ಮೈಸೂರು: ಮಾರಕ ಸೋಂಕಿನಿಂದ ನಾಲ್ಕು ಪಕ್ಷಿಗಳ ಸಾವು ಹಿನ್ನೆಲೆಯಲ್ಲಿ ಜ.4ರಿಂದ ಫೆ.2ರವರೆಗೆ ಮೈಸೂರು ಮೃಗಾಲಯ ಬಂದ್ ಮಾಡಲಾಗಿದೆ.ರಕ್ತದ ಮಾದರಿ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ನಡೆದ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ಜನವರಿ 4ರಿಂದ ಫೆಬ್ರವರ 2 ತನಕ ಪ್ರವಾಸಿಗರ ವೀಕ್ಷಣೆಗೆ ಮೃಗಾಲಯ ಮುಚ್ಚಲು ನಿರ್ಧರಿಸಲಾಗಿದೆ. ಈ ಬಗ್ಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ನಗರದ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿರುವ ಪಕ್ಷಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಔಷಧಿ ಸಿಂಪಡಣೆ ಕಾರ್ಯ ಆರಂಭಗೊಂಡಿದ್ದು, ಮೃಗಾಲಯ ವೀಕ್ಷಣೆಯನ್ನು ಫೆ.2 ರವರೆಗೆ ನಿಷೇಧಿಸಲಾಗಿದೆ. ಮೃಗಾಲಯದಲ್ಲಿರುವ ಪಕ್ಷಿಗಳಿಗೆ ಅವಿನ್ ಇನ್ಫ್ಲೂಜಾ -ಎಚ್5ಎನ್8 ಎಂಬ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಒಂದು ತಿಂಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ಅವಕಾಶವಿರುವುದಿಲ್ಲ. 2016ರ ಡಿ.28ರಂದು ಸ್ಪಾಟ್ ಬಿಲ್ಡ್ ಮತ್ತು 3 ಗ್ರೈಲಾಗ್ ಘೋಷ್ ಪಕ್ಷಿಗಳು ಮೃತಪಟ್ಟಿದ್ದವು. ಇವುಗಳ ಸಾವಿಗೆ ಕಾರಣ ತಿಳಿಯುವ ಸಲುವಾಗಿ ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲದೆ ಡಿ.30 ರಂದು ಅದೇ ಕೊಳದಲ್ಲಿ ಮತ್ತೊಂದು ಸ್ಪಾಟ್ ಬಿಲ್ಡ್ ಮತ್ತು ಗ್ರೈಲಾಗ್ ಘೋಷ್ ಎಂಬ ಪಕ್ಷಿ ಸಾವನ್ನಪ್ಪಿತ್ತು.
ಇವುಗಳ ಮೃತ ದೇಹದ ಮಾದರಿಯನ್ನೂ ಸಹ ಐಎಎಚ್ ಮತ್ತು ವಿಬಿ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಜ.3ರಂದು ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅಂಡ್ ಅನಿಮನಲ್ ಡಿಸೀಸಸ್ ನೀಡಿರುವ ವರದಿಯನ್ನು ಪಶುಸಂಗೋಪನಾ ಇಲಾಖೆ ಆಯುಕ್ತರು ಮೃಗಾಲಯಕ್ಕೆ ಕಳುಹಿಸಿದ್ದು, ಇಲ್ಲಿನ ಪಕ್ಷಿಗಳ ಸಾವಿಗೆ ಹಕ್ಕಿ ಜ್ವರ ಕಾರಣವೆಂಬ ಅಂಶ ವರದಿಯಲ್ಲಿ ಖಾತ್ರಿಯಾದ ಹಿನ್ನೆಲೆಯಲ್ಲಿ ಈ ಮೃಗಾಲಯವನ್ನು ಇಂದಿನಿಂದ ಫೆ.2ರವರೆಗೆ ಮುಚ್ಚಲಾಗಿದ್ದು, ಔಷಧಿ ಸಿಂಪಡಣಾ ಕಾರ್ಯ ನಡೆದಿದೆ ಎಂದು ಮೃಗಾಲಯದ ಕಾರ್ಯನಿರ್ವಹಣಾ ನಿರ್ದೇಶಕಿ ಕಮಲಾ ಕರಿಕಳನ್ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
