ಐದು ನೂರು ವರ್ಷಗಳಷ್ಟು ಹಳೆಯದಾದ ಜಲ್ಲಿಕಲ್ಲು ಕ್ರೀಡೆಗೆ ಸುಪ್ರೀಂಕೋರ್ಟ್ ವಿಧಿಸಿರುವ ನಿರ್ಬಂಧದ ವಿರುದ್ಧ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ ಕ್ರಾಂತಿಯ ಸ್ವರೂಪ ಪಡೆದುಕೊಳ್ಳುತ್ತಿದೆ.. ಲಕ್ಷೋಪಲಕ್ಷ ಜನರ ಬೆಂಬಲದೊಂದಿಗೆ ಪ್ರತಿಭಟನೆ ಮುಂದುವರೆದಿದೆ. ಇತ್ತ ಈ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವ ತನಕ ತಟಸ್ಥವಾಗಿರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಬಿಕ್ಕಟ್ಟು ಸದ್ಯಕ್ಕೆ ಇತ್ಯರ್ಥವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದಲ್ಲದೇ ನಾಳೆ ತಮಿಳುನಾಡು ಬಂದ್‍ಗೆ ಕರೆ ನೀಡಲಾಗಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದಕ್ಷಿಣ ಭಾರತೀಯ ಚಲನಚಿತ್ರ ಕಲಾವಿದರ ಸಂಘ ಇಂದಿನಿಂದಲೇ ಬಂದ್ ಆಚರಿಸುತ್ತಿದೆ. ಆಲ್ಲದೇ ನಾಳೆ ಕರೆಸಿರುವ ಬಂದ್‍ಗೂ ಚೆನ್ನೈ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಒಂದು ದಿನ ನಿರಶನ ನಡೆಸಲು ತೀರ್ಮಾನಿಸಿದೆ.
ಸಂಕ್ರಾಂತಿ (ಪೊಂಗಲ್) ಹಿಂದಿನ ದಿನದಿಂದಲೂ ಸುಪ್ರೀಂಕೋರ್ಟ್ ನಿಲುವನ್ನು ಖಂಡಿಸಿ ಜಲ್ಲಿಕಟ್ಟು ಆಚರಣೆಯ ಕೇಂದ್ರ ಸ್ಥಳ ಮಧುರೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ಭಾರೀ ಪ್ರತಿಭಟನೆಗಳು ಮುಂದುವರಿದಿದೆ. ಪೊಲೀಸರೊಂದಿಗೆ ಘರ್ಷಣೆ ಮತ್ತು ಲಾಠಿ ಪ್ರಹಾರಗಳು ನಡೆದು, ಈವರೆಗೆ 450ಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಆದರೆ, ಪ್ರತಿಭಟನೆ ಸಂಕ್ರಾಂತಿ ನಂತರವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆಗೆ ಸೇರ್ಪಡೆಯಾಗುತ್ತಿರುವ ಯುವಕರು ಮತ್ತು ವಿದ್ಯಾರ್ಥಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಉದ್ರಿಕ್ತ ಗುಂಪನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜಲ್ಲಿಕಟ್ಟು ಬೆಂಬಲಕ್ಕೆ ನಿಂತ ಶ್ರೀ ಶ್ರೀ ರವಿಶಂಕರ್ ಗುರೂಜಿ
ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವಂತೆ ಆಗ್ರಹಿಸಿ ತಮಿಳುನಾಡಿನ ಜನತೆ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಗುರುವಾರ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ
ಜಲ್ಲಿಕಟ್ಟು ನಿಷೇಧ ತೆರವಿಗೆ ತುರ್ತು ಅಧ್ಯಾದೇಶ ತನ್ನಿ:ಮೋದಿಗೆ ಸೆಲ್ವಂ
ತಮಿಳು ನಾಡಿನ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧದ ತೆರವನ್ನು ಆಗ್ರಹಿಸಿ ಚೆನ್ನೈನ ಮರೀನಾ ಬೀಚ್ನಲ್ಲಿ ಸಹಸ್ರಾರು ಜನರು ಪ್ರತಿಭಟನೆ ನಿರತರಾಗಿರುವ ನಡುವೆಯೇ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಇಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಜಲ್ಲಿಕಟ್ಟು ನಿಷೇಧದಿಂದ ರಾಜ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಹಾಗೂ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಅಧ್ಯಾದೇಶವೊಂದನ್ನು ತರುವಂತೆ ಕೋರಿದ್ದಾರೆ.
ತಮಿಳು ಸಿನಿಮಾ ನಟರಬೆಂಬಲ
ಜಲ್ಲಿಕಟ್ಟಿಗೆ ಅವಕಾಶ ನೀಡಬೇಕು, ಪ್ರಾಣಿ ದಯಾ ಸಂಘಟನೆ (ಪೇಟಾ) ನಿಷೇಧಿಸಬೇಕು ಮತ್ತು ಬರ ಪೀಡಿತ ಪ್ರದೇಶದ ರೈತರಿಗೆ ಪರಿಹಾರ ನೀಡಬೇಕು- ಈ ಎಲ್ಲ ಬೇಡಿಕೆಗಳನ್ನು ಪೂರೈಸಿದರೆ ಮಾತ್ರ ತಾವು ಪ್ರತಿಭಟನೆ ಕೈ ಬಿಡುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.
ಪ್ರತಿಭಟನಾ ನಿರತರಲ್ಲಿ ಐಟಿ ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು ಇದ್ದಾರೆ.
ತಮಿಳು ಸಿನಿಮಾ ನಟರಾದ ವಿಜಯ್, ಸಿಂಬು, ಸೂರ್ಯ ಸೇರಿದಂತೆ ನಿರ್ದೇಶಕರಾದ ಅಮೀರ್, ಕಾರ್ತಿಕ್ ಸುಬ್ಬರಾಜ್ ಮೊದಲಾದವರು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
