಾ ತೊಂದರೆಯಾಗಿದೆ. ಈ ಕಾರಣದಿಂದ ಕೂಡಲೇ ಸುತ್ತೋಲೆಯನ್ನು ಮಾರ್ಪಾಡು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಾಣಿಜ್ಯ ಬ್ಯಾಂಕ್ಗಳು, ಖಾಸಗಿ ಬ್ಯಾಂಕ್ಗಳು, ನಗರ ಸಹಕಾರ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ರೀತಿಯಲ್ಲೇ ಡಿಸಿಸಿ ಬ್ಯಾಂಕ್ಗಳಿಗೂ ಸಹ ಹಳೆ ನೋಟುಗಳ ಚಲಾವಣೆ ಮತ್ತು ಠೇವಣಿ ಸ್ವೀಕರಿಸಲು ಅನುಮತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್ಗಳಿವೆ. 706ಶಾಖೆಗಳಲ್ಲಿ 45.91 ಲಕ್ಷ ಠೇವಣಿ ಖಾತೆಗಳು ಹಾಗೂ 21.73 ಲಕ್ಷ ಸಾಲ ಖಾತೆಗಳಿವೆ. 20,256.44 ಕೋಟಿ ರೂ. ಮೊತ್ತದ ಮುಂಗಡ ಬಾಕಿ ಇದೆ ಎಂದು ಅಂಕಿಅಂಶ ನೀಡಿರುವ ಅವರು ಆರ್ಬಿಐ ಸುತ್ತೋಲೆಯಿಂದ ರೈತರಿಗೆ ಉಂಟಾಗಿರುವ ಅಂಶಗಳನ್ನು ಗೌಡರು ವಿವರಿಸಿದ್ದಾರೆ.
ಅಸಂಖ್ಯಾತ ರೈತರು ಸಹಕಾರಿ ಬ್ಯಾಂಕ್ಗಳಿಂದ ಬೆಳೆ ಸಾಲವನ್ನು ಪಡೆದಿದ್ದಾರೆ. ನೋಟು ರದ್ದತಿ ಮತ್ತು ನಂತರ ಹೊರಡಿಸಿದ ಸುತ್ತೋಲೆಯಿಂದಾಗಿ ಡಿಸಿಸಿ ಬ್ಯಾಂಕ್ಗಳಲ್ಲಿ ಸಾಲಗಳನ್ನು ಹಿಂದಿರುಗಿಸಲು ಕೃಷಿಕರಿಗೆ ಕಷ್ಟವಾಗುತ್ತಿದೆ. ನಿಗದಿತ ದಿನಾಂಕದೊಳಗೆ ಅವರು ಸಾಲ ಮರುಪಾವತಿ ಮಾಡಲು ವಿಫಲರಾದರೆ ಸರ್ಕಾರ ದಿಂದ ಬಡ್ಡಿ ಸಬ್ಸಿಡಿಗೆ ಬೆಳೆಗಾರರು ಅನರ್ಹರಾಗುತ್ತಾರೆ. ಇದೇ ರೀತಿಯ ಸಮಸ್ಯೆಯನ್ನು ಹಾಲು ಉತ್ಪಾದಕರು ಸಹ ಎದುರಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ 30 ಲಕ್ಷ ಸದಸ್ಯರನ್ನೊಳಗೊಂಡ 2 ಲಕ್ಷ ಸ್ವಸಹಾಯ ಗುಂಪುಗಳಿಗೆ ಇವರು ಪಡೆದಿರುವ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸದಿದ್ದರೆ ಅವರಿಗೂ ಸಹ ಬಡ್ಡಿ ಸಹಾಯಧನ ಲಭಿಸುವುದಿಲ್ಲ. ಇದರಿಂದಾಗಿ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಆರ್ಬಿಐ ಹೊರಡಿಸಿರುವ ಸುತ್ತೋಲೆಯನ್ನು ಮಾರ್ಪಾಡು ಮಾಡಿ ರೈತರ ನೆರವಿಗೆ ಅನುವು ಮಾಡಿಕೊಡಬೇಕೆಂದು ದೇವೇಗೌಡರು ಕೋರಿದ್ದಾರೆ.
ಕಾಳಧನ ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸಲು ತಾವು ಕೈಗೊಂಡಿರುವ ದಿಟ್ಟ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿರುವ ಅವರು, ಬಡವರು ಮತ್ತು ಕೆಳವರ್ಗದವರಿಗೆ ಅನಾನುಕೂಲವಾಗದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಅವರು ಸಲಹೆ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
