fbpx
Achivers

ಕನ್ನಡದ ಅನನ್ಯತೆಯ `ಆನಂದ’ ಕಂದ: ಬೆಟಗೇರಿ ಕೃಷ್ಣಶರ್ಮ!!!

ಕನ್ನಡ ನಾಡು ನುಡಿ, ನೆಲ-ಜಲ, ಸಂಸ್ಕೃತಿ ಪರಂಪರೆಗಳ ಪೋಷಕ ಪ್ರಜ್ಞೆಯ ಪ್ರತೀಕರೆನಿಸಿ ಕನ್ನಡದ ಅನನ್ಯತೆ, ಅಸ್ಮಿತೆಗಳನ್ನು ಮೂರ್ತೀಕ-ರಿಸಿಕೊಂಡು ಬಾಳಿ ಬದುಕಿದ ಶ್ರೇಷ್ಠ ಅಪ್ಪಟ ದೇಸೀ ಕವಿಚೇತನ ಡಾ. ಬೆಟಗೇರಿ ಕೃಷ್ಣಶರ್ಮ.ತಮ್ಮ ಬಾಳಿನುದ್ದಕ್ಕೂ ಕನ್ನಡವನ್ನು ಉಸಿರಾಡಿದ ಅವರು ಈ ಸಾರಸ್ವತ ಲೋಕವನ್ನು ಅಗಲಿ ಇದೇ ಅಕ್ಟೋಬರ್ 30ಕ್ಕೆ ಮೂವತ್ತನಾಲ್ಕು ವರ್ಷಗಳು ಸಂದುತ್ತವೆ. ಬೆಟಗೇರಿ ಕೃಷ್ಣಶರ್ಮ ಅವರ ಸಮಗ್ರ ಸಾಹಿತ್ಯಿಕ ಬದುಕಿನ ಸ್ಥೂಲ ನೋಟದೊಂದಿಗೇ ಲಗತ್ತಾಗಿರುವ ಕನ್ನಡ, ಕರ್ನಾಟಕದ ಸಾಂಸ್ಕೃತಿಕ ಚಿತ್ರಣಗಳನ್ನು ಪುನರ್‍ಅವಲೋಕಿಸುವ ಮೂಲಕ ಬರಲಿರುವ ಕನ್ನಡ ರಾಜ್ಯೋತ್ಸವ ನಿಮಿತ್ತ ಅವ-ರಿಗೊಂದು ನುಡಿನಮನ.

1900ರ ಏಪ್ರೀಲ್ 16(ಮರಣ: ಅಕ್ಟೋಬರ್ 30, 1982)ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿಯಲ್ಲಿ ಜನಿಸಿದ ಬೆಟಗೇರಿ ಕೃಷ್ಣಶರ್ಮ ಅವರು ತಮ್ಮ ಬದುಕಿನುದ್ದಕ್ಕೂ ನೋವುಗಳನ್ನು ಉಂಡವರು. ಇವರು ಹುಟ್ಟಿದ ಹನ್ನೆರಡನೇ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ಮನೆಯಲ್ಲಿ ಸಾವು-ನೋವುಗಳನ್ನು ನೋಡುತ್ತಲೇ ಬೆಳೆದ ಇವರು, ಬಾಲ್ಯದಲ್ಲಿಯೇ ಪ್ಲೇಗ್‍ಗೆ ತುತ್ತಾಗಿ ಸಾವನ್ನು ಗೆದ್ದುಬಂದವರು. ಅನಂತರ ಪಾಶ್ರ್ವವಾಯು ಪೀಡನೆಗೆ ಒಳಗಾದರೂ ಒಂದಿಷ್ಟೂ ಎದೆಗುಂದದೇ, ವಿಧಿ ಒಡ್ಡುವ ಎಲ್ಲ ಬಗೆಯ ಸಮಸ್ಯೆ-ಸವಾಲುಗಳಿಗೆ ಎದೆಕೊಟ್ಟು ನಿಂತು, ಜೀವನವನ್ನು ಎದುರುಗೊಂಡವರು.

ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದ ಬೆಟಗೇರಿಯವರು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಕಾಲಘಟ್ಟದ ನಾಡಿನ ಚರಿತ್ರೆಯ ಸಾಕ್ಷಿಪ್ರಜ್ಞೆಯಂತಿದ್ದವರು. ತಮ್ಮ ಬದುಕಿನ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರೊಳಗಿನ ಕವಿಚೇತನಕ್ಕೆ ಮಾತ್ರ ಯಾವುದೇ ಕುಂದು ತಂದುಕೊಳ್ಳದ ಅವರು, ಹತಾಶೆಗಳನ್ನೂ ಸಹ ಸಾಹಿತ್ಯ ಸೃಜನೆಯ ಸಾಧ್ಯತೆಗಳನ್ನಾಗಿಸಿಕೊಂಡಿರುವುದು ಅವರ ವೈಶಿಷ್ಟ್ಯತೆ. ಬೆಟಗೇರಿಯವರು 1918ರಲ್ಲಿ ‘ಭಕ್ತಿ ಕುಸುಮಾವಳಿ’ ಎಂಬ ಭಾಮಿನಿ ಷಟ್ಪದಿ ಕವಿತೆಯನ್ನು ಪ್ರಕಟಿಸುವ ಮೂಲಕ ತಮ್ಮ ಕಾವ್ಯಯಾನವನ್ನು ಆರಂಭಿಸಿದರು. ಸ್ವಾತಂತ್ರ್ಯ, ನಾಡಿನ ಏಕೀಕರಣ, ರಾಷ್ಟ್ರಪ್ರೇಮ, ಕನ್ನಡಾಭಿಮಾನ, ನಾಡಿನ ವೈಭವತೆ, ಪ್ರಕೃತಿ ಆರಾಧನೆ, ಕಾವ್ಯರಚನೆಗಾಗಿ ಸಿದ್ಧಮಾದ-ರಿಯ ಚೌಕಟ್ಟುಗಳು ಇದ್ದ ನವೋದಯದ ಕಾಲಘಟ್ಟ ಅದು.

ಆ ಕಾಲದ ಸಾಮಾಜಿಕ, ರಾಜ-ಕೀಯ ಒತ್ತಡಗಳು ಬೆಟಗೇರಿಯವರ ಕಾವ್ಯಕ್ಕೆ ಪ್ರೇರಣೆ-ಪ್ರಭಾವಗಳಾಗಿ ಒದಗಿ ಬಂದಿರುವುದು ಅಸಹಜವೇನಲ್ಲ. ಆರಂಭದಲ್ಲಿ ಅವರು ನವೋದಯದ ಪ್ರಭಾವದಿಂದ ಬಿಡಿಸಿಕೊಳ್ಳಲು ಆಗದಿದ್ದರೂ ಅನಂತರದ ಅವರ ಕಾವ್ಯ ರಾಜ-ಕೀಯ, ಸಾಮಾಜಿಕ, ಸಾಂಸ್ಕøತಿಕ, ವೈಚಾರಿಕತೆಯ ಸೂಕ್ಷ್ಮ ಆಯಾಮಗಳನ್ನು ಪಡೆದುಕೊಂಡಿರುವುದನ್ನು ಕಾಣಬಹುದಾಗಿದೆ. ಕಾವ್ಯ, ಕಥೆ, ಕಾದಂಬರಿ, ಅನುವಾದ, ಪತ್ರಿಕೆ, ಬಾನುಲಿ ರೂಪಕ, ಸಂಶೋಧನೆ, ವಿಮರ್ಶೆ, ಜಾನಪದ, ಸಂಸ್ಕೃತಿ ಚಿಂತನೆ ಹೀಗೆ ಬಹು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಕೃಷ್ಣಶರ್ಮರ ವ್ಯಕ್ತಿತ್ವಕ್ಕೆ ಬಹುಮುಖ ಆಯಾಮಗಳಿವೆ. ‘ಆನಂದಕಂದ’ ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದ ಬೆಟಗೇರಿಯವರು ಗಾಂಧಿ ಗೀತಸಪ್ತಕ, ರಾಷ್ಟ್ರೀಯ ಪದ್ಯಮಾಲೆ, ರಮೆಯುಮೆಯರ ಸಂವಾದ, ರಾಷ್ಟ್ರೀಯ ಪದ್ಯಾವಲಿ, ಅರುಣೋದಯ, ವಿರಹಿಣಿ, ಒಡನಾಡಿ, ಕಾರಹುಣ್ಣಿವೆ, ನಲ್ವಾಡುಗಳು ಸೇರಿದಂತೆ ಒಟ್ಟು 13 ಕವನ ಸಂಕಲನಗಳನ್ನು ನಾಡಿನ ವಾಙ್ಮಯ ವಲಯಕ್ಕೆ ಕಾಣ್ಕೆಯಿತ್ತಿದ್ದಾರೆ. ತಮ್ಮ ಸಾಹಿತ್ಯದಲ್ಲಿ ಉತ್ತರ ಕರ್ನಾಟಕ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಮೂಲಕ ಉತ್ತರ ಕರ್ನಾಟಕದ ಸಾಂಸ್ಕೃತಿಕ ಅನನ್ಯತೆಯ ಜೊತೆಗೆ ಸಮಗ್ರ ಕರ್ನಾಟಕವನ್ನು ಮತ್ತು ಕನ್ನಡಾಭಿಮಾನದ ದ್ಯೋತಕವಾಗಿ ಚಿರಸ್ಥಾಯಿಯಾಗಿ ನಿಲ್ಲುವ ಪ್ರತಿಭಾಪೂರ್ಣ ವ್ಯಕ್ತಿತ್ವ ಬೆಟಗೇರಿಯವರದು.

ಆನಂದಕಂದರ ‘ಕನ್ನಡ ನುಡಿ’ ಕವಿತೆಯ “ಎನಿತು ಇನಿದು ಈ ಕನ್ನಡ ನುಡಿಯು? ಮನವನು ತಣಿಸುವ ಮೋಹನಸುಧೆಯು…’ ಎಂಬ ಸಾಲುಗಳು ಕನ್ನಡದ ಮನ-ಮನೆಗಳಲ್ಲಿ ಸದಾ ಅನುರಣಿಸುತ್ತವೆ. ಅವರು ‘ಅರುಣೋದಯ’ ಕವಿತೆಯಲ್ಲಿ ‘ಕನ್ನಡ ನಾಡಿನ ಮುಂಬಾನೊಳು ಚೆಂಬಣ್ಣದ ಬೆಳಕು ಇದೇತರದು?..’ ಕನ್ನಡನಾಡಿನ ಗುಡಿಗಳಸಕೆ ಹೊಸಬಣ್ಣವನೀತನು ಹಾಕುವನು..’ ಎಂದು ರವಿ ಕನ್ನಡಕ್ಕೆ ಹೊಸತಾದ ಬೆಳಕನ್ನು ಬೀರಲು ಬಂದಿರುವ ಕುರಿತು ಅರುಹುತ್ತಾರೆ. ‘ನಾನಿದನೆ ಹಾಡುವೆನು ಹಾಡು; “ನನ್ನದು ಕನ್ನಡ ನಾಡು”, ..ಕನ್ನಡನಾಡಿನ ಹಾಡನು ಬರೆಯುವದಕೆ ಸಾಲದು ಮುಗಿಲು..’ ಎಂದು ಉತ್ಕಟ ಕನ್ನಡಾಭಿಮಾನವನ್ನು ಪ್ರಕಟಪಡಿಸುತ್ತಾರೆ.

‘ಒಡೆದ ಕನ್ನಡಿ’ ಎಂಬ ಕವಿತೆಯ ‘ರನ್ನಗನ್ನಡಿಯೊಲಿಹ ಕನ್ನಡ ನಾಡು ಭಿನ್ನ ಭಿನ್ನವು ಆಗಿ ಬಿದ್ದಿಹುದು ನೋಡು! ಅದರಲ್ಲಿ ನೋಡಿದರೆ ನಮ್ಮ ಪಡಿನೆಳಲನ್ನು ಎದೆಯು ದಡದಡಿಸುವುದು ಕಂಡು ವಿಕೃತಿಯನು…’ ಎಂಬ ಸಾಲುಗಳು ನಮ್ಮೊಳಗಿರುವ ಬಿರುಕುಗಳನ್ನು ಮತ್ತು ಕನ್ನಡ ನಾಡು ಇಂದಿಗೂ ಎದು-ರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಧ್ವನಿಸುತ್ತದೆ. ಅಲ್ಲದೆ, ‘ಕನ್ನಡ ಚಿಣ್ಣರೆಲ್ಲರು ನಾವು ಕಲೆಯುವಾ, ಕನ್ನಡದ ಕನ್ನಡಿಯನೊಂದುಗೂಡಿಸುವಾ’ ಎಂದು ಹೇಳುವ ಮೂಲಕ ಕನ್ನಡವನ್ನು ಸಮಗ್ರ ನೆಲೆಯಲ್ಲಿ ಕಟ್ಟುವ, ಕಾಣುವ ಪ್ರಾಂಜಲ ಹಂಬಲ ವ್ಯಕ್ತಿಸುತ್ತಾರೆ.ಇಂದಿಗೂ ರಾಷ್ಟ್ರದ ಗಡಿಯಲ್ಲಿ ನಿತ್ಯ ಅನ್ಯರ ಆಕ್ರಮಣವನ್ನು ಎದುರಿಸುತ್ತಿರುವ ನಾವು ದೇಶದ ಚಿತ್ರಣವನ್ನು ಸ್ವಾತಂತ್ರ್ಯಾನಂತರವೂ ಭಯಮುಕ್ತಗೊಳಿಸದಿರುವ ಸಂಗತಿಯನ್ನು ಸೂಚ್ಯವಾಗಿ ಧ್ವನಿಸುವ ಬೆಟಗೇರಿಯವರು, ‘ನಾವು ಭಾರತೀಯರು!’ ಕವಿತೆಯು “ಭಾರತೀಯರು-ನಾವು ಭಾರತೀಯರು!, ಮಲೆತುನಿಂತ ವೈರಿಗಳನು ಗೆಲಿದು ನನ್ನಿ ನಲುಮೆಯಲಿಯೆ ಚೆಲುವಿನಿಂದೆ ಇಳೆಯನಾಳಿ ಬಲುಹುಗಾರರೆಂದು ನಲಿದ ಭಾರತೀಯರು-ನಾವು ಭಾರತೀಯರು…, …ಅಡಿಮುಂದಿಡುತಲಿ ರಣದಲಿ ಹಗೆಗಳ ಹೊಡೆಯುವೆನಿಲ್ಲವೆ ಮಡಿಯುವೆನು’ ಇಂದು ನಾವು ಕೈಗೊಳ್ಳಬೇಕಾದ ಕ್ರಮಗಳು, ಇರಿಸಬೇಕಾದ ಎಚ್ಚರಿಕೆಯ ಹೆಜ್ಜೆಗಳ ಕುರಿತು ಜೊತೆಗೆ ನಮ್ಮ ಬಗ್ಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಪ್ರಚೋದಿಸುತ್ತದೆ.

Betageri Krishna Sharma

ಬೆಟಗೇರಿಯವರು ರಾಷ್ಟ್ರಪ್ರೇಮ, ದೇಶಭಕ್ತಿ, ಕನ್ನಡಾಭಿಮಾನ, ಗಂಡು-ಹೆಣ್ಣಿನ ಪ್ರೇಮ, ದಾಂಪತ್ಯ, ಪ್ರಕೃತಿ, ದೈವ, ಸ್ವಾಂತಂತ್ರ್ಯ ಮುಂತಾದ ವಸ್ತುಗಳು ಭಾವೋದ್ವೇಗಕ್ಕೆ ಒಳಗಾಗದಂತೆ ಅಭಿವ್ಯಕ್ತಿಸಿದ ಆನಂದಕಂದರು ಸಂಯಮಶೀಲ ಭಾವಕವಿ. ಈ ಮೂಲಕ ಮನುಷ್ಯನ ಎಲ್ಲ ಬಗೆಯ ಸಂವೇದನೆಗಳನ್ನು ಅವರ ಕಾವ್ಯ ವಸ್ತು ಆಗಿಸಿಕೊಂಡಿರುವುದು ವಿಶೇಷ. ಮೂಲತಃ ಜನಪದ ಪ್ರಜ್ಞೆಯುಳ್ಳ ಆನಂದಕಂದರು ಶಿಷ್ಟ ಮತ್ತು ಜಾನಪದವನ್ನು ಏಕತ್ರಗೊಳಿಸಿ ಕಾವ್ಯಕೃಷಿಗೈದಿದ್ದಾರೆ. ಧಾರವಾಡದ ಗೆಳೆಯರ ಗುಂಪಿನ ಸಂಸರ್ಗವು ಇವರಲ್ಲಿ ಜನಪದರ ಬದುಕಿನ ಬಗೆಗಿನ ಕುತೂಹಲ ಮತ್ತು ಜನಪದರ ಜೀವನವನ್ನು ಅತ್ಯಂತ ಹತ್ತಿರದಿಂದ ಗಮನಿಸುವಂತೆ ಸೂಕ್ಷ್ಮಗ್ರಾಹಿಯಾಗಿಸಿತು. ಆದ್ದರಿಂದ ಅವರಿಗೆ ಜನಪದ ಸಾಹಿತ್ಯ, ಸಂಸ್ಕೃತಿಗೆ ಅನುಪಮ, ಅನನ್ಯವಾದ ಕೊಡುಗೆ ನೀಡಲು ಸಾಧ್ಯವಾಯಿತು.

ಈ ಮೂಲಕ ಬೆಟಗೇ-ರಿಯವರು ಜನಪದ ಸಂಸ್ಕೃತಿಯ ಪುನುರುತ್ಥಾನಕ್ಕೆ ಕಾರಣವಾಗಿರುವುದು ಶ್ಲಾಘನೀಯ. ಸುದರ್ಶನ, ರಾಜಯೋಗಿ, ಅಶಾಂತಿಪರ್ವ, ಮಗಳ ಮದುವೆ, ಮಲ್ಲಿಕಾರ್ಜುನ ಎಂಬ ಸಾಮಾಜಿ-ಕ ಹಾಗೂ ಐತಿಹಾಸಿಕ ಕಾದಂಬರಿಗಳನ್ನು ರಚಿಸಿರುವ ಬೆಟಗೇರಿಯವರು, ಸಂಸಾರ ಚಿತ್ರ, ಬಡತನದ ಬಾಳು ನಮ್ಮ ಬದುಕು, ಜನಪದ ಜೀವನ, ಮಾತನಾಡುವ ಕಲ್ಲು ಸೇರಿದಂತೆ ಒಟ್ಟು ಏಳು ಕಥಾ ಸಂಕಲನಗಳನ್ನು ಪ್ರಕಟಿಸಿರುತ್ತಾರೆ. ಕರ್ನಾಟಕ ಜನಜೀವನ, ಸಾಹಿತ್ಯವು ಸಾಗಿರುವ ದಾರಿ, ನಮ್ಮ ಸಂಸ್ಕೃತಿ ಪರಂಪರೆ, ಸಾಹಿತ್ಯ ವಿಹಾರ ಎಂಬ ವಿಮರ್ಶಾ ಕೃತಿಗಳನ್ನು ನೀಡುವ ಮೂಲಕ ಕನ್ನಡ ವಿಮರ್ಶಾಲೋಕದ ವಿಸ್ತರತೆಗೆ ಗುಣಮಟ್ಟದ ಸೇರ್ಪಡೆ ಮಾಡಿರುವರು. ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅನುಪಮ ಕೊಡುಗೆ ಕೊಟ್ಟಿರುವ ಅವರು ಮಾತೃಭೂಮಿ, ಸ್ವಧರ್ಮ, ಜಯಕರ್ನಾಟಕ, ಜಯಂತಿ ಪತ್ರಿಕೆಯ ಸಂಪಾದಕರಾಗಿ ಲೋಕ ಶಿಕ್ಷಣ ನೀಡುವ ಕೈಂಕರ್ಯವನ್ನು ಕೈಗೊಂಡರು.

ಈ ಮೂಲಕ ನಾಡಿನ ಅನೇಕ ಕವಿ, ಬರೆಹಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟಿರುವ ಕೀರ್ತಿ ಆನಂದಕಂದರಿಗೆ ಸಲ್ಲುತ್ತದೆ. ನಾಡೋಜ ಚನ್ನವಿರ ಕಣವಿ, ವಿಮರ್ಶಕ ಜಿ.ಎಸ್. ಆಮೂರು, ಚಂಪಾ, ಕಂಬಾರ, ಗಿರಡ್ಡಿ ಮುಂತಾದ ಶ್ರೇಷ್ಠ ಸಾಹಿತಿ ಬರೆಹಗಾರೆರಲ್ಲ ಬೆಟಗೇರಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಜಯಂತಿ’ ಪತ್ರಿಕೆಯಲ್ಲಿ ತಮ್ಮ ಬರೆಹಗಳನ್ನು ಆರಂಭದಲ್ಲಿ ಪ್ರಕಟಿಸಿರುವುದು ಗಮನಾರ್ಹ. ಉತ್ತರ ಕರ್ನಾಟಕ ಭಾಗದ ನೆಲದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಬೀಜಗಳನ್ನು ಬಿತ್ತಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಹುಯಿಲಗೋಳ ನಾರಾಯಣರಾವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಕವಿತೆಯನ್ನು ಮೊಟ್ಟಮೊದಲ ನಾಡ ಗೀತೆಯಾಗಿಸುವಲ್ಲಿ ಆನಂದಕಂದರ ಪ್ರಯತ್ನವಿದೆ.

ನಾಡಿನ ಏಕೀಕರಣ ವಿಷಯದಲ್ಲಿ ಐತಿಹಾಸಿಕ ಮತ್ತು ತಾತ್ವಿಕ ನೆಲೆಗಟ್ಟನ್ನು ಒದಗಿಸುವಲ್ಲಿ ಒತ್ತಾಸೆಯಾಗಿ ನಿಂತವರ ಸಾಲಿನಲ್ಲಿ ಬೆಟಗೇರಿಯವರಿಗೆ ಪ್ರಮುಖ ಸ್ಥಾನವಿದೆ. ನವರಾತ್ರಿ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವ ಸಂಬಂಧ ಸಂಸ್ಕೃತಿ ಜಾಗೃತಿಯ ಭೂಮಿಕೆಯನ್ನು ನಿರ್ಮಿಸಿದ ಆನಂದಕಂದರು ನಾಡಿನ ಭಾಷೆ ಮತ್ತು ಸಂಸ್ಕೃತಿಗಳ ಪುನುರುತ್ಥಾನದ ಕಾರ್ಯಕ್ಕಾಗಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ಸಮರ್ಪಿಸಿಕೊಂಡು, ಕನ್ನಡತಾಯಿಯ ಸೇವೆ ಗೈಯ್ದಿದ್ದಾರೆ. ಅವರು ಸಲ್ಲಿಸಿದ ಕನ್ನಡದ ಅನುಪಮ ಸೇವೆಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆಯ ಗೌರವ ಹಾಗೂ ಬೆಳುವಲ ಅಭಿನಂದನಾ ಗ್ರಂಥಗಳು ಸಮರ್ಪಣೆಗೊಂಡಿವೆ. ಆದರೂ ಅವರ ಬದುಕು ಬರೆಹ, ಸಾಹಿತ್ಯಿಕ ಸಾಧನೆ, ಕುರಿತು ಕನ್ನಡ ವಾಙ್ಮಯ ವಲಯ ಅಷ್ಟೊಂದು ಗಂಭೀರವಾಗಿ ಅಧ್ಯಯನಕ್ಕೆ ಒಳಪಡಿಸದಿರುವುದು ವಿಪರ್ಯಾಸ. ‘ಕವಿಭೂಷಣ’ ಎಂಬ ಪ್ರಖ್ಯಾತಿ ಹೊಂದಿದ್ದ ಬೆಟಗೇರಿಯವರು ಈಗ ಮರಳಿ ಬಾರದ ಲೋಕಕ್ಕೆ ನಡೆದು ಹೋಗಿದ್ದಾರೆ. ಮಾರ್ಗಪ್ರವರ್ತಕರೆನಿಸಿದ ಬೆಟಗೇರಿಯವರು ನಿರ್ಮಿಸಿಕೊಟ್ಟ ದಾರಿಯನ್ನು ಕ್ರಮಿಸುವುದೊಂದೇ ಕನ್ನಡಿಗರ ಮುಂದಿರುವ ಭಾಗ್ಯ. ಅದೇ ನಿಜವಾದ ಆನಂದ. ಆಗಲೇ ನಾಡು ನಂದನವನ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top