ಬಸವನಗುಡಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ವಸತಿ ಮತ್ತು ವಾಣಿಜ್ಯ ಬಡಾವಣೆಯಲ್ಲಿ ಒಂದು. ಪ್ರತೀವರ್ಷ ಕಾರ್ತೀಕ ಮಾಸದ ಕೊನೆಯಲ್ಲಿ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಹತ್ತಿರ ನಡೆಯುವ ಕಡಲೆಕಾಯಿಯ ಜಾತ್ರೆಯನ್ನು ಕಡ್ಲೇಕಾಯಿ ಪರಶೆ ಎನ್ನುತ್ತಾರೆ.
ಕಡ್ಲೆಕಾಯಿ ಪರಶೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಆರಂಭವಾಗುವ ವಾರ್ಷಿಕ ಹಬ್ಬ. ಅಕ್ಕ ಪಕ್ಕದ ಗ್ರಾಮದ ಕಡಲೇಕಾಯಿ ಬೆಳೆಗಾರರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸುವುದು ಈ ಹಬ್ಬದ ಪ್ರತೀಕ. ಈ ಜಾತ್ರೆ ಸತತವಾಗಿ ಮೂರು ದಿವಸ ನಡೆಯುತ್ತದೆ. ಈ ಸ್ಥಳಕ್ಕೆ ಅನಂತಪುರ, ಧರ್ಮಾವರಂ ಮತ್ತು ಬಳ್ಳಾರಿ ಹಾಗೆ ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ ನೆರೆಯ ಭಾಗಗಳೊಂದಿ ರೈತರು ಕಡ್ಲೆಕಾಯಿ ಮಾರಾಟಕ್ಕಾಗಿ ಬರುತ್ತಾರೆ.
ಬಸವನಗುಡಿ ಕಡ್ಲೆಕಾಯಿ ಪರಶೆ ವಿಶೇಷತೆ ಏನೆಂದರೆಬಸವಣ್ಣನಿಗೆ ಕಡ್ಲೆಕಾಯಿ ತುಲಾಭಾರ ಮಾಡುವುದು. ಬಸವಣ್ಣನ ಪಂಚಲೋಹದ ಮೂರ್ತಿಯೊಂದನ್ನು ತುಲಾಭಾರಕ್ಕೆ ಬಳಸಿಕೊಳ್ಳಲಾಗುತ್ತದೆ. ತಕ್ಕಡಿಯ ಒದು ಭಾಗದಲ್ಲಿ ಬಸವಣ್ಣನ ಮೂರ್ತಿ ಇನ್ನೊಂದು ಭಾಗದಲ್ಲಿ ಕಡ್ಲೆಕಾಯಿ ಸುರಿಯಲಾಗುವುದು. ಮೂರ್ತಿಯ ಭಾರವನ್ನು ಕಡ್ಲೆಕಾಯಿ ಮೀರಿದಾಗ ಪರಿಷೆಗೆ ಚಾಲನೆ ಸಿಕ್ಕಂತಾಗುತ್ತದೆ. ಈ ತುಲಾಭಾರದಲ್ಲಿ ಪಾಲ್ಗೊಂಡ ಕಡ್ಲೆಕಾಯಿ ಶ್ರೇಷ್ಠ ಎಂಬುದು ಜನರ ನಂಬಿಕೆ.
ಇಲ್ಲಿರುವ ಪುರಾತನ ಬೃಹತ್ ಬಸವನ ದೇವಾಲಯದ ಎತ್ತರದ ಗುಡ್ಡದ ಮೇಲೆ ಕಟ್ಟಲಾಗಿರುವ ಪುರಾತನ ದೇವಾಲಯದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ವಿಗ್ರಹವಿದೆ. ಹೀಗಾಗೆ ಈ ದೇವಾಲಯಕ್ಕೆ ದೊಡ್ಡ ಬಸವನಗುಡಿ ಎಂಬ ಹೆಸರೂ ಇದೆ. ಈ ದೇವಾಲಯವನ್ನು ಕೆಂಪೇಗೌಡರು 1537ರಲ್ಲಿ ಕಟ್ಟಿಸಿದರು. ಈ ದೇವಾಲಯವು ವಿಜಯನಗರ ವಾಸ್ತುಶೈಲಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಗರ್ಭ ಗುಡಿಯಲ್ಲಿರುವ ಕಪ್ಪು ಶಿಲೆಯ ಬಸವ ಉದ್ಭವಮೂರ್ತಿಯೆಂದು ಹೇಳುತ್ತಾರೆ. ಪರಶಿವನ ವಾಹನ ಬಸವ ಇಲ್ಲಿ ಬಂದು ಶಿಲೆಯಾದ ಎಂಬ ಪ್ರತೀತಿ ಇದೆ. ಅದಕ್ಕೆ ಪೂರಕವಾಗಿ ಒಂದು ಕಥೆ ಇದೆ.
ಕಥೆ: ಈಗ ಬಸವಣ್ಣನ ದೇವಸ್ಥಾನ ಇರುವ ಸ್ಥಳ ಹಿಂದೆ ಸುಂಕೇನ ಹಳ್ಳಿ ಎಂದು ಹೆಸರಾಗಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು. ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಕಡಲೇ ಕಾಯಿ ಬೆಳೆಯುತ್ತಿದ್ದರು. ಸರ್ವರಿಗು ಸಮಪಾಲು, ಸರ್ವರದು ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತಾಪಿ ವರ್ಗ, ಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿಂದು ಹೋಗುತ್ತಿತ್ತಂತೆ.
ಈ ಗೂಳಿ ಅರ್ಥಾತ್ ಬಸವನ ಕಾಟ ತಾಳಲಾರದೆ ರೈತರು ಒಂದು ದಿನ ರಾತ್ರಿಯಿಡೀ ಕಾದಿದ್ದು ಬಡಿಗೆ ಹಿಡಿದು ಬಸವನ ಬಡಿಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಬಸವ ಬಂದ, ಕಡಲೆಕಾಯಿ ತಿನ್ನುತ್ತಿದ್ದ. ಇದನ್ನು ನೋಡಿ ಕೋಪಗೊಂಡ ರೈತರು, ತಾವು ತಂದಿದ್ದ ಬಡಿಗೆ ಹಿಡಿದು ಬಸವನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿಬಂದು ಗುಡ್ಡ ಏರಿ ಕಲ್ಲಾದನಂತೆ . ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಕೈಲಾಸದಿಂದ ಧರೆಗಿಳಿದುಬಂದ ನಂದಿಕೇಶ್ವರನನ್ನೇ ಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿದರಂತೆ. ಅಂದಿನಿಂದ ರೈತರು ತಪ್ಪೊಪ್ಪಿಗೆಯಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ನಂತರ ತಮ್ಮ ಮೊದಲ ಬೆಳೆಯನ್ನು ಈ ಕಲ್ಲಿನ ಬಸವಣ್ಣನಿಗೆ ತಂದು ಒಪ್ಪಿಸಿ ನೇವೇದ್ಯ ಮಾಡಿ, ಕ್ಷಮಿಸೆಂದು ಕೇಳಿ ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆ ಕಡಲೆಕಾಯಿ ಪರಶೆಯಲ್ಲಿ ಕಿಕ್ಕಿರಿದ ಜನ, ಗದ್ದಲ, ಅಂಗಡಿಗಳ ಸಾಲು, ವಾಹನಗಳಿಲ್ಲದೆ ಬರೀ ಜನರೇ ತುಂಬಿರುವ ರಸ್ತೆಗಳು ಈ ಜಾತ್ರೆಯಲ್ಲಿ ಕಾಣುವ ಸರ್ವೇಸಾಮಾನ್ಯ ದೃಶ್ಯ. ಎಲ್ಲದಕ್ಕಿಂತ ಹೆಚ್ಚು ಆಕರ್ಷಿಸುವುದು ಎಲ್ಲೆಲ್ಲೂ ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡುವ ಬೆಳೆಗಾರರ ತರಹೇವಾರಿ ಕಡಲೇಕಾಯಿಗಳು – ದೊಡ್ಡ ಗಾತ್ರದ ಕಡಲೆ, ಚಿಕ್ಕ ಚಿಕ್ಕ ಕಡಲೆ, ಹಸಿಗಡಲೆ, ಬೇಯಿಸಿದ ಕಡಲೆ, ಹುರಿದ ಕಡಲೆ. ಎಲ್ಲ ರೀತಿಯ ಕಡಲೆಕಾಯನ್ನು ಕೊಂಡು, ಒಂದಷ್ಟನ್ನು ತಿಂದು ಉಳಿದದ್ದನ್ನು ಚೀಲದೊಳಗೆ ತುಂಬಿಕೊಂಡು ನೂಕು ನುಗ್ಗಲಲ್ಲಿ ತೂರಿಕೊಂಡು ಬಂದು ಮನೆ ಸೇರಿದಾಗ ಏನೋ ಆಸ್ತಿ ಸಂಪಾದಿಸಿದಷ್ಟು ಖುಷಿಯಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
