fbpx
Breaking News

ಇಡೀ ವಿಶ್ವಕ್ಕೇ ಸವಾಲೊಡ್ಡುತ್ತಿರುವ ಟಿಯಾನ್‍ಗಾಂಗ್… ಚೀನಾ ಬಾಹ್ಯಾಕಾಶ ಕೇಂದ್ರ!!!

ಟಿಯಾನ್‍ಗಾಂಗ್… ಚೀನಾ ಬಾಹ್ಯಾಕಾಶ ಕೇಂದ್ರ

ಚೀನಾ ತನ್ನದೇ ಆದ ಸ್ವತಂತ್ರ ಬಾಹ್ಯಾಕಾಶ ಪ್ರಯೋಗಾಲಯ ಹೊಂದಲು ದಾಪುಗಾಲು ಹಾಕಿದೆ. ಈಗಾಗಲೇ ಟಿಯಾನ್‍ಗಾಂಗ್-1 ಮತ್ತು 2 ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿರುವ ಚೀನಾ ಮೂರನೇ ಟಿಯಾನ್‍ಗಾಂಗ್ ಬಾಹ್ಯಾಕಾಶ ಪ್ರಯೋಗಾಲಯವನ್ನು ಉಡಾವಣೆ ಮಾಡುವ ಸಿದ್ಧತೆಯಲ್ಲಿದೆ. ಈ ಮೂರು ಪ್ರಯೋಗಾಲಯಗಳನ್ನು ಜೋಡಿಸುವ ಮೂಲಕ 2022ರ ವೇಳೆಗೆ ಬಾಹ್ಯಾಕಾಶದಲ್ಲಿ ತನ್ನದೇ ಆದ ಪ್ರಯೋಗಾಲಯ ಸ್ಥಾಪಿಸುವ ಮೂಲಕ ಅಮೇರಿಕಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

ಬಾಹ್ಯಾಕಾಶದಲ್ಲಿ ತನ್ನದೇ ಆದ ಸ್ವತಂತ್ರ ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪಿಸುವ ಚೀನಾದ ಮಹಾತ್ವಾಕಾಂಕ್ಷಿ ಕನಸು 2022ರ ಒಳಗೆ ನನಸಾಗಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೇರಿಕಾದ ಪ್ರಾಬಲ್ಯ ಮುರಿಯಲು ಬಾಹ್ಯಾಕಾಶ ಪ್ರಯೋಗಾಲಯದ ಯೋಜನೆಗೆ 1992 ರಲ್ಲಿ ಚೀನಾ ಚಾಲನೆ ನೀಡಿತ್ತು. ಈಗಾಗಲೇ ಎರಡು ಪ್ರಯೋಗಾಲಯಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿರುವ ಚೀನಾ ಮೂರನೆಯದನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ಟಿಯಾನ್‍ಗಾಂಗ್-1 ಮತ್ತು ಟಿಯಾನ್‍ಗಾಂಗ್-2 ಪ್ರಯೋಗಾಲಯಗಳು ಈ ಕಾರ್ಯನಿರ್ವಹಿಸುತ್ತಿವೆ.
ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ 2024ರ ವೇಳೆಗೆ ತನ್ನ ಕಾರ್ಯ ಸ್ಥಗಿತಗೊಳಿಸಲಿರುವ ಹಿನ್ನೆಲೆಯಲ್ಲಿ, ಅದಕ್ಕೂ 2 ವರ್ಷ ಮೊದಲೇ ತನ್ನದೇ ಆದ ಬಾಹ್ಯಾಕಾಶ ಪ್ರಯೋಗಾಲಯ ಹೊಂದುವುದು ಚೀನಾದ ಬಯಕೆ.
ಚೀನಾದ ಟಿಯಾನ್‍ಗಾಂಗ್ ಬಾಹ್ಯಾಕಾಶ ಪ್ರಯೋಗಾಲಯದ ಇನ್ನೊಂದು ವಿಶೇಷವೆಂದರೆ, ಯಾವುದೇ ದೇಶದ ಸಹಯೋಗ ಇಲ್ಲದೆ ಏಕಾಂಗಿಯಾಗಿಯೇ ಚೀನಾ ಈ ಯೋಜನೆಯನ್ನು ಕೈಗೆತ್ತಿಕೊಂಡಿರುವುದು.

2013ರಿಂದ ಈ ಯೋಜನೆಗೆ ಹೆಚ್ಚಿನ ಚಾಲನೆ ನೀಡಿದ ಚೀನಾ, 2011ರ ಸೆಪ್ಟೆಂಬರ್ 29ರಂದು ಮೊದಲ ಬಾಹ್ಯಾಕಾಶ ಪ್ರಯೋಗಾಲಯ ಟಿಯಾನ್‍ಗಾಂಗ್- 1 ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು. ನಂತರ 2016ರ ಸೆಪ್ಟೆಂಬರ್ 15ರಂದು ಟಿಯಾನ್‍ಗಾಂಗ್-2 ಬಾಹ್ಯಾಕಾಶ ಪ್ರಯೋಗಾಲಯವನ್ನು ಉಡಾವಣೆ ಮಾಡಿರುವ ಚೀನಾ, ಟಿಯಾನ್ ಗಾಂಗ್-3 ಉಡಾವಣೆಗೆ ಸಿದ್ಧತೆ ನಡೆಸಿದೆ.

ಏನಿದು ಬಾಹ್ಯಾಕಾಶ ಕೇಂದ್ರ?
ಅಂತರಿಕ್ಷದಲ್ಲಿ ಸ್ಥಾಪಿಸಲಾಗುವ ಒಂದು ಅತಿ ದೊಡ್ಡ ಬಾಹ್ಯಾಕಾಶ ನೌಕೆ. ಇದೊಂದು ನಿಲ್ದಾಣ. ವಿಶೇಷವಾಗಿ ಮಾನವ ಸಹಿತ ಬಾಹ್ಯಾಕಾಶ ಸಂಶೋಧನೆಗಳಿಗೆ ನೆರವಾಗುತ್ತದೆ. ಪರಿಪೂರ್ಣ ವೈಜ್ಞಾನಿಕ ಪ್ರಯೋಗಾಲಯ ಕೂಡ ಹೌದು. ಜೊತೆಗೆ ಗಗನ ಯಾನಿಗಳು ಹಲವು ದಿನ ವಾಸವನ್ನೂ ಮಾಡಬಹುದು. 1998ರಲ್ಲಿ ಜಗತ್ತಿನ ಮೊದಲ “ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ ಸ್ಥಾಪನೆಗೊಂಡಿತು. 2011ರಲ್ಲಿ ಇದರ ಸಂಪೂರ್ಣ ಕಾರ್ಯ ಮುಕ್ತಾಯವಾಗಿದೆ. ಅಮೆರಿಕದ ನೇತೃತ್ವದಲ್ಲಿ ಹಲವು ದೇಶಗಳು ಸೇರಿ ಈ ಕೇಂದ್ರವನ್ನು ಸ್ಥಾಪಿಸಿವೆ.

ಬಾಹ್ಯಾಕಾಶ ಕೇಂದ್ರದ ಅಗತ್ಯವೇನು?
ಅಂತರಿಕ್ಷದಲ್ಲಿ ಇದು ಮನೆಯಿದ್ದಂತೆ. 2000ನೇ ಇಸವಿ ಬಳಿಕ ಗಗನಯಾನಿಗಳು “ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ಕ್ಕೆ ತೆರಳಿ ಅಲ್ಲಿ ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಅಂತರಿಕ್ಷದಲ್ಲಿ ಮಾನವ, ಜೀವಿಗಳು, ಸಸ್ಯ ಹೇಗೆ ಪ್ರತಿಕ್ರಿಯಿಸುತ್ತವೆ? ಅಂತರಿಕ್ಷದಲ್ಲಿನ ತಂತ್ರಜ್ಞಾನದ ಸವಾಲುಗಳನ್ನು ಪರೀಕ್ಷಿಸಲು, ನಮ್ಮ ಭೂಮಿ, ಸೌರಮಂಡಲ ಮಾತ್ರವಲ್ಲದೆ, ಬ್ರಹ್ಮಾಂಡದ ಕುರಿತ ಸಂಶೋಧನೆಗೆ ಇದು ನೆರವು ನೀಡುತ್ತದೆ. ಇದರೊಂದಿಗೆ ಆಳ ಬಾಹ್ಯಾಕಾಶಕ್ಕೆ ಮಾನವರನ್ನು ಕಳಿಸುವ ಯತ್ನಕ್ಕೂ ಇದು ನೆರವು ನೀಡುತ್ತದೆ.

ಚೀನಾದ ಪ್ಲಾನ್ ಏನು?
ಚೀನಾ ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪಿಸುವ ಸಿದ್ಧತೆ ನಡೆಸಿದೆ. “ಟಿಯಾನ್‍ಗಾಂಗ್ ಬಾಹ್ಯಾಕಾಶ ಕೇಂದ್ರ’ (ಸ್ವರ್ಗದ ಅರಮನೆ) ಎನ್ನುವುದು ಇದರ ಹೆಸರು. ಇದು ಕೆಳ ಅಂತರಿಕ್ಷ ಕಕ್ಷೆಯಲ್ಲಿ (ಭೂಮಿಯಿಂದ ಸುಮಾರು (350ಕಿ.ಮೀ. ಎತ್ತರದಲ್ಲಿ) ಸ್ಥಾಪಿಸುವ ಉದ್ದೇಶ ಹೊಂದಿದೆ. “ಬೀಜಿಂಗ್ ಏರೋಸ್ಪೇಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್’ ನಿಂದ ಇದರ ನಿಯಂತ್ರಣ ಮಾಡುವ ಉದ್ದೇಶವಿದೆ. 2020ರ ವೇಳೆಗೆ ಇದರ ಸಂಪೂರ್ಣ ಸ್ಥಾಪನೆ ನಡೆಯಲಿದ್ದು, ಅದಕ್ಕೂ ಮುನ್ನ ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ.

ಚೀನಾ ಕೇಂದ್ರಕ್ಕೆ ಪ್ರೇರಣೆಯೇನು?
ಚೀನಾ ಬಾಹ್ಯಾಕಾಶ ಕೇಂದ್ರಕ್ಕೆ ಪ್ರೇರಣೆಯಾದದ್ದು ಅಂದಿನ ಸೋವಿಯತ್ ಒಕ್ಕೂಟ ಸ್ಥಾಪಿಸಿದ್ದ “ಮಿರ್ ಬಾಹ್ಯಾಕಾಶ ಕೇಂದ್ರ’. 1986-2001 ರವರೆಗೆ ಈ ಕೇಂದ್ರ ಕಾರ್ಯನಿರ್ವಹಿಸಿತ್ತು. ಶೀತಲ ಸಮರ ಸಂದರ್ಭದಲ್ಲಿ ಇದು ಹೆಚ್ಚಿನ ಕೆಲಸ ಮಾಡಿತ್ತು. ಅನುಭವಿ ರಷ್ಯಾದಿಂದ ಬಾಹ್ಯಾಕಾಶ ಕೇಂದ್ರದ ಕುರಿತ ಕೆಲವೊಂದು ತಂತ್ರಜ್ಞಾನಗಳನ್ನು ಚೀನಾ ಪಡೆದುಕೊಂಡಿದೆ. ಸ್ವಯಂಚಾಲಿತ ಡಾಕಿಂಗ್ ವ್ಯವಸ್ಥೆ ಸೇರಿದಂತೆ ವಿನ್ಯಾಸ, ಬಾಹ್ಯಾಕಾಶ ಕೇಂದ್ರದ ಜೋಡಣಾ ಸಾಮಗ್ರಿ ಕಳಿಸುವ ರಾಕೆಟ್ ವಿನ್ಯಾಸ, ವ್ಯವಸ್ಥೆ, ಅಳವಡಿಕೆಗಳ ಮಾಹಿತಿ ಪಡೆದುಕೊಂಡಿದೆ.

ಕೇಂದ್ರ ಸ್ಥಾಪಿಸಲು ಏನು ಕಾರಣ?
ಚೀನಾ ಪ್ರತ್ಯೇಕೇ ಕೇಂದ್ರ ಸ್ಥಾಪಿಸಲು ಕಾರಣವಾದದ್ದು ಅಮೆರಿಕದ ನಡೆ! ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಚೀನಾಕ್ಕೆ ಪ್ರವೇಶ ನಿರ್ಬಂಧಿಸಿದ ಕ್ರಮ ಚೀನಾ ಹೀಗೆ ಮಾಡಲು ಕಾರಣವಾಗಿತ್ತು. 2011ರಲ್ಲಿ ಅಮೆರಿಕನ್ ಕಾಂಗ್ರೆಸ್ ಚೀನಾವನ್ನು ಬಾಹ್ಯಾಕಾಶ ಕೇಂದ್ರದಿಂದ ದೂರವಿಡುವ ಬಗ್ಗೆ ವಿಧೇಯಕವನ್ನು ಅಂಗೀಕರಿಸಿತ್ತು. ಭದ್ರತೆಯ ಕಾರಣವೊಡ್ಡಿ ಚೀನಾಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಕಾರಣ ಚೀನಾ ಪ್ರತ್ಯೇಕ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಮುಂದಾಗಲು ಕಾರಣವಾಯ್ತು.

ಚೀನಾಕ್ಕೆ ಯಾಕೆ ಬೇಕು ಈ ಕೇಂದ್ರ?
ಚೀನಾ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿ ಕಾಯ್ದುಕೊಳ್ಳುವ ಇರಾದೆ ಹೊಂದಿದೆ. ಈಗಾಗಲೇ ಅದು ಆಳ ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡಿದೆ. ನೂತನ ಬಾಹ್ಯಾಕಾಶ ಕೇಂದ್ರದ ಮೂಲಕ ಶೂನ್ಯ ಗುರುತ್ವದ ಸಂಶೋಧನೆ, ಬಾಹ್ಯಾಕಾಶ ಪರಿಸರ, ಗಗನಯಾತ್ರಿಗಳ ಸಂಶೋಧನೆ ಸೇರಿದಂತೆ ವಿವಿಧ ರೀತಿಯ ಸಂಶೋಧನೆಗೆ ಬಳಸಿಕೊಳ್ಳಲಿದೆ.

ಚೀನಾ ಬಾಹ್ಯಾಕಾಶ ಕೇಂದ್ರ ಹೇಗಿದೆ?
ಚೀನಾ ಮಾಹಿತಿ ನೀಡಿರುವಂತೆ ಬಾಹ್ಯಾಕಾಶ ಕೇಂದ್ರ ಸುಮಾರು 20 ಟನ್ ಭಾರದ್ದು. ಮೂರು ಮಂದಿ ಗಗನಯಾತ್ರಿಗಳ ವಾಸಕ್ಕೆ ಯೋಗ್ಯವಾದ್ದಾಗಿದೆ. ಇದರಲ್ಲಿ ಮೊದಲು ಉಡ್ಡಯನ ಮಾಡಿದ ಟಿಯಾನ್ ಗಾಂಗ್-1 ಪೂರ್ವಭಾಗವಾಗಿದ್ದು ಗುರುವಾರ ಉಡ್ಡಯನಮಾಡಿದ ಟಿಯಾನ್‍ಗಾಂಗ್-2 ಉತ್ತರ ಭಾಗವಾಗಿದೆ. ಇದರ ಅಂತಿಮ ಕೆಲಸ 2020ರ ವೇಳೆಗೆ ಮುಕ್ತಾಯಗೊಳ್ಳಲಿದೆ. 2022ರ ವೇಳೆಗೆ ಗಗನಯಾತ್ರಿಗಳು ಇದಕ್ಕೆ ತೆರಳುವ, ಮಾನವ ಸಂಶೋಧನೆಗಳನ್ನು ನಡೆಸುವ ಉದ್ದೇಶವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top