ಬೆಂಗಳೂರು: ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಇಂದು ಬೆಂಗಳೂರಿನಲ್ಲಿ ಬಿ.ಜೆ.ಪಿ.ಗೆ ಸೇರ್ಪಡೆಯಾಗಲಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್, ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ತೊರೆದು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಕಳೆದ ಡಿಸೆಂಬರ್ 24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದ್ದರು. ಇದೀಗ ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಭೀಮ ಬಲ ಬಂದಂತಾಗಿದ್ದು, ಈ ಚುನಾವಣೆಯಲ್ಲಿ ಅಭ್ಯರ್ಥಿಯೇ ಇಲ್ಲದ ಕಾಂಗ್ರೆಸ್ನ ಬಣ್ಣ ಬಯಲಾಗಲಿದೆ ಅಂತ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಪ್ರಸಾದ್ ಸೇರ್ಪಡೆಯಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಗೆ ಆನೆಬಲ ಬಂದಂತಾಗಲಿದೆ. ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಇಪ್ಪತ್ತೆಂಟು ಸಾವಿರ ಮುನ್ನೂರ ಹನ್ನೆರಡು ಮತಗಳ ಪಡೆದಿದ್ರು. ಆಗ ಇಲ್ಲಿ ಬಿಜೆಪಿಗೆ ಬಿದ್ದದ್ದು ಏಳು ಸಾವಿರದ ಎಪ್ಪತ್ನಾಲ್ಕು ಮತಗಳು. ಈಗ ಶ್ರೀನಿವಾಸ ಪ್ರಸಾದರಿಗೆ ಹೆಚ್ಚು ಮತ ಲಭ್ಯವಾಗುವುದರಲ್ಲಿ ಅನುಮಾನಗಳಿಲ್ಲ. ಈ ಎಲ್ಲ ಲೆಕ್ಕಾಚಾರಗಳೊಂದಿಗೇ ಪ್ರಸಾದ್ ಕಮಲದ ತೆಕ್ಕೆ ಸೇರುತ್ತಿದ್ದಾರೆ.
ಬೆಂಗಳೂರಿನ ಬಿ.ಜೆ.ಪಿ. ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತ್ ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.
ಅಶೋಕ್ ಸೇರಿದಂತೆ ಹಲವು ನಾಯಕರು ಶ್ರೀನಿವಾಸ್ ಪ್ರಸಾದ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.
ಒಟ್ಟಿನಲ್ಲಿ ನಂಜನಗೂಡಿನ ರಾಜಕೀಯ ಕೆಸರಿನಲ್ಲಿ ಕಮಲ ಅರಳಿಸುವ ಸೂರ್ಯನಾಗಿ ಶ್ರೀನಿವಾಸ ಪ್ರಸಾದ್ ಹೊರಹೊಮ್ಮುತ್ತಾರಾ ಅನ್ನೋದಕ್ಕೆ ಉತ್ತರ ಸಿಗಲು ಹೆಚ್ಚು ಕಾಲ ದೂರವಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
