fbpx
god

ಬ್ರಹ್ಮ ಮುಹೂರ್ತ ಅಂದರೆ ಏನು ?

ರಾತ್ರಿಯ ಅಂತಿಮ ಪ್ರಹರವೇ ಬ್ರಹ್ಮ ಮುಹೂರ್ತ.ಆಯುರ್ವೇದದ ಪ್ರಕಾರ ಮುಂಜಾನೆಯ

೪:೨೪ರಿಂದ ೫:೧೧ರವರೆಗಿನ ಸಮಯ.ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ.ಈ ಸಮಯದಲ್ಲಿ ಧ್ಯಾನ,ಯೋಗ,ಜಪ,ಪೂಜೆ ಮುಂತಾದ ಸತ್ಕರ್ಮಗಳನ್ನಾಚರಿಸಿದರೆ ಹೆಚ್ಚು ಫಲಪ್ರದ.ಪ್ರತಿನಿತ್ಯ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ,ಬಲ,ವಿದ್ಯೆ,ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ.ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರ ನಿಷಿದ್ಧ.

“ಬ್ರಹ್ಮಮುಹೂರ್ತೇ ಯಾ ನಿದ್ರಾ ಸಾ ಪುಣ್ಯಕ್ಷಯಕಾರಿಣೀ”
ಅಂದರೆ,ಬ್ರಹ್ಮಮುಹೂರ್ತದಲ್ಲಿ ಯಾರು ನಿದ್ರೆ ಮಾಡುತ್ತಾರೋ ಅವರ ಪುಣ್ಯಫಲಗಳು ನಾಶವಾಗುತ್ತವೆ.

ವೈಜ್ಞಾನಿಕ ದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ.ಈ ಸಮಯದಲ್ಲಿ ವಾಯುಮಂಡಲ ಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ.ಆಮ್ಲಜನಕದ ಪ್ರಮಾಣ ಶೇಕಡಾ ೪೧ರಷ್ಟಿರುತ್ತದೆ.ಇದರಿಂದ ನಮ್ಮ ಶ್ವಾಸಕೋಶಗಳ ಶುದ್ಧಿಯಾಗುತ್ತದೆ.ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.

ಯಾರು ಬ್ರಹ್ಮ ಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂ ಬುದ್ಧಿ ಉಲ್ಲಸಿತವಾಗಿರುತ್ತವೆ.ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ಮನವರಿಕೆಯಾಗುತ್ತದೆ.ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ.ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ.ದೇವರಶೃಂಗಾರ ಹಾಗೂ
ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.

ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ,ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಅಧಿಕಪುಣ್ಯ ಪ್ರಾಪ್ತಿಯಾಗುತ್ತದೆ.ಮನುಷ್ಯನ ಜ್ಞಾನ,ವಿವೇಕ,ಶಾಂತಿ,ಸುಖ ಮುಂತಾದ ಸದ್ಗುಣಗಳ ವೃದ್ಧಿಯಾಗುತ್ತದೆ.ಭಗವಂತನ ಸ್ಮರಣೆಯ ನಂತರ ಮೊಸರು,ತುಪ್ಪ,ಕನ್ನಡಿ,ಬಿಲ್ವಪತ್ರೆ,ಹೂವಿನ ಮಾಲೆ ಮುಂತಾದ ಪವಿತ್ರ ವಸ್ತುಗಳನ್ನು
ನೋಡುವುದರಿಂದ ದಿನ ಶುಭವಾಗಿರುತ್ತದೆ.

ಸೀತೆಯನ್ನು ಹುಡುಕುತ್ತಾ ಸಾಗಿದ ಆಂಜನೇಯ ಬ್ರಹ್ಮ ಮುಹೂರ್ತದಂದೇ ಅಶೋಕವನ ತಲುಪಿದ್ದ. ಅಲ್ಲಿ ವೇದಮಂತ್ರಗಳ ಉಚ್ಛಾರಣೆಯನ್ನು ಕೇಳಿದ್ದ,ಯಜ್ಞಾಕಾರ್ಯಾದಿಗಳನ್ನು ನೋಡಿದ್ದನೆಂದು ವಾಲ್ಮೀಕಿರಾಮಾಯಣದಲ್ಲಿ ತಿಳಿಸಲಾಗಿದೆ.

ರಾತ್ರಿಯ ವಿಶ್ರಾಂತಿಯ ನಂತರ ಮನಸ್ಸು ಶಾಂತ ಹಾಗೂ ಸ್ಥಿರವಾಗಿರುತ್ತದೆ.ವಾತಾವರಣದಲ್ಲಿ ಶುದ್ಧತೆಯೂ ಹೆಚ್ಚಿರುತ್ತದೆ.ಆಗ ದೇವರ ಉಪಾಸನೆ,ಧ್ಯಾನ,ಯೋಗ,ಪೂಜೆಗಳನ್ನು ಮಾಡುವುದರಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯದಿಂದ ಕೂಡಿರುತ್ತವೆ.ಆದ್ದರಿಂದ ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಲೋಕಾಃ ಸಮಸ್ತಾಃ ಸುಖಿನೋ ಭವಂತು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top