ಚೆನ್ನೈ: ಜಲ್ಲಿಕಟ್ಟು ಕ್ರೀಡೆ ನಡೆಸಲು ವಿಶೇಷ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದಿದೆ.
ಜಲ್ಲಿಕಟ್ಟು ಆಚರಣೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಕೂಡಲೇ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ಮರೀನಾ ಬೀಚ್ ತೆರವು ಮಾಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದಕೆ ಜಲ್ಲಿಕಟ್ಟು ವಿವಾದ ಸಂಬಂಧ ಶಾಶ್ವತ ಪರಿಹಾರಕ್ಕೆ ಬಿಗಿಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಇದಕ್ಕೊಪ್ಪದೇ ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಇನ್ನು ಚೆನ್ನೈನ ವಿವಿಧೆಡೆ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಚೆನ್ನೈ ಪೀಟರ್ಸ್ ರಸ್ತೆಯಲ್ಲಿ ಕೆಲ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಕೆಲ ನಾಗರಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪೊಲೀಸರು ತಮ್ಮ ರಕ್ಷಣೆಗೆ ಬುಲೆಟ್ ಪ್ರೂಫ್ ಶಿಲ್ಡ್ ಗಳ ಮೊರೆ ಹೋಗಿದ್ದಾರೆ. ಅಂತೆಯೇ ಐಸ್ ಹೌಸ್ ಪೊಲೀಸ್ ಠಾಣೆಯ ಸಮೀಪ ಕೂಡ ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಚೆನ್ನೈ ಮಾತ್ರವಲ್ಲದೆ ಮಧುರೈ, ಕೊಯಮತ್ತೂರು ಸೇರಿದಂತೆ ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಚೆನ್ನೈನಗರದಾದ್ಯಂತ ವ್ಯಾಪಕ ಹಿಂಸಾಚಾರ ಹಬ್ಬುತ್ತಿರುವ ಬೆನ್ನಲ್ಲೇ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
