News

ರಾಜಕೀಯ ಪಕ್ಷಗಳ ಬಳಿ ಎಷ್ಟು ದುಡ್ಡು ಇದೆ ಗೊತ್ತಾ?

ಕೇಂದ್ರ ಸರಕಾರ ಮತ್ತು ಆರ್‍ಬಿಐ ರಾಜಕೀಯ ಪಕ್ಷಗಳು ನಿಷೇಧಗೊಂಡಿರುವ ಹಳೆಯ ನೋಟುಗಳಲ್ಲಿ ಎಷ್ಟು ಮೊತ್ತ ಬೇಕಾದರೂ ತಮ್ಮ ಖಾತೆಗಳಲ್ಲಿ ಜಮೆ ಮಾಡುವ ಅವಕಾಶ ಕಲ್ಪಿಸಿರುವುದು ಚರ್ಚೆಯ ವಿಷಯ. ಚುನಾವಣಾ ಆಯೋಗ ಕೂಡ ಈ ಆಕ್ಷೇಪ ವ್ಯಕ್ತಪಡಿಸಿ ರಾಜಕೀಯ ಪಕ್ಷಗಳಿಗೂ ಮಿತಿ ಹೇರದಿದ್ದರೆ ಚುನಾವಣಾ ಅಕ್ರಮ ತಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಅಸೋಸಿಯೇಷನ್‍ ಫಾರ್‍ ಡೆಮಾಕ್ರೆಟಿಕ್ ರಿಫಾರ್ಮ್ಸ್‍ ಸಂಘಟನೆ ಇದೀಗ ರಾಜಕೀಯ ಪಕ್ಷಗಳ ಬಳಿ ಇರುವ ಹಣ ಹಾಗೂ 20ಸಾವಿರ ಮೇಲೆ ಪಕ್ಷಗಳಿಗೆ ದಾನ ಮಾಡಿದವರ ವಿವರ ಪ್ರಕಟಿಸಿದೆ.

ಪ್ರಸ್ತುತ ದೇಶದಲ್ಲಿರುವ 7 ರಾಷ್ಟ್ರೀಯ ಪಕ್ಷಗಳಲ್ಲಿ 2015-16ರ ಅವಧಿಯಲ್ಲಿ ಒಟ್ಟಾರೆ 102.2 ಕೋಟಿ ರೂ. ಇದೆ. 1744 ಮಂದಿ 20 ಸಾವಿರಕ್ಕೂ ಅಧಿಕ ಮೊತ್ತದ ದಾನ ಮಾಡಿದ್ದಾರೆ ಎಂಬ ವಿವರ ಬಹಿರಂಗಪಡಿಸಿದ್ದು, ಪ್ರಸ್ತುತ ಇರುವ ಮೊತ್ತವನ್ನು ಸಂಗ್ರಹಿಸುತ್ತಿದೆ ಎಂದು ಹೇಳಿಕೊಂಡಿದೆ.

2015-16ರಲ್ಲಿ 7 ರಾಜಕೀಯ ಪಕ್ಷಗಳಲ್ಲಿ ಒಟ್ಟು 102.2 ಕೋಟಿ ಇದ್ದು, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ತೀರಾ ಕಡಿಮೆ. ಏಕೆಂದರೆ 2014-15ರ ಸಾಲಿನಲ್ಲಿ ಈ ಪಕ್ಷಗಳಲ್ಲಿ ಒಟ್ಟಾರೆ 528.67 ಕೋಟಿ ಜಮೆಯಾಗಿತ್ತು. ಅಂದರೆ ಒಂದು ವರ್ಷದಲ್ಲಿ ಶೇ.84ರಷ್ಟು ಸಂಗ್ರಹ ಕಡಿಮೆಯಾಗಿದೆ.

ಚುನಾವಣಾ ಆಯೋಗ ನೀಡಿದ ವಿವರ ಆಧರಿಸಿ ಈ ವರದಿ ಪ್ರಕಟಿಸಲಾಗಿದ್ದು, ಈ ಪಕ್ಷಗಳಲ್ಲಿ 1.45 ಕೋಟಿ ನಗದು ಇದೆ. ನಿಯಮದ ಪ್ರಕಾರ 20 ಸಾವಿರ ಮೇಲ್ಪಟ್ಟು ದಾನ ಮಾಡಿದವರ ವಿವರವನ್ನು ಪಕ್ಷಗಳು ಪ್ರಕಟಿಸಬೇಕು. ಅಲ್ಲದೇ ಈ ಪಕ್ಷಗಳು ಇದುವರೆಗೂ ತೆರಿಗೆ ಪಾವತಿಸಿಯೇ ಇಲ್ಲ.

ದೇಶದಲ್ಲಿ ಬಿಜೆಪಿ, ಕಾಂಗ್ರೆಸ್‍, ತೃಣಮೂಲ ಕಾಂಗ್ರೆಸ್‍, ಸಿಪಿಎಂ, ಸಿಪಿಐ, ನ್ಯಾಷನಲಿಸ್ಟ್‍ ಕಾಂಗ್ರೆಸ್‍ ಪಾರ್ಟಿ, ಎನ್‍ಸಿಪಿ ಮತ್ತು ಬಹುಜನ ಸಮಾಜಪಕ್ಷ (ಬಿಎಸ್‍ಪಿ) ರಾಷ್ಟ್ರೀಯ ಪಕ್ಷಗಳಾಗಿ ಗುರುತಿಸಿಕೊಂಡಿವೆ.

ತಮಗೆ 20 ಸಾವಿರ ಮೇಲ್ಪಟ್ಟು ಯಾರೂ ದಾನ ಮಾಡಿಲ್ಲ ಎಂದು ಬಿಎಸ್‍ಪಿ ಹೇಳಿಕೊಂಡಿದೆ. ಎನ್‍ಸಿಪಿಗೆ ಶೇ. 98ರಷ್ಟು ಗರಿಷ್ಠ ಆದಾಯ ಕಡಿಮೆ ಆಗಿದೆ. 2014-15ರಲ್ಲಿ 38.82 ಕೋಟಿ ಇದ್ದ ಆದಾಯ ನಂತರದ ವರ್ಷದಲ್ಲಿ 71 ಲಕ್ಷಕ್ಕೆ ಇಳಿದಿದೆ.

ಆಡಳಿತಾರೂಢ ಬಿಜೆಪಿ ಬಳಿ 76.85 ಕೋಟಿ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.82ರಷ್ಟು ಕಡಿಮೆ ಆಗಿದೆ. ಅದರ ಹಿಂದಿನ ವರ್ಷ ಬಿಜೆಪಿ ಆದಾಯ 437.35 ಕೋಟಿ ಆಗಿತ್ತು.

ಕಾಂಗ್ರೆಸ್‍ ಬಳಿ 20.42 ಕೋಟಿ, ಸಿಪಿಎಂ ಬಳಿ 1.81 ಕೋಟಿ, ಸಿಪಿಐ ಬಳಿ 1.58 ಕೋಟಿ ಹಾಗೂ ತೃಣಮೂಲ ಕಾಂಗ್ರೆಸ್‍ ಬಳಿ 65 ಲಕ್ಷ ರೂ. ಸಂಗ್ರಹವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top