ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ. ಕರ್ನಾಟಕದ ಕರಾವಳಿ ಜಾನಪದ ಜನಪ್ರೀಯ ಕ್ರೀಡೆ ಕಂಬಳ ಗದ್ದೆ ಓಟದ ಹಿನ್ನಲೆ ಸುಮಾರು 700 ವರ್ಷಗಳ ಇತಿಹಾಸವಿದೆ.
ಕಂಬಳದ ಓಟದ ಹಿನ್ನಲೆ
ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಾದವರನ್ನು ಸನ್ಮಾನಿಸುವದರ ಹಿಂದೆ ಕೃಷಿಕರ ಕ್ರಿಡಾ ಮನೋಭಾವಕ್ಕೆ ಇಂಬು ಕೊಡುವ ಉದ್ದಿಶ್ಯ ಸ್ಪಷ್ಟ. ಅಂತೆಯೇ ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆವವೂ ಹೌದು. ಭತ್ತದ ಮೊದಲ ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ. ನವೆಂಬರ್-ಡಿಸೆಂಬರ್ ನಂತರದ ಛಳಿಗಾಲದಲ್ಲಿ ಆರಂಭವಾಗುವ ಕಂಬಳ ಕರಾವಳಿಯ ಬಿಸಿಲ ಬೇಗೆ ಏರುವ ಮೊದಲೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯುತ್ತದೆ. ಇದನ್ನು ನೋಡಿದರೆ ಕೃಷಿಕರಿಗೆ ಮನರಂಜನೆ ಒದಗಿಸುವ ಸಾಧನವಾಗಿಯೂ ಕಂಬಳ ಕಾಣುತ್ತದೆ. ಕರಾವಳಿಯಲ್ಲಿ ಯಕ್ಷಗಾನ ಬಯಲಾಟಗಳು ಹೆಚ್ಚಾಗಿ ನಡೆಯುವುದೂ ಇದೇ ಸಮಯದಲ್ಲಿ. ಕಂಬಳದ ಕೋಣಗಳನ್ನು ಸಾಕುವುದೂ, ಸ್ಪರ್ಧಿಸುವುದೂ, ವಿಜಯಿಯಾಗುವುದೂ ಪ್ರತಿಷ್ಠೆಯ ಸಂಕೇತವೂ ಹೌದು.
ಕಂಬಳ ಗದ್ದೆ
ಕೊಯಿಲಿನ ನಂತರ ಬಿಡುವಾದ ಅಥವಾ ಉಪಯೋಗಿಸದೆ ಬಿಟ್ಟಿರುವ ಗದ್ದೆಗಳಲ್ಲಿ ಕಂಬಳ ನಡೆಯುತ್ತದೆ. ಆದರೆ ಇತ್ತೀಚೆಗೆ ಹೆಚ್ಚಾಗಿ ಕಂಬಳಕ್ಕಾಗಿಯೇ ಮೀಸಲಾದ ಕಣಗಳನ್ನು ನಿರ್ಮಿಸಲಾಗಿದೆ. ಸುಮಾರು ನೂರರಿಂದ ಇನ್ನೂರು ಮೀಟರುಗಳಷ್ಟು ಉದ್ದದ ಓಟದ ಕಣಗಳಲ್ಲಿ ಕಂಬಳ ನಡೆಯುತ್ತದೆ. ಹಸನಾದ ಗದ್ದೆಯ ಮಣ್ಣಿನೊಂದಿಗೆ ಜಿಗುಟಾಗದಿರಲು ಅಗತ್ಯವಾದಷ್ಟು ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಿ ಮಾಡಿದ ಕೆಸರು ಗದ್ದೆಯೇ ಕಂಬಳ ಓಟದ ಕಣ. ಕಂಬಳದ ಕಣವು ನೆಲ ಮಟ್ಟಕ್ಕಿಂತ ಕೆಲವು ಆಡಿಗಳಷ್ಟು ಆಳದಲ್ಲಿ ಇರುತ್ತದೆ. ಕಣದ ಒಂದು ಕೊನೆಯಲ್ಲಿ ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ಇರುತ್ತದೆ. ಅಲ್ಲಿ ಮೇಲೆ ಕಟ್ಟಿದ ಮಾವಿನ ಎಲೆಗಳ ತೋರಣವು ಓಟದ ಆರಂಭದ ಗೆರೆಯನ್ನು ಸೂಚಿಸುತ್ತದೆ. ಕಣದ ಇನ್ನೊಂದು ಕೊನೆಯಲ್ಲಿ ಕಟ್ಟಿದ ಮಾವಿನ ಎಲೆಗಳ ತೋರಣವು ಮುಕ್ತಾಯದ ಗೆರೆಯನ್ನು ಸೂಚಿಸುತ್ತದೆ. ಮುಕ್ತಾಯದ ಕೊನೆಯಲ್ಲಿ ಕಣದಿಂದ ಏರಿಯೊಂದನ್ನು ರಚಿಸಿರುತ್ತಾರೆ. ವೇಗವಾಗಿ ಓಡಿ ಬಂದ ಕೋಣಗಳು ಮಂಜೊಟ್ಟಿ ಎಂದು ಕರೆಯಲಾಗುವ ಆ ಏರಿಯನ್ನೇರಿ ವೇಗ ಕಳಕೊಂಡು ನಿಲ್ಲುತ್ತವೆ (ಅಥವಾ ಅವುಗಳನ್ನು ಹಿಡಿದು ನಿಲ್ಲಿಸಲಾಗುತ್ತದೆ). ಕಂಬಳದ ಗದ್ದೆಗಳಲ್ಲಿ ಎರಡು ವಿಧ:
ಒಂಟಿ ಗದ್ದೆಯ ಕಂಬಳ
ಜೋಡಿ ಗದ್ದೆಯ (ಜೋಡುಕರೆ) ಕಂಬಳ.
ಜೋಡುಕರೆ ಕಂಬಳಗಳಲ್ಲಿ ಅಕ್ಕ-ಪಕ್ಕ ಎರಡು ಕಣಗಳಿದ್ದು ಎರಡರಲ್ಲೂ ಏಕಕಾಲಕ್ಕೆ ಕೋಣಗಳನ್ನು ಓಡಿಸಿ ಅವುಗಳ ಮಧ್ಯೆ ಸ್ಪರ್ಧೆ ನಡೆಸಲಾಗುತ್ತದೆ. ಕೆನೆ ಹಲಗೆ ಪಂದ್ಯವನ್ನು ಒಂದೇ ಕಣದಲ್ಲಿ ನಡೆಸಲಾಗುತ್ತದೆ ಏಕೆಂದರೆ ಇದರಲ್ಲಿ ಓಡುವ ವೇಗದ ಬದಲಿಗೆ ಓಡುವಾಗ ಕೆಸರು ಚಿಮ್ಮುವ ಎತ್ತರದ ಆಧಾರದ ಮೇಲೆ ಸ್ಪರ್ಧೆ ನಡೆಯುವುದರಿಂದ. ಹೆಚ್ಚಾಗಿ ಜೋಡುಕರೆ ಕಂಬಳಗಳಿಗೆ ಪುರಾಣ, ಜಾನಪದದಲ್ಲಿ ಸಿಗುವ ಅವಳಿ-ಜವಳಿಗಳ ಅಥವಾ ಜೋಡಿಗಳ ಹೆಸರಿಡುವುದು ಸಾಮಾನ್ಯ. ಕೆಲವು ಜೋಡುಕರೆ ಕಂಬಳಗಳ ಹೆಸರು ಹೀಗಿವೆ:
ಸೂರ್ಯ-ಚಂದ್ರ (ವೇಣೂರು, ಶಿರ್ವ, ಬಾರಾಡಿ, ಬಂಗಾಡಿ, ತಲಪಾಡಿ)
ಮೂಡು-ಪಡು (ಮುಲ್ಕಿ, ಕಟಪಾಡಿ)
ಲವ-ಕುಶ (ಮಿಯಾರು)
ಜಯ-ವಿಜಯ (ಈದು, ಜಪ್ಪಿನಮೊಗರು)
ವಿಜಯ-ವಿಕ್ರಮ (ಉಪ್ಪಿನಂಗಡಿ)
ವೀರ-ವಿಕ್ರಮ (ಹೊಕ್ಕಾಡಿಗೋಳಿ)
ಕೋಟಿ-ಚೆನ್ನಯ (ಮೂಡುಬಿದಿರೆ,ಪುತ್ತೂರು)
ಕಾಂತಬಾರೆ-ಬೂದಬಾರೆ (ಐಕಳ)
ಮತ್ಸ್ಯೇಂದ್ರನಾಥ-ಗೋರಕನಾಥ (ಕದ್ರಿ)
ಕ್ಷೇತ್ರಪಾಲ-ನಾಗರಾಜ (ಆಲ್ತಾರು)
ನೇತ್ರಾವತಿ-ಫಲ್ಗುಣಿ (ಪಿಲಿಕುಳ)
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಕಂಬಳದ ಗದ್ದೆಗಳಿವೆ. ಕದ್ರಿ, ಮಿಯಾರು, ಮೂಡುಬಿದಿರೆ ಅವುಗಳಲ್ಲಿ ಪ್ರಮುಖವಾದವು.
ಕಂಬಳದ ಕೋಣ
ಕಂಬಳದಲ್ಲಿ ಗೆದ್ದ ಕೋಣಗಳ ಜೋಡಿ
ಕಂಬಳದ ಕೋಣವನ್ನು ಸಾಕುವುದೆಂದರೆ ಅದು ಸಾಮಾನ್ಯವಲ್ಲ. ಒಳ್ಳೆಯ ಜಾತಿಯ ಕೋಣವನ್ನು ಆರಿಸಿ ಅದರ ಚೆನ್ನಾದ ಆರೈಕೆ ಮಾಡಿ, ಕಂಬಳಕ್ಕೆ ತಯಾರಿ ಮಾಡುವುದರೊಂದಿಗೆ, ಅಂತಹ ಕೋಣಗಳನ್ನು ಓಡಿಸಲು ಬೇಕಾದ ಜನವನ್ನು ತಯಾರಿ ಮಾಡುವುದೂ ಕೋಣದ ಯಜಮಾನನಿಗೆ ಅಗತ್ಯ. ಇದು ಖರ್ಚಿನ ಬಾಬ್ತೂ ಹೌದು, ಆ ಕಾರಣಕ್ಕಾಗಿ ಪ್ರತಿಷ್ಠೆಯ ಸಂಕೇತವೂ ಹೌದು. ಪ್ರತಿ ದಿನವೂ ಅವುಗಳಿಗೆ ಚೆನ್ನಾದ ಹುಲ್ಲು, ಬೇಯಿಸಿದ ಹುರುಳಿ ತಿನ್ನಿಸಲಾಗುತ್ತದೆ. ಅಂತೆಯೇ ಎಣ್ಣೆ ಹಚ್ಚಿ ಆರೈಕೆ ಮಾಡಲಾಗುತ್ತದೆ. ಕಂಬಳದ ಓಟಕ್ಕೆ ತಯಾರಿಯೂ ಮುಖ್ಯ. ಜೊತೆಯ ಕೋಣದೊಂದಿಗೆ ಸಮನಾಗಿ ಕೆಸರು ಗದ್ದೆಯಲ್ಲಿ ಗಲಾಟೆ ಗೌಜುಗಳ ಮಧ್ಯೆ ಓಡುವ ತರಬೇತಿಯನ್ನು ಈ ಕೋಣಗಳಿಗೆ ನೀಡಲಾಗುತ್ತದೆ. ಕಂಬಳದ ಓಟಕ್ಕೆ ಯೋಗ್ಯವೆಂದು ತೋರಿದ ಕೋಣಗಳ ಖರೀದಿ-ಮಾರಾಟ ಲಕ್ಷಗಟ್ಟಲೆ ರೂಪಾಯಿಗಳಲ್ಲಿ ನಡೆಯುತ್ತದೆ. ಅದೇ ರೀತಿ ಕೋಣಗಳ ಆರೈಕೆಯೂ ಬಹಳ ಮುತುವರ್ಜಿಯಿಂದ, ಕಾಳಜಿಯಿಂದ ನಡೆಯುತ್ತ.
ಕಂಬಳ ಓಟದ ವಿಧಗಳು
ಕಂಬಳದಲ್ಲಿ ಸ್ಪರ್ಧೆ ನಡೆಯುವುದು ಕೋಣಗಳ ಜೋಡಿಗಳ ಮಧ್ಯೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳ ಜೊತೆಗೆ ಓಡಿಸುವಾತನೂ ಸೇರಿದರೆ ಒಂದು ಜೋಡಿ ಸ್ಪರ್ಧಿಯಾಗುತ್ತದೆ. ಇಂತಹ ಜೋಡಿಗಳ ಮಧ್ಯ ಸ್ಪರ್ಧೆ ನಡೆಯುತ್ತದೆ. ಈ ರೀತಿಯ ನೂರಾರು ಸ್ಪರ್ಧಿಗಳು ಪ್ರತಿ ಕಂಬಳದಲ್ಲಿಯೂ ಪಾಲ್ಗೊಳ್ಳುತ್ತಾರೆ. ಈ ಓಟದಲ್ಲೂ ಕೆಲವು ವಿಧಗಳಿವೆ:
ಹಗ್ಗದ ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸುವುದು.
ನೇಗಿಲು ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡೊಂದನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸುವುದು.
ಅಡ್ಡ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುವುದು. ಈ ತರಹದ ಹಲಗೆಯನ್ನು ಉತ್ತ ಗದ್ದೆಯ ಮಣ್ಣನ್ನು ಸಮನಾಗಿ ಹರಡಲು ಉಪಯೋಗಿಸುತ್ತಾರೆ.
ಕೆನೆ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸುವುದು. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯ.
ಕಂಬಳ ಓಟದ ಸ್ಪರ್ಧೆ
ಕಂಬಳವು ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಶನಿವಾರ, ಭಾನುವಾರಗಳಲ್ಲಿ ನಡೆಯುತ್ತದೆ. ಅದಕ್ಕೂ ಹಲವು ದಿನಗಳ ಮೊದಲೇ ಗದ್ದೆಯ ತಯಾರಿ, ಚಪ್ಪರ, ವೇದಿಕೆಯ ತಯಾರಿ ನಡೆಯುತ್ತದೆ. ನಿಗದಿತ ದಿನದಂದು ವಿಧ್ಯುಕ್ತ ಉದ್ಘಾಟನೆಯೊಂದಿಗೆ ಕಂಬಳ ಆರಂಭವಾಗುತ್ತದೆ. ಇತ್ತೀಚಿನ ಕಂಬಳಗಳಲ್ಲಿ ವಿವಿಧ ವಿಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚಿನ ಜೋಡಿಗಳ ಭಾಗವಹಿಸುವಿಕೆ ಇರುತ್ತದೆ. ಕಂಬಳದ ಗದ್ದೆಯು ಒಂಟಿಯೋ ಅಥವಾ ಜೋಡಿಯೋ ಎಂಬುವುದರ ಮೇಲೆ ಸ್ಪರ್ಧೆಯ ರೀತಿ ನಿಯಮಗಳು ನಿರ್ಧಾರವಾಗುತ್ತದೆ. ಉಳಿದ ಪಂದ್ಯಗಳಲ್ಲಿನಂತೆಯೇ ಲೀಗ್, ಸೆಮಿಫೈನಲ್, ಫೈನಲ್ ಓಟಗಳು ನಡೆಯುತ್ತವೆ. ಜೋಡುಕರೆ ಕಂಬಳದಲ್ಲಿ ಏಕ ಕಾಲಕ್ಕೆ ಎರಡು ಜೊತೆಗಳನ್ನು ಬಿಟ್ಟು ವಿಜಯಿಯಾದವುಗಳ ಮಧ್ಯೆ ಮತ್ತೆ ಸ್ಪರ್ಧೆ ಏರ್ಪಡಿಸಿ ಅಂತಿಮ ವಿಜೇತ ಜೋಡಿಗಳನ್ನು ನಿರ್ಧರಿಸಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
