fbpx
god

ಜಗತ್ತಿನ ಸೂತ್ರಧಾರಿ ಶ್ರೀಕೃಷ್ಣ ಪರಮಾತ್ಮನ ಜನ್ಮವೃತ್ತಾಂತ!!

ಉತ್ತರ ಪ್ರದೇಶದ ಮಥುರೆಯಲ್ಲಿವಸುದೇವ ಮತ್ತುದೇವಕಿಯರ ಮಗನಾಗಿ ಶ್ರೀ ಕೃಷ್ಣ ಜನಿಸಿದನು. ಯದುರಾಜ ಶೂರಸೇನನ ಮಗ ವಸುದೇವನು ಉಗ್ರಸೇನನ ಸುಂದರಪುತ್ರಿ ದೇವಕಿಯನ್ನು ವಿವಾಹವಾದನು. ವಿವಾಹದ ನಂತರ ದೇವಕಿಯ ಅಣ್ಣನಾದ ಕಂಸನು ಅವರನ್ನು ಅದ್ಭುತವಾದ ಸುವರ್ಣ ರಥದಲ್ಲಿ ಕೊಂಡೊಯ್ದನು.

ಆಗ ಕಂಸನಿಗೆ ಇದ್ದಕ್ಕಿದ್ದಂತೆಯೇ “ಈ ಸೋದರಿಯ ಎಂಟನೆಯ ಮಗನು ನಿನ್ನನ್ನು ಕೊಲ್ಲುತ್ತಾನೆ” ಎಂಬ ಅಶರೀರವಾಣಿಯೊಂದು ಕೇಳಿಸಿತು. ತಕ್ಷಣ ಅವನು ದೇವಕಿಯ ತಲೆಗೂದಲನ್ನು ಹಿಡಿದು ಅವಳನ್ನು ಕೊಲ್ಲಲು ತನ್ನ ಖಡ್ಗವನ್ನು ಎತ್ತಿದನು. ಆಕೆಯ ನವವಿವಾಹಿತ ಪತಿಯಾದ ವಸುದೇವನು ಆಕೆಯ ಹೊಟ್ಟೆಯಲ್ಲಿ ಹುಟ್ಟಿದ ಎಲ್ಲಾ ಮಕ್ಕಳನ್ನೂ ನಿನಗೆ ಕೊಟ್ಟು ಬಿಡುವುದಾಗಿ ಹೇಳಿ ಕಂಸನನ್ನು ತಡೆದನು.

ನಂತರ ಕಂಸನು ವಸುದೇವ, ದೇವಕಿ ಹಾಗೂ ತಂದೆ ಉಗ್ರಸೇನರನ್ನು ಕಾರಾಗೃಹದಲ್ಲಿ ಬಂಧಿಸಿದನು. ಆಮೇಲೆ ತಾನೇ ರಾಜನೆಂದು ಘೋಷಿಸಿಕೊಂಡು, ಇಡೀ ಯದುಕುಲಕ್ಕೆ ಶಾಂತಿಭಂಗವುಂಟು ಮಾಡಿ ದೇವಕಿ ಮತ್ತು ವಸುದೇವರಿಗೆ ಹುಟ್ಟಿದ ಗಂಡು ಮಕ್ಕಳನ್ನು ಒಂದಾದ ಮೇಲೊಂದರಂತೆ ಕೊಂದು ಹಾಕಿದನು.

ಯೋಗಮಾಯೆಯು ದೇವಕಿಯ ಏಳನೇ ಗಂಡು ಮಗುವಾದ ಬಲರಾಮನನ್ನು ಎತ್ತಿಕೊಂಡು ಹೋಗಿ ನಂದ ಮತ್ತು ಯಶೋಧೆಯರ ಮನೆಯಲ್ಲಿ ರೋಹಿಣಿಯ ವಶಕ್ಕೆ ಒಪ್ಪಿಸಿದಳು. ಆಮೇಲೆ ಕಂಸನು ಯಾರನ್ನು ಕಂಡರೆ ಭಯದಿಂದ ತತ್ತರಿಸುತ್ತಿದ್ದನೋ, ಆ ಕೃಷ್ಣನು ದೇವಕಿಯ ಹೊಟ್ಟೆಯಲ್ಲಿ ಎಂಟನೆಯ ಮಗನಾಗಿ ಹುಟ್ಟಲು ಸಿದ್ಧವಾಗಿದ್ದನು. ಕೃಷ್ಣ ಜನನದ ಸಮಯದಲ್ಲಿ ಎಲ್ಲೆಡೆ ಶುಭ ಸೂಚನೆಗಳಾದವು.

ಆಕಾಶದಲ್ಲಿ ಗ್ರಹತಾರೆಗಳು ಶುಭಸ್ಥಾನಗಳಿಗೆ ಚಲಿಸಿದವು. ನದಿಗಳು ನಿರ್ಮಲ ಜಲದಿಂದ ತುಂಬಿ ಹರಿಯುತ್ತಿದ್ದವು. ಸರೋವರಗಳು ಕಮಲಗಳಿಂದ ತುಂಬಿದ್ದವು. ಮೇಲ್ಗಾಳಿ ಸವಿಯಾದ ಹೂಗಳ ಕಂಪಿನಿಂದ ಕೂಡಿದ್ದಿತು. ರಾತ್ರಿಯ ಕಗ್ಗತ್ತಲೆಯಲ್ಲಿ, ಬಿರುಗಾಳಿಯಿಂದ ಕೂಡಿದ ಭಾರೀ ಮಳೆ ಬರುತ್ತಿರುವಾಗ ದೇವೋತ್ತಮ ಪರಮಪುರುಷನಾದ ವಿಷ್ಣುವು ದೇವಕಿಯ ಮುಂದೆ ಕಾಣಿಸಿಕೊಂಡನು. ವಸುದೇವನು ಶಂಖ, ಚಕ್ರ, ಗದಾ, ಪದ್ಮಗಳನ್ನು ನಾಲ್ಕು ಕೈಗಳಲ್ಲಿ ಹಿಡಿದು, ಕೋಣೆಯನ್ನೆಲ್ಲಾ ತನ್ನ ತೇಜ ಪುಂಜದಿಂದ ಬೆಳಗುತ್ತಿರುವ ತನ್ನ ಮಗನನ್ನು ನೋಡಿದನು. ಆಗ ಅವನು ಕರಜೋಡಿಸಿ ನಮಸ್ಕಾರ ಮಾಡಿ ಸ್ತೋತ್ರ ಮಾಡಿದನು. ನಂತರ ಭಗವಂತನು ಒಂದು ಪುಟ್ಟ ಶಿಶುವಾಗಿ ಮಾರ್ಪಾಟಾದನು.

ವಸುದೇವನು ನಿಶ್ಯಬ್ಧವಾಗಿ ತನ್ನ ಪುಟಾಣಿ ಶಿಶುವನ್ನು ಸೆರೆಮನೆಯಿಂದ ಆಚೆಗೆ ಒಯ್ದನು. ಅದು ಹೇಗೋ, ಕಂಸನ ಅರಮನೆಯಲ್ಲಿ ಎಲ್ಲರೂ, ಅದರಲ್ಲೂ ಮುಖ್ಯವಾಗಿ ದ್ವಾರಪಾಲಕರು, ಗಾಢವಾಗಿ ಮಲಗಿ ಬಿಟ್ಟಿದ್ದರು. ಬಾಗಿಲುಗಳೆಲ್ಲಾ ತೆರೆದಿದ್ದವು. ಆ ರಾತ್ರಿ ಗಾಢಾಂಧಕಾರ ಮಯವಾಗಿತ್ತು. ಗುಡುಗು – ಸಿಡಿಲು – ಮಳೆ; ವಸುದೇವನು ಪುಟ್ಟ ಕೃಷ್ಣನನ್ನು ಎತ್ತಿಕೊಂಡಿರುವಾಗ, ವಸುದೇವನ ತಲೆಯ ಮೇಲೆ ಛತ್ರಿಯಂತೆ ಅನಂತಶೇಷನು ತನ್ನ ಹೆಡೆಯನ್ನು ಬಿಚ್ಚಿದನು. ಅವರು ಯಮುನಾ ನದಿಯ ಬಳಿ ಬಂದಾಗ, ನದಿಯು ಭಾರೀ ಅಲೆಗಳಿಂದ ಭೋರ್ಗರೆಯುತ್ತಿತ್ತು. ಆದರೆ ನದಿಯು ಭಗವಂತನಿಗೆ ಆ ದಡಕ್ಕೆ ಹೋಗಲು ಎಡೆ ಮಾಡಿ ಕೊಟ್ಟಿತು.

ಆಚೆಯ ದಡದಲ್ಲಿ ವೃಂದಾವನದಲ್ಲಿ ಎಲ್ಲರೂ ನಿದ್ದೆ ಮಾಡುತ್ತಿದ್ದಾಗ ನಂದ ಮಹಾರಾಜನ ಮನೆಗೆ ಹೋದನು.

ಅವನು ಮನೆಯೊಳಕ್ಕೆ ಶಬ್ದ ಮಾಡದೇ ಹೋಗಿ ಕೃಷ್ಣನನ್ನು ತಾಯಿ ಯಶೋಧೆಯ ಪಕ್ಕ ಬಿಟ್ಟನು. ಆಮೇಲೆ ಯಶೋಧೆಯ ಹೊಟ್ಟೆಯಲ್ಲಿ ಅದೇ ಸಮಯಕ್ಕೆ ಹುಟ್ಟಿದ ಹೆಣ್ಣು ಮಗುವನ್ನು ಎತ್ತಿಕೊಂಡು ಬಂದು ಕಂಸನ ಕಾರಾಗೃಹದಲ್ಲಿದ್ದ ದೇವಕಿಯ ಪಕ್ಕದಲ್ಲಿ ಮಲಗಿಸಿದನು. ಅವನು ಎಲ್ಲಾ ಬಾಗಿಲುಗಳನ್ನೂ ಭದ್ರ ಮಾಡಿದ್ದನು.

ಆದ್ದರಿಂದ ಕಂಸನಿಗೆ ಆ ರಾತ್ರಿ ಅಷ್ಟೊಂದು ಘಟನೆಗಳು ಆಗಿರುವುದು ತಿಳಿಯಲಿಲ್ಲ. ವೃಂದಾವನದಲ್ಲಿ, ಯಶೋಧೆಗೆ ಒಂದು ಗಂಡು ಮಗು ಆಯಿತು ಎಂದು ಘೋಷಿಸಲಾಯಿತು. ಗೋಪ ಗೋಪಿಯರೆಲ್ಲರೂ ಚೆನ್ನಾಗಿ ಸಿಂಗರಿಸಿಕೊಂಡು, ನವಜಾತ ಮಗುವಿಗೆ ಉಡುಗೊರೆಗಳನ್ನು ಕೊಟ್ಟರು. ನಂದ ಮಹಾರಾಜ ಮತ್ತು ಯಶೋಧೆಯರ ಮನೆಗೆ ಹೋಗಿ ಗೋಪಿಯರು ಅರಿಶಿನ, ಮೊಸರು, ಹಾಲು ಮತ್ತು ನೀರನ್ನು ಬೆರೆಸಿ ಮುದ್ದು ಕೃಷ್ಣನ ಮತ್ತು ಇತರರ ಮೇಲೆ ಹಾಕಿ ಹರಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top